Booster Dose: ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಉಚಿತ ಕೋವಿಡ್​ ಬೂಸ್ಟರ್ ಡೋಸ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Booster Dose: ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಉಚಿತ ಕೋವಿಡ್​ ಬೂಸ್ಟರ್ ಡೋಸ್

Booster Dose: ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಉಚಿತ ಕೋವಿಡ್​ ಬೂಸ್ಟರ್ ಡೋಸ್

ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಎಲ್ಲಾ ವಯಸ್ಕರಿಗೆ ಉಚಿತ ಕೋವಿಡ್​ ಬೂಸ್ಟರ್ ಡೋಸ್ ವಿತರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

<p>ಸಾಂದರ್ಭಿಕ ಚಿತ್ರ</p>
ಸಾಂದರ್ಭಿಕ ಚಿತ್ರ

ನವದೆಹಲಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಎಲ್ಲಾ ವಯಸ್ಕರಿಗೆ ಉಚಿತ ಕೋವಿಡ್​ ಬೂಸ್ಟರ್ ಡೋಸ್ ವಿತರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಕೊರೊನಾ ಲಸಿಕೆಯ ಎರಡನೇ ಡೋಸ್​ ಪಡೆದ ಆರು ತಿಂಗಳ ಬಳಿಕ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳಬಹುದಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್​ ಠಾಕೂರ್, "ಭಾರತವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದೆ. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಜುಲೈ 15, 2022 ರಿಂದ ಮುಂದಿನ 75 ದಿನಗಳವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಬೂಸ್ಟರ್ ಡೋಸ್‌ಗಳನ್ನು ಉಚಿತವಾಗಿ ನೀಡಲು ಎಂದು ನಿರ್ಧರಿಸಲಾಗಿದೆ. ಈ ಸೌಲಭ್ಯವು ಎಲ್ಲಾ ಸರ್ಕಾರಿ ಕೇಂದ್ರಗಳಲ್ಲಿ ಲಭ್ಯವಿರುತ್ತದೆ" ಎಂದು ತಿಳಿಸಿದ್ದಾರೆ.

ಇಡೀ ಪ್ರಪಂಚವನ್ನೇ ಸಂಕಷ್ಟಕ್ಕೆ ದೂಡಿದ್ದ ಮಹಾಮಾರಿ ಕೊರೊನಾಗೆ ಭಾರತದಲ್ಲೇ ಲಸಿಕೆಗಳು ಸಿದ್ಧವಾಗಿದ್ದವು. ಮೇಡ್​ ಇನ್​ ಇಂಡಿಯಾ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಅನ್ನು ಜನರಿಗೆ ನೀಡಲು ನಿರ್ಧರಿಸಲಾಯಿತು. 2021ರ ಜನವರಿ 16 ರಂದು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್​ ಅಭಿಯಾನಕ್ಕೆ ಭಾರತದಲ್ಲಿ ಚಾಲನೆ ನೀಡಲಾಯಿತು.

ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಕೋವಿಡ್​ ವಿರುದ್ಧದ ಮುಂಚೂಣಿ ಕಾರ್ಮಿಕರು, 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿತ್ತು. ಬಳಿಕ ಒಂದೊಂದೇ ಹಂತದಲ್ಲಿ ಲಸಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗಲಾಗಿದ್ದು, 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕಲಾಯಿತು. ಹಳ್ಳಿ ಹಳ್ಳಿಗೂ ಆರೋಗ್ಯ ಸಿಬ್ಬಂದಿ ಹೋಗಿ ಲಸಿಕೆ ಹಾಕಿದ್ದರು.

2022ರ ಮಾರ್ಚ್​ 16 ರಂದು 12 ರಿಂದ 14 ವರ್ಷದ ಮಕ್ಕಳಿಗೂ ವ್ಯಾಕ್ಸಿನ್​ ನೀಡಲು ಆರಂಭಿಸಲಾಯಿತು. ಹಾಗೆಯೇ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್​ ಡೋಸ್​ ಅನ್ನೂ ನೀಡುತ್ತಾ ಬರಲಾಗಿತ್ತು. 2021ರ ಜನವರಿ 16 ರಿಂದ ಇಲ್ಲಿಯವರೆಗೆ ಒಟ್ಟು 1,99,12,79,010 (199.12 ಕೋಟಿ) ಡೋಸ್​ ವ್ಯಾಕ್ಸಿನ್​ ಅನ್ನು ವಿತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 11,15,068 ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.