Namibia cheetah dies: ಸಶಾ ಇನ್ನಿಲ್ಲ, ಕುನೊ ಪಾರ್ಕ್‌ಗೆ ತಂದ 8 ನಮೀಬಿಯಾ ಚೀತಾಗಳಲ್ಲಿ ಒಂದು ಚೀತಾ ಸಾವು
ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದ್ದ ಸಶಾ ಹೆಸರಿನ ಹೆಣ್ಣು ಚಿರತೆ ಮೂತ್ರಪಿಂಡದ ಸೋಂಕಿನಿಂದ ಸೋಮವಾರ ಮೃತಪಟ್ಟಿದೆ.

ನವದೆಹಲಿ: ಕಳೆದ ವರ್ಷ ಭಾರತದಲ್ಲಿ ಚೀತಾಗಳ ಮರುಪರಿಚಯ ಪ್ರಾಜೆಕ್ಟ್ ಅಂಗವಾಗಿ ನಮೀಬಿಯಾದಿಂದ ತಂದ ಎಂಟು ಚೀತಾಗಳಲ್ಲಿ ಒಂದು ಚೀತಾವು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದೆ. "ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದ್ದ ಸಶಾ ಹೆಸರಿನ ಹೆಣ್ಣು ಚಿರತೆ ಮೂತ್ರಪಿಂಡದ ಸೋಂಕಿನಿಂದ ಸೋಮವಾರ ಮೃತಪಟ್ಟಿದೆ" ಎಂದು ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ನಮೀಬಿಯಾದಿಂದ ತಂದ ಚೀತಾಗಳಲ್ಲಿ ಸಶಾ ಸೇರಿದಂತೆ ಮೂರು ಚೀತಾಗಳನ್ನು ಕಾಡಿಗೆ ಬಿಟ್ಟಿರಲಿಲ್ಲ. ಚಿರತೆ ಸಂರಕ್ಷಣಾ ನಿಧಿಯ ವಕ್ತಾರ ಸುಸಾನ್ ಯನ್ನೆಟ್ಟಿ ಅವರು ಸಾವನ್ನು ದೃಢಪಡಿಸಿದ್ದಾರೆ. “ಸೋಮವಾರ ಬೆಳಿಗ್ಗೆ 8 ಗಂಟೆಗೆ ಶಾಶಾ ಮೃತಪಟ್ಟಿದ್ದಾಳೆ. ಈ ಹಂತದಲ್ಲಿ, ಮೂತ್ರಪಿಂಡದ ವೈಫಲ್ಯವನ್ನು ಶಂಕಿಸಲಾಗಿದೆ. ಚಿರತೆಗಳಲ್ಲಿ ಇಂತಹ ಸಾವು ಸಂಭವಿಸುತ್ತದೆ. ಅದಕ್ಕಾಗಿಯೇ ನಾವು ಅವುಗಳನ್ನು ಸೂಕ್ಷ್ಮ ಜೀವಿಗಳು ಎಂದು ಹೇಳುತ್ತೇವೆ" ಎಂದು ಅವರು ವಿವರಿಸಿದ್ದಾರೆ.
"ಶವ ಪರೀಕ್ಷೆಯು ಸಾವಿನ ನಿಜವಾದ ಕಾರಣವನ್ನು ಬಹಿರಂಗಪಡಿಸಲಿದೆ" ಎಂದು ಅವರು ಹೇಳಿದರು. ಭಾರತೀಯ ಅರಣ್ಯ ಅಧಿಕಾರಿಗಳು ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
"ಸಶಾ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದಾಳೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾಳೆ" ಎಂದು ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್), (ವನ್ಯಜೀವಿ) ಜೆಎಸ್ ಚೌಹಾಣ್ ಹೇಳಿದ್ದರು.
"ಇಷ್ಟುದಿನ ಕ್ವಾರಂಟೈನ್‌ನಲ್ಲಿದ್ದಳು. ಇದೀಗ ಮೃದು ಪರಭಕ್ಷಕ ಮುಕ್ತ ಪ್ರದೇಶಕ್ಕೆ ಹೊಂದಿಕೊಳ್ಳುತ್ತಿದ್ದಾಳೆ. ಆಕೆಗೆ ದೌರ್ಬಲ್ಯ ಇರುವುದರಿಂದ ಎಮ್ಮೆ ಮಾಂಸ ನೀಡಲಾಗುತ್ತಿದೆ" ಎಂದು ಸುಮಾರು ಒಂದು ತಿಂಗಳ ಹಿಂದೆ ಅವರು ಮಾಹಿತಿ ನೀಡಿದ್ದರು.
ಸೆಪ್ಟೆಂಬರ್ 17ರಂದು ಭಾರತಕ್ಕೆ ಎಂಟು ಚೀತಾಗಳನ್ನು ನಮೀಬಿಯಾದಿಂದ ತರಲಾಗಿತ್ತು. ಐದು ಹೆಣ್ಣು ಮತ್ತು ಮೂರ ಉಗಂಡು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು. ಅವುಗಳಲ್ಲಿ ಎರಡು ಗಂಡು ಚೀತಾಗಳನ್ನು ನವೆಂಬರ್‌ನಲ್ಲಿ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿತ್ತು.
"ಏಳು ದಶಕಗಳ ನಂತರ ಇಂದು ಸೆಪ್ಟೆಂಬರ್ 17ರಂದು ಚೀತಾಗಳು ಭಾರತದ ನೆಲಕ್ಕೆ ಮರಳಿವೆ. ಈ ಐತಿಹಾಸಿಕ ದಿನದಂದು ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ. ನಮೀಬಿಯಾ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಅವರ ಸಹಾಯವಿಲ್ಲದೆ ಇಂದು ಚೀತಾ ಭಾರತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲʼʼ ಎಂದು ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ದಶಕಗಳ ಹಿಂದೆ, ಜೀವವೈವಿಧ್ಯದ ಹಳೆಯ ಕೊಂಡಿಯಾದ ಚೀತಾ ಇಲ್ಲಿ ಅಳಿದುಹೋಗಿತ್ತು. ಇಂದು ಅದನ್ನು ಮರುಸಂಪರ್ಕಿಸಲು ನಮಗೆ ಅವಕಾಶ ಸಿಕ್ಕಿದೆ. ಈ ಚೀತಾಗಳೊಂದಿಗೆ, ಭಾರತದ ಪ್ರಕೃತಿ-ಪ್ರೀತಿಯ ಪ್ರಜ್ಞೆಯು ಪೂರ್ಣ ಬಲದಿಂದ ಜಾಗೃತಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ನಮೀಬಿಯಾದಿಂದ ತಂಡ ಬಳಿಕ ಈ ಚೀತಾಗಳನ್ನು ಕ್ವಾರಂಟೈನ್ ವಲಯಗಳಲ್ಲಿ ಬಿಡಲಾಗಿತ್ತು. ಬಳಿಕ ಐದು ಚದರ ಕಿ.ಮೀ.ಗಿಂತ ಹೆಚ್ಚು ವಿಸ್ತೀರ್ಣದ ದೊಡ್ಡ ಆವರಣಕ್ಕೆ ಬಿಡಲಾಗಿತ್ತು. ಆದರೆ, ಸಶಾ ಕ್ವಾರಂಟೈನ್‌ನಲ್ಲಿದ್ದಳು ಎನ್ನಲಾಗಿದೆ.