ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳ ಸಹಿತ 7 ಮಂದಿ ಆತ್ಮಹತ್ಯೆ: ಕಾರಿನಲ್ಲಿದ್ದ ಡೆತ್‌ನೋಟ್‌ನಲ್ಲಿದೆ ಕೃತ್ಯಕ್ಕೆ ಕಾರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳ ಸಹಿತ 7 ಮಂದಿ ಆತ್ಮಹತ್ಯೆ: ಕಾರಿನಲ್ಲಿದ್ದ ಡೆತ್‌ನೋಟ್‌ನಲ್ಲಿದೆ ಕೃತ್ಯಕ್ಕೆ ಕಾರಣ

ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳ ಸಹಿತ 7 ಮಂದಿ ಆತ್ಮಹತ್ಯೆ: ಕಾರಿನಲ್ಲಿದ್ದ ಡೆತ್‌ನೋಟ್‌ನಲ್ಲಿದೆ ಕೃತ್ಯಕ್ಕೆ ಕಾರಣ

ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಅವರ ಕಾರಿನಿಂದ ಎರಡು ಪುಟಗಳ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಕೃತ್ಯಕ್ಕೆ ಕಾರಣವನ್ನು ವಿವರಿಸಲಾಗಿದೆ.

 ಕಾರಿನೊಳಗೆ ವಿಷ ಸೇವಿಸಿ ಆತ್ಮಹತ್ಯೆ
ಕಾರಿನೊಳಗೆ ವಿಷ ಸೇವಿಸಿ ಆತ್ಮಹತ್ಯೆ

ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಮೂಲದ ಒಂದೇ ಕುಟುಂಬದ ಏಳು ಮಂದಿ ಹರಿಯಾಣದ ಪಂಚಕುಲದಲ್ಲಿ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಸೆಕ್ಟರ್ 27 ಪ್ರದೇಶದಲ್ಲಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಕುಟುಂಬ ಸದಸ್ಯರ ಶವ ಪತ್ತೆಯಾಗಿದೆ. ಅವರು ಕಾರಿನೊಳಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಕಾರಿನಿಂದ ಎರಡು ಪುಟಗಳ ಡೆತ್‌ನೋಟ್ ವಶಪಡಿಸಿಕೊಂಡಿದ್ದಾರೆ. ಪತ್ರದಲ್ಲಿ, ಸಾಲದಿಂದಾಗಿ ದಿವಾಳಿಯಾದ ಕಾರಣ ಅವರು ಬೇರೆ ದಾರಿಯಿಲ್ಲದೆ ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಬರೆದಿದ್ದಾರೆ.

ಮೃತಪಟ್ಟವರಲ್ಲಿ ವ್ಯಕ್ತಿ, ಆತನ ಪತ್ನಿ, ಅವರ ಮೂವರು ಮಕ್ಕಳು ಮತ್ತು ವೃದ್ಧ ಪೋಷಕರು ಸೇರಿದ್ದಾರೆ. ಕುಟುಂಬವು ಪಂಚಕುಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಸೋಮವಾರ ಈ ಕುಟುಂಬವು ಪಂಚಕುಲದಲ್ಲಿ ಬಾಗೇಶ್ವರ ಧಾಮದ ಬಾಬಾ ಧೀರೇಂದ್ರ ಶಾಸ್ತ್ರಿ ಅವರ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿತ್ತು. ಆದಾಗ್ಯೂ, ಕಾರ್ಯಕ್ರಮದ ನಂತರ ಮನೆಗೆ ಮರಳುವ ಬದಲು, ಅವರು ತಮ್ಮ ಹ್ಯುಂಡೈ ಔರಾ ಕಾರನ್ನು ನಗರದ ಸೆಕ್ಟರ್ 27 ಪ್ರದೇಶದಲ್ಲಿ ನಿಲ್ಲಿಸಿ, ಅದರೊಳಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾರಿಹೋಕರು ಕಾರು ಮತ್ತು ಅದರೊಳಗೆ ಹಲವಾರು ಜನರನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚಾಲಕನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಇನ್ನೂ ಪ್ರಜ್ಞೆಯಲ್ಲಿದ್ದ ಕಾರಣ ಅವರನ್ನು ಸ್ಥಳೀಯರು ಗಮನಿಸಿ ವಿಚಾರಿಸಿದಾಗ, ಸಾಲದ ಸುಳಿಗೆ ಸಿಲುಕಿ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ನಂತರ ಅವರು ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಬಂದು ಕಾರಿನಲ್ಲಿದ್ದ ಕುಟುಂಬದ ಎಲ್ಲಾ ಏಳು ಸದಸ್ಯರನ್ನು ಪಂಚಕುಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರಲ್ಲಿ ಆರು ಮಂದಿ ಅದಾಗಲೇ ಮೃತಪಟ್ಟಿದ್ದರೆ, ಓರ್ವ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.