ಕನ್ನಡ ಸುದ್ದಿ  /  Nation And-world  /  Explainer Rajasthan Assembly Elections Voters Mood Elections Campaign Party Politics Prominent Candidates Details Kub

Explainer: ರಾಜಸ್ಥಾನದಲ್ಲಿ ಮತ್ತೆ ಅಧಿಕಾರ ಬದಲಿಸುವರೇ ಮತದಾರ : ಹೀಗಿದೆ ಚುನಾವಣೆ ಚಿತ್ರಣ

Rajasthan Assembly elections ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಮುಗಿದಿದೆ. ಇನ್ನು ಫಲಿತಾಂಶಕ್ಕೆ ಕಾಯುವ ಸಮಯ. ಹೇಗಿದೆ ಅಲ್ಲಿನ ಕಣ ಚಿತ್ರಣ…

ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ರಾಜಕೀಯ ಚಿತ್ರಣ ಹೀಗಿದೆ.
ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ರಾಜಕೀಯ ಚಿತ್ರಣ ಹೀಗಿದೆ.

ಭಾರತದ ಪ್ರಮುಖ ಹಿಂದಿ ಮಾತನಾಡುವ, ಸಾಂಸ್ಕೃತಿಕ ಹಿನ್ನೆಲೆಯ ರಾಜಸ್ಥಾನ ರಾಜಕೀಯಕ್ಕೂ ಹೆಸರುವಾಸಿ. ಇಲ್ಲಿನ ಮತದಾರರು ಒಂದೇ ಪಕ್ಷಕ್ಕೆ ಎಂದೂ ಅಧಿಕಾರ ಕೊಟ್ಟವರಲ್ಲ. ಪ್ರತಿ ಚುನಾವಣೆಯಲ್ಲೂ ಕರ್ನಾಟಕದಂತೆಯೇ ಬದಲಾವಣೆ ಬಯಸಿದವರೇ. ಕಳೆದ ಚುನಾವಣೆಯಲ್ಲಿನ ಬಹುಮತ ಕೊರತೆ, ನಂತರ ಅಧಿಕಾರಕ್ಕೆ ಬಂದರೂ ಬಂಡಾಯದ ಬಿಸಿ ನಡುವೆಯೂ ಕಾಂಗ್ರೆಸ್‌ ಐದು ವರ್ಷವನ್ನು ಇಲ್ಲಿ ಪೂರೈಸಿತು. ಬಿಜೆಪಿ ಕೂಡ ಇಂತಹದೇ ಆಂತರಿಕ ಸಂಘರ್ಷದ ಮಧ್ಯೆ ಮತ್ತೆ ಅಧಿಕಾರಕ್ಕೆ ಬರಬೇಕು, ಲೋಕಸಭೆ ಚುನಾವಣೆಯಲ್ಲಿ ಸ್ವೀಪ್‌ ಮಾಡಬೇಕು ಎನ್ನುವ ಉಮೇದಿನೊಂದಿಗೆ ಪ್ರಚಾರ ಕೈಗೊಂಡಿದೆ. ಇಲ್ಲಿನ ಫಲಿತಾಂಶವೂ ಲೋಕಸಭೆಗೆ ದಿಕ್ಸೂಚಿಯೂ ಆಗಬಹುದು.

ರಾಜಸ್ಥಾನ ವಿಧಾನಸಭೆಯಲ್ಲಿ ಕ್ಷೇತ್ರಗಳೆಷ್ಟು

ರಾಜಸ್ಥಾನದ ಒಟ್ಟು 200. ಒಂದು ಕ್ಷೇತ್ರದಲ್ಲಿ ಅಭ್ಯರ್ಥಿ ನಿಧನರಾಗಿದ್ದರಿಂದ 199 ಸ್ಥಾನಕ್ಕೆ ಚುನಾವಣೆ ನಡೆದಿದೆ.

ಚುನಾವಣಾ ವೇಳಾಪಟ್ಟಿಹೀಗಿದೆ.

ಅಧಿಸೂಚನೆಯ ದಿನಾಂಕ ಅಕ್ಟೋಬರ್ 30

ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನ ನವೆಂಬರ್ 6

ಮತದಾನ ನವೆಂಬರ್ 25

ಮತ ಎಣಿಕೆ ಡಿಸೆಂಬರ್‌ 3

ಪ್ರಮುಖ ಪಕ್ಷಗಳು ನೀಡಿರುವ ಮುಖ್ಯ ಭರವಸೆಗಳು ಏನೇನು

  • ಕಾಂಗ್ರೆಸ್‌

-ಮನೆಯೊಡತಿಯರಿಗೆ 10ಸಾವಿರ ರೂ. ಸಹಾಯಧನ

-1.4 ಕೋಟಿ ಕುಟುಂಬಗಳಿಗೆ 500 ರೂ. ಎಲ್‌ಪಿಜಿ ಸಿಲೆಂಡರ್‌ ಸಹಾಯಧನ

- ರೈತರಿಂದಲೇ ಕೆಜಿಗೆ 2 ರೂ.ನಂತೆ ಸಗಣಿ ಖರೀದಿ

- ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌

- ನರೇಗಾ ಹಾಗೂ ಇಂದಿರಾ ಗಾಂಧಿ ನಗರ ಉದ್ಯೋಗ 125 ರಿಂದ 150 ದಿನಗಳಿಗೆ ಹೆಚ್ಚಳ

- ಪ್ರತಿ ಗ್ರಾಮ ಮತ್ತು ನಗರ ವಾರ್ಡ್‌ಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ

  • ಬಿಜೆಪಿ

- ಗೋಧಿ ಸಂಗ್ರಹಣೆಗೆ ಹೆಚ್ಚಿದ ಎಂಎಸ್‌ಪಿ: ರೈತರಿಂದ ಕ್ವಿಂಟಲ್‌ಗೆ 2800 ರೂ. ಎಂಎಸ್‌ಪಿ ದರದಲ್ಲಿ ಖರೀದಿ.

- ವಿವಿಧ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಸಮಗ್ರ ಪರಿಹಾರ ಯೋಜನೆ

- ಮಹಿಳೆಯರ ಸುರಕ್ಷತೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್

- ಹೆಣ್ಣು ಮಗುವಿನ ಉತ್ತೇಜನಕ್ಕೆ 18 ವರ್ಷಕ್ಕೆ 2 ಲಕ್ಷ ರೂ. ದೊರೆಯುವಂತ ಉಳಿತಾಯ ಬಾಂಡ್ ಲಾಡೋ ಪ್ರೋತ್ಸಾಹ ಯೋಜನೆ.

- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಯೋಜನೆ

- ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ 500 ರೂ.ನಿಂದ 950 ರೂ.ಗೆ ಸಬ್ಸಿಡಿ ಹೆಚ್ಚಳ

- 5 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯೊಂದಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲು 2,000 ಕೋಟಿ ರೂ. ಕಾರ್ಪಸ್ ನಿಧಿ ಸ್ಥಾಪನೆ.

ಹಣಾಹಣಿ ಯಾವ ಪಕ್ಷಗಳ ನಡುವೆ

ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆಯೇ ಇಲ್ಲಿ ನೇರಾನೇರ ಹಣಾ ಏರ್ಪಟ್ಟಿದೆ. ಬಿಎಸ್ಪಿ, ಆಮ್‌ ಆದ್ಮಿ ಸಹಿತ ಹಲವು ಪಕ್ಷಗಳ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ಮುಖ್ಯ ಉಮೇದುವಾರರು

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (ಸರ್ದಾರ್‌ಪುರ), ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ (ಝಲ್ರಾಪಟನ್), ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ (ಟೋಂಕ್),ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ (ಲಚ್ಮಂಗಢ), ಆರ್‌ಎಲ್‌ಪಿ ಸಂಚಾಲಕ ಹನುಮಾನ್ ಬೇನಿವಾಲ್ (ಖಿನ್ವಸರ್) ಕಣದಲ್ಲಿರುವ ಪ್ರಮುಖರು. ಬಿಜೆಪಿ ಏಳು ಸಂಸದರನ್ನು ವಿಧಾನಸಭೆ ಚುನಾವಣೆ ಕಣಕ್ಕಿಳಿಸಿದೆ.

ಗೆಲುವು-ಸೋಲಿನ ಸಂದೇಶ ಏನಾಗಿರಬಹುದು

ರಾಜಸ್ಥಾನದಲ್ಲಿ ಸತತ ಆರನೇ ಚುನಾವಣೆಯಿಂದ ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್‌ಗೆ ಅಧಿಕಾರವನ್ನು ಇಲ್ಲಿನ ಮತದಾರರು ನೀಡುತ್ತಾ ಬಂದಿದ್ಧಾರೆ. ಈ ಬಾರಿ ಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ನಡುವಿನ ಕಾಂಗ್ರೆಸ್‌ ಆಂತರಿಕ ಕಚ್ಚಾಟದ ನಡುವೆ ಅವಧಿಯನ್ನು ಪೂರೈಸಿದೆ. ಬಿಜೆಪಿಯಲ್ಲಿ ನಾಯಕತ್ವ ಸಂಘರ್ಷವೂ ಜೋರಾಗಿಯೇ ಇತ್ತು. ಬದಲಾವಣೆಯ ಸಂದೇಶವನ್ನು ಮತದಾರರು ನೀಡಬಹುದು ಎನ್ನುವ ನಿರೀಕ್ಷೆಯಿದೆ.

ಲೋಕಸಭಾ ಚುನಾವಣೆ ಮೇಲೆ ಏನು ಪರಿಣಾಮ

ಹಿಂದಿನಿಂದಲೂ ರಾಜಸ್ಥಾನದ ಜನ ಅಧಿಕಾರದಲ್ಲಿರುವ ಪಕ್ಷವನ್ನು ಬದಲಿಸುತ್ತಾ ಬಂದಿದ್ದಾರೆ. ಆದರೆ ಲೋಕಸಭೆ ಚುನಾವಣೆಗೆ ಬಿಜೆಪಿಗೆ ಹೆಚ್ಚಿನ ಮಣೆ ಹಾಕಿದ್ದಾರೆ. ಒಟ್ಟು 25ಕ್ಕೆ 25 ಸ್ಥಾನಗಳೂ ಬಿಜೆಪಿಯೇ ಇಲ್ಲಿ ಗೆದ್ದಿತ್ತು. ಕಳೆದ ಬಾರಿ ಬಿಜೆಪಿಗೆ ಬಂದಿದ್ದು 24 ಸ್ಥಾನಗಳು. ವಿಧಾನಸಭೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಆ ಪಕ್ಷ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಕಾರಿಯಾಗಬಹುದು.

ಕರ್ನಾಟಕ ಫಲಿತಾಂಶದ ಪ್ರಭಾವ ಆಗಬಹುದೇ

ಕರ್ನಾಟಕದಲ್ಲಿ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಲ್ಲಿ ಕೆಲವನ್ನು ರಾಜಸ್ಥಾನದಲ್ಲಿಯೂ ಅಲ್ಲಿಯ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದೆ. 100 ಯೂನಿಟ್‌ ವರೆಗೆ ಉಚಿತ ವಿದ್ಯುತ್‌, ಶಿಕ್ಷಣದಂತಹ ಯೋಜನೆಗಳು ಅಲ್ಲಿಯೂ ಜಾರಿಯಲ್ಲಿವೆ.

ಕಳೆದ ಚುನಾವಣೆ ಫಲಿತಾಂಶ ಏನಾಗಿತ್ತು

7 ಡಿಸೆಂಬರ್ 2018 ರಂದು ರಾಜಸ್ಥಾನದಲ್ಲಿ ನಡೆದಿದ್ದ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. 100 ಸ್ಥಾನಗಳಲ್ಲಿ ಗೆದ್ದ ಕಾಂಗ್ರೆಸ್‌ ಅಧಿಕಾರ ಹಿಡಿಯಲು 1 ಸ್ಥಾನದ ಕೊರತೆಯಾಯಿತು. ಬಹುಜನ ಸಮಾಜ ಪಕ್ಷ ಹಾಗೂ ಪಕ್ಷೇತರರ ಬೆಂಬಲ ಪಡೆದು ಕಾಂಗ್ರೆಸ್‌ನ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ ಮುಖ್ಯಮಂತ್ರಿಯಾಗಿದ್ದರು. 163 ಸ್ಥಾನ ಪಡೆದಿದ್ದ ಬಿಜೆಪಿ 73 ಸ್ಥಾನಕ್ಕೆ ಕುಸಿದಿತ್ತು.