Russia-Ukraine War: ಅಣ್ವಸ್ತ್ರ ಹೊರತಗೆದರೆ ಪರಿಣಾಮ ಎದುರಿಸಬೇಕಾಗುತ್ತದೆ: ಪುಟಿನ್‌ಗೆ ಜಿ-7 ರಾಷ್ಟ್ರಗಳ ಎಚ್ಚರಿಕೆ!
ಉಕ್ರೇನ್ ಮೇಲೆ ಪರಮಾಣು ಶಸ್ತ್ರಗಳನ್ನು ಬಳಸಲು ಮುಂದಾದರೆ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿ-7 ರಾಷ್ಟ್ರಗಳ ಒಕ್ಕೂಟವೂ ರಷ್ಯಾವನ್ನು ಎಚ್ಚರಿಸಿವೆ. ಅಮೆರಿಕ, ಬ್ರಿಟನ್, ಜರ್ಮನಿ, ಇಟಲಿ, ಕೆನಡಾ, ಫ್ರಾನ್ಸ್ ಹಾಗೂ ಜಪಾನ್ ದೇಶಗಳನ್ನು ಒಳಗೊಂಡ ಜಿ-7 ರಾಷ್ಟ್ರಗಳ ಒಕ್ಕೂಟ, ರಷ್ಯಾದ ಯುದ್ಧೋನ್ಮಾದವನ್ನು ಕಟುವಾಗಿ ಟೀಕಿಸಿವೆ.
ಮಾಸ್ಕೋ: ಉಕ್ರೇನ್ ಮೇಲೆ ಪರಮಾಣು ಶಸ್ತ್ರಗಳನ್ನು ಬಳಸಲು ಮುಂದಾದರೆ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿ-7 ರಾಷ್ಟ್ರಗಳ ಒಕ್ಕೂಟವೂ ರಷ್ಯಾವನ್ನು ಎಚ್ಚರಿಸಿವೆ. ಉಕ್ರೇನ್ ಮೇಲೆ ದೊಡ್ಡ ಪ್ರಮಾಣದಲ್ಲಿ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಜಿ-7 ರಾಷ್ಟ್ರಗಳ ಒಕ್ಕೂಟದಿಂದ ಈ ಎಚ್ಚರಿಕೆ ಹೊರಬಿದ್ದಿರುವುದು ಗಮನ ಸೆಳೆದಿದೆ.
ಅಮೆರಿಕ, ಬ್ರಿಟನ್, ಜರ್ಮನಿ, ಇಟಲಿ, ಕೆನಡಾ, ಫ್ರಾನ್ಸ್ ಹಾಗೂ ಜಪಾನ್ ದೇಶಗಳನ್ನು ಒಳಗೊಂಡ ಜಿ-7 ರಾಷ್ಟ್ರಗಳ ಒಕ್ಕೂಟ, ವಾಷಿಂಗ್ಟನ್‌ನಲ್ಲಿ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ರಷ್ಯಾದ ಯುದ್ಧೋನ್ಮಾದವನ್ನು ಕಟುವಾಗಿ ಟೀಕಿಸಿವೆ.
ಉಕ್ರೇನ್ ಮೇಲಿನ ಸರಣಿ ಕ್ಷಿಪಣಿ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಜಿ-7 ರಾಷ್ಟ್ರಗಳ ಒಕ್ಕೂಟ, ಒಂದು ವೇಳೆ ಅಣ್ವಸ್ತ್ರಗಳ ಬಳಕೆಗೆ ಮುಂದಾದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ನೇರವಗಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
ರಷ್ಯಾ ದೇಶವು ಉಕ್ರೇನ್ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅಣ್ವಸ್ತ್ರ ಸೇರಿದಂತೆ ಯಾವುದೇ ಸಮೂಹ ನಾಶಕ ಶಸ್ತ್ರಾಸ್ತ್ರಗಳನ್ನು ದುರ್ಬಳಕೆ ಮಾಡಿಕೊಂಡರೆ, ರಷ್ಯಾ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ರಷ್ಯಾದ ಬೇಜವಾಬ್ದಾರಿ ನಡೆಯಿಂದ ಜಾಗತಿಕ ಶಾಂತಿ ಹಾಗೂ ಭದ್ರತೆಗೆ ಅಪಾಯ ಎದುರಾಗಿದೆ ಎಂದು ಜಿ - 7 ರಾಷ್ಟ್ರಗಳು ತೀವ್ರ ವಾಗ್ದಾಳಿ ನಡೆಸಿವೆ.
ರಷ್ಯಾ ದೇಶವು ರಾಸಾಯನಿಕ, ಜೈವಿಕ ಅಥವಾ ಪರಮಾಣು ಶಸ್ತ್ರಾಸ್ತ್ರಗಳನ್ನು ಈ ಯುದ್ಧದಲ್ಲಿ ಬಳಸುವ ಸಾಧ್ಯತೆ ಇದೆ ಪುಟಿನ್ ಈಗಾಗಲೇ ಈ ಕುರಿತು ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ನಿಜಕ್ಕೂ ರಷ್ಯಾ ಅಣ್ವಸ್ತ್ರ ಬಳಸುವ ನಿರ್ಧಾರ ಮಾಡಿದರೆ, ತೀವ್ರ ಸ್ವರೂಪದ ಪರಿಣಾಮಗಳು ಕಾದಿವೆ ಎಂದು ಜಿ - 7 ರಾಷ್ಟ್ರಗಳ ಒಕ್ಕೂಟ ಎಚ್ಚರಿಸಿದೆ.
ರಷ್ಯಾ ಹಾಗೂ ಕ್ರಿಮಿಯಾ ನಡುವಿನ ಇದ್ದ 19 ಕಿ.ಮೀ. ಉದ್ದದ ರೈಲು ಹಾಗೂ ರಸ್ತೆ ಸೇತುವೆ ಸ್ಫೋಟದ ಬಳಿಕ, ಉಕ್ರೇನ್ ನಗರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಸರಣಿ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು. ಅಲ್ಲದೇ ಪ್ರತೀಕಾರದ ದಾಳಿಗಳು ಮುಂದುವರೆಯಲಿವೆ ಎಂದೂ ರಷ್ಯಾ ಎಚ್ಚರಿಕೆಯ ಸಂದೇಶ ರವಾನಿಸಿತ್ತು.
ಈ ದಾಳಿಗಳ ಬೆನ್ನಲ್ಲೇ ಜಿ -7 ರಾಷ್ಟ್ರಗಳ ಒಕ್ಕೂಟದ ನಾಯಕರು, ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಉಕ್ರೇನ್‌ಗೆ ಎಲ್ಲಾ ಅಗತ್ಯ ನೆರವು ಒದಗಿಸುವುದಾಗಿಯೂ, ಜಿ -7 ರಾಷ್ಟ್ರಗಳ ಒಕ್ಕೂಟ ಝೆಲೆನ್ಸ್ಕಿ ಅವರಿಗೆ ಭರವಸೆ ನೀಡಿದೆ.
ಇದೇ ವೇಳೆ ಕ್ರಿಮಿಯಾ ಸೇರಿದಂತೆ ಉಕ್ರೇನ್‌ನ ಭಾಗವಾಗಿದ್ದ ಒಟ್ಟು 4 ಪ್ರಾಂತ್ಯಗಳನ್ನು, ರಷ್ಯಾ ಜೊತೆಗೆ ಸೇರಿಸಿಕೊಂಡ ಪುಟಿನ್ ನಡೆಯನ್ನೂ ಜಿ -7 ರಾಷ್ಟ್ರಗಳ ಒಕ್ಕೂಟ ಖಂಡಿಸಿದೆ. ರಷ್ಯಾದ ನಡೆಯು ವಿಶ್ವ ಸಂಸ್ಥೆಯ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಜಿ -7 ರಾಷ್ಟ್ರಗಳ ಒಕ್ಕೂಟ ಚಾಟಿ ಬೀಸಿದೆ.
ರಷ್ಯಾದ ಆಕ್ರಮಣಕಾರಿ ನಡೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಧ್ವನಿ ಎತ್ತಬೇಕಿದೆ. ರಷ್ಯಾದ ನಿರ್ಧಾರ ಅಂತಾರಾಷ್ಟ್ರೀಯ ಗಡಿ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ರಷ್ಯಾ ಬೇಷರತ್ತಾಗಿ ತನ್ನ ಸೇನೆಯನ್ನು ಉಕ್ರೇನ್ ಗಡಿಯಿಂದ ವಾಪಸ್ ಕರೆಸಿಕೊಳ್ಳಬೇಕು ಎಂದು ಜಿ -7 ರಾಷ್ಟ್ರಗಳ ಒಕ್ಕೂಟ ಆಗ್ರಹಿಸಿದೆ.
ರಷ್ಯಾಗೆ ಈಗಾಗಲೇ ಆರ್ಥಿಕ ದಿಗ್ಬಂಧನ ವಿಧಿಸಿರುವ ಐರೋಪ್ಯ ರಾಷ್ಟ್ರಗಳು, ತಮ್ಮ ಈ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸುವುದಾಗಿ ಎಚ್ಚರಿಸಿವೆ. ಅಲ್ಲದೇ ರಷ್ಯಾಗೆ ನೀಡುವ ರಾಷ್ಟ್ರಗಳ ಮೇಲೂ ಆರ್ಥಿಕ ದಿಗ್ಬಂಧನ ಹೇರುವುದಾಗಿ ಸ್ಪಷ್ಟಪಡಿಸಿವೆ.
ವಿಭಾಗ