Explainer: ಜಗತ್ತಿಗೆ ಕ್ಷೀರಸಾಗರವಾಗಿದ್ದ ಭಾರತದಲ್ಲಿ ಹಾಲಿಗೆ ತತ್ವಾರ, ಯಾಕೆ ಹೀಗಾಯಿತು? ಒಂದು ವಿಶ್ಲೇಷಣೆ
ಜಗತ್ತಿನ ಪ್ರಮುಖ ಹಾಲು ಉತ್ಪಾದಕ ದೇಶವಾಗಿದ್ದ ಭಾರತಕ್ಕೆ ಈಗ ಹಾಲು ಆಮದು ಮಾಡಿಕೊಂಡು ಇಲ್ಲಿನ ಬೇಡಿಕೆ ಪೂರೈಸುವಂತಹ ದುಸ್ಥಿತಿ ಬಂದಿದೆ. ಏಕೆ ಈಗಾಯಿತು? ಹಿಂದೂಸ್ತಾನ್ ಟೈಮ್ಸ್‌ನ ಸಹೋದರಿ ಪತ್ರಿಕೆ ದಿ ಮಿಂಟ್‌ನ ವಿಶ್ಲೇಷಣೆ ಹೀಗಿದೆ.
ಜಗತ್ತಿನ ಅತಿದೊಡ್ಡ ಹಾಲು ಉತ್ಪಾದಕ ದೇಶವಾದ ಭಾರತದಲ್ಲಿ ಹಾಲು ಪೂರೈಕೆಯ ಬಿಕ್ಕಟ್ಟಿದೆ. ಇದು ಬೆಲೆ ಏರಿಕೆ ಮತ್ತು ಆಮದು ಹೆಚ್ಚಳಕ್ಕೂ ಕಾರಣವಾಗಿದೆ. ಆರ್ಥಿಕ ಸಮಸ್ಯೆಯ ಜತೆಗೆ ಗಂಭೀರ ರಾಜಕೀಯ ವಿವಾದವಾಗುವ ಅಪಾಯವೂ ಇದೆ. ಹಣದುಬ್ಬರ ಹೆಚ್ಚಳಕ್ಕೆ ಹಾಲಿನ ಬೆಲೆಯು ಕಾರಣವಾಗುವ ಪ್ರಮುಖಾಂಶವೆಂದು ನಿನ್ನೆಯಷ್ಟೇ ಆರ್‌ಬಿಐ ಸಭೆಯಲ್ಲಿ ಹೇಳಲಾಗಿದೆ.
ಈಗ ಹೈನುಗಾರಿಕೆ ಆರ್ಥಿಕತೆ ಕಷ್ಟಕರ ಹಂತದಲ್ಲಿದೆ. ಡೈರಿ ಉದ್ಯಮದ ಪೂರೈಕೆ ಸರಪಳಿಗೆ ಕೋವಿಡ್-19ನಿಂದ ಅಡ್ಡಿಯಾಗಿತ್ತು. ಅದಕ್ಕೂ ಮೊದಲು ಕೊಂಚ ಸಮಸ್ಯೆ ಇತ್ತು ಎನ್ನುವುದು ಸುಳ್ಳಲ್ಲ. ಕಳೆದ ಆರು ತಿಂಗಳಲ್ಲಿ ಸಾಂಕ್ರಾಮಿಕ ರೋಗವು ಜಾನುವಾರುಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಜಾನುವಾರುಗಳಿಗೆ ಚರ್ಮದಂಟು ರೋಗ ಬಲವಾದ ಹೊಡೆತ ನೀಡಿದೆ. ಹಾಲಿಗೆ ಬೇಡಿಕೆಯು ಹೆಚ್ಚುತ್ತಿರುವ ಸಮಯದಲ್ಲಿ ಪೂರೈಕೆ ಸಂಯೋಜನೆಗೆ ಇದು ನಿರ್ಬಂಧ ಉಂಟು ಮಾಡಿದೆ.
ಹಾಲು ಅಗತ್ಯ ವಸ್ತು. ಹೀಗಾಗಿ, ಬೇಡಿಕೆ ಎಷ್ಟೇ ಇದ್ದರೂ ಇದಕ್ಕೆ ಕಡಿಮೆ ಬೆಲೆ ನಿಗದಿಗೊಳಿಸುವುದು ಸೂಕ್ತವಾಗಿದೆ. ಭಾರತದಲ್ಲಿ ಯುವ, ಬೆಳವಣಿಗೆ ಹಂತದ ಜನಸಂಖ್ಯೆ ಹೆಚ್ಚಿದೆ. ಅಂದರೆ, ಮಕ್ಕಳು ಮತ್ತು ಯುವ ಜನತೆಯಿಂದ ಹಾಲಿಗೆ ಬೇಡಿಕೆ ಹೆಚ್ಚಿದೆ. ಇದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆಯಲ್ಲಿ ಸ್ಥಿರವಾದ ದೀರ್ಘಕಾಲಿನ ಹೆಚ್ಚಳವಿರುತ್ತದೆ. ಹಾಲು/ಹಾಲಿನ ಉತ್ಪನ್ನಗಳು ಜಾಗತಿಕವಾಗಿ ದಿನಕ್ಕೆ 320 ಗ್ರಾಂ ಬಳಕೆಯಾದರೆ ಭಾರತದಲ್ಲಿ ಇದರ ಪ್ರಮಾಣ ದಿನಕ್ಕೆ 425 ಗ್ರಾಂ ಇದೆ. 80 ದಶಲಕ್ಷಕ್ಕೂ ಹೆಚ್ಚು ರೈತರು ಡೈರಿ ಉದ್ಯಮಕ್ಕೆ ಕೊಡುಗೆ ನೀಡುತ್ತಾರೆ. ಭಾರತವು ಪ್ರಪಂಚದ ಶೇಕಡ 23ರಷ್ಟು ಹಾಲನ್ನು ಉತ್ಪಾದಿಸುತ್ತದೆ.
ಭಾರತದಲ್ಲಿ ಹಾಲಿನ ಪೂರೈಕೆಯು ವರ್ಷಕ್ಕೆ ಶೇಕಡ 6ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಳದಿಂದ ಉಂಟಾದ ಹೆಚ್ಚಳ ಇದಾಗಿದೆ. 2013-14 ಮತ್ತು 2019-20 ರ ನಡುವೆ, ಹಾಲಿನ ಉತ್ಪಾದನೆಯು 138 ಮಿಲಿಯನ್ ಟನ್‌ಗಳಿಂದ 198 ಮಿಲಿಯನ್ ಟನ್‌ಗಳಿಗೆ ಏರಿಕೆ ಕಂಡಿದೆ. ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್) ಕೇವಲ ಇದು ಶೇಕಡ 6ರಷ್ಟು ಹೆಚ್ಚಳವಾಗಿದೆ. ಆದರೆ, ಇದೇ ಅವಧಿಯಲ್ಲಿ ಭಾರತದಲ್ಲಿ ಹಾಲಿನ ದರ ವರ್ಷಕ್ಕೆ ಸುಮಾರು ಶೇಕಡ 3ರಷ್ಟು ಏರಿಕೆ ಕಾಣುತ್ತ ಬಂದಿದೆ.
2020-21 ರಲ್ಲಿ, ಹಾಲಿನ ಉತ್ಪಾದನೆಯು ಸುಮಾರು 208 ಮಿಲಿಯನ್ ಟನ್‌ಗಳಷ್ಟಿತ್ತು. ಕೊರೊನಾ ಸಮಯದ ಲಾಕ್‌ಡೌನ್‌ಗಳಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಿಹಿತಿಂಡಿ ತಯಾರಿಕರಿಂದ ಹಾಲಿನ ಬೇಡಿಕೆ ಕಡಿಮೆಯಾಯಿತು. ಮದುವೆ ಇತ್ಯಾದಿ ಕಾರ್ಯಕ್ರಮಗಳು ರದ್ದಾಗಿರುವುದೂ ಬೇಡಿಕೆ ಕಡಿಮೆಯಾಗಲು ಕಾರಣವಾಯಿತು. ರೈತರು ತಮ್ಮಲ್ಲಿರುವ ಹಸುವಿನ ಹಿಂಡಿನ ಗಾತ್ರ ಕಡಿಮೆ ಮಾಡಿದರು. ಹಣವಿಲ್ಲದ ಕಾರಣ ಕಡಿಮೆ ಮೇವು ಖರೀದಿಸಿದರು. ಹಸುಗಳಿಗೆ ಆಹಾರ ಕಡಿಮೆ ನೀಡಲಾಯಿತು.
2022 ಮತ್ತು 2023 ರಲ್ಲಿ ಆರ್ಥಿಕತೆಯು ನಿಧಾನವಾಗಿ ಚೇತರಿಸಿಕೊಂಡಿತು. ಮತ್ತೆ ಡೇರಿ ಬೇಡಿಕೆ ಪುಟಿದೆದ್ದಿದೆ. ಆದರೆ, ಹಾಲಿನ ಪೂರೈಕೆ ಹೆಚ್ಚಿಲ್ಲ. 2022-23 ರಲ್ಲಿ, ಹಾಲಿನ ಉತ್ಪಾದನೆಯು 223 ಮಿಲಿಯನ್ ಟನ್‌ಗಳೆಂದು ಅಂದಾಜಿಸಲಾಗಿದೆ . 2021-22 ರಲ್ಲಿ 221 ಮಿಲಿಯನ್ ಟನ್‌ನಷ್ಟು ಹಾಲು ಉತ್ಪಾದನೆಯಾಗಿದೆ. ಅಂದರೆ, ಉತ್ಪಾದನೆಯಲ್ಲಿ ಮಹತ್ತರ ಬದಲಾವಣೆಯಾಗಿಲ್ಲ.
ಪರಿಸ್ಥಿತಿ ಹೀಗಿರುವಾಗ 2022ರ ಅಂತ್ಯ ಭಾಗದಲ್ಲಿ ಜಾನುವಾರುಗಳಿಗೆ ಚರ್ಮದಂಟು ರೋಗ ಕಾಡಿತು. ಒಂದಲ್ಲ ಎರಡಲ್ಲ ಹಲವು ಲಕ್ಷ ಜಾನುವಾರುಗಳು ಈ ಸಾಂಕ್ರಾಮಿಕಕ್ಕೆ ತುತ್ತಾದವು. ಇದರಿಂದ ಹಾಲಿನ ಉತ್ಪಾದನೆ ಕಡಿಮೆಯಾಯಿತು. ಈ ಕಾಯಿಲೆ ಮಾರಣಾಂತಿಕವಾಗಿದೆ. ಈ ಕಾಯಿಲೆಯಿಂದ 184,000 ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿರುವುದಾಗಿ ಅಂದಾಜಿಸಲಾಗಿದೆ ಇದು ಹಾಲು ಉತ್ಪಾದನೆ ಮೇಲೆ ಮತ್ತಷ್ಟು ತೊಂದರೆ ಉಂಟು ಮಾಡಿತು.
ಹೆಚ್ಚಿನ ಬೇಡಿಕೆ ಮತ್ತು ನಿಶ್ಚಲವಾದ ಪೂರೈಕೆಯ ಪರಿಣಾಮಗಳ ನಡುವೆ ಮೇವಿನ ವೆಚ್ಚ, ಸಾರಿಗೆ ವೆಚ್ಚ ಹೆಚ್ಚಾಯಿತು. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಹಾಲಿನ ದರ ಶೇಕಡ 15ರಷ್ಟು ಹೆಚ್ಚಾಗಿದೆ. ಕರ್ನಾಟಕದ ನಂದಿನಿ, ಗುಜರಾತ್‌ನ ಅಮೂಲ್ ಇತ್ಯಾದಿ ಸಂಘಟಿತ ಡೇರಿ ಪೂರೈಕೆದಾರರು ಹಲವು ಬಾರಿ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ದರವನ್ನು ಹೆಚ್ಚಿಸಿದ್ದಾರೆ.
'ಹಾಲು ಮತ್ತು ಹಾಲಿನ ಉತ್ಪನ್ನಗಳ' ವಿಭಾಗದ ಹಣದುಬ್ಬರವು ಗ್ರಾಹಕ ಹಣದುಬ್ಬರಕ್ಕಿಂತ ಹೆಚ್ಚಾಗಿದೆ. ಇದು ಫೆಬ್ರವರಿ 2023 ರಲ್ಲಿ ಶೇಕಡ 9.7 ಆಗಿತ್ತು.
ಜೈವಿಕ ನಿರ್ಬಂಧಗಳಿಂದಾಗಿ ಹಾಲಿನ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸುವುದು ಸಾಧ್ಯವಿಲ್ಲ. ಹಸುಗಳು ಪ್ರಬುದ್ಧವಾಗಲು 15 ರಿಂದ 18 ತಿಂಗಳುಗಳು ಬೇಕು. ಒಂದು ಕರು ಹುಟ್ಟುವ ಮೊದಲು 9 ರಿಂದ 10 ತಿಂಗಳುಗಳ ಗರ್ಭಾವಸ್ಥೆಯ ಅವಧಿ ಇರುತ್ತದೆ. ಹಸು ಮೂರನೇ ವರ್ಷದಲ್ಲಿ ಮಾತ್ರ ಹಾಲು ಉತ್ಪಾದಿಸಲು ಪ್ರಾರಂಭಿಸುತ್ತದೆ. ಎಮ್ಮೆಗಳು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಕೋವಿಡ್ ಯುಗದಲ್ಲಿ ಜನಿಸಿದ ಕಡಿಮೆ ಆಹಾರ ಪಡೆದು ಬೆಳೆದ ಕರುಗಳು ಕಡಿಮೆ ಹಾಲು ನೀಡುತ್ತವೆ. ಹಾಲಿನ ಉತ್ಪಾದನೆ ಹೆಚ್ಚಲು ಸಮಯ ಬೇಕು.
ಅತ್ಯಧಿಕ ಸಂಖ್ಯೆಯಲ್ಲಿ ಜಾನುವಾರುಗಳಲ್ಲಿ ಸಾಂಕ್ರಾಮಿಕ ಹರಡಲು ಹಲವು ಕಾರಣಗಳಿವೆ. ಚರ್ಮರೋಗವನ್ನು ನಿಭಾಯಿಸುವುದು ಕಷ್ಟ. ರೋಗಪೀಡಿತ ಹಸುಗಳನ್ನು ಸಾಯಿಸುವುದು ಸಾಂಸ್ಕೃತಿಕವಾಗಿ ಸಮಸ್ಯಾತ್ಮಕವಾಗಿದೆ. ಲಸಿಕೆ ಪರಿಣಾಮಕಾರಿ ಎನ್ನಬಹುದು. ಆದರೆ, ಪ್ರಾಣಿಗಳ ಸಂಖ್ಯೆಯ ಆಧಾರದಲ್ಲಿ ಲಸಿಕೆಗಿಂತ ರೋಗಪೀಡಿತ ಹಸುವನ್ನು ಕೊಲ್ಲುವುದು ಸುಲಭದ ಮಾರ್ಗ. ಹಂದಿ, ಕೋಳಿ ಇತ್ಯಾದಿಗಳಿಗೆ ರೋಗ ಬಂದರೆ ಈ ಕ್ರಮ ಅನುಸರಿಸಲಾಗುತ್ತದೆ. ಆದರೆ, ಭಾರತದಲ್ಲಿ ಜಾನುವಾರುಗಳ ವಿಷಯದಲ್ಲಿ ಇದು ಸೂಕ್ಷ್ಮವಿಷಯವಾಗಿದೆ.
ಪ್ರಾಣಿಗಳಿಗೆ ವಯಸ್ಸಾದಗ, ಅನುತ್ಪಾದಕವಾಗಿರುವಾಗ ಅವುಗಳನ್ನು ಮಾರಾಟ ಮಾಡುವುದು ಆರ್ಥಿಕವಾಗಿ ಸರಿ. ಪ್ರಪಂಚದ ಇತರೆ ಕಡೆಗಳಲ್ಲಿ ಡೈರಿ ರೈತರು ಇದೇ ರೀತಿ ಮಾಡುತ್ತಾರೆ. ಈ ಮಾರಾಟದಿಂದ ಬಂದ ಹಣದಲ್ಲಿ ಬೇರೆ ಪ್ರಾಣಿ ಖರೀದಿಸುತ್ತಾರೆ. ಆದರೆ, ಭಾರತದಲ್ಲಿ ಈ ರೀತಿ ಆಗುತ್ತಿಲ್ಲ ಎಂದು ಕೆಲವು ತಜ್ಞರು ವಾದಿಸುತ್ತಾರೆ.
ಇಂತಹ ಹಲವು ಕಾರಣಗಳಿಂದ ಭಾರತವು 2023-24ರ ವೇಳೆಗೆ ಕೆನೆರಹಿತ ಹಾಲಿನ ಪುಡಿ ಮತ್ತು ಇತರ ಡೈರಿ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ. ಇದು ಆರ್ಥಿಕವಾಗಿ ತರ್ಕಬದ್ಧವಾಗಿದ್ದರೂ, ರಾಜಕೀಯವಾಗಿ ಸೂಕ್ಷ್ಮವಾಗಿದೆ. ಹೈನುಗಾರರು ಇದರ ವಿರುದ್ಧ ಲಾಬಿ ಮಾಡುತ್ತಾರೆ ಮತ್ತು ಶರದ್ ಪವಾರ್ ಅವರಂತಹ ರಾಜಕಾರಣಿಗಳು ಆಕ್ಷೇಪಣೆ ಎತ್ತಲು ಪ್ರಾರಂಭಿಸಿದ್ದಾರೆ. ಸೂಕ್ತ ಕ್ರಮಗಳ ಮೂಲಕ ಪೂರೈಕೆ ಸರಪಳಿಯನ್ನು ಸರಿಪಡಿಸಬಹುದು. ಅದಕ್ಕೆ ನೀತಿ ನಿರೂಪಕರು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.