ಫ್ಯಾಕ್ಟ್ ಚೆಕ್: ಜಾಗೃತಿ ಯಾತ್ರಾ 25 ರೂಪಾಯಿಯ ರೈಲು ಪ್ರವಾಸ ಅಲ್ಲ, 15 ದಿನಗಳ ರೈಲು ಯಾತ್ರೆಗೊಂದು ಉದ್ದೇಶವಿದೆ ಏನದು, ತಿಳಿಯೋಣ
ಫ್ಯಾಕ್ಟ್ ಚೆಕ್: ವರ್ಷಕ್ಕೊಮ್ಮೆ ದೇಶ ಸುತ್ತುವ ಜಾಗೃತಿ ಯಾತ್ರಾ25 ರೂಪಾಯಿಯ ರೈಲು ಪ್ರವಾಸ ಎಂದು ಹಲವು ವೆಬ್‌ಸೈಟ್‌ಗಳು ಸುದ್ದಿ ಮಾಡಿವೆ. ವಾಸ್ತವದಲ್ಲಿ ಇದು 25 ರೂಪಾಯಿಯ ರೈಲು ಪ್ರವಾಸ ಅಲ್ಲ, 15 ದಿನಗಳ ರೈಲು ಯಾತ್ರೆಗೊಂದು ಉದ್ದೇಶವಿದೆ. ಏನದು ಎಂಬುದನ್ನು ತಿಳಿಯೋಣ.

ಭಾರತದ ಪ್ರಮುಖ ಸುದ್ದಿ ವೆಬ್‌ಸೈಟ್‌ಗಳಲ್ಲಿ ಜಾಗೃತಿ ಯಾತ್ರಾಕ್ಕೆ ನೋಂದಣಿ ಶುರುವಾಗಿದೆ. 25 ರೂಪಾಯಿಯ ರೈಲು ಪ್ರವಾಸ ಎಂದು ಬಿಂಬಿಸಲ್ಪಟ್ಟಿದೆ. ವಾಸ್ತವದಲ್ಲಿ ಇದು 25 ರೂಪಾಯಿಯ ರೈಲು ಪ್ರವಾಸ ಅಲ್ಲ. 15 ದಿನಗಳ ಈ ರೈಲು ಯಾತ್ರೆ ವರ್ಷಕ್ಕೆ ಒಮ್ಮೆ ಆಯೋಜನೆಯಾಗುತ್ತಿದ್ದು, ಈ ವರ್ಷದ ರೈಲು ಪ್ರವಾಸದ ನೋಂದಣಿ ಶುರುವಾಗಿದೆ. ಈ ರೈಲು ಪ್ರವಾಸಕ್ಕೆ ಒಂದು ಉದ್ದೇಶವಿದೆ. ಶುಲ್ಕವೂ ಕಡಿಮೆ ಏನಲ್ಲ. ಹಾಗಾದರೆ ಈ ಜಾಗೃತಿ ಯಾತ್ರೆ ಕುರಿತಾದ ಸುದ್ದಿಗಳ ಫ್ಯಾಕ್ಟ್ ಚೆಕ್ ಗಮನಿಸೋಣ. ನಂತರ ಜಾಗೃತಿ ಯಾತ್ರಾ ಬಗ್ಗೆಯೂ ತಿಳಿಯೋಣ.
ಜಾಗೃತಿ ಯಾತ್ರಾ; 25 ರೂಪಾಯಿಯ ರೈಲು ಪ್ರವಾಸ ಅಲ್ಲ!
ಪ್ರವಾಸ ಯಾರಿಗೆ ಇಷ್ಟ ಆಗಲ್ಲ ಹೇಳಿ. ಪ್ರವಾಸ ಮಾಡೋದಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಅದರಲ್ಲೂ ಇಡೀ ಭಾರತ ಸುತ್ತಾಡ ಬೇಕು ಎಂದರೆ ಲಕ್ಷ ರೂಪಾಯಿಯೇ ಬೇಕಾಗಬಹುದು. ಹಾಗಾಗಿ ವರ್ಷಕ್ಕೊಮ್ಮೆ ಆಯೋಜನೆಯಾಗುವ ಜಾಗೃತಿ ಯಾತ್ರಾಕ್ಕೆ ನೋಂದಣಿ ಮಾಡಿಸಿಕೊಳ್ಳಿ. ಜಾಗೃತಿ ಯಾತ್ರಾ ಎಂಬುದು 25 ರೂಪಾಯಿ ರೈಲು ಪ್ರವಾಸ. ಭಾರತ ಸುತ್ತಾಡುವ ಕನಸು ಕಾಣುವವರಿಗೆ ಒಂದು ಸದವಕಾಶ.ಎಂದೆಲ್ಲ ವರದಿಯಲ್ಲಿ ಬಿಂಬಿಸಲಾಗಿದೆ. ಇದನ್ನು ಗಮನಿಸಿದ ಜಾಗೃತಿ ಯಾತ್ರಾ ಆಯೋಜಕರು ಗುರುವಾರ (ಮೇ 22) ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿ, “ಜಾಗೃತಿ ಯಾತ್ರಾ 25 ರೂಪಾಯಿಯ ರೈಲು ಪ್ರವಾಸ ಅಲ್ಲ, 15 ದಿನಗಳ ರೈಲು ಯಾತ್ರೆಗೊಂದು ಉದ್ದೇಶವಿದೆ” ಎಂದು ಸುಳ್ಳು ಸುದ್ದಿ ಎಂದು ಕೆಲವು ಸುದ್ದಿಗಳ ಸ್ಕ್ರೀನ್ ಶಾಟ್‌ಗಳನ್ನು ಟ್ವೀಟ್ ಮಾಡಿದೆ.
“ತಪ್ಪು ಮಾಹಿತಿ ಬಗ್ಗೆ ಅಲರ್ಟ್, ಜಾಗೃತಿ ಯಾತ್ರಾ ಎಂಬುದು 25 ರೂಪಾಯಿಯ ಟೂರಿಸ್ಟ್ ಟ್ರೇನ್ ಅಲ್ಲ. ಇದು 15 ದಿನಗಳ ಅವಧಿಯ ಉದ್ಯಮಶೀಲತೆಗೆ ಸಂಬಂಧಿಸಿದ 8000 ಕಿಮೀ ಉದ್ದದ ಭಾರತ ಪ್ರವಾಸ. ಇದಕ್ಕೆ ನೋಂದಣಿ ಮಾಡಿಕೊಳ್ಳಲು 100 ರೂಪಾಯಿ ಪಾವತಿಸಬೇಕು. ಒಂದೊಮ್ಮೆ ನೀವು ಪ್ರವಾಸಕ್ಕೆ ಆಯ್ಕೆಯಾದರೆ, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದೇ ಹೋದರೆ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದ ಮಾಹಿತಿಯ ಕೊಂಡಿ ಇಲ್ಲಿದೆ” ಎಂದು ಜಾಗೃತಿ ಯಾತ್ರಾ ಟ್ವೀಟ್ ಮಾಡಿದೆ. ಅದು ಹೀಗಿದೆ -
ಏನಿದು ಜಾಗೃತಿ ಯಾತ್ರಾ?, ಉದ್ದೇಶವೇನು
ಜಾಗೃತಿ ಯಾತ್ರೆ 15 ದಿನಗಳ ಅವಧಿಯ, ರಾಷ್ಟ್ರೀಯ ರೈಲು ಪ್ರಯಾಣವಾಗಿದ್ದು, ಇದು ಭಾರತದ ಉದ್ದ ಮತ್ತು ಅಗಲದಾದ್ಯಂತ 8000 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಭಾರತವನ್ನು ಉದ್ಯಮದ ಮೂಲಕ ಅರ್ಥಮಾಡಿಕೊಳ್ಳಲು ಮತ್ತು ನವೋದ್ಯಮವನ್ನು ಸ್ಥಾಪಿಸುವುದಕ್ಕೆ ಬೇಕಾದ ಪೂರ್ವಭಾವಿ ಚಿಂತನ ಮಂಥನಕ್ಕೆ ನೆರವಾಗುತ್ತದೆ.
ಇದು 15 ದಿನಗಳ ಅವಧಿಯಲ್ಲಿ 12 ಸ್ಥಳಗಳಲ್ಲಿ ಹಾದು ಹೋಗಲಿದ್ದು, 12 ರೋಲ್ ಮಾಡೆಲ್‌ಗಳು ಹಾಗೂ 525 ಆಯ್ದ ಯಾತ್ರಿಕರು ಇದರಲ್ಲಿ ಭಾಗವಹಿಸುತ್ತಾರೆ. ಈ ಅವಧಿಯಲ್ಲಿ ಇವರು ಉದ್ಯಮ ಶೀಲತೆಗೆ ಸಂಬಂಧಿಸಿದ ಒಟ್ಟು 4 ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಜಾಗೃತಿ ಸೇವಾ ಸಂಸ್ಥಾನಮ್ ಎಂಬ ಲಾಭೋದ್ದೇಶ ರಹಿತ ಸಂಸ್ಥೆಯೊಂದು ಈ ಜಾಗೃತಿ ಯಾತ್ರಾವನ್ನು ಆಯೋಜಿಸುತ್ತಿದ್ದು, ಭಾರತದ 2 ಮತ್ತು 3ನೇ ಸ್ತರದ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಜಾಗೃತಿ ಸೇವಾ ಸಂಸ್ಥಾನಮ್‌ನ ಕೇಂದ್ರ ಕಚೇರಿ ಮುಂಬಯಿಯಲ್ಲಿದೆ. ಆದರೆ ಇದರ ಮೂಲ ಇರುವುದು ಉತ್ತರ ಪ್ರದೇಶದ ದೇವರಿಯಾ ಎಂಬಲ್ಲಿ.
1997ರಲ್ಲಿ ಆಜಾದ್ ಭಾರತ ಯಾತ್ರಾ ಎಂಬ ಪ್ರವಾಸವನ್ನು ಈ ಸಂಸ್ಥೆ ಆಯೋಜಿಸಿತ್ತು. ಮೊದಲ ಜಾಗೃತಿ ಯಾತ್ರಾ 2008ರಲ್ಲಿ ನಡೆಯಿತು. ಈ ಯಾತ್ರೆಯು ಮುಂಬಯಿಯಿಂದ ಶುರುವಾಗಿ ಮುಂಬಯಿಯಲ್ಲೇ ಕೊನೆಗೊಳ್ಳುತ್ತದೆ. ಈ ಯಾತ್ರೆಯಲ್ಲಿ ಎರಡು ರೀತಿಯಲ್ಲಿ ಭಾಗವಹಿಸುವುದಕ್ಕೆ ಅವಕಾಶವಿದೆ. ಯಾತ್ರಾರ್ಥಿಗಳಿಗೆ 21 ವರ್ಷ ಮೇಲ್ಪಟ್ಟಿರಬೇಕು. ಅದೇ ರೀತಿ ಉದ್ಯಮ ಸ್ಥಾಪಿಸುವ ಅದಮ್ಯ ಇಚ್ಛೆ ಇರಬೇಕು. ಯಾತ್ರಾರ್ಥಿ ಪೈಕಿ ಅಭ್ಯರ್ಥಿಯಾಗಿ ಭಾಗವಹಿಸುವುದಕ್ಕೆ ವಯೋಮಿತಿ 21 ವರ್ಷದಿಂದ 27 ವರ್ಷ. ಫೆಸಿಲಿಟೇಟರ್ ಆಗಿ ಭಾಗವಹಿಸುತ್ತೀರಾದರೆ 28 ವರ್ಷ ಮೇಲ್ಪಟ್ಟವರಾಗಿದ್ದು, ಉದ್ಯಮಶೀಲ ತರಬೇತಿ ಬಯಸುವವರಿಗೆ ನೆರವಾಗುವಂತಹವರಾಗಿರಬೇಕು. ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಸಂವಹನ ನಡೆಸುವ ಸಾಮರ್ಥ್ಯ ಹೊಂದಿರಬೇಕು.
ಇನ್ನು ಶುಲ್ಕದ ವಿಚಾರಕ್ಕೆ ಬಂದರೆ ಜಾಗೃತಿ ಯಾತ್ರಾ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವಾಗ ನೋಂದಣಿ ಶುಲ್ಕವಾಗಿ 100 ರೂಪಾಯಿ ಪಾವತಿಸಬೇಕು. ಯಾತ್ರೆಗೆ ಆಯ್ಕೆಯಾದರೆ ಯಾತ್ರಾ ವೆಚ್ಚವನ್ನು ಭರಿಸಬೇಕು. ಅದು 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ವಿವರವನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಇಮೇಲ್ ಸಂವಹನದ ಮೂಲಕ ಸಂಸ್ಥೆ ತಿಳಿಸುತ್ತದೆ. ಅಕಸ್ಮಾತ್ ಇಷ್ಟು ಹಣ ಪಾವತಿಸುವುದು ಕಷ್ಟವಾದರೆ ಅಂದರೆ ಹಣಕಾಸು ಸಂಕಷ್ಟದಲ್ಲಿದ್ದರೆ ಸ್ಕಾಲರ್ ಶಿಪ್ ಪಡೆಯಬಹುದು. ಇದಕ್ಕಾಗಿ ಅರ್ಜಿಯನ್ನೂ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಆಯ್ಕೆಯಾದವರಿಗೆ ಅರ್ಹತೆಗೆ ಅನುಗುಣವಾಗಿ ಸ್ಕಾಲರ್‌ಶಿಪ್ ಸಿಗುತ್ತದೆ.
ಜಾಗೃತಿ ಯಾತ್ರಾ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ನೇರ ಲಿಂಕ್ ಇಲ್ಲಿದೆ- https://www.jagritiyatra.com/selection-procedure