ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಜ್ಜಿಯರ ಅಡುಗೆ ಕ್ರೇಜ್‌ಗೆ ನೀವೂ ತಲೆ ಬಾಗ್ತೀರಿ; ಇವರಿಗಿರೋ ಫ್ಯಾನ್ ಬೇಸ್ ಯಾವ ಸೆಬ್ರಿಟಿಗಳಿಗೂ ಕಮ್ಮಿ ಇಲ್ಲ

ಅಜ್ಜಿಯರ ಅಡುಗೆ ಕ್ರೇಜ್‌ಗೆ ನೀವೂ ತಲೆ ಬಾಗ್ತೀರಿ; ಇವರಿಗಿರೋ ಫ್ಯಾನ್ ಬೇಸ್ ಯಾವ ಸೆಬ್ರಿಟಿಗಳಿಗೂ ಕಮ್ಮಿ ಇಲ್ಲ

ಹೆಸರು ಗಳಿಸೋಕೆ ವಯಸ್ಸಿನ ಅಡ್ಡಿ ಖಂಡಿತಾ ಇಲ್ಲ. ಇಳಿವಯಸ್ಸಿನಲ್ಲಿ ಯಾರೂ ಕೂಡಾ ಮನೆಯಲ್ಲೇ ಸುಮ್ಮನೆ ಕೂರಬೇಕಿಲ್ಲ. ಯಾವುದೇ ಒಂದು ಕ್ಷೇತ್ರದಲ್ಲಿ ಕೌಶಲ್ಯ ಮತ್ತು ಆಸಕ್ತಿ ಇದ್ದರೆ, ಉತ್ತಮ ಸಂಪಾದನೆಯೂ ಮಾಡಬಹುದು. ಅದಕ್ಕೆ ಈ ಅಜ್ಜಿಯರೇ ಸಾಕ್ಷಿ.

ಅಜ್ಜಿಯರ ಅಡುಗೆ ಕ್ರೇಜ್‌ಗೆ ನೀವೂ ತಲೆ ಬಾಗ್ತೀರಿ
ಅಜ್ಜಿಯರ ಅಡುಗೆ ಕ್ರೇಜ್‌ಗೆ ನೀವೂ ತಲೆ ಬಾಗ್ತೀರಿ (Youtube)

ಸೋಷಿಯಲ್ ಮೀಡಿಯಾದಿಂದ ಜಗತ್ತಿನಾದ್ಯಂತ ಹೆಸರು ಮಾಡಿದವರ ಸಂಖ್ಯೆ ಸಾಕಷ್ಟಿದೆ. ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಿಂದ ಹೆಸರಿನ ಜೊತೆಗೆ ಹಣ ಸಂಪಾದನೆ ಮಾಡುವವರು ಹಲವರು. ಸಾಮಾನ್ಯವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಅಡುಗೆ ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ. ಯಾವುದೇ ತರಾತುರಿಯಲ್ಲಿದ್ದರೂ ಬಾಯಿ ನೀರೂರಿಸುವಂಥ ಆಹಾರ ಮಾಡುವ ವಿಧಾನ ಕಂಡಾಗ ಅದನ್ನು ಸಂಪೂರ್ಣವಾಗಿ ನೋಡಬೇಕನಿಸುತ್ತದೆ. ನೀವು ಸೋಷಿಯಲ್‌ ಮೀಡಿಯಾ ಸ್ಕ್ರೋಲ್‌ ಮಾಡುವಾಗಿ ದಿನಕ್ಕೊಬ್ಬರ ಅಡುಗೆ ವಿಡಿಯೋಗಳನ್ನು ನೋಡಿರಬಹುದು. ಅವರಲ್ಲಿ ನಾವು ತೋರಿಸುವ ಈ ಹಿರಿಯಜ್ಜಿಯರ ವಿಡಿಯೋಗಳು ನಿಮಗೆ ಕಂಡಿವೆಯಾ?

ಆಹಾರದ ವಿಡಿಯೊಗಳು ಬಹುತೇಕ ಪ್ರತಿಯೊಬ್ಬರನ್ನು ಸಂತೋಷಪಡಿಸುತ್ತವೆ. ನಿರಂತರವಾಗಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಅಥವಾ ಯೂಟ್ಯೂಬ್ ನೋಡುವವರು ಇಂಥಾ ವಿಡಿಯೋಗಳನ್ನೂ ಹೆಚ್ಚು ನೋಡುತ್ತಾರೆ. ಗೃಹಿಣಿಯರಿಗೆ ಇಂಥಾ ಹವ್ಯಾಸ ಹೆಚ್ಚು. ಆದರೆ, ನಮ್ಮ ದೇಶದಲ್ಲಿ ಕೆಲವೊಬ್ಬರು ಅಜ್ಜಿಯರು ಅಡುಗೆ ಚಾನೆಲ್‌ ನಿರ್ವಹಿಸಿ ತುಂಬಾ ಫೇಮಸ್‌ ಆಗಿದ್ದಾರೆ. ಅವರು ಮಾಡೋ ಅಡುಗೆ, ಅದನ್ನು ವಿವರಿಸುವ ರೀತಿ, ಅವರ ಮಾತುಗಳು ನಿಮ್ಮನ್ನು ಆಕರ್ಷಿಸದಿರಲು ಸಾಧ್ಯವಿಲ್ಲ.

ಈ ಅಜ್ಜಿಯರು ಮಾಡುವ ವಿಡಿಯೋದಲ್ಲಿ‌ ಅನುಭವದ ಸಾರವಿದೆ. ತಮ್ಮ ಸಾಂಪ್ರದಾಯಿಕ ಪಾಕವಿಧಾನಗಳಿವೆ. ಅವರ ಬದುಕಿನ ಅನುಭವದ ಸಾರವನ್ನೇ ಆಧುನಿಕ ಸಂಸ್ಕೃತಿಗೆ ಉಪ್ಪುವಂತೆ ಹೂರಣ ಮಾಡಿ ಜನರಿಗೆ ಉಣಬಡಿಸುತ್ತಿದ್ದಾರೆ. ಜಾಗತಿಕ ಪಾಕಪದ್ಧತಿಗೆ ದೇಸಿ ಸ್ಪರ್ಶ ಕೊಡುವ ಮೂಲಕ ಅಡುಗೆಮನೆಯನ್ನು ಶ್ರೀಮಂತವಾಗಿಸಿದ್ದಾರೆ. ನೀವು ಈ ಅಜ್ಜಿಯರ ಅಡುಗೆ ನೋಡಿಲ್ಲವಾದರೆ, ಒಮ್ಮೆ ಇವರ ಚಾನೆಲ್‌ಗಳಿಗೆ ಭೇಟಿ ನೀಡಿ.

ಟ್ರೆಂಡಿಂಗ್​ ಸುದ್ದಿ

ಗುಜ್ಜು ಬೆನ್ ನಾ ನಾಸ್ತಾ

ಇವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಇವರು ಮಾತಿನ ಶೈಲಿಗೆ ಫಿದಾ ಆಗದವರಿಲ್ಲ. ಗುಜ್ಜು ಬೆನ್ ನಾ ನಾಸ್ತಾ ಅಡುಗೆ ಚಾನೆಲ್‌ ನಡೆಸುವ ಊರ್ಮಿಳಾ ಜಮ್ನಾದಾಸ್ ಆಶರ್ ಅವರು 77ನೇ ವಯಸ್ಸಿನಲ್ಲಿ ಯೂಟ್ಯೂಬ್‌ ಚಾನೆಲ್‌ ಮಾಡಿ ಅಡುಗೆ ವಿಡಿಯೋ ಹಾಕಲು ಆರಂಭಿಸಿದರು. ಈಗ ಇವರಿಗೆ 3 ಲಕ್ಷದ 62 ಸಾವಿರಕ್ಕೂ ಹೆಚ್ಚು ಚಂದಾದಾರರಿದ್ದ್ದು,‌ ಈವರೆಗೆ ಇವರ ವಿಡಿಯೋಗಳನ್ನು 2 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇವರ ಉತ್ಸಾಹವೇ ನಮಗೆ ಸ್ಫೂರ್ತಿ. ಮಾಸ್ಟರ್‌ಚೆಫ್ ಇಂಡಿಯಾದ ಸೀಸನ್ 7ರಲ್ಲಿ ಭಾಗಿಯಾಗಿದ್ದ ಈ ಅಜ್ಜಿ ಅಗ್ರ 16ರಲ್ಲಿ ಸ್ಥಾನ ಪಡೆದಿದ್ದರು. ಸರಳ ಹಾಗೂ ಸುಂದರ ಸೀರೆ ಉಟ್ಟು ಅಪ್ಪಟ ಭಾರತೀಯ ಅಜ್ಜಿಯಾಗಿ ಸ್ಟವ್‌ ಮುಂದೆ ನಿಂತು ಅಡುಗೆ ಮಾಡಿ ಮಾತಿನ ಒಗ್ಗರಣೆ ಹಾಕಿ ಶುಚಿರುಚಿಯಾಗಿ ವೀಕ್ಷಕರಿಗೆ ಬಡಿಸುತ್ತಾರೆ. ಪ್ರತಿಯೊಂದು ಅಡುಗೆ ವಿಡಿಯೋಗಳನ್ನು ವಿವರವಾಗಿ ಮತ್ತು ನಿಖರವಾಗಿ ಚಿತ್ರೀಕರಿಸಲಾಗುತ್ತದೆ. ಅಡುಗೆಯ ಪ್ರತಿ ಹಂತವನ್ನೂ ಅನಗತ್ಯ ಮಸಾಲೆಗಳಿಲ್ಲದೆ ಸ್ಪಷ್ಟವಾಗಿ ವಿವರಿಸುತ್ತಾರೆ.

ಬಾಲ್ಯದಿಂದಲೂ ಆಹಾರಪ್ರಿಯರಾಗಿದ್ದ ಈ ಅಜ್ಜಿ, ಬದುಕಿನಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದವರು. ಅಪಘಾತದಿಂದ ತನ್ನ ಮಗಳನ್ನು ಮತ್ತು ಇಬ್ಬರು ಗಂಡು ಮಕ್ಕಳನ್ನು ಅನಾರೋಗ್ಯದಿಂದ ಕಳೆದುಕೊಂಡರೂ, ಮಾನಸಿಕವಾಗಿ ತಮಗೆ ತಾವೇ ಧೈರ್ಯ ತುಂಬಿಕೊಂಡು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ತಮ್ಮ ಪಾಕವಿಧಾನವೇ ಅವರಿಗಿಂದ ಬದುಕು ಕೊಟ್ಟಿದೆ. ಮೊಮ್ಮಗ ಹರ್ಷ್ ಯೂಟ್ಯೂಬ್ ಚಾನೆಲ್ ರಚಿಸಿಕೊಟ್ಟು ಅಜ್ಜಿಗೆ ಬೆಂಬಲ ನೀಡಿದ್ದಾರೆ.

ಆಪ್ಲಿ ಆಜಿ

ಮಹಾರಾಷ್ಟ್ರದ ಆಜಿ ಎಂದು ಕರೆಯಲ್ಪಡುವ ಸುಮನ್ ಧಮಾನೆ ಅವರ ಆಪ್ಲಿ ಆಜಿ ಯೂಟ್ಯೂಬ್ ಚಾನೆಲ್‌ಗೆ ಈಗಾಗಲೇ ಬರೋಬ್ಬರಿ 1.72 ಮಿಲಿಯನ್ ಸಬ್ಸ್‌ಕ್ರೈಬರ್‌ಗಳಿದ್ದಾರೆ. ಇವರ ವಿಡಿಯೋಗಳು ಈಗಾಗಲೇ 26 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿವೆ. ಪಕ್ಕಾ ಹಳ್ಳಿ ಶೈಲಿಯಲ್ಲಿ ಮರಾಠಿ ಭಾಷೆಯಲ್ಲಿ ಇವರ ವಿಡಿಯೋಗಳಿವೆ. 2020ರಲ್ಲಿ, ತಮ್ಮ 67 ವರ್ಷ ವಯಸ್ಸಿನಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ಧಾಮನೆ, ಈಗ ಫುಲ್‌ ಫೇಮಸ್.‌ ಇದಕ್ಕೆ ಇವರು ಸಂಪಾದಿಸಿರುವ ಚಂದಾದರರ ಸಂಖ್ಯೆಯೇ ಸಾಕ್ಷಿ. ತಮ್ಮ ಅನುಭವದಿಂದ ಬಂದ ವಿವರವಾದ ಪಾಕವಿಧಾನ, ಸ್ಪಷ್ಟ ವಿವರಣೆ ನೀಡುತ್ತಾರೆ. ಇವರ ಅತ್ಯಂತ ಜನಪ್ರಿಯ ವಿಡಿಯೋ ಹಾಗಲಕಾಯಿ ಫ್ರೈ ರೆಸಿಪಿಗೆ 8.6 ಮಿಲಿಯನ್ ವೀಕ್ಷಣೆ ಬಂದಿವೆ. ಹಬ್ಬದ ದಿನಗಳಿಗೆ ಇವರು ವಿಶೇಷ ಅಡುಗೆ ಮಾಡುತ್ತಾರೆ.

ವೆಜ್ ವಿಲೇಜ್ ಫುಡ್

ಅಮರ್ ಕೌರ್ ಅವರ ವೆಜ್ ವಿಲೇಜ್ ಫುಡ್ ಇನ್ನೂ ಫೇಮಸ್.‌ 70ರ ಹರೆಯದ ಪಂಜಾಬಿ ಮಹಿಳೆಯ ಈ ಚಾನೆಲ್‌ಗೆ 5.97 ಮಿಲಿಯನ್ ಚಂದಾದಾರರಿದ್ದಾರೆ. ತನ್ನ ಮೊಮ್ಮಗ ಹರ್ದೀಪ್ ಜೊತೆಗೂಡಿ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಪ್ರಮಾಣದ ಯಶಸ್ಸು ಕಂಡಿದ್ದಾರೆ. ಯೂಟ್ಯೂಬ್‌ ಮೂಲಕ ಕಂಡ ಯಶಸ್ಸಿ‌ನಿಂದ ಕೌರ್, ರೆಸ್ಟೋರೆಂಟ್ ಆರಂಭಿಸುವ ಮೂಲಕ ತಾವು ಕಂಡ ಕನಸು ನನಸಾಗಿಸಿದ್ದಾರೆ. ಇವರ ವಿಶೇಷವೇ ದೊಡ್ಡ ಮಟ್ಟದ ಅಡುಗೆ. ಮಣ್ಣಿನ ಅಂಗಳದಲ್ಲಿ ಅಡುಗೆ ಮಾಡುವ ಕೌರ್, ತಮ್ಮ ವಿಡಿಯೊಗಳಲ್ಲಿ ಮಾತನಾಡುವುದಿಲ್ಲ. ಮಾತನಾಡಿದರೂ ಅದು ತುಂಬಾ ವಿರಳ.‌ ಅವರ ಮಾತಿಗಿಂತ ಅವರ ಅಡುಗೆ ಶೈಲಿಯೇ ನೋಡುಗರಿಗೆ ಹಿತ. ಇವರು ಮಾಡಿದ ಒಂದು ಸಾವಿರ ಸಮೋಸಾ ವಿಡಿಯೋವನ್ನು 146 ಮಿಲಿಯನ್‌ ಜನರು ವೀಕ್ಷಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.