Income Tax: 194 ರೂ ಐಸ್‌ಕ್ರಿಮ್‌ಗೆ 35 ರೂ ಟ್ಯಾಕ್ಸ್‌, 30 ಲಕ್ಷ ವೇತನಕ್ಕೆ 6 ಲಕ್ಷ ತೆರಿಗೆ, ಬಜೆಟ್‌ ಸಮಯದಲ್ಲಿ ತೆರಿಗೆದಾರರ ಗೋಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Income Tax: 194 ರೂ ಐಸ್‌ಕ್ರಿಮ್‌ಗೆ 35 ರೂ ಟ್ಯಾಕ್ಸ್‌, 30 ಲಕ್ಷ ವೇತನಕ್ಕೆ 6 ಲಕ್ಷ ತೆರಿಗೆ, ಬಜೆಟ್‌ ಸಮಯದಲ್ಲಿ ತೆರಿಗೆದಾರರ ಗೋಳು

Income Tax: 194 ರೂ ಐಸ್‌ಕ್ರಿಮ್‌ಗೆ 35 ರೂ ಟ್ಯಾಕ್ಸ್‌, 30 ಲಕ್ಷ ವೇತನಕ್ಕೆ 6 ಲಕ್ಷ ತೆರಿಗೆ, ಬಜೆಟ್‌ ಸಮಯದಲ್ಲಿ ತೆರಿಗೆದಾರರ ಗೋಳು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ 2025 ಮಂಡನೆ ಮಾಡುವ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಆದಾಯ ತೆರಿಗೆಗೆ ಸಂಬಂಧಪಟ್ಟ ಪೋಸ್ಟ್‌ಗಳು ಟ್ರೆಂಡಿಂಗ್‌ ಆಗುತ್ತಿವೆ. ಜನ ಸಾಮಾನ್ಯರು, ವೇತನ ಪಡೆಯುವವರು ತಮ್ಮ ಆದಾಯದಲ್ಲಿ ಬಹುಪಾಲು ತೆರಿಗೆ ಕಟ್ಟುತ್ತಿದ್ದೇವೆ ಎಂದು ಪೋಸ್ಟ್‌ ಮಾಡುತ್ತಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ 2025 ಮಂಡನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ 2025 ಮಂಡನೆ (REUTERS)

ಬೆಂಗಳೂರು: ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ 2025 ಮಂಡನೆ ಮಾಡುವ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಆದಾಯ ತೆರಿಗೆಗೆ ಸಂಬಂಧಪಟ್ಟ ಪೋಸ್ಟ್‌ಗಳು ಟ್ರೆಂಡಿಂಗ್‌ ಆಗುತ್ತಿವೆ. ಜನ ಸಾಮಾನ್ಯರು, ವೇತನ ಪಡೆಯುವವರು ತಮ್ಮ ಆದಾಯದಲ್ಲಿ ಬಹುಪಾಲು ತೆರಿಗೆ ಕಟ್ಟುತ್ತಿದ್ದೇವೆ ಎಂದು ಪೋಸ್ಟ್‌ ಮಾಡುತ್ತಿದ್ದಾರೆ. ತಮ್ಮ ವೇತನ ಇಷ್ಟು ಇದೆ, ಇದರಲ್ಲಿ ಇಂತಿಷ್ಟು ತೆರಿಗೆ ಕಟ್ಟುತ್ತೇವೆ. ಉಳಿದ ವೇತನದಲ್ಲಿ ಕಾರು ಖರೀದಿಸಿದರೆ ಮತ್ತೆ ತೆರಿಗೆ ಕಟ್ಟುತ್ತೇವೆ. ಐಸ್‌ಕ್ರೀಮ್‌ ಖರೀದಿಸಿದರೂ ತೆರಿಗೆ ಪಾವತಿಸಬೇಕು ಎಂದೆಲ್ಲ ಪೋಸ್ಟ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ತಮ್ಮ ತೆರಿಗೆ ಗೋಳು ತೋಡಿಕೊಳ್ಳುತ್ತಿದ್ದಾರೆ. ಇಂದು ಮಂಡನೆಯಾಗುವ ಬಜೆಟ್‌ನಲ್ಲಿ ತೆರಿಗೆದಾರರ ಗೋಳಿಗೆ ಪರಿಹಾರ ಇರಬಹುದೇ ಎಂದು ಕಾದು ನೋಡಬೇಕಿದೆ.

ಇನ್‌ಕಂ ಟ್ಯಾಕ್ಸ್‌ ಟ್ರೆಂಡಿಂಗ್‌

ಎಕ್ಸ್‌ನಲ್ಲಿ ನೀರಜ್‌ ಎಂಬವರು ಈ ರೀತಿ ಪೋಸ್ಟ್‌ ಮಾಡಿದ್ದಾರೆ. "ನನ್ನ ಒಟ್ಟು ಆದಾಯ 30 ಲಕ್ಷ ರೂಪಾಯಿ. ಇದಕ್ಕೆ 6,24,000 ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದೇನೆ. ಉಳಿದ ನನ್ನ ನಿವ್ವಳ ಆದಾಯ 23,76,000 ರೂಪಾಯಿ. ಈಗ ಕಾರು ಒಂದು ಖರೀದಿಸಿದೆ ಎಂದಿರಲಿ. 23.76 ಲಕ್ಷ ರೂಪಾಯಿಯ ಕಾರು ಖರೀದಿಸಿದರೆ ಜಿಎಸ್‌ಟಿ ಮತ್ತು ಸೆಸ್‌ 11,40,480 ರೂಪಾಯಿ ಪಾವತಿಸಬೇಕು. ನಾನು ಒಟ್ಟು ಪಾವತಿಸಿದ ತೆರಿಗೆ 17,64,480 ರೂಪಾಯಿ. ನನ್ನ ಒಟ್ಟು ವೇತನದಲ್ಲಿ ನಾನು ಸರಕಾರಕ್ಕೆ ನೀಡಿದ್ದು 17,64,480 ರೂಪಾಯಿ. ನನ್ನ ವೇತನದಲ್ಲಿ ನನಗೆ ಉಳಿದಿರುವುದು 12,35,520 ರೂಪಾಯಿ" ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ಈ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ಇನ್ನು ನೀವು ಪೆಟ್ರೋಲ್‌/ಡೀಸೆಲ್‌, ನಿರ್ವಹಣೆ, ವಿಮೆ, ಟೋಲ್‌ ಇತ್ಯಾದಿಗಳ ದರ ಮತ್ತು ತೆರಿಗೆ ಲೆಕ್ಕ ಹಾಕಿದರೆ ನಿಮ್ಮ ವೇತನ ಇನ್ನಷ್ಟು ಕಡಿಮೆಯಾಗುತ್ತದೆ" "ಐಷಾರಾಮಿ ವಸ್ತುಗಳಿಗೆ ತೆರಿಗೆ ಜಾಸ್ತಿ ಎನ್ನುವುದನ್ನು ಮರೆಯಬೇಡಿ" "ಬ್ರಿಟಿಷರಂತೆ ಅತ್ಯಧಿಕ ತೆರಿಗೆ, ಸೊಮಾಲಿಯಾದಂತೆ ಸೇವೆ" ಎಂದೆಲ್ಲ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಗುರುವೇಂದ್ರ ಸಿಂಗ್‌ ಎಂಬವರು ಮಾಡಿರುವ ಪೋಸ್ಟ್‌ ಈ ರೀತಿ ಇದೆ. "ಸ್ಯಾಲರಿ ಟ್ಯಾಕ್ಸ್‌ ಶೇಕಡ 30, ಪೆಟ್ರೋಲ್‌ ತೆರಿಗೆ ಶೇಕಡ 50, ಜಿಎಸ್‌ಟಿ ತೆರಿಗೆ ಶೇಕಡ 28, ವಾಹನ ತೆರಿಗೆ ಶೇಕಡ 30, ಟೋಲ್‌ ಶುಲ್ಕ 10 ಸಾವಿರ ರೂಪಾಯಿ, ಶಿಕ್ಷಣ ತೆರಿಗೆ ಶೇಕಡ 18, ಆರೋಗ್ಯ ತೆರಿಗೆ ಶೇಕಡ 18, ಪಾಪ್‌ಕಾರ್ನ್‌ ತೆರಿಗೆ ಶೇಕಡ 8, ಇಷ್ಟೆಲ್ಲ ಪಾವತಿಸಿದರೆ ಕೊನೆಗೆ ದೊರಕುವ ಸೇವೆ ಮಾತ್ರ ಈ ರೀತಿ ಇರುತ್ತದೆ ಎಂದು ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.

"ಈಗಾಗಲೇ ಶೇಕಡ 31.2 ಆದಾಯ ತೆರಿಗೆ ಪಾವತಿಸಿದ್ರು ಕಾರು ಖರೀದಿಸುವಾಗ ಶೇಕಡ 48 ತೆರಿಗೆ ಯಾಕೆ ನಿರ್ಮಲಾ ಸೀತಾರಾಮನ್‌? ಇದು ಹಗಲು ದರೋಡೆ. ಇದೇ ಕಾರಣಕ್ಕೆ ಭಾರತ ಪ್ರಗತಿಯಾಗುತ್ತಿಲ್ಲ" ಎಂದು ವೆಂಕಟೇಶ್‌ ಪೋಸ್ಟ್‌ ಮಾಡಿದ್ದಾರೆ.

194 ರೂ ಐಸ್‌ಕ್ರಿಮ್‌ಗೆ 35 ರೂ ಟ್ಯಾಕ್ಸ್‌

ಇನ್ನೊಬ್ಬರು ಐಸ್‌ಕ್ರೀಮ್‌ ಖರೀದಿಗೆ ಪಾವತಿಸುವ ತೆರಿಗೆಯ ಕುರಿತು ಗಮನ ಸೆಳೆದಿದ್ದಾರೆ. 194 ರೂ ಐಸ್‌ಕ್ರಿಮ್‌ಗೆ 35 ರೂ ಟ್ಯಾಕ್ಸ್‌ ಕಟ್ಟಿದ್ದೇನೆ ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ಇದೇ ರೀತಿಯ ಹಲವು ಪೋಸ್ಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ವಿಶೇಷವಾಗಿ ವೇತನ ಪಡೆಯುವ ಆದಾಯ ತೆರಿಗೆ ಪಾವತಿದಾರರು ತಾವು ಹಲವು ತೆರಿಗೆ ಪಾವತಿಸಿದ ಬಳಿಕ ಕೊನೆಗೆ ಏನು ಪಡೆಯುತ್ತೇವೆ ಎಂದು ಪೋಸ್ಟ್‌ ಮಾಡುತ್ತಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.