Narendra Modi: ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಎದುರಾಳಿ ಯಾರು; ಪ್ರತಿಪಕ್ಷಗಳ ಒಗ್ಗಟ್ಟಿಗೆ ಎದುರಾಗಬಹುದಾದ 3 ಸವಾಲು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Narendra Modi: ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಎದುರಾಳಿ ಯಾರು; ಪ್ರತಿಪಕ್ಷಗಳ ಒಗ್ಗಟ್ಟಿಗೆ ಎದುರಾಗಬಹುದಾದ 3 ಸವಾಲು

Narendra Modi: ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಎದುರಾಳಿ ಯಾರು; ಪ್ರತಿಪಕ್ಷಗಳ ಒಗ್ಗಟ್ಟಿಗೆ ಎದುರಾಗಬಹುದಾದ 3 ಸವಾಲು

Narendra Modi: ಮುಂಬರುವ ಲೋಕಸಭೆ ಚುನಾವಣೆ (Lok Sabha Election) ಯಲ್ಲಿ ಬಿಜೆಪಿ (BJP) ಗೆ ನಾಯಕತ್ವದ ಕೊರತೆ ಇಲ್ಲ. ನರೇಂದ್ರ ಮೋದಿ ಅವರ ಪ್ರಭಾವಿ ನಾಯಕತ್ವವನ್ನು ಚಾಣಕ್ಷತೆಯೊಂದಿಗೆ ಎದುರಿಸಬಲ್ಲ ಎದುರಾಳಿ ಯಾರಾಗಬಹುದು? ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿಗೆ ಎದುರಾಗಬಹುದಾದ 3 ಸವಾಲುಗಳೇನು? ಇಲ್ಲಿದೆ ಎಕ್ಸ್‌ಪ್ಲೇನರ್‌.

ಪ್ರಧಾನ ಮಂತ್ರಿ ನರೇಂದ್ರ ಮೋದಿ (ಕಡತ ಚಿತ್ರ)
ಪ್ರಧಾನ ಮಂತ್ರಿ ನರೇಂದ್ರ ಮೋದಿ (ಕಡತ ಚಿತ್ರ) (HT_PRINT)

ರಾಷ್ಟ್ರಮಟ್ಟದಲ್ಲಿ ಲೋಕಸಭೆ ಚುನಾವಣೆ 2024 (Lok Sabha Election 2024) ಕ್ಕೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ಶುರುವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದುರಾಳಿ ಯಾರು? ಪ್ರತಿಪಕ್ಷಗಳ ಮೈತ್ರಿ ರಾಜಕಾರಣ ಚರ್ಚೆಯಲ್ಲಿದ್ದರೂ, ಸಮರ್ಥ ನಾಯಕತ್ವ ಮತ್ತು ಒಗ್ಗಟ್ಟಿನ ವಿಚಾರದಲ್ಲಿ ಅವರಿಗೆ ಮೂರು ಪ್ರಮುಖ ಸವಾಲುಗಳು ಎದುರಾಗಿವೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವವು ಆಡಳಿತಾರೂಢ ಬಿಜೆಪಿಗೆ ಭಾರಿ ಬಲವನ್ನು ಒದಗಿಸಿದೆ. ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್‌ ಎದುರಾಳಿ ಎಂಬಂತೆ ಮೇಲ್ನೋಟಕ್ಕೆ ಗೋಚರಿಸಿದರೂ, ಸಂಘಟನೆ ಬಲಿಷ್ಠವಾಗಿಲ್ಲ. ಸಮರ್ಥ ನಾಯಕತ್ವದ ಕೊರತೆ ಇದೆ. ರಾಹುಲ್‌ ಗಾಂಧಿ ಅವರನ್ನು ಮೋದಿ ಅವರಿಗೆ ಎದುರಾಳಿಯಾಗಿ ಬಿಂಬಿಸಿದರೂ, ಏಕಾಂಗಿಯಾಗಿ ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಎದುರಿಸುವ ಸ್ಥಿತಿಯಲ್ಲಿ ಇಲ್ಲ. ಆದಾಗ್ಯೂ, ಕಾಂಗ್ರೆಸ್‌ ಪಕ್ಷಕ್ಕೆ ಸಮಾಧಾನಕರ ವಿಚಾರ ಎಂದರೆ ರಾಹುಲ್‌ ಗಾಂಧಿ ಅವರ ಜನಪ್ರಿಯತೆ 2014ಕ್ಕೆ ಹೋಲಿಸಿದರೆ ದುಪ್ಪಟ್ಟು ಆಗಿದೆ.

ಇದು ಬಿಟ್ಟರೆ, ಮೋದಿ ವಿರುದ್ಧದ ಪ್ರತಿಪಕ್ಷಗಳ ಒಗ್ಗಟ್ಟಿನ ತಂತ್ರವನ್ನು ದುರ್ಬಲವೆಂದು ಪರಿಗಣಿಸಲಾಗಿದೆ. ಸಮರ್ಥ ನಾಯಕತ್ವವನ್ನು ಬಿಂಬಿಸುವಲ್ಲಿ ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡುವುದು ಸುಲಭವಲ್ಲ.

ಪಾಟ್ನಾದಲ್ಲಿ ಜೂ.23ರಂದು ವಿಪಕ್ಷ ಮೈತ್ರಿಯ ಮಹತ್ವದ ಸಭೆ

ಮುಂಬರುವ 2024 ರ ಲೋಕಸಭೆ ಚುನಾವಣೆಗೆ ತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳು ಜೂನ್ 23 ರಂದು ಪಾಟ್ನಾದಲ್ಲಿ ಒಗ್ಗೂಡುತ್ತಿವೆ. ಆದರೆ ಅವರ ಮುಂದೆ ಮೂರು ಸವಾಲುಗಳು ಉಳಿದಿವೆ. ಇದಕ್ಕೆ ಪರಿಹಾರವನ್ನು ಕಂಡುಹಿಡಿಯಲು ಅವರು ಸುದೀರ್ಘ ಕಸರತ್ತನ್ನು ನಡೆಸಬೇಕಾಗುತ್ತದೆ. ಸದ್ಯದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಮೂರು ಪ್ರಮುಖ ಸಮಸ್ಯೆಗಳಿದ್ದು, ಶೀಘ್ರ ಪರಿಹಾರ ಕಂಡುಕೊಳ್ಳುವುದು ಕಷ್ಟಕರವಾಗಿದೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದರು.

ರಾಜ್ಯಗಳಲ್ಲಿ ವಿರೋಧಿಗಳು, ಲೋಕಸಭೆಗೆ ಮಿತ್ರರಾಗುವುದು ಸಾಧ್ಯವೇ?

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗೂಡಲು ಸಿದ್ಧವಾಗಿರುವ ಪಕ್ಷಗಳು ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಸೆಣಸಾಟ ನಡೆಸುವುದರಿಂದ ಹಲವು ರಾಜ್ಯಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಒಮ್ಮತವನ್ನು ಸಾಧಿಸುವುದು ಕಷ್ಟ. ಪಶ್ಚಿಮ ಬಂಗಾಳ, ಕೇರಳ, ದೆಹಲಿ, ಪಂಜಾಬ್, ತೆಲಂಗಾಣ ಮುಂತಾದ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಈ ಸಮಸ್ಯೆ ಹೆಚ್ಚು ಗಂಭೀರವಾಗಿದೆ.

ಮೂಲಗಳನ್ನು ನಂಬುವುದಾದರೆ ಜೂ.23ರಂದು ನಡೆಯುವ ಸಭೆಯಲ್ಲಿ ಮೇಲಿನ ವಿಷಯಗಳ ಕುರಿತು ಚರ್ಚೆ ನಡೆಯಬಹುದು. ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ತಲುಪುವ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಯಲಿದೆ. ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಂ ಮತದಾರರನ್ನು ತಲುಪಿ, ಬಿಜೆಪಿಯೊಂದಿಗೆ ಸ್ಪರ್ಧಿಸಲು ರಾಷ್ಟ್ರೀಯ ಪಕ್ಷಗಳು ಮಾತ್ರ ಹೇಗೆ ಸಮರ್ಥವಾಗಿವೆ ಎಂಬುದರ ಚಿಂತನೆ ನಡೆಯುವ ಸಾಧ್ಯತೆ ಇದೆ.

ಎಲ್ಲ ವಿಪಕ್ಷಗಳೂ ಒಂದೇ ಛತ್ರಿ ಅಡಿ ಬರುವುದು ಕಾರ್ಯಸಾಧುವಾದ ಚಿಂತನೆಯಲ್ಲ

ಹೆಚ್ಚು ಹೆಚ್ಚು ವಿರೋಧ ಪಕ್ಷಗಳನ್ನು ಮೈತ್ರಿಯ ವ್ಯಾಪ್ತಿಯೊಳಗೆ ಸೇರಿಸುವುದು ಎರಡನೇ ಸವಾಲು. ಸದ್ಯ ಒಟ್ಟು 16 ಪಕ್ಷಗಳು ಸಭೆಗೆ ಹಾಜರಾಗಲು ಒಪ್ಪಿಗೆ ನೀಡಿದ್ದು, ಸಂಭಾವ್ಯ ಪಕ್ಷಗಳ ಸಂಖ್ಯೆ 21 ಎಂದು ಅಂದಾಜಿಸಲಾಗಿದೆ.

ಇನ್ನೂ ಹಲವು ಪಕ್ಷಗಳು ಬಿಜೆಪಿ ಜತೆ ಇಲ್ಲದಿದ್ದರೂ ಈ ಸಭೆಗೆ ಬರಲು ಸಿದ್ಧರಿಲ್ಲ. ಅವುಗಳಲ್ಲಿ ಪ್ರಮುಖವಾದವುಗಳು BJD, YSR ಕಾಂಗ್ರೆಸ್ ಮತ್ತು BRS. ಹೇಗಾದರೂ, ಬಿಆರ್‌ಎಸ್‌ ಬಗ್ಗೆ ಭರವಸೆ ಇದೆ. ಅದು ಬೇಗ ಅಥವಾ ನಂತರ ಪ್ರತಿಪಕ್ಷಗಳ ಮೈತ್ರಿ ಬಲಪಡಿಸುವ ಸಲುವಾಗಿ ಒಗ್ಗಟ್ಟು ಪ್ರದರ್ಶನಕ್ಕೆ ಬರಬಹುದು. ಇದಕ್ಕಾಗಿ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ಬಿಜೆಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪ್ರತಿಪಕ್ಷಗಳ ಮೈತ್ರಿಯಿಂದ ದೂರ ಉಳಿಯಬಹುದು.

ಆದಾಗ್ಯೂ, ಚುನಾವಣೆಯ ನಂತರ ಪರಿಸ್ಥಿತಿಗಳು ಅನುಕೂಲಕರವಾದಾಗ ಎರಡೂ ಪಕ್ಷಗಳು ಇತರ ರೂಪಗಳಲ್ಲಿ ಬೆಂಬಲವನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಎಂಐಎಂನಂತಹ ಕೆಲವು ಸಣ್ಣ ಪಕ್ಷಗಳು ವಿರೋಧ ಪಕ್ಷದ ಜತೆ ನಿಲ್ಲುವುದಿಲ್ಲ ಎಂಬುದು ಕೂಡ ಗಮನಿಸಬೇಕಾದ ಅಂಶ.

ಮೋದಿಯವರಿಗೆ ಎದುರಾಳಿ ನಾಯಕ ಯಾರಾಗಬಹುದು

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದುರಾಳಿ ಎಂದು ಯಾರನ್ನೂ ಬಿಂಬಿಸದೇ ಮುಂದುವರಿಯ ಚಿಂತನೆ ನಡೆದಿದೆ. ಒಂದೊಮ್ಮೆ ಯಾರನ್ನಾದರೂ ಬಿಂಬಿಸಿದರೆ ಆಗ ವಿಪಕ್ಷ ಮೈತ್ರಿಯಲ್ಲಿ ಒಡಕು ಮೂಡಲಿದೆ.

ಇದೇ ಕಾರಣಕ್ಕೆ, ನಿತೀಶ್‌ ಕುಮಾರ್‌ ಪ್ರಧಾನಿ ಅಭ್ಯರ್ಥಿ ಅಲ್ಲ ಎಂಬ ಮಾತನ್ನು ಜೆಡಿಯು ನಾಯಕರು ಪದೇಪದೆ ಹೇಳುತ್ತಿದ್ದಾರೆ. ಶರದ್‌ ಪವಾರ್‌ ಕೂಡಾ ತಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಹೇಳಿದ್ದಾರೆ.

ಆದರೆ, ರಾಜಕೀಯ ಪರಿಣತರ ಪ್ರಕಾರ ಪ್ರತಿಪಕ್ಷಗಳ ಈ ಸಾಮೂಹಿಕ ನಾಯಕತ್ವದ ತಂತ್ರಗಾರಿಕೆ ಹೆಚ್ಚು ಫಲಕೊಡದು. ಮೋದಿ ವಿರುದ್ಧದ ದುರ್ಬಲ ತಂತ್ರಗಾರಿಕೆ. ನಿಜವಾದ ವಿರೋಧ ಇದ್ದರೆ ಅಲ್ಲಿ ಸಮರ್ಥ ನಾಯಕತ್ವಕ್ಕೆ ಅವಕಾಶ ಇರಬೇಕು. ಆದರೆ, ಈ ವಿಚಾರದಲ್ಲಿ ವಿಪಕ್ಷಗಳ ಸಂಕಲ್ಪ ಬಲವಾಗಿಲ್ಲ. ನಾಯಕತ್ವವೂ ದೃಢವಾಗಿಲ್ಲ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.