ಕನ್ನಡ ಸುದ್ದಿ  /  Nation And-world  /  Explainer India News Madhya Pradesh Assembly Elections 2023 Voting Date Time Constituencies And Other Details Kub

Madhya Pradesh Elections 2023: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಅಖಾಡ ಹೀಗಿತ್ತು: ಇಲ್ಲಿದೆ ಪ್ರಮುಖ ಅಂಶಗಳು

Madhya Pradesh Elections Explainer ಹಿಂದಿ ಪ್ರಮುಖ ರಾಜ್ಯ ಮಧ್ಯಪ್ರದೇಶದಲ್ಲಿ ಈ ಬಾರಿ ವಿಧಾನಸಭೆ ಚುನಾವಣೆ ಬಿಜೆಪಿಗೆ ಸವಾಲಿನ ಪ್ರಶ್ನೆಯಾದರೆ, ಕಾಂಗ್ರೆಸ್‌ ಅಸ್ತಿತ್ವದ ವಿಷಯ. ಹೇಗಿತ್ತು ಚುನಾವಣೆ.. ಇಲ್ಲಿದೆ ಪ್ರಮುಖಾಂಶ

ಮಧ್ಯಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಯ ಪ್ರಮುಖ ಅಂಶಗಳ ನೋಟ
ಮಧ್ಯಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಯ ಪ್ರಮುಖ ಅಂಶಗಳ ನೋಟ

ದೇಶದ ಪ್ರಮುಖ ಹಿಂದಿ ಸಾಮ್ಯಾಜ್ಯ ಹಾಗೂ ಬಿಜೆಪಿ ಹಾಗೂ ಕಾಂಗ್ರೆಸ್‌ನ ನೇರ ಹಾಗೂ ಜಿದ್ದಾಜಿದ್ದಿ ರಾಜಕೀಯಕ್ಕೆ ಹೆಸರುವಾಸಿಯಾದ ರಾಜ್ಯ ಮಧ್ಯಪ್ರದೇಶ. ದಶಕಗಳ ನಂತರ ಚೇತರಿಸಿಕೊಂಡು ಹಿಂದಿನ ಬಾರಿ ಅಧಿಕಾರ ಹಿಡಿದರೂ ಬಂಡಾಯದಿಂದ ಉಳಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್‌, ಆಡಳಿತ ವಿರೋಧಿ ಅಲೆಯ ನಡುವೆ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಈ ಬಾರಿಯೂ ಸ್ಪರ್ಧೆಯೊಡ್ಡಿವೆ. ಮತದಾರ ಈಗಾಗಲೇ ತನ್ನ ಹಕ್ಕು ಚಲಾಯಿಸಿದ್ದು ಡಿಸೆಂಬರ್‌ 3ಕ್ಕಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ, ಫಲಿತಾಂಶ, ಪರಿಣಾಮದ ಕುರಿತು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಮಧ್ಯಪ್ರದೇಶದಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳೆಷ್ಟು?

ಮಧ್ಯಪ್ರದೇಶದಲ್ಲಿನ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 230

ಚುನಾವಣಾ ವೇಳಾಪಟ್ಟಿ

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್‌ 30. ನವೆಂಬರ್‌ 17 ರಂದು ಒಂದೇ ಹಂತದಲ್ಲಿ ಮತದಾನ ಮುಗಿದಿದೆ.

ಪ್ರಮುಖ ಪಕ್ಷಗಳು ನೀಡಿದ್ದ ಮುಖ್ಯ ಭರವಸೆಗಳು

ಬಿಜೆಪಿಯು ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ, ಪಿಯುಸಿವರೆಗೆ ಎಲ್ಲ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಲಾಡ್ಲಿ ಬೆಹನಾ ಯೋಜನಾ,, ಪಿಎಂ ಉಜ್ವಲಾ ಯೋಜನೆ ಅಡಿ ಸಿಲೆಂಡರ್‌ಗೆ 450 ರೂ., ಕ್ವಿಂಟಲ್‌ ಗೋಧಿಗೆ ರೂ. 2700ಹಾಗೂ ಭತ್ತಕ್ಕೆ ರೂ. 3100 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಉದ್ಯೋಗ ಅಥವಾ ಸ್ವಯಂ ಉದ್ಯೋಗಕ್ಕೆ ಒತ್ತು ನೀಡಿದೆ. ಐಐಟಿ ಮಾದರಿಯಲ್ಲಿ ಮಧ್ಯಪ್ರದೇಶದ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳ ಸ್ಥಾಪನೆ, ಆರು ಹೊಸ ಎಕ್ಸ್‌ಪ್ರೆಸ್‌ ವೇಗಳು, ಬುಡಕಟ್ಟು ಸಮುದಾಯಗಳಿಗೆ ಪ್ರತೇಕ ಬಜೆಟ್‌ ನೀಡುವ ಭರವಸೆಯನ್ನು ನೀಡಿದೆ.

ಕಾಂಗ್ರೆಸ್‌ 59 ಚುನಾವಣಾ ಭರವಸೆಗಳನ್ನು ನೀಡಿದೆ. ನಾರಿ ಸಮ್ಮಾನ್ ನಿಧಿಯಡಿ ಮಹಿಳೆಯರಿಗೆ ಮಾಸಿಕ ರೂ. 1,500 ನೆರವು, ರೂ. 500 ಕ್ಕೆ ಎಲ್‌ಪಿಜಿ ಸಿಲಿಂಡರ್‌, ಮಹಿಳೆಯರಿಗೆ ಶೇ 3ರ ಬಡ್ಡಿ ದರದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ರೂ. 25 ಲಕ್ಷದವರೆಗೆ ಸಾಲ , ಗ್ರಾಮೀಣ ವಸತಿ ರಹಿತ ಮಹಿಳೆಯರಿಗೆ ವಸತಿ, ಮಹಾನಗರ ಬಸ್‌ಗಳಲ್ಲಿ ಉಚಿತ ಸಾರಿಗೆ ಪ್ರಯಾಣ, ಹೆಣ್ಣು ಮಕ್ಕಳಿಗಾಗಿ 'ಮೇರಿ ಬಿಟಿಯಾ ರಾಣಿ' ಯೋಜನೆಯಡಿ ಜನನದಿಂದ ಮದುವೆಯವರೆಗೆ ರೂ. 2.51 ಲಕ್ಷ ನೀಡುವುದು ಕಾಂಗ್ರೆಸ್‌ ಪ್ರಮುಖ ಭರವಸೆಗಳು.

ಹಣಾಹಣಿ ಯಾವ ಪಕ್ಷಗಳಿಗೆ?

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ಇಲ್ಲಿ ನೇರಾಹಣಿ ಏರ್ಪಟ್ಟಿದೆ. ಎಎಪಿ, ಬಿಎಸ್ಪಿ ಮತ್ತು ಎಸ್ಪಿ ಕೂಡ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

  • ಚುನಾವಣೆ ಕಣದಲ್ಲಿದ್ದ ಪ್ರಮುಖರು ಯಾರು?

ಬಿಜೆಪಿಯಿಂದ ಸಿಎಂ ಶಿವರಾಜಸಿಂಗ್‌ ಚೌಹಾಣ್‌, ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಪ್ರಹ್ಲಾದ್ ಸಿಂಗ್ ಪಟೇಲ್, ಫಗ್ಗನ್ ಸಿಂಗ್ ಕುಲಸ್ತೆ, ಬಿಜೆಪಿ ನಾಯಕ ಕೈಲಾಸ್‌ ವಿಜಯವರ್ಗೀಯ ಪ್ರಮುಖ ಹುರಿಯಾಳುಗಳು.

ಕಾಂಗ್ರೆಸ್‌ನಿಂದ ಮಾಜಿ ಸಿಎಂ ಕಮಲನಾಥ್‌, ದಿಗ್ವಿಜಯ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್, ಹಿರಿಯ ನಾಯಕ ಡಾ.ಗೋವಿಂದ್ ಸಿಂಗ್ ಕಣದಲ್ಲಿರುವ ಪ್ರಮುಖರು.

ಚುನಾವಣೆ ಗೆಲುವು-ಸೋಲಿನ ಸಂದೇಶ ಏನಾಗಿರಬಹುದು?

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸಿತ್ತು. ಮೋದಿ ಪ್ರಭಾವದ ನಡುವೆಯೇ ಹಿಂದಿ ಪ್ರಭಾವದ ರಾಜ್ಯದಲ್ಲಿ ಈ ಬಾರಿಯೂ ವಿಧಾನಸಭೆ ಜತೆಗೆ ಇನ್ನೇನು ಬರಲಿರುವ ಲೋಕಸಭೆ ಚುನಾವಣೆಗೂ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಎಚ್ಚರಿಕೆಯ ಸಂದೇಶ

ಲೋಕಸಭಾ ಚುನಾವಣೆ ಮೇಲೆ ಏನು ಪರಿಣಾಮ ಆಗಬಹುದು?

ಒಟ್ಟು 29 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಬಿಜೆಪಿಯೇ ಹೆಚ್ಚಿನ ಸ್ಥಾನ ಪಡೆಯುತ್ತಾ ಬಂದಿದೆ. ಜನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಭಿನ್ನವಾಗಿ ನೋಡುವುದರಿಂದ ಅಷ್ಟಾಗಿ ಪ್ರಭಾವ ಇಲ್ಲದೇ ಇರದಿದ್ದರೂ ರಾಜ್ಯಾಡಳಿತ ಹಾಗೂ ಚುನಾವಣೆ ಫಲಿತಾಂಶದ ಪ್ರಭಾವ ಲೋಕಸಭೆ ಚುನಾವಣೆ ಮೇಲೂ ಆಗಲಿದೆ.

ಕರ್ನಾಟಕ ಫಲಿತಾಂಶದ ಪ್ರಭಾವ ಆಗಬಹುದೇ

ಕರ್ನಾಟಕದ ಗ್ಯಾರಂಟಿ ಯೋಜನೆಗಳ ಪ್ರಭಾವ ಅಷ್ಟಾಗಿ ಮಧ್ಯಪ್ರದೇಶದಲ್ಲಿ ಆಗಿಲ್ಲ. ಕಾಂಗ್ರೆಸ್‌ ಮಧ್ಯಪ್ರದೇಶದಲ್ಲಿ ಹೆಚ್ಚಿನ ಗ್ಯಾರಂಟಿಗಳನ್ನು ಪ್ರಯೋಗಿಸಿಲ್ಲ. ಬಿಜೆಪಿ ಕೂಡ ಭಿನ್ನ ಪ್ರಣಾಳಿಕೆಯನ್ನೇ ಇಲ್ಲಿ ನೀಡಿದೆ.

ಚುನಾವಣೆಯಲ್ಲಿ ಈ ಬಾರಿ ಗಮನ ಸೆಳೆದ ಅಂಶಗಳು

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಆಡಳಿತದ ವೈಫಲ್ಯಗಳು ಹಾಗೂ ಜಾರಿಯಾಗದ ಭರವಸೆಗಳ ಕುರಿತು ಕಾಂಗ್ರೆಸ್ ಚರ್ಚೆಗೆ ಒತ್ತು ನೀಡಿತು. ಬಿಜೆಪಿ ಹೊಸ ನಾಯಕತ್ಬ ಬೆಳೆಸುವ ನಿಟ್ಟಿನಲ್ಲಿ ಕೇಂದ್ರದ ಸಚಿವರು ಹಾಗೂ ಯುವ ಮುಖಗಳಿಗೆ ಮಣೆ ಹಾಕಿ ಮುಂದಿನ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಟ್ಟುಕೊಂಡೂ ಚುನಾವಣೆ ಎದುರಿಸಿದೆ.

ಕಳೆದ ಚುನಾವಣೆ ಫಲಿತಾಂಶ ಹೀಗಿತ್ತು

2018ರಲ್ಲಿ ನಡೆದಿದ್ದ ಚುನಾವಣೆ ವೇಳೆ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಬಿಜೆಪಿಗೆ ಹಿನ್ನಡೆಯಾಗಿತ್ತು. ಸರಳ ಬಹುಮತ ಪಡೆದಿದ್ದ ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಗೆದ್ದು ಇತರೆ ಪಕ್ಷಗಳ ಸಹಕಾರದಿಂದ ಸರ್ಕಾರ ರಚಿಸಿತ್ತು. 109 ಸ್ಥಾನಗಳೊಂದಿಗೆ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಕಾಂಗ್ರೆಸ್‌ ಮುಖಂಡ ಜೋತಿರಾಧಿತ್ಯ ಸಿಂಧಿಯಾ ನೇತೃತ್ವದಲ್ಲಿ 22 ಶಾಸಕರನ್ನು ಸೆಳೆದುಕೊಂಡು 15 ತಿಂಗಳೊಳಗೆ ಅಂದರೆ 2020ರಲ್ಲಿ ಸರ್ಕಾರ ರಚಿಸಿತ್ತು. ಶಿವರಾಜಸಿಂಗ್‌ ಚೌಹಾಣ್‌ ಮತ್ತೆ ಸಿಎಂ ಆಗಿದ್ದರು.