Explained: ಕೇಂದ್ರ ಬಜೆಟ್ 2024; ಬಜೆಟ್ ಮಂಡನೆ ದಿನಾಂಕ ಫೆಬ್ರವರಿ 1ಕ್ಕೆ ಬದಲಾಗಿದ್ದೇಕೆ, ಕಾರಣವೇನು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explained: ಕೇಂದ್ರ ಬಜೆಟ್ 2024; ಬಜೆಟ್ ಮಂಡನೆ ದಿನಾಂಕ ಫೆಬ್ರವರಿ 1ಕ್ಕೆ ಬದಲಾಗಿದ್ದೇಕೆ, ಕಾರಣವೇನು

Explained: ಕೇಂದ್ರ ಬಜೆಟ್ 2024; ಬಜೆಟ್ ಮಂಡನೆ ದಿನಾಂಕ ಫೆಬ್ರವರಿ 1ಕ್ಕೆ ಬದಲಾಗಿದ್ದೇಕೆ, ಕಾರಣವೇನು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಲದ ಕೇಂದ್ರ ಬಜೆಟ್ ಮಧ್ಯಂತರ ಬಜೆಟ್ ಆಗಿರಲಿದೆ. ನರೇಂದ್ರ ಮೋದಿ ಸರ್ಕಾರದ ಎರಡನೆ ಅವಧಿಯ ಕೊನೆಯ ಬಜೆಟ್ ಇದು. ಬಜೆಟ್ ಮಂಡನೆ ದಿನಾಂಕ ಬದಲಾವಣೆ ಮತ್ತು ಸಮಯ ಬದಲಾವಣೆ ಯಾಕಾಯಿತು? ಇಲ್ಲಿದೆ ವಿವರಣೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1 ರಂದು ಬಜೆಟ್ ಮಂಡಿಸಲಿದ್ದಾರೆ (ಕಡತ ಚಿತ್ರ)
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1 ರಂದು ಬಜೆಟ್ ಮಂಡಿಸಲಿದ್ದಾರೆ (ಕಡತ ಚಿತ್ರ)

ಲೋಕಸಭೆ ಚುನಾವಣೆ (Lok Sabha Election 2024) ಇದೇ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ನಡೆಯಲಿದೆ. ಚುನಾವಣಾ ವರ್ಷವಾದ ಕಾರಣ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಮಂಡಿಸುವ ಬಜೆಟ್‌ ಮಧ್ಯಂತರ ಕೇಂದ್ರ ಬಜೆಟ್ ಆಗಿರಲಿದೆ.

ಈ ಬಜೆಟ್‌ನಲ್ಲಿ ಯಾವುದೇ ಪ್ರಮುಖ ಘೋಷಣೆಗಳಿರುವುದಿಲ್ಲ. 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವವರೆಗಿನ ತಾತ್ಕಾಲಿಕ ಪರಿಹಾರ ಉಪಕ್ರಮವಾಗಿ ಇದನ್ನು ಪರಿಗಣಿಸಲಾಗುತ್ತದೆ.

ಮಧ್ಯಂತರ ಬಜೆಟ್ 2024: ಕೇಂದ್ರ ಸರ್ಕಾರದ ಈ ಸಲ ಬಜೆಟ್‌ನಲ್ಲಿ ಯಾವುದೇ ಪ್ರಮುಖ ನೀತಿ ಬದಲಾವಣೆಯ ಯೋಜನೆ, ಉಪಕ್ರಮಗಳ ಘೋಷಣೆ ಇರುವುದಿಲ್ಲ. 2024 ರ ಏಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಆಗಿ ಹೊಸ ಸರ್ಕಾರ ರಚನೆಯಾದ ನಂತರವೇ ಕೇಂದ್ರ ಬಜೆಟ್ 2024ರ ಮಂಡನೆ ಆಗಲಿದೆ.

ಇತ್ತೀಚೆಗೆ ಕೆಲವು ವರ್ಷಗಳಿಂದ ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1 ರಂದೇ ನಡೆಯುತ್ತಿದೆ. ಬಜೆಟ್ ಮಂಡನೆಯ ದಿನಾಂಕವನ್ನು ಮೊದಲ ಬಾರಿಗೆ 2017 ರಲ್ಲಿ ಬದಲಾಯಿಸಲಾಯಿತು. ಫೆಬ್ರವರಿ 1 ರಂದು ಹಣಕಾಸು ಸಚಿವಾಲಯವು ಬಜೆಟ್ ದಾಖಲೆಯನ್ನು ಮೊದಲ ಬಾರಿಗೆ ಮಂಡಿಸಿತು. ಆದರೆ, ಇದಕ್ಕೂ ಮೊದಲು ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ ಅಂತ್ಯದಲ್ಲಿ, ಸಾಮಾನ್ಯವಾಗಿ ಕೊನೆಯ ವಾರದಲ್ಲಿ ನಡೆಯುತ್ತಿತ್ತು.

ಕೇಂದ್ರದಲ್ಲಿ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭ 2017ರ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಮಾಡಿದ್ದರು. ಫೆಬ್ರವರಿ 1ಕ್ಕೆ ಬಜೆಟ್ ಮಂಡನೆಯಾಗಿದ್ದು ಇದೇ ಮೊದಲ ಸಲ. ಇನ್ನು ಮುಂದೆ ಪ್ರತಿ ವರ್ಷ ಫೆಬ್ರವರಿ 1ರಂದೇ ಬಜೆಟ್ ಮಂಡನೆಯಾಗಲಿದೆ ಎಂದು ಅದೇ ಬಜೆಟ್ ಮಂಡನೆ ವೇಳೆ ಜೇಟ್ಲಿ ಸಂಸತ್ತಿನಲ್ಲಿ ಘೋಷಿಸಿದರು.

ಕೇಂದ್ರ ಬಜೆಟ್ ಮಂಡನೆಯ ದಿನಾಂಕ ಬದಲಾವಣೆ ಯಾಕಾಯಿತು?

ಫೆಬ್ರವರಿ ಕೊನೆಯ ದಿನ ಬಜೆಟ್ ಮಂಡಿಸುವ ಪದ್ಧತಿ ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ರೂಢಿಯಾದುದು. ಅದು ಸ್ವಾತಂತ್ರ್ಯಾನಂತರವೂ ಮುಂದುವರಿದಿತ್ತು. ಬ್ರಿಟಿಷರು ಅವರ ಅನುಕೂಲಕ್ಕೆ ಬೇಕಾಗಿ ಫೆಬ್ರವರಿ ತಿಂಗಳ ಕೊನೆಯ ದಿನ ಬಜೆಟ್ ಮಂಡಿಸುವುದನ್ನು ರೂಢಿಸಿಕೊಂಡಿದ್ದರು. ಈ ವಸಾಹತುಶಾಹಿ ಅನುಸರಣೆ ನಿಲ್ಲಿಸುವ ಸಲುವಾಗಿ ಕೇಂದ್ರದ ಬಿಜೆಪಿ ಸರ್ಕಾರ ದಿನಾಂಕ ಬದಲಾವಣೆಗೆ ತೀರ್ಮಾನಿಸಿತು.

ಆದರೆ ಇದೊಂದೇ ಕಾರಣವಲ್ಲ. ಫೆಬ್ರವರಿ ಕೊನೆಯ ದಿನ ಬಜೆಟ್ ಮಂಡಿಸಿದರೆ, ಏಪ್ರಿಲ್ 1ರಿಂದ ಒಂದು ತಿಂಗಳ ಕಾಲ ಹೊಸ ನೀತಿ, ಕಾನೂನು, ಯೋಜನೆ ರೂಪಿಸುವುದಕ್ಕೆ ಸಮಯ ಸಾಕಾಗುವುದಿಲ್ಲ. ಬಜೆಟ್ ಅನ್ನು ಫೆಬ್ರವರಿ 1ಕ್ಕೆ ಮಂಡಿಸಿದರೆ ಏಪ್ರಿಲ್ 1ಕ್ಕೆ ಅನ್ವಯಿಸಬೇಕಾದ ಕಾನೂನು, ನಿಯಮ ಜಾರಿಗೊಳಿಸುವುದಕ್ಕೆ ಎರಡು ತಿಂಗಳ ಸಮಯವಾದರೂ ಸಿಗುತ್ತದೆ ಎಂದು ಅರುಣ್ ಜೇಟ್ಲಿ ಅಂದು ವಿವರಿಸಿದ್ದರು.

ಇನ್ನೊಂದು ಗಮನಾರ್ಹ ಬದಲಾವಣೆ ಎಂದರೆ, ಅರುಣ್ ಜೇಟ್ಲಿ ಅವರು ಅದೇ ಬಜೆಟ್ ಮಂಡನೆಯಲ್ಲಿ ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್‌ ಜತೆಗೂಡಿಸಿ ಮಂಡಿಸುವ ಅಭ್ಯಾಸ ಶುರುಮಾಡಿದರು. ಇದಕ್ಕೂ ಮೊದಲು ಕೇಂದ್ರ ಬಜೆಟ್‌ಗೆ ಒಂದು ದಿನ ಮೊದಲು ರೈಲ್ವೆ ಬಜೆಟ್ ಮಂಡನೆಯಾಗುತ್ತಿತ್ತು. ಇನ್ನು ಮುಂದೆ ಪ್ರತ್ಯೇಕ ರೈಲ್ವೆ ಬಜೆಟ್ ಇರುವುದಿಲ್ಲ ಎಂದು ಜೇಟ್ಲಿ ಅಂದು ಘೋಷಿಸಿದರು.

ಬಜೆಟ್ ಮಂಡನೆ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಬ್ರಿಟಿಷ್ ಆಳ್ವಿಕೆಯಲ್ಲಿ ಬಜೆಟ್ ಮಂಡನೆ ಸಂಜೆ 5 ಗಂಟೆಗೆ ಶುರುವಾಗುತ್ತಿತ್ತು. ಅದು ಹಾಗೆಯೇ 1999ರ ತನಕವೂ ಮುಂದುವರಿದಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ, ಅಂದಿನ ಎನ್‌ಡಿಎ ಸರ್ಕಾರದ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಕೇಂದ್ರ ಬಜೆಟ್ ಅನ್ನು ಸಂಜೆ 5 ಗಂಟೆಗೆ ಬದಲಾಗಿ ಬೆಳಗ್ಗೆ 11 ಗಂಟೆಗೆ ಮಂಡಿಸಿ ಬದಲಾವಣೆಗೆ ನಾಂದಿಹಾಡಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.