ಕನ್ನಡ ಸುದ್ದಿ  /  Nation And-world  /  Forced Religious Conversion: Supreme Court Said Charity Is Welcome But Not For Purpose Of Conversion

Forced Religious Conversion: ಚಾರಿಟಿ ಒಕೆ, ಆದರೆ ಮತಾಂತರ ಉದ್ದೇಶ ಸಲ್ಲದೆಂದ ಸುಪ್ರೀಂ ಕೋರ್ಟ್;‌ ಯಾವ ಕೇಸ್‌, ವಿಷಯವೇನು? ಇಲ್ಲಿದೆ ವಿವರ

Forced Religious Conversion: ಧಾರ್ಮಿಕ ಮತಾಂತರದ ದುರುದ್ದೇಶದಿಂದ ಚಾರಿಟಿ ಅಥವಾ ಧಾನ ಧರ್ಮದ ಕೆಲಸ ಮಾಡುವುದು ಅನಪೇಕ್ಷಿತ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌

ಧಾರ್ಮಿಕ ಮತಾಂತರದ ದುರುದ್ದೇಶದಿಂದ ಚಾರಿಟಿ ಅಥವಾ ಧಾನ ಧರ್ಮದ ಕೆಲಸ ಮಾಡುವುದು ಅನಪೇಕ್ಷಿತ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಡಿಸೆಂಬರ್ 12 ರೊಳಗೆ ಮತಾಂತರ ವಿರೋಧಿ ಕಾನೂನುಗಳಿರುವ ರಾಜ್ಯಗಳಲ್ಲಿ ವರದಿಯಾದ ಬಲವಂತದ ಮತಾಂತರ (Forced Religious Conversion)ದ ವಿವರಗಳನ್ನು ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಇದೇ ವೇಳೆ ನಿರ್ದೇಶಿಸಿದೆ.

ದೆಹಲಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಸಿಟಿ ರವಿಕುಮಾರ್ ಅವರ ಪೀಠವು "ಇದು ಗಂಭೀರ ವಿಷಯ. ಅಷ್ಟೇ ಅಲ್ಲ ಅಂತಿಮವಾಗಿ ಸಂವಿಧಾನದ ಮೂಲ ಲಕ್ಷಣಕ್ಕೆ ವಿರುದ್ಧವೂ ಆಗಿದೆ" ಎಂದು ಹೇಳಿದೆ.

“ದಾನವು ಸ್ವಾಗತಾರ್ಹ. ಆದರೆ ಆ ದಾನದ ಮುಖ್ಯ ಉದ್ದೇಶ ಏನು ಎಂಬುದನ್ನು ಗಮನಿಸುವುದು ಕೂಡ ಮುಖ್ಯವಾದ್ದು. ಪ್ರತಿಯೊಬ್ಬರಿಗೂ ಧರ್ಮವನ್ನು ಆಯ್ಕೆ ಮಾಡುವ ಹಕ್ಕಿದೆ. ಆದರೆ ಅವರಿಗೆ ಆಮಿಷವೊಡ್ಡುವ ಮೂಲಕ ಅಲ್ಲ. ನೀವು ನಿರ್ದಿಷ್ಟ ಸಮುದಾಯಕ್ಕೆ ಸಹಾಯ ಮಾಡಲು ಬಯಸಿದರೆ, ನೀವು ಅದನ್ನು ದಾನಕ್ಕಾಗಿ ಮಾಡಬಹುದು. ಅದು ಸ್ವಾಗತಾರ್ಹ. ಆದರೆ ಬೇರೆ ಉದ್ದೇಶಕ್ಕಾಗಿ ಅಲ್ಲ ” ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಭಯ, ಬೆದರಿಕೆ, ಆಮಿಷಗಳ ಆಧಾರದ ಮೇಲೆ ಬಲವಂತದ ಮತಾಂತರ ನಡೆಯುತ್ತಿದೆ. ಇದು ಸಂವಿಧಾನದ 21ನೇ ವಿಧಿಯಡಿಯಲ್ಲಿ ವ್ಯಕ್ತಿಯ ಸ್ವಾತಂತ್ರ್ಯ ಮತ್ತು 25ನೇ ವಿಧಿಯ ಅಡಿಯಲ್ಲಿ ಧರ್ಮವನ್ನು ಆಚರಿಸುವ ಹಕ್ಕನ್ನು ಉಲ್ಲಂಘಿಸುವುದರಿಂದ ಈ ಅಹವಾಲನ್ನು ಪರಿಶೀಲಿಸಬೇಕು ಎಂದು ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಲಾಗಿದೆ.

ಅಂತಹ ನಿದರ್ಶನಗಳು ನಿಜವಾಗಿದ್ದರೆ, ಅದು ಗಂಭೀರವಾಗಿದೆ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ನ್ಯಾಯಾಲಯ ನವೆಂಬರ್ 14 ರಂದು ಹೇಳಿತ್ತು. ಮತಾಂತರ ವಿರೋಧಿ ಕಾನೂನುಗಳನ್ನು ಹೊಂದಿರುವ ಒಂಬತ್ತು ರಾಜ್ಯಗಳನ್ನು ಪಟ್ಟಿ ಮಾಡುವ ಮೂಲಕ ಕೇಂದ್ರವು PIL ಗೆ ಪ್ರತಿಕ್ರಿಯಿಸಿದೆ. ಈ ರಾಜ್ಯಗಳಲ್ಲಿ ವರದಿಯಾಗಿರುವ ಈ ಕಾನೂನುಗಳು ಮತ್ತು ಬಲವಂತದ ಮತಾಂತರದ ನಿದರ್ಶನಗಳ ವಿವರಗಳನ್ನು ಸಂಗ್ರಹಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೋಮವಾರ ನಿರ್ದೇಶನ ನೀಡಿದೆ.

ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಒಡಿಶಾ, ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ, ಜಾರ್ಖಂಡ್, ಉತ್ತರಾಖಂಡ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಹರಿಯಾಣ ಒಂಬತ್ತು ರಾಜ್ಯಗಳು ಜಾರಿಗೆ ತಂದಿರುವ ಮತಾಂತರ ವಿರೋಧಿ ಕಾನೂನುಗಳನ್ನು ಬೆಂಬಲಿಸಿ ವಾದ ಮಂಡಿಸಿದರು. 1977ರ ಸಾಂವಿಧಾನಿಕ ಪೀಠದ ತೀರ್ಪಿನಲ್ಲಿ ಧರ್ಮ ಪ್ರಚಾರ ಮಾಡುವ ಹಕ್ಕು ವ್ಯಕ್ತಿಯನ್ನು ಸ್ವಂತ ಧರ್ಮಕ್ಕೆ ಪರಿವರ್ತಿಸುವ ಹಕ್ಕನ್ನು ಒಳಗೊಂಡಿಲ್ಲ ಎಂದು ಹೇಳಿದೆ.

ಕಳೆದ ತಿಂಗಳು ಕೇಂದ್ರವು ಸಲ್ಲಿಸಿದ ಅಫಿಡವಿಟ್‌ನಲ್ಲಿ ಏನಿದೆ?

"ಮಹಿಳೆಯರು ಮತ್ತು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳು ಸೇರಿ ಸಮಾಜದ ದುರ್ಬಲ ವರ್ಗಗಳ ಪಾಲಿಸಬೇಕಾದ ಹಕ್ಕುಗಳನ್ನು ರಕ್ಷಿಸಲು ಇಂತಹ ಕಾಯಿದೆಗಳು (ಸಂಘಟಿತ, ಅತ್ಯಾಧುನಿಕ, ದೊಡ್ಡ ಪ್ರಮಾಣದ ಅಕ್ರಮ ಮತಾಂತರದ ಬೆದರಿಕೆಯನ್ನು ತಡೆಯಲು) ಅಗತ್ಯವಾಗಿದೆ" ಎಂದು ಕೇಂದ್ರ ಸರ್ಕಾರ ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿತ್ತು.

ಬಲವಂತದ ಮತಾಂತರವನ್ನು ತಡೆಯುವ ಗುಜರಾತ್ ಧರ್ಮದ ಸ್ವಾತಂತ್ರ್ಯ ಕಾಯಿದೆ-2003 ಅನ್ನು ಜಾರಿಗೊಳಿಸಲಾಗಿತ್ತು ಎಂಬುದನ್ನು ಗುಜರಾತ್ ಸರ್ಕಾರ ಕೂಡ ಕಳೆದ ವಾರ ನ್ಯಾಯಾಲಯಕ್ಕೆ ತಿಳಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಗುಜರಾತ್ ಉಚ್ಚ ನ್ಯಾಯಾಲಯವು ಇದಕ್ಕೆ ತಡೆಯಾಜ್ಞೆ ನೀಡಿದೆ. ರಾಜ್ಯದ ಮೇಲ್ಮನವಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿತ್ತು. ಅಲ್ಲಿ ತಡೆಯಾಜ್ಞೆಯನ್ನು ತೆಗೆದುಹಾಕಲು ಡಿಸೆಂಬರ್ 2 ರಂದು ಅರ್ಜಿ ಸಲ್ಲಿಸಿದೆ.

ಪಿಐಎಲ್‌ ವಿರೋಧಿಸಿದ ವಿಚಾರವಾದಿಗಳು

ವಿಚಾರವಾದಿ ಸಂಘಟನೆಗಳು ಮತ್ತು ವ್ಯಕ್ತಿಗಳು ಸಲ್ಲಿಸಿದ ಹಲವಾರು ಅರ್ಜಿಗಳು ಬಲವಂತದ ಮತಾಂತರದ ಯಾವುದೇ ನಿದರ್ಶನಗಳನ್ನು ಅರ್ಜಿಯಲ್ಲಿ ವಿವರಿಸಿಲ್ಲ ಎಂದು ಸೂಚಿಸಿ ಉಪಾಧ್ಯಾಯ ಅವರು ಸಲ್ಲಿಸಿದ PIL ಅನ್ನು ವಿರೋಧಿಸಿವೆ.

ನ್ಯಾಯಪೀಠವು ಸೋಮವಾರ ಎಲ್ಲ ಕಡೆಯವರ ವಾದವನ್ನು ಆಲಿಸಲು ಒಪ್ಪಿಕೊಂಡು ಹೇಳಿದ್ದು ಇಷ್ಟು - “ಅರ್ಜಿಯ ನಿರ್ವಹಣೆಗೆ ಸಂಬಂಧಿಸಿದ ಅಂತಹ ಸವಾಲನ್ನು ನಾವು ಸ್ವೀಕರಿಸುವುದಿಲ್ಲ ... ನೀವು ಪ್ರೊಪಗೇಟ್‌ ಮಾಡಬಹುದು, ಸಹಾಯ ಮಾಡಬಹುದು. ದಾನ (ಚಾರಿಟಿ) ಮಾಡಬಹುದು ಆದರೆ ಅದಕ್ಕೊಂದು ಚೌಕಟ್ಟಿದೆ. ಅದರೊಳಗೆ ಅದು ಇರಬೇಕು. ಈ ಎಲ್ಲ ಕಾರ್ಯಗಳ ಉದ್ದೇಶವನ್ನು ಪರಿಶೀಲಿಸಬೇಕಾದ್ದು ಅವಶ್ಯ”.

"ವಿಷಯಗಳನ್ನು ಸರಿಯಾಗಿ ಹೊಂದಿಸುವುದಕ್ಕಾಗಿ ನಾವು ಇಲ್ಲಿದ್ದೇವೆ. ಅದನ್ನು ಪ್ರತಿಕೂಲವಾಗಿ ತೆಗೆದುಕೊಳ್ಳಬೇಡಿ. ಇದು ಬಹಳ ಗಂಭೀರವಾದ ವಿಚಾರ. ಭಾರತದಲ್ಲಿ ಉಳಿಯುವ ಪ್ರತಿಯೊಬ್ಬರೂ ಭಾರತದ ಸಂಸ್ಕೃತಿಯ ಪ್ರಕಾರ ಇರಬೇಕಾಗುತ್ತದೆ. ಹಾಗಿಲ್ಲದೇ ಇದ್ದರೆ ಅದರಿಂದ ದೇಶದಲ್ಲಿ ಕೋಮು ಸೌಹಾರ್ದತೆಗೂ ಧಕ್ಕೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮೆಹ್ತಾ ಅವರು ನ್ಯಾಯಾಲಯದ ಕಳವಳಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿ, "ಧಾನ್ಯ, ಔಷಧಗಳು ಇತ್ಯಾದಿಗಳಿಗೆ, ಒಬ್ಬ ವ್ಯಕ್ತಿಯು ಮತಾಂತರಗೊಳ್ಳುತ್ತಿದ್ದಾನೆಯೇ ಅಥವಾ ನಿಜವಾಗಿ ಸ್ವಇಚ್ಛೇಯಿಂದ ಮತಾಂತರವಾಗುತ್ತಿದ್ದಾನೆಯ ಎಂಬುದನ್ನು ಒಂದು ತಟಸ್ಥ ಪ್ರಾಧಿಕಾರವು ನಿರ್ಧರಿಸಬೇಕು" ಎಂದು ಅರಿಕೆ ಮಾಡಿದರು.

2003 ರ ಗುಜರಾತ್ ಕಾಯಿದೆಯು ರಾಜ್ಯದಲ್ಲಿ ಮತಾಂತರಗೊಳ್ಳುವ ಯಾರಾದರೂ ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕೆಂಬ ನಿಬಂಧನೆಯನ್ನು ಹೊಂದಿತ್ತು.

IPL_Entry_Point