Hit-And-Run Law: ಹೊಸ ಗುದ್ದೋಡು ಕಾನೂನು ವಿರೋಧಿಸಿ ಟ್ರಕ್ ಚಾಲಕರ ಪ್ರತಿಭಟನೆ; ಏನಿದು ಹಿಟ್ ಆಂಡ್ ರನ್ ನಿಯಮ
ಹೊಸ ಗುದ್ದೋಡು ಕಾನೂನು (Hit-And-Run Law) ವಿರುದ್ಧ ಟ್ರಕ್ ಚಾಲಕರು ವಿರೋಧ ವ್ಯಕ್ತಪಡಿಸಿದ್ದು, ಹೊಸ ವರ್ಷದ ಮೊದಲ ದಿನದಿಂದ 3 ದಿನಗಳ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಟ್ರಕ್ ಚಾಲಕರು, ಭಾರತೀಯ ನ್ಯಾಯ ಸಂಹಿತೆಯ ಹೊಸ ಅಂಶ ತೆಗೆದು ಹಳೆಯದನ್ನೇ ಮತ್ತೆ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿದ್ದಾರೆ. ಹಳೆಯ ಕಾನೂನಿಗಿಂತ ಹೊಸದು ಹೇಗೆ ಭಿನ್ನ ಇಲ್ಲಿದೆ ವಿವರಣೆ.
ಭಾರತದ ವಿವಿಧೆಡೆ ಹೊಸ ವರ್ಷ ನೆಮ್ಮದಿಯಿಂದ ಶುರುವಾಗಿಲ್ಲ. ಟ್ರಕ್ ಚಾಲಕರು ಪ್ರತಿಭಟನೆ ಶುರುಮಾಡಿದ ಕಾರಣ, ಭಾರತದ ಹಲವು ಪ್ರದೇಶಗಳಲ್ಲಿ ಸಂಚಾರದಟ್ಟಣೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಕುರಿತು ಜನರು ಸಾಮಾಜಿಕ ತಾಣಗಳಲ್ಲಿ ದೂರಿಕೊಂಡಿದ್ದಾರೆ. ಆಂಬುಲೆನ್ಸ್‌ಗಳು ತೊಂದರೆಗೆ ಒಳಗಾಗಿವೆ. ವರ್ಷಾಂತ್ಯದ ರಜೆ ಮುಗಿಸಿ ಕೆಲಸಕ್ಕೆ ವಾಪಸಾಗುತ್ತಿದ್ದ ಜನ ಸಂಚಾರವೂ ಸಂಚಾರ ದಟ್ಟಣೆಗೆ ಮತ್ತೊಂದು ಕಾರಣ.
ಹೊಸ ವರ್ಷದ ಮೊದಲ ದಿನವೇ ಟ್ರಕ್ ಚಾಲಕರು ಪ್ರತಿಭಟನೆ ಶುರುಮಾಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita)ಯಲ್ಲಿರುವ ಗುದ್ದೋಡು ಕಾನೂನಿನ (Hit-And-Run Law) ಅಂಶಗಳನ್ನು ಹಿಂಪಡೆದು ಹಳೆಯ ನಿಯಮವನ್ನೇ ಅನುಷ್ಠಾನಕ್ಕೆ ತರಬೇಕು ಎಂಬುದು ಟ್ರಕ್ ಚಾಲಕರ ಆಗ್ರಹ.
ಹೊಸ ಗುದ್ದೋಡು ಕಾನೂನು ಬಹಳ ಕಠಿಣ. ಗುದ್ದೋಡು ಪ್ರಕರಣದಲ್ಲಿ ದೊಡ್ಡ ವಾಹನಗಳನ್ನು ದೂಷಿಸುವ ಅಂಶ ಒಂದು ಇದೆ. ಇದು ರಸ್ತೆಗಳಲ್ಲಿ ಸಂಚರಿಸುವ ದೊಡ್ಡ ವಾಹನಗಳ ವಿರುದ್ಧ ಪಕ್ಷಪಾತ ಧೋರಣೆ ಹೊಂದಿದೆ ಎಂಬುದು ಟ್ರಕ್ ಚಾಲಕರ ಅಸಮಾಧಾನಕ್ಕೆ ಕಾರಣ.
ಹೊಸ ಗುದ್ದೋಡು ಕಾನೂನು (Hit-And-Run Law) ಹೇಳುವುದೇನು:
ಹೊಸ ಗುದ್ದೋಡು ಕಾನೂನು ಅಥವಾ ಹಿಟ್ ಆಂಡ್ ರನ್ ಕಾನೂನು ಅನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 104ರಲ್ಲಿ ಸೇರಿಸಲಾಗಿದೆ. ಇದು ನಿರ್ಲಕ್ಷ್ಯದಿಂದ ಆಗುವ ಸಾವಿನ ಕಾರಣಕರ್ತರಿಗೆ ಶಿಕ್ಷಾರ್ಹ ಅಪರಾಧ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 104(1)ರ ಪ್ರಕಾರ, ನರಹತ್ಯೆಗೆ ಸಮನಾಗದ ಯಾವುದೇ ದುಡುಕಿನ ಅಥವಾ ನಿರ್ಲಕ್ಷ್ಯದ ಕ್ರಿಯೆಯನ್ನು ಮಾಡುವ ಮೂಲಕ ಯಾವುದೇ ವ್ಯಕ್ತಿಯ ಸಾವಿಗೆ ಕಾರಣರಾದವರು, ಗರಿಷ್ಠ 5 ವರ್ಷದ ಜೈಲು ಶಿಕ್ಷೆ ಮತ್ತು ದಂಡ ಪಾವತಿಸಬೇಕಾಗುತ್ತದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 104(2)ರ ಪ್ರಕಾರ, ನರಹತ್ಯೆಗೆ ಸಮನಾಗದ ದುಡುಕಿನ ಅಥವಾ ನಿರ್ಲಕ್ಷ್ಯದ ಕ್ರಿಯೆಯಿಂದ ಯಾವುದೇ ವ್ಯಕ್ತಿಯ ಸಾವಿಗೆ ಕಾರಣರಾದವರು, ಘಟನೆಯ ಬಳಿಕ ಸ್ಥಳದಿಂದ ಪರಾರಿಯಾದರೆ ಅಥವಾ ಘಟನೆಯ ನಂತರ ತಕ್ಷಣವೇ ಪೊಲೀಸ್ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಲು ವಿಫಲರಾಗುವವರಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ಕೂಡ ಪಾವತಿಸಬೇಕಾಗುತ್ತದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ ಗುದ್ದೋಡು ಕಾನೂನು: ಗುದ್ದೋಡು ಪ್ರಕರಣಗಳಲ್ಲಿ ಶಿಕ್ಷೆ ವಿಚಾರವನ್ನು ಅಸ್ತಿತ್ವದಲ್ಲಿರುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ಎ ನಲ್ಲಿ ವಿವರಿಸಲಾಗಿದೆ.
ಐಪಿಸಿಯ ಸೆಕ್ಷನ್ 304(A)ರ ಪ್ರಕಾರ, “ಯಾವುದೇ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯವನ್ನು ಮಾಡುವ ಮೂಲಕ ಯಾವುದೇ ವ್ಯಕ್ತಿಯ ಸಾವಿಗೆ ಕಾರಣರಾದವರ ಕೃತ್ಯವು ನರಹತ್ಯೆಗೆ ಸಮನಾಗಿರುವುದಿಲ್ಲ, ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ಶಿಕ್ಷೆ ವಿಧಿಸುವುದಕ್ಕೆ ಅವಕಾಶವಿದೆ."
ವಿಭಾಗ