ಅಜ್ಜ ಚಂಬಲ್ ಡಕಾಯಿತನೆಂಬ ಕೌಟುಂಬಿಕ ಹಿನ್ನೆಲೆ, ಮೊಮ್ಮಗ 88 ಲಕ್ಷ ರೂ ಪ್ಯಾಕೇಜ್ ಉದ್ಯೋಗ ಬಿಟ್ಟು ಕೊನೆಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಗೆದ್ದ
ಯುಪಿಎಸ್‌ಸಿ ಯಶೋಗಾಥೆ: ಯುಪಿಎಸ್‌ಸಿ ಪರೀಕ್ಷೆಗೆ ಮನೆಯಲ್ಲೇ ಕುಳಿತು ಓದಿ, ಮನೆಯವರಿಗೂ ಸಮಯ ಕೊಟ್ಟು, ಕೋಚಿಂಗ್ ಪಡೆಯದೇ ಉತ್ತೀರ್ಣರಾಗುವುದು ಕಷ್ಟವೇ. ಆದರೆ, ಅದನ್ನು ದೇವ್ ಪ್ರಭಾಕರ್ ಸಿಂಗ್ ತೋಮರ್ ಮಾಡಿ ತೋರಿಸಿದ್ದಾರೆ. ಅಜ್ಜ ಚಂಬಲ್ ಡಕಾಯಿತನೆಂಬ ಕುಖ್ಯಾತಿಯ ಇತಿಹಾಸ, 88 ಲಕ್ಷ ರೂ ಪ್ಯಾಕೇಜ್ ಉದ್ಯೋಗ ಬಿಟ್ಟು ಮಾಡಿದ ಸಾಧನೆಯ ವಿವರ ಇಲ್ಲಿದೆ.

ಯುಪಿಎಸ್‌ಸಿ ಯಶೋಗಾಥೆ: ಕೇಂದ್ರೀಯ ಲೋಕಸೇವಾ ಆಯೋಗ ಇತ್ತೀಚೆಗೆ ಪ್ರಕಟಿಸಿದ ನಾಗರಿಕ ಸೇವಾ ಪರೀಕ್ಷೆ 2024ರ ಫಲಿತಾಂಶದಲ್ಲಿ ಗ್ವಾಲಿಯರ್ ನಿವಾಸಿ ದೇವ್ ಪ್ರಭಾಕರ್ ಸಿಂಗ್ ತೋಮರ್ ಅಖಿಲ ಭಾರತ ಮಟ್ಟದಲ್ಲಿ 629ನೇ ರ‍್ಯಾಂಕ್ ಗಳಿಸಿದ್ದಾರೆ. ಅಷ್ಟೇ ಆಗಿದ್ದರೆ ವಿಶೇಷ ಅಂತ ಅನ್ನಿಸ್ತಿರಲಿಲ್ಲ. ಆದರೆ ದೇವ್ ಪ್ರಭಾಕರ್ ಸಿಂಗ್ ಥೋಮರ್ ಅವರ ಕೌಟುಂಬಿಕ ಹಿನ್ನೆಲೆ, ಅವರ ಕಲಿಕೆ ಮತ್ತು ವೃತ್ತಿಯ ಹಿನ್ನೆಲೆ ತುಸು ಗಮನಸೆಳೆಯುವಂಥದ್ದು. ಹೌದು, ದೇವ್ ಪ್ರಭಾಕರ್ ಸಿಂಗ್ ಅವರ ಅಜ್ಜ ರಾಮಗೋವಿಂದ ಸಿಂಗ್ ತೋಮರ್ ಚಂಬಲ್‌ನ ಕುಖ್ಯಾತ ಡಕಾಯಿತರಾಗಿದ್ದರು. ಆದರೆ ದೇವ್ ಅವರ ತಂದೆ ಬಲವೀರ್ ಸಿಂಗ್ ತೋಮರ್ ಶಿಕ್ಷಣ ಪಡೆದು ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿ ತಮ್ಮ ಬದುಕಿನ ಪಥ ಬದಲಾಯಿಸಿಕೊಂಡಿದ್ದರು. ಈಗ ದೇವ್ ಪ್ರಭಾಕರ್ ಸಿಂಗ್ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಂತಿಮ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ.
88 ಲಕ್ಷ ರೂ ಪ್ಯಾಕೇಜ್ ಉದ್ಯೋಗ ಬಿಟ್ಟು ಕೊನೆಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಗೆದ್ದ ದೇವ್ ತೋಮರ್
ದೇವ್ ಪ್ರಭಾಕರ್ ಸಿಂಗ್ ತೋಮರ್ ಐಐಟಿ ರೋಪಾರ್‌ನಲ್ಲಿ ವ್ಯಾಸಂಗ ಮುಗಿಸಿ ಮೆಡಿಕಲ್ ಸಿಗ್ನಲ್ ಟೆಲಿಮೆಟ್ರಿಯಲ್ಲಿ ಪರಿಣತಿ ಪಡೆದು ಫಿಲಿಪ್ಸ್ ಕಂಪನಿಯಲ್ಲಿ ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿದ್ದರು. ಅವರು ನೆದರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ವರ್ಷಕ್ಕೆ 88 ಲಕ್ಷ ರೂಪಾಯಿ ವೇತನ ಪ್ಯಾಕೇಜ್ ಇತ್ತು. ಅದನ್ನೆಲ್ಲ ಬಿಟ್ಟು ಯುಪಿಎಸ್‌ಸಿ ಬರೆದು ಕೇಂದ್ರ ಸರ್ಕಾರದ ಸೇವೆಗೆ ಸೇರಬೇಕು ಎಂದು 2019ರಲ್ಲಿ ಕೆಲಸ ಬಿಟ್ಟು ಬಂದರು.
ದೇವ್ ಪ್ರಭಾಕರ್ ಸಿಂಗ್ ತೋಮರ್ ಅವರ ಅಜ್ಜ ರಾಮ್ ಗೋವಿಂದ್ ಸಿಂಗ್ ತೋಮರ್ ಒಂದು ಕಾಲದಲ್ಲಿ ಚಂಬಲ್‌ನ ಡಕಾಯಿತರಾಗಿದ್ದರು. ಆದರೆ, ಅವರ ಮಗನಾಗಿದ್ದ ಬಲವೀರ್ ಸಿಂಗ್ ತೋಮರ್ ಶಿಕ್ಷಣ ಪಡೆದು, ಸಂಸ್ಕೃತದಲ್ಲಿ ಪಿಎಚ್‌ಡಿ ಮಾಡಿ ಶಾಲಾ ಪ್ರಾಂಶುಪಾಲರಾದರು. ತಂದೆಯ ಪ್ರೇರಣೆ ಪಡೆದ ದೇವ್ ಪ್ರಭಾಕರ ಸಿಂಗ್ ತೋಮರ್, ಕಲಿಕೆಯ ಕಡೆಗೆ ಗಮನಹರಿಸಿ ತನ್ನೆಲ್ಲ ಯಶಸ್ಸಿಗೆ ಅಪ್ಪ, ಅಮ್ಮ, ಪತ್ನಿ ಅವರ ತ್ಯಾಗವೇ ಕಾರಣ ಎಂದು ಹೇಳಿದ್ದಾರೆ.
ಮನೆಯಲ್ಲೇ ಇದ್ದು ಓದಿ, ಕೊನೆಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸಾದೆ- ದೇವ್
ಬಹಳಷ್ಟು ಯುಪಿಎಸ್‌ಸಿ ಆಕಾಂಕ್ಷಿಗಳು ಪರೀಕ್ಷೆಗಾಗಿ ತರಬೇತಿ ಪಡೆಯಲು ಕೋಚಿಂಗ್ ಸೆಂಟರ್ ಸೇರುತ್ತಾರೆ. ಆದರೆ ದೇವ್ ಹಾಗಲ್ಲ. ಸತತ ಪ್ರಯತ್ನ ಮಾಡಿ, ಮನೆಯಲ್ಲೇ ಇದ್ದುಕೊಂಡು ಓದು ಮತ್ತು ಜೀವನದ ನಡುವೆ ಸಮತೋಲನ ಕಂಡುಕೊಂಡು ಕೊನೆಯ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ದೇವ್ ಪ್ರಭಾಕರ್ ಸಿಂಗ್ ತೋಮರ್, 2019ರಿಂದ ಯುಪಿಎಸ್‌ಸಿ ಪ್ರಯತ್ನಿಸುತ್ತಿದ್ದೇನೆ. ಫೇಲ್ ಆಗಿದ್ದೇನೆ. ಸೋಲಿನ ಅನುಭವ ಪಾಠ ಕಲಿಸಿತು. ಈ ವರ್ಷದ್ದು ಕೊನೆಯ ಪ್ರಯತ್ನವಾಗಿತ್ತು. ಫಲ ಭಗವಂತನ ಇಚ್ಛೆ ಎಂದು ಗಮನ ಕೇಂದ್ರೀಕರಿಸಿ, ಸಮಯ ಪಾಲನೆ ಮಾಡಿಕೊಂಡು ಓದು ಮುಂದುವರಿಸಿದ್ದೆ. ಪತ್ನಿ, ಅಪ್ಪ, ಅಮ್ಮ ಎಲ್ಲರೂ ಬಹಳಷ್ಟು ಸಹಕಾರ ನೀಡಿದ್ದಾರೆ. ಓದಿನ ನಡುವೆ ಸ್ವಲ್ಪ ಮನರಂಜನೆ, ಮನೆಯವರೊಂದಿಗೂ ಸಮಯ ಕಳೆದಿದ್ದೇನೆ. ಓದಿಗೆ ಮೀಸಲಿಟ್ಟ ಸಮಯದ ಮೇಲೆ ಹೆಚ್ಚು ಗಮನಹರಿಸಿದ್ದೆ. ಕೋಚಿಂಗ್ ಪಡೆಯಲು ಹೋಗಿಲ್ಲ. ಬೇರೆ ಪರೀಕ್ಷಾರ್ಥಿಗಳಿಗೆ ತನ್ನ ಹಳೆಯ ಪ್ರಯತ್ನದ ಅನುಭವವನ್ನು ಹೇಳಿಕೊಡುವ ಕೆಲಸವನ್ನೂ ಮಾಡಿದ್ದೇನೆ. ಮೊದಲ ಎರಡು ವರ್ಷದ ಸಿದ್ಧತೆಗೆ ತನ್ನ ಉಳಿತಾಯದ ಹಣ ಕರಗಿತು. ಬಳಿಕ ಅಪ್ಪ ಅವರ ಉಳಿತಾಯ ಕೊಟ್ಟರು. ಪತ್ನಿ ಕೂಡ ಕೆಲಸಕ್ಕೆ ಹೋಗಲಾರಂಭಿಸಿದರು. ಹೀಗೆ ಕುಟುಂಬ ಸದಸ್ಯರು ಬೆನ್ನಿಗೆ ನಿಂತರು ಎಂದು ಹೇಳಿದ್ದಾರೆ. ಅಂದ ಹಾಗೆ ದೇವ್ ಪ್ರಭಾಕರ್ ಸಿಂಗ್ ಮತ್ತು ಸ್ವರ್ಣಿಕಾ ದಂಪತಿಗೆ ಪುಟ್ಟ ಮಗುವೂ ಇದೆ. ಸ್ವರ್ಣಿಮಾ ಬಿ2ಬಿ ಸೇಲ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೆ ದೇವ್ ಅವರ ಯುಪಿಎಸ್‌ಸಿ ಕನಸು ಕೊನೆಯ ಪ್ರಯತ್ನದಲ್ಲಿ ನನಸಾಗಿದೆ.


