ಪಾಕಿಸ್ತಾನ ನಡೆಸಿದ ಬಹುತೇಕ ವೈಮಾನಿಕ ದಾಳಿಯೂ ವಿಫಲ; ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಕಿಸ್ತಾನ ನಡೆಸಿದ ಬಹುತೇಕ ವೈಮಾನಿಕ ದಾಳಿಯೂ ವಿಫಲ; ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ

ಪಾಕಿಸ್ತಾನ ನಡೆಸಿದ ಬಹುತೇಕ ವೈಮಾನಿಕ ದಾಳಿಯೂ ವಿಫಲ; ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಭಯೋತ್ಪಾದನೆ ವಿರುದ್ಧ ಹೋರಾಟ ತೀವ್ರಗೊಳಿಸಿ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿದ್ದ 9 ಉಗ್ರ ನೆಲೆಗಳನ್ನು ನಾಶ ಮಾಡಿತು. ಇದರ ಬೆನ್ನಿಗೆ ಪಾಕ್‌ ನಡೆಸಿದ ಬಹುತೇಕ ವೈಮಾನಿಕ ದಾಳಿ ವಿಫಲವಾಗಿದೆ. ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ ಇಲ್ಲಿದೆ. (ಬರಹ- ಪರಿಣಿತಾ, ಬೆಂಗಳೂರು)

 ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ (ಸಾಂಕೇತಿಕ ಚಿತ್ರ)
ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ (ಸಾಂಕೇತಿಕ ಚಿತ್ರ)

ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ: ಮೇ 7 ರ ರಾತ್ರಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಉಗ್ರ ನೆಲೆಗಳ ಮೇಲೆ ಭಾರತ ನಿಖರವಾದ ದಾಳಿಗಳನ್ನು ನಡೆಸಿತು. ಅಂದಿನಿಂದ, ಪಾಕಿಸ್ತಾನ ಡ್ರೋನ್‌ ಮತ್ತು ಕ್ಷಿಪಣಿಗಳಿಂದ ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡಿದ್ದು ಇದರಲ್ಲಿ ಹೆಚ್ಚಿನವನ್ನುವ ಗುರಿ ತಲುಪುವ ಮುನ್ನವೇ ಭಾರತ ಹೊಡೆದುರುಳಿಸಿದೆ. ಮೇ 8 ರಂದು ನಡೆದ ಆಪರೇಷನ್ ಸಿಂದೂರ್ ಪತ್ರಿಕಾಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ನಮ್ಮ ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ವಿಫಲಗೊಳಿಸಿದೆ ಎಂದು ಹೇಳಿದ್ದಾರೆ.

ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ

ಭಾರತದ ಮೇಲೆ ನಡೆಯುವ ವೈಮಾನಿಕ ದಾಳಿಗಳ ಮೇಲೆ ಕಣ್ಗಾವಲಿರಿಸಿ, ಅವುಗಳನ್ನು ನಾಶಮಾಡಲು ಆದೇಶಿಸುವುದು, ಅವುಗಳ ವಿರುದ್ಧ ಪ್ರತಿದಾಳಿಯನ್ನು ಮಾಡುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ, ಭಾರತದ ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ (ಐಎಸಿಸಿಎಸ್) ಎಂದು ಕರೆಯಲ್ಪಡುವ ದೊಡ್ಡ ಸಂಯೋಜಿತ ನೆಟ್‌ವರ್ಕ್ ಇದೆ.

ಈ ನೆಟ್‌ವರ್ಕ್ ರಾಡಾರ್, ಶತ್ರು ದೇಶದ ಶಸ್ತ್ರಾಸ್ತ್ರ ಸಂಕೇತಗಳನ್ನು ಸೆರೆಹಿಡಿಯುವ ಗುಪ್ತಚರ ಸಾಧನಗಳು, ಎಲೆಕ್ಟ್ರೋ-ಆಪ್ಟಿಕಲ್ ಸೆನ್ಸರ್‌ಗಳು, ಶತ್ರು ರಾಷ್ಟ್ರದ ರೇಡಿಯೋ ಸಂಕೇತಗಳನ್ನು ಜಾಮ್ ಮಾಡುವ ಜಾಮರ್‌ಗಳು, ಲೇಸರ್ ವ್ಯವಸ್ಥೆಗಳು, ನಿಯಂತ್ರಣ ಕೇಂದ್ರಗಳು ಮತ್ತು ವಿವಿಧ ರೀತಿಯ ವಾಯು ರಕ್ಷಣಾ ವ್ಯವಸ್ಥೆಗಳಂತಹ ಹಲವಾರು ಘಟಕಗಳನ್ನು ಹೊಂದಿದೆ. ಪ್ರತಿದಾಳಿ ವೇಳೆ ಭಾರತದ ವಾಯ ರಕ್ಷಣಾ ವ್ಯವಸ್ಥೆ ಹೇಗೆ ನಿರ್ವಹಿಸಿತ್ತು ಎಂಬುದನ್ನು ನೋಡೋಣ

ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಂ 3 ಹಂತಗಳ ಕಾರ್ಯನಿರ್ವಹಣೆ

1) ಬೆದರಿಕೆಯನ್ನು ಗುರುತಿಸುವುದು: ಭಾರತವು ಮಿಲಿಟರಿ ಮತ್ತು ಸಾರ್ವಜನಿಕ ಬಳಕೆಗಾಗಿ ಹಲವಾರು ರಾಡಾರ್‌ಗಳನ್ನು ಹೊಂದಿದೆ. ಮೊದಲ ಕಾರ್ಯವನ್ನು ಈ ರಾಡಾರ್‌ಗಳು ನಿರ್ವಹಿಸುತ್ತವೆ. ಅವುಗಳಿಂದ ಹೊರಸೂಸುವ ರೇಡಿಯೋ ತರಂಗಗಳು ವೈಮಾನಿಕ ಬೆದರಿಕೆಗಳು, ಡ್ರೋನ್‌ ಅಥವಾ ಕ್ಷಿಪಣಿಗಳನ್ನು ಪತ್ತೆ ಹಚ್ಚಿ ರಾಡಾರ್‌ಗೆ ವಿವರಗಳನ್ನು ಒದಗಿಸುತ್ತವೆ.

ಅದೇ ರೀತಿ, ಎಲೆಕ್ಟ್ರೋ-ಆಪ್ಟಿಕಲ್ ಸಂವೇದಕಗಳು ಡ್ರೋನ್‌ಗಳು ಅಥವಾ ಕ್ಷಿಪಣಿಗಳಂಥಾ ವಸ್ತುಗಳನ್ನು ಅವುಗಳ ವೇಗ, ಪಥ ಮತ್ತು ಇತರ ವೈಶಿಷ್ಟ್ಯಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಕೆಲವೊಮ್ಮೆ, ಸಿಗ್ನಲ್ ಇಂಟೆಲಿಜೆನ್ಸ್ ಸಾಧನಗಳು ಮತ್ತು ಜಾಮರ್‌ಗಳು ಡ್ರೋನ್‌ಗಳ ಸಂಕೇತಗಳನ್ನು ತಡೆದು ಅವುಗಳ ನಿಯಂತ್ರಣವನ್ನು ಅಡ್ಡಿಪಡಿಸುತ್ತವೆ.

2) ಯಾವುದರಿಂದ ದಾಳಿ ನಡೆಯುತ್ತಿದೆ ಎಂಬುದನ್ನು ನಿರ್ಧರಿಸುವುದು: ಶತ್ರುರಾಷ್ಟ್ರವು ಯಾವ ರೀತಿಯಲ್ಲಿ ವೈಮಾನಿಕ ದಾಳಿ ನಡೆಸುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಗುರುತಿಸಿದ ನಂತರ, ಆ ಬೆದರಿಕೆ ಯಾವ ರೀತಿಯದ್ದು, ಅದನ್ನು ಹೊಡೆದುರುಳಿಸಲು ಏನು ಮಾಡಬೇಕು ಎಂಬುದುನ್ನು ಸೈನ್ಯ ನಿರ್ಧರಿಸುತ್ತದೆ.

3) ವೈಮಾನಿಕ ಬೆದರಿಕೆಗಳನ್ನು ನಾಶಪಡಿಸುವುದು: ವೈಮಾನಿಕ ಬೆದರಿಕೆಯಲ್ಲಿ ಗಮನಿಸಬೇಕಾದ ಎರಡು ಪ್ರಮುಖ ವಿಷಯಗಳು ಎಂದರೆ ಆ ಬೆದರಿಕೆ ಎಷ್ಟು ದೂರದಲ್ಲಿದೆ ಮತ್ತು ಅದು ಎಷ್ಟು ಎತ್ತರದಲ್ಲಿದೆ ಎಂಬುದು. ವಾಯು ರಕ್ಷಣೆಯ ಏಕೈಕ ಗುರಿ ಯಾವುದೇ ವೈಮಾನಿಕ ಬೆದರಿಕೆಯನ್ನು ಗರಿಷ್ಠ ದೂರ ಮತ್ತು ಎತ್ತರದಲ್ಲಿ ಹೊಡೆದುರುಳಿಸುವುದು ಆಗಿದೆ.

ಹೆಚ್ಚಿನ ದೂರ ಮತ್ತು ಎತ್ತರದಿಂದ ಬರುವ ಅಪಾಯಕಾರಿ ಖಂಡಾಂತರ ಕ್ಷಿಪಣಿಗಳನ್ನು ಪ್ರತಿಬಂಧಕ ಕ್ಷಿಪಣಿಗಳ ಮೂಲಕ ತಡೆಯಲಾಗುತ್ತದೆ. ಆಗಾಗ್ಗೆ, ಈ ಸ್ಫೋಟಗಳು ಎಷ್ಟು ಎತ್ತರದಲ್ಲಿ ಸಂಭವಿಸುತ್ತವೆಯೆಂದರೆ, ಮದ್ದುಗುಂಡುಗಳು ನೆಲ ತಲುಪುವ ಮೊದಲೇ ಆವಿಯಾಗಿ ಬಿಡುತ್ತವೆ.

ಒಂದು ವೇಳೆ ಶತ್ರುಗಳ ಕ್ಷಿಪಣಿ ಅಥವಾ ಡ್ರೋನ್ ಬಹಳ ಹತ್ತಿರ ಅಥವಾ ಕಡಿಮೆ ಎತ್ತರದಲ್ಲಿ ಬಂದಿದ್ದರೆ, ಅಲ್ಪ-ಶ್ರೇಣಿಯ ಕ್ಷಿಪಣಿ ವಿರೋಧಿ ವ್ಯವಸ್ಥೆಗಳು, ರಾಕೆಟ್‌ಗಳು, ಗುಂಡಿನ ಚಕಮಕಿಯಿಂದ ಅಥವಾ ಟ್ಯಾಂಕ್‌ಗಳಲ್ಲಿ ಅಳವಡಿಸಲಾದ ಬಂದೂಕುಗಳಿಂದ ಇವುಗಳನ್ನು ಹೊಡೆದುರುಳಿಸಲಾಗುತ್ತದೆ.

ಇಲ್ಲಿನ ಮುಖ್ಯ ಉದ್ದೇಶವೆಂದರೆ ಶತ್ರುರಾಷ್ಟ್ರದ ಯಾವುದೇ ಆಯುಧವು ನಮ್ಮ ದೇಶದ ಗುರಿ ಮುಟ್ಟಬಾರದು. ಈ ವೈಮಾನಿಕ ದಾಳಿ-ಪ್ರತಿದಾಳಿಗಾಗಿ ಭಾರತವು 4 ಸ್ತರಗಳಲ್ಲಿ ಕಾರ್ಯನಿರ್ವಹಿಸುವ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಅವುಗಳೆಂದರೆ ದೀರ್ಘ-ಶ್ರೇಣಿಯ ಪ್ರತಿಬಂಧ, ಮಧ್ಯಂತರ-ಶ್ರೇಣಿಯ ಪ್ರತಿಬಂಧ, ಕಡಿಮೆ-ಶ್ರೇಣಿಯ ಪ್ರತಿಬಂಧ ಮತ್ತು ಪಾಯಿಂಟ್ ರಕ್ಷಣಾ ವ್ಯವಸ್ಥೆ.

ಹೊರಗಿನ ಪದರ: ದೀರ್ಘ ವ್ಯಾಪ್ತಿಯ ಪ್ರತಿಬಂಧ

ಇದು ಭಾರತದ ವಾಯು ರಕ್ಷಣೆಯ ಹೊರಗಿನ ಸ್ತರ. ಇದಕ್ಕಾಗಿ, ಭಾರತವು DRDO ಸಹಾಯದಿಂದ 'ಖಂಡಾಂತರ ಕ್ಷಿಪಣಿ ರಕ್ಷಣಾ ಪ್ರೋಗ್ರಾಂ' ಅಭಿವೃದ್ಧಿಪಡಿಸಿದೆ. ಇಲ್ಲಿ ಸಾವಿರಾರು ಕಿಲೋಮೀಟರ್ ದೂರದಿಂದ ಬರುವ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗುತ್ತದೆ

ಇಲ್ಲಿ ಸ್ವೋರ್ಡ್‌ಫಿಶ್ ಲಾಂಗ್ ರೇಂಜ್ ಟ್ರ್ಯಾಕಿಂಗ್ ರಾಡಾರ್ (Swordfish Long Range Tracking Radar) ಶತ್ರುಗಳ ಕ್ಷಿಪಣಿಯನ್ನು ಬಹಳ ಮುಂಚಿತವಾಗಿಯೇ ಪತ್ತೆ ಮಾಡುತ್ತದೆ. ಇದರ ನಂತರ, ಕಮಾಂಡ್ ಸೆಂಟರ್ ಕ್ಷಿಪಣಿಯ ಸ್ಥಳ ಮತ್ತು ಮಾರ್ಗವನ್ನು ಪತ್ತೆ ಹಚ್ಚುತ್ತದೆ. ಖಂಡಾಂತರ ಕ್ಷಿಪಣಿಗಳು ಎರಡು ರೀತಿಯಲ್ಲಿ ತಮ್ಮ ಗುರಿಯನ್ನು ತಲುಪುತ್ತವೆ.

ಮೊದಲ ವಿಧಾನ ಭೂಮಿಯ ವಾತಾವರಣದ ಹೊರಗೆ ಹೋಗಿ ಗುರಿ ಮುಟ್ಟಲು ಹಿಂತಿರುಗುವುದು ಮತ್ತು ಎರಡನೆಯದು ಭೂಮಿಯ ವಾತಾವರಣದೊಳಗೆ ಪ್ರಯಾಣಿಸಿ ಗುರಿಯನ್ನು ತಲುಪುವುದು. ಇದರ ಆಧಾರದ ಮೇಲೆ, ಪರಮಾಣು ದಾಳಿಯ ಸಾಮರ್ಥ್ಯವಿರುವ ಖಂಡಾಂತರ ಕ್ಷಿಪಣಿಗಳನ್ನು ನಾಶ ಮಾಡಲು ಭಾರತವು ಎರಡು ಶಸ್ತ್ರಾಸ್ತ್ರಗಳನ್ನು ಹೊಂದಿದೆ:

ಪೃಥ್ವಿ ಏರ್ ಡಿಫೆನ್ಸ್ (PAD): ಇದನ್ನು 'ಪ್ರದ್ಯುಮ್ನ ಕ್ಷಿಪಣಿ ಪ್ರತಿಬಂಧಕ' ಎಂದೂ ಕರೆಯುತ್ತಾರೆ. ಗಂಟೆಗೆ 6,000 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ದಾಳಿ ಮಾಡುವ ಇವು ಖಂಡಾಂತರ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದು ಭೂಮಿಯ ವಾತಾವರಣದ ಹೊರಗಿನಿಂದ ಬರುವ ಖಂಡಾಂತರ ಕ್ಷಿಪಣಿಗಳನ್ನು ಗುರಿಯಾಗಿಸುತ್ತದೆ.ಪ್ರದ್ಯುಮ್ನ ಕ್ಷಿಪಣಿಯು 5,000 ಕಿ.ಮೀ ದೂರದಿಂದ 200 ರಿಂದ 2,000 ಕಿ.ಮೀ ದೂರದಲ್ಲಿ ಮತ್ತು 50 ರಿಂದ 80 ಕಿ.ಮೀ ಎತ್ತರದಲ್ಲಿ ಬರುವ ಖಂಡಾಂತರ ಕ್ಷಿಪಣಿಗಳನ್ನು ನಾಶಪಡಿಸುತ್ತದೆ.

ಅಡ್ವಾನ್ಸ್ಡ್ ಏರ್ ಡಿಫೆನ್ಸ್ (AAD): ಇದನ್ನು 'ಅಶ್ವಿನ್ ಕ್ಷಿಪಣಿ ಪ್ರತಿಬಂಧಕ' ಎಂದೂ ಕರೆಯುತ್ತಾರೆ. ಗಂಟೆಗೆ 5,500 ಕಿಮೀ ವೇಗದಲ್ಲಿ ದಾಳಿ ಮಾಡುವ ಖಂಡಾಂತರ ವಿರೋಧಿ ಕ್ಷಿಪಣಿ, ಭೂಮಿಯ ವಾತಾವರಣದೊಳಗೆ ಬರುವ ಖಂಡಾಂತರ ಕ್ಷಿಪಣಿಗಳನ್ನು ತಡೆಯುತ್ತದೆ. ಇದು 150 ರಿಂದ 200 ಕಿಮೀ ದೂರದಲ್ಲಿ ಮತ್ತು 15 ರಿಂದ 30 ಕಿಮೀ ಎತ್ತರದಲ್ಲಿ ಕ್ಷಿಪಣಿಗಳನ್ನು ನಾಶಪಡಿಸುತ್ತದೆ.

ಎರಡನೇ ಸ್ತರ: ಮಧ್ಯಂತರ ಶ್ರೇಣಿಯ ಪ್ರತಿಬಂಧ

ಇದು ಭಾರತದ ವಾಯು ರಕ್ಷಣಾ ವ್ಯವಸ್ಥೆಯ ಎರಡನೇ ಸ್ತರ. ಇದರ ವ್ಯಾಪ್ತಿಯು 70 ರಿಂದ 400 ಕಿ.ಮೀ. ವರೆಗೆ ಇರುತ್ತದೆ. ಡ್ರೋನ್‌ಗಳು, ಜೆಟ್‌ಗಳು ಈ ವ್ಯಾಪ್ತಿಯೊಳಗೆ ಬರುವ ಯಾವುದೇ ಇತರ ಗುರಿಗಳನ್ನು ನಿರ್ಮೂಲನೆ ಮಾಡಬಹುದು. ಈ ಸ್ತರದಲ್ಲಿ ಎರಡು ರೀತಿಯ ಶಸ್ತ್ರಾಸ್ತ್ರಗಳು ಕಾರ್ಯನಿರ್ವಹಿಸುತ್ತವೆ.

S-400 ಟ್ರಯಂಫ್: ಇದು ರಷ್ಯಾದಿಂದ ಖರೀದಿಸಿದ ವಾಯು ರಕ್ಷಣಾ ವ್ಯವಸ್ಥೆ. ಇದು 92N6E ಎಲೆಕ್ಟ್ರಾನಿಕ್ ಸ್ಟೀರ್ಡ್ ಫೇಸ್ಡ್ ಅರೇ ರಾಡಾರ್ ಹೊಂದಿದ್ದು, ಇದು ಸುಮಾರು 600 ಕಿಲೋಮೀಟರ್ ದೂರದವರೆಗೆ ಗುರಿಗಳನ್ನು ಪತ್ತೆ ಮಾಡುತ್ತದೆ. ಇದು ಒಟ್ಟು 160 ವಸ್ತುಗಳನ್ನು ಏಕಕಾಲದಲ್ಲಿ ಪತ್ತೆಹಚ್ಚಬಲ್ಲ ಸಾಮರ್ಥ್ಯ ಹೊಂದಿದೆ. ಇದು 400 ಕಿಮೀ ದೂರ ಮತ್ತು 30 ಕಿಮೀ ಎತ್ತರದವರೆಗಿನ ಗುರಿಗಳ ಮೇಲೆ ದಾಳಿ ಮಾಡಬಲ್ಲದು. ಭಾರತವು ಪ್ರಸ್ತುತ ರಷ್ಯಾದಿಂದ ಮೂರು S-400 ಟ್ರಯಂಫ್ ವ್ಯವಸ್ಥೆಗಳನ್ನು ಖರೀದಿಸಿದ್ದು, ಮುಂದಿನ ವರ್ಷ ಎರಡು ಹೊಸ ವ್ಯವಸ್ಥೆಗಳು ಸೇರ್ಪಡೆಯಾಗಲಿವೆ.

ಬರಾಕ್-8: ಬರಾಕ್-8 ಎಂಬುದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಮತ್ತು ಭಾರತದ DRDO ಜಂಟಿಯಾಗಿ ಅಭಿವೃದ್ಧಿಪಡಿಸಿದ ಮಧ್ಯಮ ಶ್ರೇಣಿಯ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯಾಗಿದೆ. S-400 ಅನ್ನು ಎಲ್ಲೆಡೆ ನಿರಂತರವಾಗಿ ನಿಯೋಜಿಸಲು ಸಾಧ್ಯವಾಗದ ಕಾರಣ ಇದನ್ನು ವಾಯು ರಕ್ಷಣೆಯ ಎರಡನೇ ಸ್ತರದಲ್ಲಿ ಬರಾಕ್-8 ಕ್ಷಿಪಣಿ ಬಳಸಲಾಗಿದೆ. ಇದನ್ನು ನಿರ್ದಿಷ್ಟವಾಗಿ ಭಾರತೀಯ ನೌಕಾಪಡೆಯ ಹಡಗುಗಳಲ್ಲಿ ನಿಯೋಜಿಸಲಾಗಿದೆ. ಅಲ್ಲಿಂದ ಅದು ಅರ್ಧ ಕಿಲೋಮೀಟರ್ ನಿಂದ 100 ಕಿಲೋಮೀಟರ್ ದೂರದಲ್ಲಿ ಮತ್ತು 16 ಕಿಲೋಮೀಟರ್ ಎತ್ತರದಲ್ಲಿ ಗುರಿಗಳನ್ನು ನಾಶಪಡಿಸಬಲ್ಲದು. ಗಂಟೆಗೆ ಸುಮಾರು 2500 ಕಿಮೀ ವೇಗದಲ್ಲಿ ದಾಳಿ ಮಾಡುವ ಈ ಕ್ಷಿಪಣಿಯು 70 ಕೆಜಿ ಸ್ಫೋಟಕಗಳನ್ನು ತನ್ನೊಂದಿಗೆ ಸಾಗಿಸುವ ಸಾಮರ್ಥ್ಯ ಹೊಂದಿದೆ.

ಮೂರನೇ ಸ್ತರ: ಕಡಿಮೆ-ಶ್ರೇಣಿಯ ಪ್ರತಿಬಂಧ

ಇದು ಭಾರತದ ವಾಯು ರಕ್ಷಣೆಯ ಮೂರನೇ ಸ್ತರ. ಇದರ ಅಡಿಯಲ್ಲಿ, 15 ರಿಂದ 70 ಕಿ.ಮೀ ದೂರದ ಗುರಿಗಳನ್ನು ನಾಶಪಡಿಸಬಹುದು. ಕಡಿಮೆ ಎತ್ತರದಲ್ಲಿ ಹಾರುವ ಜೆಟ್‌ಗಳು ಮತ್ತು ಗುರಿಯಾಗಿಸುವ ಈ ಸ್ತರದಲ್ಲಿ 3 ಪ್ರಮುಖ ಶಸ್ತ್ರಾಸ್ತ್ರಗಳಿವೆ.

ಆಕಾಶ್ ಕ್ಷಿಪಣಿ ವ್ಯವಸ್ಥೆ: DRDO ಅಭಿವೃದ್ಧಿಪಡಿಸಿದ ಆಕಾಶ್ ಕ್ಷಿಪಣಿಯು 30 ರಿಂದ 45 ಕಿ.ಮೀ ದೂರದ ಗುರಿಗಳನ್ನು ಮತ್ತು ಆಕಾಶದಲ್ಲಿ 18 ಕಿ.ಮೀ ವರೆಗಿನ ಗುರಿಗಳನ್ನು ನಾಶಪಡಿಸುತ್ತದೆ. ಇದು ರಾಜೇಂದ್ರ 3D ಹಂತದ ಅರೇ ರಾಡಾರ್ ಅನ್ನು ಹೊಂದಿದೆ. ಹಾಗಾಗಿ ಆಕಾಶ್ ಏಕಕಾಲದಲ್ಲಿ 64 ಗುರಿಗಳನ್ನು ಪತ್ತೆಹಚ್ಚಬಲ್ಲದು ಮತ್ತು ಏಕಕಾಲದಲ್ಲಿ 12 ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ.

ಸ್ಪೈಡರ್: ಸ್ಪೈಡರ್ ಇಸ್ರೇಲ್‌ನ ಕಡಿಮೆ-ಶ್ರೇಣಿಯ ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದು 20 ಕಿ.ಮೀ ವ್ಯಾಪ್ತಿಯವರೆಗೆ ದಾಳಿ ಮಾಡಬಲ್ಲ ಪೈಥಾನ್-5 ಮತ್ತು 50 ಕಿ.ಮೀ ವ್ಯಾಪ್ತಿಯ 15 ರಿಂದ 35 ಕಿ.ಮೀ ದೂರದ ಗುರಿಗಳನ್ನು ಹೊಡೆಯಬಲ್ಲ ಡರ್ಬಿಯಂತಹ ಕ್ಷಿಪಣಿಗಳನ್ನು ಬಳಸುತ್ತದೆ.

QRSAM: ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದ್ದು ಡಿಆರ್‌ಡಿಒ. ಇದು 3 ರಿಂದ 30 ಕಿ.ಮೀ ವ್ಯಾಪ್ತಿಯಲ್ಲಿ ಮತ್ತು 30 ಮೀಟರ್ ನಿಂದ 6 ಕಿ.ಮೀ ಎತ್ತರದಲ್ಲಿರುವ ಗುರಿಗಳನ್ನು ನಾಶಪಡಿಸುತ್ತದೆ. ಮೊಬೈಲ್ ವೆಹಿಕಲ್ ಲಾಂಚರ್‌ನಿಂದ ದಾಳಿ ಮಾಡುವ ಈ ವ್ಯವಸ್ಥೆಯನ್ನು ಬಹಳ ಕಡಿಮೆ ಸಮಯದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದು.

ನಾಲ್ಕನೇ ಸ್ತರ: ಪಾಯಿಂಟ್ ಡಿಫೆನ್ಸ್ ಸಿಸ್ಟಮ್

ಇದು ಭಾರತದ ಸೇನೆಯ ವಾಯು ರಕ್ಷಣೆಯ ಕೊನೆಯ ಸ್ತರ. ಇದು ಕೆಲವೇ ಕಿಲೋಮೀಟರ್ ದೂರದಲ್ಲಿರುವ ಬೆದರಿಕೆಗಳನ್ನು ನಾಶ ಮಾಡುತ್ತದೆ. ಗುರಿ ಬಹಳ ಹತ್ತಿರ ಬಂದಾಗ ಇದು ಕಾರ್ಯನಿರ್ವಹಿಸುತ್ತದೆ.

ಇದು ನಾಲ್ಕು ಪ್ರಮುಖ ಶಸ್ತ್ರಾಸ್ತ್ರಗಳನ್ನು ಹೊಂದಿವೆ.ಅವುಗಳೆಂದರೆ-

1) SRSAM: ಶಾರ್ಟ್ ರೇಂಜ್ ಭೂಮಿಯಿಂದ ನಭಕ್ಕೆ ಚಿಮ್ಮಬಲ್ಲ ಕ್ಷಿಪಣಿ. ಇದು 25 ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

2) L-70 ಗನ್: ಇದು 5 ರಿಂದ 7 ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಿಮಾನ ವಿರೋಧಿ ಗನ್. ಮೇ 8 ರ ಸಂಜೆ, ಪಾಕಿಸ್ತಾನ ಕಳುಹಿಸಿದ ಡ್ರೋನ್‌ಗಳನ್ನು ಈ ಗನ್‌ನಿಂದ ಹೊಡೆದುರುಳಿಸಲಾಗಿತ್ತು.

3) ZSU-23 ಶಿಲ್ಕಾ: ಇದು ಸೋವಿಯತ್ ಕಾಲದ ಹಳೆಯ ಗನ್ ಆಗಿದ್ದು, ಇದು ಡ್ರೋನ್‌ಗಳು ಮತ್ತು ಕಡಿಮೆ ಎತ್ತರದಲ್ಲಿ ಬರುವ ಗುರಿಗಳನ್ನು ನಾಶಪಡಿಸುತ್ತದೆ.

4) ಮ್ಯಾನ್‌ಪ್ಯಾಡ್‌ಗಳು: ಇದರಲ್ಲಿ, Igla-S ನಂಥಾ ಬಂದೂಕುಗಳಿವೆ, ಇವುಗಳನ್ನು ಯೋಧರು ಗುಂಡು ಹಾರಿಸಲು ಬಳಸುತ್ತಾರೆ.

ಇದರ ಜೊತೆಗೆ, ಭಾರತವು S-125 ಪೆಚೋರಾ ವಾಯು ರಕ್ಷಣಾ ವ್ಯವಸ್ಥೆ, 2K 12 Kub, 9K33 Osa-AK, 9K35 Strela-10, ಇತ್ಯಾದಿಗಳಂತಹ ಕೆಲವು ಸೋವಿಯತ್ ಕಾಲದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಅವು ಹತ್ತಿರದ ಗುರಿಗಳನ್ನು ನಿಖರವಾಗಿ ಹೊಡೆಯಬಲ್ಲವು.

(ಬರಹ- ಪರಿಣಿತಾ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.