ಲಿವರ್‌ಪೂಲ್ ಫುಟ್ಬಾಲ್ ಅಭಿಮಾನಿಗಳ ವಿಜಯೋತ್ಸವ ಮೆರವಣಿಗೆಗೆ ಕಾರು ನುಗ್ಗಿಸಿ ಅಪಘಾತ ಎಸಗಿದ ಅಪರಿಚಿತ: 50 ಮಂದಿಗೆ ಗಾಯ
ಲಿವರ್‌ಪೂಲ್ ಪ್ರೀಮಿಯರ್ ಲೀಗ್ ವಿಜಯೋತ್ಸವ ಮೆರವಣಿಗೆ ನಡೆಯುತ್ತಿದ್ದಾಗ ಜನರ ಗುಂಪಿಗೆ ಕಾರು ನುಗ್ಗಿಸಲಾಗಿದೆ. ಇದರಿಂದ 50 ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 53 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಲಂಡನ್: ಇಂಗ್ಲೆಂಡ್‌ನಲ್ಲಿ ಲಿವರ್‌ಪೂಲ್‌ನ ಪ್ರೀಮಿಯರ್ ಲೀಗ್ ವಿಜಯೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ಜನರ ಗುಂಪಿಗೆ ಕಾರು ನುಗ್ಗಿಸಿದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ 50 ಜನರು ಗಾಯಗೊಂಡಿದ್ದಾರೆ. ಮಕ್ಕಳಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪಿಎ ಮೀಡಿಯಾ ವರದಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 53 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ತಮ್ಮ ನೆಚ್ಚಿನ ಫುಟ್‌ಬಾಲ್ ತಂಡದ ವಿಜಯೋತ್ಸವವನ್ನು ಆಚರಿಸಲು ಜನರು ಸೇರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಜನರ ಗುಂಪಿನ ಮೇಲೆ ಕಾರು ಏಕಾಏಕಿ ನುಗ್ಗಿದ್ದರಿಂದ ಹಲವರು ಗಾಯಗೊಂಡಿದ್ದಾರೆ. ಆ ಪೈಕಿ 27 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿದ್ದು, 20 ಜನರಿಗೆ ಘಟನಾ ಸ್ಥಳದಲ್ಲಿ ಚಿಕಿತ್ಸೆ ನೀಡಲಾಯಿತು, ಗಾಯಗೊಂಡವರಲ್ಲಿ ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯಲ್ಪಟ್ಟವರಲ್ಲಿ ಒಬ್ಬ ಮಗು ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಲಿವರ್‌ಪೂಲ್ ಫುಟ್ಬಾಲ್ ವಿಕ್ಟರಿ ಪೆರೇಡ್ ಕಾರು ಅಪಘಾತ ಘರ್ಷಣೆಗೆ ಕಾರಣವೇನೆಂದು ಕಂಡುಹಿಡಿಯಲು ಪೊಲೀಸರು ವ್ಯಾಪಕ ವಿಚಾರಣೆಗಳನ್ನು ನಡೆಸುತ್ತಿದ್ದಾರೆ ಮತ್ತು ಈ ಕೃತ್ಯ ಉದ್ದೇಶಪೂರ್ವಕವಾಗಿ ನಡೆಸಿರಬಹುದು ಎಂದು ಶಂಕಿಸಿದ್ದು, ಇದರಲ್ಲಿ ಭಯೋತ್ಪಾದನಾ ದಾಳಿಯ ಕುರುಹು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.