Navy Agniveer Jobs: ಭಾರತೀಯ ನೌಕಾಪಡೆಯಿಂದ ಅಗ್ನಿವೀರರ ನೇಮಕ, 1638 ಹುದ್ದೆ, ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನಾಂಕ, ಇಲ್ಲಿದೆ ವಿವರ
Indian Navy Agniveer Recruitment 2023: ನೌಕಾಪಡೆಯು ಇದೀಗ ಅಗ್ನಿವೀರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಮೇ 29ರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು agniveernavy.cdac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರರಾಗಿ ದೇಶ ಸೇವೆ ಮಾಡಬೇಕೆನ್ನುವವರಿಗೆ ಸಿಹಿಸುದ್ದಿ. ನೌಕಾಪಡೆಯು ಇದೀಗ ಅಗ್ನಿವೀರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಮೇ 29ರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು agniveernavy.cdac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ.
ಭಾರತೀಯ ನೌಕಾಪಡೆಯಲ್ಲಿರುವ 1638 ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಈ ನೇಮಕಾತಿ ಡ್ರೈವ್ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸಲು ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರೆ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಅಗ್ನಿವೀರರಾಗಲು ಅರ್ಹತೆಗಳೇನಿರಬೇಕು?
ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ 10+ 2 ವಿದ್ಯಾರ್ಹತೆ ಪೂರೈಸಿರಬೇಕು. ಮತ್ತು ಕೆಮಿಸ್ಟ್ರಿ/ಬಯೋಲಜಿ/ ಕಂಪ್ಯೂಟರ್ ಸೈನ್ಸ್‌ನಲ್ಲಿ ಯಾವುದಾದರೂ ಒಂದು ವಿಷಯವನ್ನು ಓದಿರಬೇಕು. ನವೆಂಬರ್ 1, 2002ರಿಂದ ಏಪ್ರಿಲ್ 30, 2006ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳ್ಲಲಿ ನಡೆಯಲಿದೆ. ಮೊದಲನೆಯ ಹಂತವು ಶಾರ್ಟ್‌ಲಿಸ್ಟಿಂಗ್. ಅಂದರೆ, ಕಂಪ್ಯೂಟರ್ ಆಧರಿತ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆ, ಪಿಎಫ್‌ಟಿ ಮತ್ತು ರಿಕ್ರೂಟ್‌ಮೆಂಟ್ ಮೆಡಿಕಲ್ ಎಕ್ಸಾಮಿನೇಷನ್ ನಡೆಯಲಿದೆ. ಕಂಪ್ಯೂಟರ್ ಆಧರಿತ ಪರೀಕ್ಷೆಯು 100 ಅಂಕಗಳ ಪ್ರಶ್ನೆ ಪತ್ರಿಕೆ ಹೊಂದಿರುತ್ತದೆ. ಪ್ರತಿ ಪ್ರಶ್ನೆಗೂ ತಲಾ 1 ಅಂಕ ಇರುತ್ತದೆ.
ಅರ್ಜಿ ಶುಲ್ಕ
550 ರೂ. ಅರ್ಜಿ ಶುಲ್ಕ ಮತ್ತು ಅದಕ್ಕೆ ಶೇಕಡ 18 ಜಿಎಸ್‌ಟಿ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಲು ಅವಕಾಶವಿದೆ. ಅಂದರೆ, ವಿಸಾ/ ಮಾಸ್ಟರ್/ ರುಪೇ/ಡೆಬಿಟ್/ ಕ್ರೆಡಿಟ್/ಯುಪಿಐ ಮೂಲಕ ಪಾವತಿಸಬಹುದು.
ಯಾರು ಅರ್ಜಿ ಸಲ್ಲಿಸಬಹುದು?
ಅವಿವಾಹಿತ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಸಮಯದಲ್ಲಿ ಅವಿವಾಹಿತರಾಗಿರುವ ಕುರಿತು ಅಭ್ಯರ್ಥಿಗಳು ಸರ್ಟಿಫಿಕೇಟ್ ನೀಡಬೇಕು. ಅಗ್ನಿವೀರರಾಗಿರುವ ಅವಧಿಯಲ್ಲಿ ವಿವಾಹವಾಗಲು ಅವಕಾಶ ಇರುವುದಿಲ್ಲ. ಎಲ್ಲಾದರೂ ಅವಿವಾಹಿತರೆಂಬ ಸರ್ಟಿಫಿಕೇಟ್ ನೀಡಿಯೂ ವಿವಾಹವಾಗಿರುವುದರ ಕುರಿತು ಮುಂದಿನ ದಿನಗಳಲ್ಲಿ ತಿಳಿದುಬಂದರೆ ಅವರನ್ನು ಸೇವೆಯಿಂದ ವಜಾ ಗೊಳಿಸಲಾಗುತ್ತದೆ.
ಸೇವೆಯ ಅವಧಿ ಎಷ್ಟು?
ಭಾರತೀಯ ನೌಕಾಪಡೆಯ ನೇವಿ ಆಕ್ಟ್ 1957ರ ಅನ್ವಯ ಅಗ್ನಿವೀರರನ್ನು ನೇಮಕ ಮಾಡಲಾಗುತ್ತದೆ. ಇವರ ಸೇವಾವಧಿ 4 ವರ್ಷಗಳು.
ವಿವರವಾದ ಅಧಿಸೂಚನೆ ಇಲ್ಲಿದೆ
ಕೇಂದ್ರ ಸರಕಾರವು 2022ರಲ್ಲಿ ಭಾರತೀಯ ಸೇನೆಗೆ ಸೈನಿಕರನ್ನು ನೇಮಕ ಮಾಡುವ ಅಗ್ನಿವೀರ್ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿಯಲ್ಲಿ ಭೂ, ವಾಯು, ನೌಕೆ ಮೂರು ಸೇನಾ ಪಡೆಗಳಿಗೂ ನಾಲ್ಕು ವರ್ಷಗಳ ಅವಧಿಗೆ ನಿಯೋಜಿತ ಅಧಿಕಾರಿಗಳ ಶ್ರೇಣಿಗಿಂತ ಕೆಳಗಿರುವ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ.
ಈ ಕಾರ್ಯಕ್ರಮದಡಿ ನೇಮಕಗೊಂಡ ಶೇ.25ರಷ್ಟು ಸೈನಿಕರನ್ನು ನಾಲ್ಕು ವರ್ಷಗಳ ನಂತರ ಕಾಯಂ ಮಾಡಿಕೊಳ್ಳಲಾಗುವುದು ಎಂದು ಸೇನೆ ತಿಳಿಸಿತ್ತು. ಯೋಜನೆ ಜಾರಿಗೆ ಬಂದ ಕೂಡಲೇ, ದೇಶಾದ್ಯಂತ ವ್ಯಾಪಕವಾದ ಪ್ರತಿಭಟನೆಗಳು ನಡೆದವು. ಇದು ಭಾರತೀಯ ಸಶಸ್ತ್ರ ಪಡೆಗಳ ಬಲಕ್ಕೆ ಧಕ್ಕೆ ತರಲಿದೆ ಎಂದು ಹಲವರು ಆರೋಪಿಸಿದ್ದರು. ಆದರೆ, ಅಗ್ನಿಪಥ ಯೋಜನೆ ಜಾರಿಯಾಗಿ ಈಗಾಗಲೇ ಒಂದು ಹಂತದ ನೇಮಕಾತಿ ಪ್ರಕ್ರಿಯೆಗಳೂ ಮುಗಿದಿವೆ.
ಐಟಿಐ, ಡಿಪ್ಲೊಮಾ ಓದಿರುವವರೂ ಅಗ್ನಿವೀರರಾಗಬಹುದು
ಭಾರತೀಯ ಸೇನೆಗೆ ಅಗ್ನಿವೀರ್ ನೇಮಕಾತಿ ಯೋಜನೆಯ ಮೂಲಕ ಸೇರಿ ಒಂದಿಷ್ಟು ವರ್ಷ ದೇಶಸೇವೆ ಮಾಡಲು ಬಯಸುವ ಯುವಜನತೆಗೆ ಇತ್ತೀಚೆಗೆ ಭಾರತೀಯ ಸೇನೆಯು ಅಗ್ನಿಪಥ್ ಯೋಜನೆಯ ನೇಮಕಾತಿ ನಿಯಮಗಳನ್ನು ಬದಲಾವಣೆ ಮಾಡಿತ್ತು. ಶತ್ರು ಸೈನಿಕರ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಸೇನೆಯ ತಾಂತ್ರಿಕ ವಿಭಾಗಗಳಲ್ಲಿಯೂ ದೇಶದ ಯುವಜನತೆಗೆ ಅಗ್ನಿವೀರ ನೇಮಕಾತಿ ವಿಧಾನದ ಮೂಲಕ ಕಾರ್ಯನಿರ್ವಹಿಸಲು ಇನ್ನು ಮುಂದೆ ಸಾಧ್ಯವಿದೆ. ಈ ಕುರಿತ ವರದಿ ಇಲ್ಲಿದೆ ಓದಿ.