Tamil Nadu: ತಮಿಳುನಾಡಿನ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; 7 ಮಂದಿ ಸಾವು, 20 ಮಂದಿಗೆ ಗಾಯ
ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಮೂಳೆಚಿಕಿತ್ಸೆಗೆ ಸಂಬಂಧಿಸಿದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಜರುಗಿದೆ. 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರಿಗೆ ಗಾಯವಾಗಿದೆ.
ತಮಿಳುನಾಡು: ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಮೂಳೆಚಿಕಿತ್ಸೆಗೆ ಸಂಬಂಧಿಸಿದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕನಿಷ್ಟ 7 ರೋಗಿಗಳು ಸಾವನ್ನಪ್ಪಿದ್ದಾರೆ. ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತರಾದವರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಇದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಿಂಡಿಗಲ್ ಹೆದ್ದಾರಿಯ ತಿರುವಿನಲ್ಲಿ ಗಾಂಧಿ ನಗರ ಪ್ರದೇಶದಲ್ಲಿರುವ ಆಸ್ಪತ್ರೆ ಇದಾಗಿತ್ತು. ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಸಿಲುಕಿರುವ ರೋಗಿಗಳನ್ನು ರಕ್ಷಿಸಲು ಮೂರು ಅಗ್ನಿಶಾಮಕ ವಾಹನಗಳು ಮತ್ತು 10 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು.
ದಿಂಡಿಗಲ್ ಜಿಲ್ಲಾಧಿಕಾರಿ ಎಂ.ಎನ್.ಪೂಂಗೋಡಿ ಮಾತನಾಡಿ, ರೋಗಿಗಳನ್ನು ರಕ್ಷಿಸಿ ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಪಘಾತದ ಸಮಯದಲ್ಲಿ, 100 ಕ್ಕೂ ಹೆಚ್ಚು ರೋಗಿಗಳು ಸೇರಿದಂತೆ ಸುಮಾರು 200 ಜನರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಕೆಲವರು ಪತ್ತೆಯಾಗಿದ್ದಾರೆ. ಕೂಡಲೇ ಅಗ್ನಿಶಾಮಕ ದಳದವರು ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಉಸಿರುಗಟ್ಟಿ ಅವರು ಮೃತರಾಗಿದ್ದಾರೆ ಎಂದು ಹೇಳಿದ್ದಾರೆ. ಅಪಘಾತದ ಸಮಯದಲ್ಲಿ, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಆಸ್ಪತ್ರೆಯಿಂದ ಸುಮಾರು 30 ರೋಗಿಗಳನ್ನು ಸ್ಥಳಾಂತರಿಸಿದ ನಂತರ ಅಲ್ಲಿನ ಕೆಲವರು ಮೃತರಾಗಿದ್ದು ತಿಳಿದುಬಂದಿದೆ. ರಕ್ಷಿಸಿದ ವ್ಯಕ್ತಿಗಳನ್ನು ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದವರನ್ನು ಹತ್ತಿರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಎಂಎನ್ ಬೂಂಗೋಡಿ ಎಎನ್‌ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು. ಬಳಿಕ ಆಸ್ಪತ್ರೆ ತುಂಬ ಹೊಗೆ ತುಂಬಿಕೊಂಡಿದೆ. ಇದರಿಂದ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಜ್ವಾಲೆ ಕಾಣಿಸಿಕೊಂಡಾಗ ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಇದಕ್ಕೂ ಮುನ್ನ ಕಳೆದ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಝಾನ್ಸಿ ನಗರದಲ್ಲಿ ಸಂಭವಿಸಿದ ಬೆಂಕಿಯಲ್ಲಿ 11 ಮಕ್ಕಳು ಸಾವನ್ನಪ್ಪಿದ್ದರು.