ಕನ್ನಡ ಸುದ್ದಿ  /  Nation And-world  /  Famous Writer Poet Critic Kv Tirumalesh Passes Away At 83

KV Tirumalesh Death: ಖ್ಯಾತ ಸಾಹಿತಿ, ಅನುವಾದಕ, ಭಾಷಾ ವಿಜ್ಞಾನಿ ಡಾ.ಕೆ.ವಿ. ತಿರುಮಲೇಶ್ ನಿಧನ

KV Tirumalesh: ಡಾ.ಕೆ.ವಿ. ತಿರುಮಲೇಶ್ ಇಂದು ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇಂದು ಮುಂಜಾನೆ ಹೈದರಾಬಾದ್‌ನ ತಮ್ಮ ಮಗಳ ನಿವಾಸದಲ್ಲಿ ಕೊನೆಯುಸಿರೆಳೆದರು.

ಖ್ಯಾತ ಸಾಹಿತಿ, ಅನುವಾದಕ, ಭಾಷಾ ವಿಜ್ಞಾನಿ ಡಾ.ಕೆ.ವಿ. ತಿರುಮಲೇಶ ನಿಧನ
ಖ್ಯಾತ ಸಾಹಿತಿ, ಅನುವಾದಕ, ಭಾಷಾ ವಿಜ್ಞಾನಿ ಡಾ.ಕೆ.ವಿ. ತಿರುಮಲೇಶ ನಿಧನ (Wikipedia)

ಬೆಂಗಳೂರು: ಸಾಹಿತ್ಯ, ಅನುವಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ, ಭಾಷಾ ವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದ ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಡಾ.ಕೆ.ವಿ. ತಿರುಮಲೇಶ್ ಇಂದು ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇಂದು ಮುಂಜಾನೆ ಹೈದರಾಬಾದ್‌ನ ತಮ್ಮ ಮಗಳ ನಿವಾಸದಲ್ಲಿ ಕೊನೆಯುಸಿರೆಳೆದರು.

ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅವರ ಬರಹಗಳ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಹೃದಯ ಸಂಬಂಧಿ ತೊಂದರೆ ಹೊಂದಿದ್ದ ಡಾ.ಕೆ.ವಿ. ತಿರುಮಲೇಶ್ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ನಿನ್ನೆಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿ ಬಂದಿದ್ದರು.

ಡಾ.ಕೆ.ವಿ. ತಿರುಮಲೇಶ್ ಬಗ್ಗೆ

ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಸಮೀಪದ ಕಾರಡ್ಕದವರಾದ ತಿರುಮಲೇಶರು 1940 ಸೆಪ್ಟೆಂಬರ್ 12ರದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಾಸರಗೋಡಿನಲ್ಲಿ ಪಡೆದಿದ್ದರು. ಕಾಸರಗೋಡು ಮತ್ತು ತಿರುವನಂತಪುರದಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ವಿಷಯಗಳಲ್ಲಿ ಅಧ್ಯಯನ ನಡೆಸಿದ್ದಾರೆ. ಕೇರಳದ ವಿವಿಧ ಕಾಲೇಜುಗಳಲ್ಲಿ ಇಂಗ್ಲಿಷ್‌ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸಿದ್ದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.

1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದರು. ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆದರು. ಕನ್ನಡದ ವಾಕ್ಯರಚನೆ ಮತ್ತು ಕರ್ಮಣಿ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಮಾಡಿ ಪಿಎಚ್‌.ಡಿ ಪದವಿ ಪಡೆದರು.

ಆರೋಪ, ಮುಸುಗು ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ವಠಾರ, ಮುಖವಾಡಗಳು ಸೇರಿದಂತೆ ಹಲವು ಕವನ ಸಂಕಲನಗಳನ್ನು ಹೊರತಂದಿದ್ದಾರೆ.

1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದ ತಿರುಮಲೇಶ ಅವರು ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದರು. ಕನ್ನಡದ ವಾಕ್ಯರಚನೆ ಮತ್ತು ಕರ್ಮಣಿ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿಎಚ್.ಡಿ ಪ್ರಬಂಧವಾಗಿತ್ತು.

ವಠಾರ, ಮುಖವಾಡಗಳು, ತಿರುಮಲೇಶರ ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕಾದಂಬರಿಗಳು. 'ಅಕ್ಷಯ ಕಾವ್ಯ' ಕೃತಿಗೆ 2015ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರಕಿತ್ತು.

ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಗೋವಿಂದ ಪೈ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅವಧಿ ಸೇರಿದಂತೆ ವಿವಿಧ ಆನ್‌ಲೈನ್‌ ಪತ್ರಿಕೆಗಳಿಗೆ ನಿಯಮಿತವಾಗಿ ಇವರು ಲೇಖನಗಳನ್ನು ಬರೆಯುತ್ತಿದ್ದರು. ವಿವಿಧ ದಿನಪತ್ರಿಕೆಗಳಲ್ಲಿಯೂ ಇವರ ಅಂಕಣ, ಲೇಖನ, ಬರಹಗಳು ಪ್ರಕಟವಾಗುತ್ತಿದ್ದವು. ಇವರ ಬರಹಗಳು ಓದುಗರಿಗೆ ಸಾಕಷ್ಟು ಒಳನೋಟಗಳನ್ನು ನೀಡುತ್ತಿದ್ದವು.

ಕೆ.ವಿ. ತಿರುಮಲೇಶರ ನಿಧನದ ಕುರಿತು ಫೇಸ್‌ಬುಕ್‌ನಲ್ಲಿ ತಿರು ಶ್ರೀಧರ ಅವರು ಈ ಮುಂದಿನಂತೆ ವಿವರ ನೀಡಿ ನುಡಿನಮನ ಸಲ್ಲಿಸಿದ್ದಾರೆ.

"ತಿರುಮಲೇಶರು 1940ರ ಸೆಪ್ಟೆಂಬರ್ 12 ರಂದು ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ ಜನಿಸಿದರು. ಅವರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಗಳು ಗ್ರಾಮಾಂತರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸಾಗಿದವು. ನಂತರ ಕಾಸರಗೋಡು ಮತ್ತು ತಿರುವಂತಪುರದಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಅಭ್ಯಾಸ ಮಾಡಿ, 1966ರಿಂದ ಕೆಲವು ಕಾಲ ಕೇರಳದ ಹಲವು ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದರು. 1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದ ತಿರುಮಲೇಶರು ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದರು. ಕನ್ನಡದ ವಾಕ್ಯರಚನೆ ಮತ್ತು ಕರ್ಮಣೀ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿಎಚ್.ಡಿ ಪ್ರಬಂಧ.

ತಿರುಮಲೇಶರು ಇಂಗ್ಲೆಂಡಿನ ರೆಡಿಂಗ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ವ್ಯಾಸಂಗ ಮಾಡಿ ಎಂ.ಎ (ಅನ್ವಯಿಕ ಭಾಷಾವಿಜ್ಞಾನ) ಪದವಿಯನ್ನೂ ಪಡೆದುಕೊಂಡರು. ಮುಂದೆ ಹೈದರಾಬಾದಿನಲ್ಲೇ ಅಧ್ಯಾಪನ ವೃತ್ತಿಯಲ್ಲಿ ನಿರತರಾಗಿದ್ದು, 25 ವರ್ಷಗಳ ನಂತರ 2002ರಲ್ಲಿ ನಿವೃತ್ತರಾದರು. ಕೆಲವು ವರ್ಷ ವಿದೇಶಗಳಲ್ಲೂ ಅಧ್ಯಾಪಕರಾಗಿದ್ದು 2011ರಲ್ಲಿ ಮರಳಿ ಹೈದರಾಬಾದಿನಲ್ಲಿ ನೆಲೆಸಿದರು. ಅಮೇರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

ತಿರುಮಲೇಶರು ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದರು.

ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ತಿರುಮಲೇಶರ ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕಾದಂಬರಿಗಳು. ನಾಯಕ ಮತ್ತು ಇತರರು, ಕೆಲವು ಕಥಾನಕಗಳು, ಕಳ್ಳಿ ಗಿಡದ ಹೂ ಕಥಾಸಂಕಲನಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಮತ್ತು ಪೂರ್ವ ಯಾನ ಇವರ ಅನುವಾದಿತ ಕೃತಿಗಳು.

ಕೆ.ವಿ.ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ 2015ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿತ್ತು. ಇದಲ್ಲದೆ ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಗೋವಿಂದ ಪೈ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿದ್ದವು.

ತಿರುಮಲೇಶರ ಈ ಒಂದು ಮಾತು ಅವರ ಸಮಸ್ತವನ್ನೂ ಹೇಳುತ್ತದೆ: "ನೀವು ನವ್ಯವನ್ನು ಬಯ್ಯಿರಿ, ಅಥವಾ ಬಂಡಾಯವನ್ನು ತೆಗಳಿರಿ; ಪ್ರಗತಿಶೀಲವನ್ನು ಕಡೆಗಣಿಸಿರಿ, ಅಥವಾ ನವೋದಯವನ್ನು ಹೀಯಾಳಿಸಿರಿ; ಹಳೆಯ ಸಾಹಿತ್ಯವನ್ನೆಲ್ಲ ದೂರೀಕರಿಸಿರಿ, ಹೊಸ ಸಾಹಿತ್ಯವನ್ನು ಕೀಳ್ಗಣಿಸಿರಿ; ಲಿಖಿತ ಸಾಹಿತ್ಯದ ವಿರುದ್ಧ ಮೌಖಿಕ ಸಾಹಿತ್ಯವನ್ನು ಎತ್ತಿಕಟ್ಟಿರಿ, ಎಡ ಬಲವೆಂದು ಹೋರಾಡಿರಿ, ಸಹಿಷ್ಣುತೆಗಾಗಿ ಅಸಹಿಷ್ಣುವಾಗಿರಿ, ರಾಷ್ಟ್ರೀಯತೆಯ ವಿರುದ್ಧ ಸಂವಿಧಾನವನ್ನು ನಿಲ್ಲಿಸಿ, ನೀವೇ ಸರಿಯೆಂದೂ, ಎದುರಾಳಿ ತಪ್ಪೆಂದೂ ಮೇಜು ಕುಟ್ಟಿರಿ, ಏನು ಬೇಕಾದರೂ ಮಾಡಿ, ಆದರೆ ನನ್ನ ವಿನಂತಿ ಇಷ್ಟೇ: ಯಾವ ಸಾಹಿತ್ಯವನ್ನು ತೆಗಳುತ್ತೀರೋ ಅದನ್ನು ಮೊದಲು ಓದಿ ತಿಳಿದುಕೊಳ್ಳಿ. ಇದೊಂದು ಪ್ರಾಥಮಿಕ ಅಗತ್ಯ."

ಹಿರಿಯ ವಿದ್ವಾಂಸರಾದ ಕೆ.ವಿ. ತಿರುಮಲೇಶರ ಅಗಲಿಕೆ ನಮ್ಮ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. (ತಿರು ಶ್ರೀಧರ್‌ ಅವರ ಫೇಸ್‌ಬುಕ್‌ ವಾಲ್‌ನಿಂದ)

IPL_Entry_Point