Sushil Kumar Modi: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅನಾರೋಗ್ಯದಿಂದ ವಿಧಿವಶ; ಗಣ್ಯರ ಕಂಬನಿ
ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, 2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಸುಶೀಲ್ ಕುಮಾರ್ ಮೋದಿ ತಿಳಿಸಿದ್ದರು. ತಮ್ಮ 72ನೇ ವಯಸ್ಸಿನಲ್ಲಿ ಸುಶೀಲ್ ಕುಮಾರ್ ಮೋದಿ ವಿಧಿವಶರಾಗಿದ್ದಾರೆ.

ದೆಹಲಿ: ಭಾರತೀಯ ಜನತಾ ಪಕ್ಷದ (BJP) ನಾಯಕ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ (Sushil Kumar Modi) ಅವರು ಕ್ಯಾನ್ಸರ್ ವಿರುದ್ಧ ದೀರ್ಘಕಾಲದ ಹೋರಾಟದ ನಂತರ ಸೋಮವಾರ (ಮೇ 13) ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಆರು ತಿಂಗಳ ಹಿಂದೆಯೇ ತನಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. 2024 ರ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಅನಾರೋಗ್ಯದ ಬಗ್ಗೆ ಬಹಿರಂಗಪಡಿಸಿದ್ದರು.
ಸುಶೀಲ್ ಕುಮಾರ್ ಮೋದಿ ಅವರ ನಿಧನಕ್ಕೆ ರಾಜಯಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಪಕ್ಷದಲ್ಲಿನ ನನ್ನ ಮೌಲ್ಯಯುತ ಸಹೋದ್ಯೋಗಿ ಮತ್ತು ದಶಕಗಳಿಂದ ನನ್ನ ಸ್ನೇಹಿತರಾಗಿದ್ದ ಸುಶೀಲ್ ಮೋದಿ ಜಿಯವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿಗಳು, ಬಿಹಾರದಲ್ಲಿ ಬಿಜೆಪಿಯ ಬೆಳವಣಿಗೆ ಮತ್ತು ಅದರ ಯಶಸ್ಸಿಗೆ ಸುಶೀಲ್ ಮೋದಿ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿದ ಅವರು ವಿದ್ಯಾರ್ಥಿ ರಾಜಕೀಯದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದರು. ಅವರು ಅತ್ಯಂತ ಶ್ರಮಜೀವಿ ಮತ್ತು ಸ್ನೇಹಪರ ಶಾಸಕರೆಂದೇ ಹೆಸರಾಗಿದ್ದರು. ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರ ತಿಳುವಳಿಕೆ ಬಹಳ ಆಳವಾಗಿತ್ತು. ಆಡಳಿತಾಧಿಕಾರಿಯಾಗಿಯೂ ಸಾಕಷ್ಟು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಜಿಎಸ್‌ಟಿ ಜಾರಿಯಲ್ಲಿ ಅವರ ಸಕ್ರಿಯ ಪಾತ್ರ ಸದಾ ನೆನಪಿನಲ್ಲಿ ಉಳಿಯುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ನನ್ನ ಸಂತಾಪವಿದೆ. ಓಂ ಶಾಂತಿ! ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
72 ವರ್ಷದ ಮೋದಿ ಅವರನ್ನು ಬಿಜೆಪಿ ತನ್ನ ಸ್ಟಾರ್ ಪ್ರಚಾರಕರಲ್ಲಿ ಒಬ್ಬರೆಂದು ಘೋಷಣೆ ಮಾಡಿತ್ತು. ಅಷ್ಟೇ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿಯ ಸದಸ್ಯರಾಗಿ ಮಾಡಲಾಗಿತ್ತು. “ನಾನು ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ. ಈಗ, ಅದರ ಬಗ್ಗೆ ಜನರಿಗೆ ತಿಳಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಲೋಕಸಭಾ ಚುನಾವಣೆಗೆ ನಾನು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ” ಎಂದು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸುಶೀಲ್ ಕುಮಾರ್ ಮೋದಿ ಅವರು ಮಾಹಿತಿ ಹಂಚಿಕೊಂಡಿದ್ದರು.
"ನಾನು ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿದ್ದೇನೆ. ನಾನು ಯಾವಾಗಲೂ ದೇಶ, ಬಿಹಾರ ಮತ್ತು ಪಕ್ಷಕ್ಕೆ ಕೃತಜ್ಞನಾಗಿರುತ್ತೇನೆ ಮತ್ತು ಸಮರ್ಪಿತನಾಗಿರುತ್ತೇನೆ" ಎಂದಿದ್ದರು.
ಮೂರು ದಶಕಗಳ ರಾಜಕೀಯ ಜೀವನದಲ್ಲಿ ಸುಶೀಲ್ ಕುಮಾರ್ ಮೋದಿ ಶಾಸಕರಾಗಿ, ಎಂಎಲ್‌ಸಿಯಾಗಿ, ಲೋಕಸಭಾ ಸದಸ್ಯರಾಗಿ ಹಾಗೂ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದರು. ಅವರು 2005 ರಿಂದ 2013 ರವರೆಗೆ ಹಾಗೂ 2017 ರಿಂದ 2020 ರವರೆಗೆ ಎರಡು ಬಾರಿ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದರು. ಪಾಟ್ನಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮೋದಿ ಅವರ ರಾಜಕೀಯ ವೃತ್ತಿಜೀವನ ಪ್ರಾರಂಭವಾಯಿತು. ಅವರು 1973 ರಲ್ಲಿ ಅದರ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾದರು.
ಸುಶೀಲ್ ಕುಮಾರ್ ಮೋದಿ ಅವರು 1990 ರಲ್ಲಿ ಪಾಟ್ನಾ ಸೆಂಟ್ರಲ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1996 ರಿಂದ 2004 ರವರೆಗೆ ಅವರು ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 2004ರಲ್ಲಿ ಭಾಗಲ್ಪುರದಿಂದ ಲೋಕಸಭಾ ಸದಸ್ಯರಾದರು. 2005 ರಲ್ಲಿ, ಅವರು ತಮ್ಮ ಲೋಕಸಭಾ ಸದಸ್ಯತ್ವವನ್ನು ತ್ಯಜಿಸಿ ವಿಧಾನ ಪರಿಷತ್ ಸದಸ್ಯರಾದರು. ಎನ್‌ಡಿಎ ಜೊತೆಗೆ ಜೆಡಿಯು ಮೈತ್ರಿ ಮಾಡಿಕೊಂಡಾಗ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಸುಶೀಲ್ ಕುಮಾರ್ ಸ್ಥಾನ ಪಡೆದಿದ್ದರು. ಇವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಸುಶೀಲ್ ಮೋದಿ 2020 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2024ರ ಆರಂಭದಲ್ಲಿ ಇವರ ಅವಧಿ ಮುಕ್ತಾಯವಾಗಿತ್ತು. ನಿವೃತ್ತರಾದರು.

ವಿಭಾಗ