ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Peacock Village: ಮಹಾರಾಷ್ಟ್ರದ ಈ ಜನರ ಜಪ್ತಿಗೆ ಸಿಕ್ಕಿವೆ ನವಿಲುಗಳು, ಮಯೂರನೂರಿಗೆ 11 ತಲೆಮಾರುಗಳ ನಂಟು

Peacock Village: ಮಹಾರಾಷ್ಟ್ರದ ಈ ಜನರ ಜಪ್ತಿಗೆ ಸಿಕ್ಕಿವೆ ನವಿಲುಗಳು, ಮಯೂರನೂರಿಗೆ 11 ತಲೆಮಾರುಗಳ ನಂಟು

ಅಂದದೂರು ನವಿಲೂರು ಎಂದು ಹಾಡು ಹೇಳಿದರೆ ಅದು ಮಹಾರಾಷ್ಟ್ರದ ಮೊರಾಚಿ ಚಿಂಚೋಳಿ ಗ್ರಾಮಕ್ಕೆ ಅನ್ವಯಿಸಬಹುದು. ಏಕೆಂದರೆ ಇಲ್ಲಿ ನವಿಲುಗಳು ಜನರೊಂದಿಗೆ ಸಹ ಜೀವನ ನಡೆಸುತ್ತವೆ. ನವಿಲೂರಿನ ವಿಶೇಷ ಚಿತ್ರಣ ಇಲ್ಲಿದೆ.

ಮೊರಾಚಿ ಚಿಂಚೋಳಿಯಲ್ಲಿ ನವಿಲುಗಳ ಸಹಜ ಬದುಕು
ಮೊರಾಚಿ ಚಿಂಚೋಳಿಯಲ್ಲಿ ನವಿಲುಗಳ ಸಹಜ ಬದುಕು (ISHAAN AMIT)

ಪುಣೆ: ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ನವಿಲುಗಳೇ ನವಿಲುಗಳು( Peacock). ನವಿಲುಗಳ ಸಹಜ ಓಡಾಟ, ಸಂಸಾರ. ಮನೆ, ಅಂಗಡಿ, ರಸ್ತೆ, ಕಟ್ಟಡಗಳ ಆಜೂಬಾಜು ಎಲ್ಲಿ ನೋಡಿದರೂ ನವಿಲುಗಳು ಬದುಕು ಕಟ್ಟಿಕೊಂಡಿವೆ. ಇದು ಈಗಿನದ್ದೇನಲ್ಲ. ಸತತ 11 ತಲೆಮಾರುಗಳಿಂದ ಇಲ್ಲಿ ನವಿಲುಗಳು ಈ ಗ್ರಾಮದೊಂದಿಗೆ ನಂಟು ಬೆಳೆಸಿಕೊಂಡಿವೆ. ಈಗಲೂ ಊರಿನ ಜನ ನವಿಲುಗಳನ್ನು ತಮ್ಮ ಮನೆಯ ಮಕ್ಕಳಂತೆಯೇ ಜನತದಿಂದ ಕಾಪಾಡಿಕೊಳ್ಳುತ್ತಾರೆ. ಅವುಗಳಿಗೆ ಆಹಾರ, ಮೊಟ್ಟೆಗಳ ಪೋಷಣೆ, ಅನಾರೋಗ್ಯಕ್ಕೆ ಒಳಗಾದರೆ ಚಿಕಿತ್ಸೆ ಸಹಿತ ಎಲ್ಲವನ್ನೂ ಪ್ರೀತಿಯಿಂದಲೇ ಮಾಡುತ್ತಾರೆ. ರಾಷ್ಟ್ರೀಯ ಪಕ್ಷಿ ನವಿಲಿಗೆ ಇಲ್ಲಿ ಎಲ್ಲಿಲ್ಲದ ಗೌರವ. ಈ ಕಾರಣದಿಂದಲೇ ಈ ಗ್ರಾಮದ ಬರೀ ಮಹಾರಾಷ್ಟ್ರ ಮಾತ್ರವಲ್ಲ. ಇಡೀ ವಿಶ್ವದ ಗಮನ ಸೆಳೆದಿದೆ. ದೂರದ ದೇಶಗಳಿಂದಲೂ ಗ್ರಾಮಕ್ಕೆ ಆಗಮಿಸಿ ನವಿಲುಗಳನ್ನು ನೋಡಿಕೊಂಡು ಖುಷಿಯಿಂದಲೇ ಹೋಗುತ್ತಾರೆ.

ನವಿಲೂರು ಆಗಿದ್ದು ಹೇಗೆ?

ಈ ಗ್ರಾಮದ ಹೆಸರು ಮೊರಾಚಿ ಚಿಂಚೋಳಿ(Morachi Chincholi).ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆಯಿಂದ ಬರೀ 85 ಕಿ.ಮಿ ದೂರದಲ್ಲಿಯೇ ಮೊರಾಚಿ ಚಿಂಚೋಳಿ. ಈ ಗ್ರಾಮದ ಜನಸಂಖ್ಯೆ ಎಷ್ಟಿದೆಯೋ ಅಷ್ಟೇ ಸಂಖ್ಯೆಯಲ್ಲಿ ನವಿಲುಗಳೂ ಇವೆ. ಪಶ್ಚಿಮಘಟ್ಟಗಳ ಸೆರಗಿನಲ್ಲಿರುವ ಕಾರಣದಿಂದ ಮೊರಾಚಿ ಗ್ರಾಮದ ಅಕ್ಕಪಕ್ಕದಲ್ಲಿ ಗುಡ್ಡಗಳ ಸಾಲೇ ಇದೆ. ಹಸಿರು ವಾತಾವರಣವೂ ಇರುವುದರಿಂದ ಅರಣ್ಯದ ಪಕ್ಕದಲ್ಲಿಯೇ ಈ ಗ್ರಾಮ ನೆಲೆಗೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಈ ಕಾರಣದಿಂದಲೋ ಏನೋ ಈ ಗ್ರಾಮದಲ್ಲಿ ನವಿಲುಗಳು ಬದುಕು ನಡೆಸುತ್ತಾ ಬಂದಿವೆ. ಮರಾಠಿಯಲ್ಲಿ ಮೋರ್‌ ಎಂದರೆ ನವಿಲು ಎಂದರ್ಥ. ಚಿಂಚೋಳಿ ಎಂದರೆ ಹುಣಸೆ ಮರಗಳು ಎಂದು ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ನವಿಲುಗಳು ಹಾಗೂ ಹುಣಸೆ ಮರಗಳು ಯಥೇಚ್ಛವಾಗಿ ಇರುವುದರಿಂದ ಈ ಗ್ರಾಮವನ್ನು ಮೊರಾಚಿ ಚಿಂಚೋಳಿ ಎಂದೇ ಕರೆಯಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಪ್ರವಾಸಿಗರಿಗೆ ಕಟ್ಟುನಿಟ್ಟು

ಗ್ರಾಮ ಪ್ರವೇಶಿಸುವ ಮುನ್ನವೇ ಇಲ್ಲಿ ನಿಮಗೆ ನವಿಲಿನ ಧ್ವನಿ ಕಿವಿಗೆ ಕೇಳಿ ಬರುತ್ತದೆ. ವಿಶಿಷ್ಟವಾಗಿ ಕೂಗುವ ನವಿಲಿನ ಧ್ವನಿ ಕೇಳಿದರೆ ಇದು ನವಿಲುಗಳ ಆವಾಸ ಸ್ಥಾನ ಎಂದು ಥಟ್ಟನೇ ಹೇಳಬಹುದು. ಒಳ ಹೊಕ್ಕರೆ ಅಲ್ಲಲ್ಲಿ ನವಿಲುಗಳು ನಿಮಗೆ ಕಾಣ ಸಿಗುತ್ತವೆ. ಗ್ರಾಮದ ಜತೆಗೆ ಬೆರೆತು ಹೋಗಿರುವ ನವಿಲುಗಳು ಮರದ ಮೇಲೋ, ಮನೆಯ ಜಗುಲಿಯ ಮೇಲೋ ಕುಳಿತಿರುವುದನ್ನು ಕಾಣಬಹುದು. ಮಹಿಳೆಯರು ಬಾವಿಯಿಂದ ನೀರು ತರಲು ಹೊರಟರೆ ಅವರೊಂದಿಗೂ ಹೆಜ್ಜೆ ಹಾಕುತ್ತವೆ. ಮನೆಯಲ್ಲಿ ರೊಟ್ಟಿ ಪಲ್ಯ ಮಾಡುವ ಮಹಿಳೆಯರ ಸಮೀಪದಲ್ಲೂ ಬಂದು ನಿಲ್ಲುತ್ತವೆ. ರೈತರು ಜಮೀನುಗಳ ಕಡೆ ಹೊರಟರೆ ಅವರೊಂದಿಗೂ ಹೆಜ್ಜೆ ಹಾಕುತ್ತವೆ.

ನವಿಲುಗಳನ್ನು ನೋಡಲು ದೇಶ ವಿದೇಶದಿಂದ ಗ್ರಾಮಕ್ಕೆ ಆಗಮಿಸುತ್ತಾರೆ. ನವಿಲುಗಳೊಂದಿಗೆ ಹೇಗೆ ವರ್ತಿಸಬೇಕು ಎನ್ನುವುದನ್ನು ಪ್ರವಾಸಿ ಸ್ನೇಹಿ ಫಲಕದಲ್ಲೂ ತಿಳಿಸಲಾಗಿದೆ. ನವಿಲುಗಳಿಗೆ ಕಲ್ಲು ಹೊಡೆಯುವುದು, ಓಡಿಸುವುದು, ಕೀಟಲೆ ಮಾಡುವುದು ಸಂಪೂರ್ಣ ನಿಷಿದ್ಧ. ಗ್ರಾಮದಲ್ಲಿ ಧೂಮಪಾನ, ಮದ್ಯಪಾನ, ತಂಬಾಕು ಬಳಕೆಗೂ ಅವಕಾಶವಿಲ್ಲ. ಅಷ್ಟರ ಮಟ್ಟಿಗೆ ಪರಿಸರ ಸ್ನೇಹಿ ವಾತಾವರಣವನ್ನು ಮೊರಾಚಿ ಚಿಂಚೋಳಿ ಗ್ರಾಮದವರು ಕಾಪಾಡಿಕೊಂಡು ಬಂದಿದ್ದಾರೆ.

ಊರವರನ್ನು ಕಂಡರೆ ವಿಶ್ವಾಸ

ಅಲ್ಲದೇ ನವಿಲುಗಳು ಮನೆಯ ಸಮೀಪ ಇಲ್ಲವೇ ಜಮೀನುಗಳಲ್ಲಿ ಮೊಟ್ಟೆ ಇಡುತ್ತವೆ. ತಮ್ಮ ಮೊಟ್ಟೆ ಗ್ರಾಮದಲ್ಲಿ ರಕ್ಷಣೆ ಸಿಗುತ್ತದೆ ಎನ್ನುವ ವಿಶ್ವಾಸ ನವಿಲುಗಳಿಗೂ ಬಂದಿದೆ. ಅವುಗಳನ್ನು ಸುರಕ್ಷತೆಯಿಂದಲೇ ಊರವರು ಕಾಪಾಡುತ್ತಾರೆ. ಬಹುತೇಕ ಮೊಟ್ಟಗಳು ಮರಿಯಾಗುವಂತೆ ನೋಡಿಕೊಳ್ಳುತ್ತಾರೆ. ಇದರಿಂದ ಗ್ರಾಮದಲ್ಲಿ ನವಿಲುಗಳ ಸಂಖ್ಯೆ ಅಧಿಕವಾಗಿದೆ.

ನವಿಲುಗಳು ಸುಂದರ ಪಕ್ಷಿಗಳು. ಗರಿಬಿಚ್ಚಿ ನರ್ತನ ಮಾಡುವುದನ್ನು ನೋಡುವುದೇ ಚೆಂದ. ನವಿಲುಗಳು ಭಾರತದ ರಾಷ್ಟ್ರಪಕ್ಷಿ ಸ್ಥಾನವನ್ನು ಪಡೆದಿವೆ. ಅಲ್ಲದೇ ಭಾರತೀಯ ಪುರಾಣ ಶಾಸ್ತ್ರದಲ್ಲಿ ನವಿಲುಗಳಿಗೆ ಸ್ಥಾನವಿದೆ. ಇದನ್ನು ಕಾರ್ತಿಕೇಯ ಹಾಗೂ ಸರಸ್ವತಿ ವಾಹನ ಎಂದು ಕರೆಯಲಾಗುತ್ತದೆ. ಕೃಷ್ಣ ಸದಾ ನವಿಲಿನ ಗರಿಯನ್ನು ತನ್ನ ಕಿರೀಟಕ್ಕೆ ಇಟ್ಟುಕೊಳ್ಳುತ್ತಿರುವುದು ಕೂಡ ಗಮನ ಸೆಳೆಯುವಂತದ್ದು.

ತಲೆಮಾರುಗಳೊಂದಿಗೆ ಸಂಬಂಧ

ನನಗೆ ತಿಳಿದ ಹಾಗೆ ಈ ಗ್ರಾಮದಲ್ಲಿ 11 ತಲೆಮಾರಿನಿಂದಲೂ ನವಿಲುಗಳ ನಂಟು ಇರುವ ಮಾಹಿತಿ ಇದೆ. ನಾನೇ ಏಳು ದಶಕದಿಂದ ನವಿಲಿನೊಂದಿಗೆ ಬದುಕಿದ್ದೇನೆ. ಗ್ರಾಮದಲ್ಲಿ ನವಿಲು ಉಳಿಸಿಕೊಳ್ಳಲು ಸಹ ಜೀವನದ ಪರಿಕಲ್ಪನೆಯೊಂದಿಗೆ ಜನರು ಬದುಕುತ್ತಿದ್ದಾರೆ. ನಿಜಕ್ಕೂ ನಮ್ಮ ಊರನ್ನು ನವಿಲಿನ ಗ್ರಾಮ ಎನ್ನಲು ಹೆಮ್ಮೆಯಾಗುತ್ತದೆ. ಇತರೆ ವನ್ಯಜೀವಿಗಳು. ಹಕ್ಕಿಗಳೊಂದಿಗೆ ನವಿಲುಗಳನ್ನು ಉಳಿಸಿಕೊಂಡಿದ್ದೇವೆ ಎಂದು ಗ್ರಾಮದ ಹಿರಿಯರೊಬ್ಬರು ನವಿಲು ನಂಟಿನ ಆಸಕ್ತಿದಾಯಕ ಸಂಗತಿಗಳನ್ನು ಬಿಡಿಸುತ್ತಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.