ಎಂಟೆಕ್ ದಾಖಲಾತಿ ವಿಪರೀತ ಕುಸಿತ; ಶೇ 50ರಷ್ಟು ವಿದ್ಯಾರ್ಥಿವೇತನ ಹೆಚ್ಚಿಸಲು ಎಐಸಿಟಿಇ ಪ್ರಸ್ತಾಪ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎಂಟೆಕ್ ದಾಖಲಾತಿ ವಿಪರೀತ ಕುಸಿತ; ಶೇ 50ರಷ್ಟು ವಿದ್ಯಾರ್ಥಿವೇತನ ಹೆಚ್ಚಿಸಲು ಎಐಸಿಟಿಇ ಪ್ರಸ್ತಾಪ

ಎಂಟೆಕ್ ದಾಖಲಾತಿ ವಿಪರೀತ ಕುಸಿತ; ಶೇ 50ರಷ್ಟು ವಿದ್ಯಾರ್ಥಿವೇತನ ಹೆಚ್ಚಿಸಲು ಎಐಸಿಟಿಇ ಪ್ರಸ್ತಾಪ

ಎಂಟೆಕ್ ಕೋರ್ಸ್​​ಗಳಿಗೆ ದಾಖಲಾತಿ ಪ್ರಮಾಣ ವಿಪರೀತ ಕುಸಿಯುತ್ತಿರುವ ಕಾರಣ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿವೇತನ ಹೆಚ್ಚಿಸುವಂತೆ ಒತ್ತಾಯಿಸಿ ಎಐಸಿಟಿಇ ಪ್ರಸ್ತಾಪ ಸಲ್ಲಿಸಿದೆ.

ಎಂಟೆಕ್ ದಾಖಲಾತಿ ವಿಪರೀತ ಕುಸಿತ; ಶೇ 50ರಷ್ಟು ವಿದ್ಯಾರ್ಥಿವೇತನ ಹೆಚ್ಚಿಸಲು ಎಐಸಿಟಿಇ ಪ್ರಸ್ತಾಪ
ಎಂಟೆಕ್ ದಾಖಲಾತಿ ವಿಪರೀತ ಕುಸಿತ; ಶೇ 50ರಷ್ಟು ವಿದ್ಯಾರ್ಥಿವೇತನ ಹೆಚ್ಚಿಸಲು ಎಐಸಿಟಿಇ ಪ್ರಸ್ತಾಪ

ವೃತ್ತಿಪರ ಎಂಟೆಕ್ ಕೋರ್ಸ್​​ಗಳಿಗೆ ಬೇಡಿಕೆ ಕುಸಿಯದಂತೆ ಮತ್ತು ಕುಸಿಯುತ್ತಿರುವ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವ ಸಲುವಾಗಿ ಭಾರತದ ತಾಂತ್ರಿಕ ಶಿಕ್ಷಣ ನಿಯಂತ್ರಕ ಸಂಸ್ಥೆಯಾದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ನಾತಕೋತ್ತರ ವಿದ್ಯಾರ್ಥಿವೇತನ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದೆ. ಈಗಿರುವ ಮಾಸಿಕ 12,400 ರೂಪಾಯಿಂದಗಳಿಂದ ಶೇ 50% ರಷ್ಟು ಹೆಚ್ಚಿಸಬೇಕೆಂದು ಅದು ಶಿಕ್ಷಣ ಸಚಿವಾಲಯಕ್ಕೆ ಪ್ರಸ್ತಾವನೆಯ ಮೂಲಕ ಕೋರಿದೆ.

ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮೊತ್ತವನ್ನು ಕನಿಷ್ಠ 18,600 ರೂಪಾಯಿಗೆ ಹೆಚ್ಚಿಸುವಂತೆ ಕೋರಿ ಎಐಸಿಟಿಇ ಕಳೆದ ವರ್ಷ ಜೂನ್‌ನಲ್ಲಿ ಸಚಿವಾಲಯಕ್ಕೆ ಪತ್ರ ಬರೆದಿತ್ತು. 2015ರಲ್ಲಿ ಕೊನೆಯದಾಗಿ ಸಚಿವಾಲಯವು ವಿದ್ಯಾರ್ಥಿ ವೇತನ ಹೆಚ್ಚಿಸಿತ್ತು. ಈ ವಿಷಯದ ಕುರಿತು ಮಾರ್ಚ್​ ಆರಂಭದಲ್ಲಿ ಆರ್ಥಿಕ ಸಹಾಯಕ್ಕಾಗಿ ಸಲ್ಲಿಸಿದ ಪ್ರಸ್ತಾವನೆಯ ಜೊತೆಗೆ ವಿದ್ಯಾರ್ಥಿವೇತನ ಹೆಚ್ಚಳದ ಜ್ಞಾಪನೆಯನ್ನೂ ಮತ್ತೊಮ್ಮೆ ಸಚಿವಾಲಯಕ್ಕೆ ಕಳುಹಿಸಲಾಗಿದೆ.

8 ಸಾವಿರದಿಂದ 12,400ಕ್ಕೆ ಹೆಚ್ಚಳ

2015ರ ಫೆಬ್ರವರಿ 18ರಂದು ಎಐಸಿಟಿಇ ಅನುಮೋದಿತ ಮತ್ತು ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಪಿಎಚ್​ಡಿ ಮತ್ತು ಎಂಟೆಕ್/ಎಂಇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹೆಚ್ಚಳ ಪರಿಷ್ಕರಿಸಿರುವ ಕುರಿತು ಎಐಸಿಟಿಇ, ಐಐಟಿ, ಎನ್​ಐಟಿ ಮತ್ತು ಐಐಎಸ್​ಇಆರ್​​ಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಪತ್ರ ಬರೆದಿತ್ತು. ಅಂದು ವಿದ್ಯಾರ್ಥಿವೇತನವನ್ನು ಮಾಸಿಕ 8 ಸಾವಿರದಿಂದ 12,400ಕ್ಕೆ ಹೆಚ್ಚಿಸಲಾಗಿತ್ತು. ಆಗಲೂ ಶೇ 50 ರಷ್ಟು ಏರಿಕೆ ಮಾಡುವಂತೆ ಎಐಸಿಟಿಇ ವಿನಂತಿಸಿತ್ತು.

ಕಳೆದ ವರ್ಷ ಜೂನ್‌ನಲ್ಲಿ ಸಚಿವಾಲಯಕ್ಕೆ ಬರೆದಿದ್ದ ಪತ್ರದಲ್ಲಿ ಎಐಸಿಟಿಇ-ಅನುಮೋದಿತ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾರ್ಯಕ್ರಮಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವ ಬಗ್ಗೆ ಎಐಸಿಟಿಇ ಉಲ್ಲೇಖಿಸಿ ಆತಂಕ ವ್ಯಕ್ತಪಡಿಸಿತ್ತು. ವರ್ಷದಿಂದ ವರ್ಷಕ್ಕೆ ದಾಖಲಾತಿ ಪ್ರಮಾಣ ವಿಪರೀತ ಕುಸಿಯುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಒಲವು ಹೆಚ್ಚಿಸಲು ವಿದ್ಯಾರ್ಥಿವೇತನ ಪರಿಷ್ಕರಣೆ ಅತ್ಯಗತ್ಯ ಎಂದು ಹೇಳಿತ್ತು.

ದಾಖಲಾತಿ ಪ್ರಮಾಣ ವಿಪರೀತ ಕುಸಿತ

ಸ್ನಾತಕೋತ್ತರ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್‌ಗಳಿಗೆ ಅನುಮೋದಿತ ಪ್ರವೇಶಾತಿ 2018-19ರಲ್ಲಿ 1.81 ಲಕ್ಷದಿಂದ 2023-24ರಲ್ಲಿ ಸುಮಾರು 1.30 ಲಕ್ಷಕ್ಕೆ ಇಳಿದಿದೆ ಎಂದು ಪತ್ರದಲ್ಲಿ ಅಂಕಿ-ಅಂಶ ಸಮೇತ ಎಐಸಿಟಿಇ ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿತ್ತು. ಈ ಅವಧಿಯಲ್ಲಿ ದಾಖಲಾತಿ ಸುಮಾರು 66,862 ರಿಂದ (2018-19ರಲ್ಲಿ 63% ಸೀಟುಗಳು ಖಾಲಿ ಇದ್ದವು) 44,000 ಕ್ಕೆ (2022-23ರಲ್ಲಿ 66% ಸೀಟುಗಳು ಖಾಲಿ ಇದ್ದವು) ಸ್ವಲ್ಪ ಕಡಿಮೆಯಾಗಿದೆ.

ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ಪ್ರವೇಶ ಪಡೆದ ಒಟ್ಟು ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಕುಸಿತವನ್ನು ಎಐಸಿಟಿಇ ತಿಳಿಸಿದೆ. ಈ ಅಂಕಿ-ಅಂಶವು 2018-19ರಲ್ಲಿ 11,926 ರಿಂದ 2022-23ರಲ್ಲಿ 5176ಕ್ಕೆ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಸ್ನಾತಕೋತ್ತರ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಯು ಗೇಟ್ (ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು.

ಈ ವಿದ್ಯಾರ್ಥಿವೇತನವು ಎಐಸಿಟಿಇ-ಅನುಮೋದಿತ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಎಐಸಿಟಿಇ-ಅನುಮೋದಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತದೆ. ವಿದ್ಯಾರ್ಥಿವೇತನಗಳ ಸಂಖ್ಯೆಯು ಕೋರ್ಸ್‌ಗೆ ಎಐಸಿಟಿಇ-ಅನುಮೋದಿತ ಪ್ರವೇಶಕ್ಕೆ ಸೀಮಿತವಾಗಿರುತ್ತದೆ. ಇತರ ಮೂಲಗಳಿಂದ ಆರ್ಥಿಕ ನೆರವು ಪಡೆಯುವ ವಿದ್ಯಾರ್ಥಿಗಳು, ಅಥವಾ ಪ್ರಾಯೋಜಿತ ಅಭ್ಯರ್ಥಿಗಳು ಮತ್ತು ಮ್ಯಾನೇಜ್​ಮೆಂಟ್ ಕೋಟಾದ ಮೂಲಕ ಪ್ರವೇಶ ಪಡೆದ ಅಭ್ಯರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಹರಲ್ಲ.

ಜೂನಿಯರ್ ರಿಸರ್ಚ್ ಫೆಲೋಗಳು (JRF) ಮತ್ತು ಸೀನಿಯರ್ ರಿಸರ್ಚ್ ಫೆಲೋಗಳ (SRF) ಮೊತ್ತವನ್ನು 2023 ರಲ್ಲಿ ಕ್ರಮವಾಗಿ 31,000 ರೂಪಾಯಿಯಿಂದ 37,000 (JRF) ರೂ.ಗೆ ಮತ್ತು 35,000 ರೂಪಾಯಿಯಿಂದ 42,000 (SRF) ರೂ.ಗೆ ಹೆಚ್ಚಿಸಲಾಗಿದೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.