ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  G7 Summit 2024: ಜಿ7 ಶೃಂಗದಲ್ಲಿ ಮೋದಿ: ತಂತ್ರಜ್ಞಾನ, ಎಐ, ಮತ್ತು ಜಾಗತಿಕ ಸಹಕಾರದತ್ತ ಭಾರತದ ಹಾದಿ

G7 Summit 2024: ಜಿ7 ಶೃಂಗದಲ್ಲಿ ಮೋದಿ: ತಂತ್ರಜ್ಞಾನ, ಎಐ, ಮತ್ತು ಜಾಗತಿಕ ಸಹಕಾರದತ್ತ ಭಾರತದ ಹಾದಿ

ಭಾರತ ಜಿ7 ಸದಸ್ಯನಲ್ಲದಿದ್ದರೂ, ಭಾರತಕ್ಕೆ ಶೃಂಗಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಲು (ಔಟ್‌ರೀಚ್ ಕಂಟ್ರಿ) ಆಹ್ವಾನ ನೀಡಲಾಗಿತ್ತು. ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಜೂನ್ 14ರಂದು ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದರು. (ಬರಹ: ಗಿರೀಶ್‌ ಲಿಂಗಣ್ಣ)

G7 Summit 2024: ಜಿ7 ಶೃಂಗದಲ್ಲಿ ಮೋದಿ: ತಂತ್ರಜ್ಞಾನ, ಎಐ, ಮತ್ತು ಜಾಗತಿಕ ಸಹಕಾರದತ್ತ ಭಾರತದ ಹಾದಿ
G7 Summit 2024: ಜಿ7 ಶೃಂಗದಲ್ಲಿ ಮೋದಿ: ತಂತ್ರಜ್ಞಾನ, ಎಐ, ಮತ್ತು ಜಾಗತಿಕ ಸಹಕಾರದತ್ತ ಭಾರತದ ಹಾದಿ

G7 Summit 2024: ಈ ವರ್ಷದ ಆರಂಭದಲ್ಲಿ ಗ್ರೂಪ್ ಆಫ್ 7 (ಜಿ7) ರಾಷ್ಟ್ರಗಳ ಗುಂಪಿನ ಅಧ್ಯಕ್ಷತೆಯನ್ನು ಇಟಲಿ ವಹಿಸಿಕೊಂಡಿತು. ಆ ಬಳಿಕ, ಜೂನ್ 13ರಿಂದ 15ರ ತನಕ ಜಿ7 ರಾಷ್ಟ್ರಗಳ ನಾಯಕರ ಶೃಂಗಸಭೆಯನ್ನು ಇಟಲಿಯ ಅಪುಲಿಯಾ ಪ್ರಾಂತ್ಯದಲ್ಲಿ ಆಯೋಜಿಸಲಾಯಿತು.

ಜಿ7 ಸದಸ್ಯರಾದ ಇಟಲಿ, ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್, ಯುನೈಟೆಡ್ ಕಿಂಗ್‌ಡಮ್, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಐರೋಪ್ಯ ಒಕ್ಕೂಟಗಳು ವಿವಿಧ ರೀತಿಯ ಸಂಕೀರ್ಣ ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಶೃಂಗಸಭೆ ಆಯೋಜನೆಗೊಂಡಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಭಾರತ ಜಿ7 ಸದಸ್ಯನಲ್ಲದಿದ್ದರೂ, ಭಾರತಕ್ಕೆ ಶೃಂಗಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಲು (ಔಟ್‌ರೀಚ್ ಕಂಟ್ರಿ) ಆಹ್ವಾನ ನೀಡಲಾಗಿತ್ತು. ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಜೂನ್ 14ರಂದು ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದರು. ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಇದು ನರೇಂದ್ರ ಮೋದಿಯವರ ಮೊದಲ ವಿದೇಶ ಪ್ರವಾಸವಾಗಿದೆ.

ಜಿ7 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಪ್ರಜಾಪ್ರಭುತ್ವ, ತಂತ್ರಜ್ಞಾನದ ಅಭಿವೃದ್ಧಿ, ಹಸಿರು ಇಂಧನ ಬಳಕೆಯ ಗುರಿ, ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಬೆಂಬಲ ನೀಡುವ ವಿಚಾರಗಳಲ್ಲಿ ಭಾರತದ ಯಶಸ್ಸನ್ನು ಪ್ರಸ್ತಾಪಿಸಿದರು.

ಟ್ರೆಂಡಿಂಗ್​ ಸುದ್ದಿ

ತನ್ನ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಪ್ರಮುಖ ವಲಯಗಳಲ್ಲಿ ಭಾರತದ ಸಾಧನೆಗಳನ್ನು ವಿವರಿಸಿದರು. ಅತ್ಯಂತ ಬೃಹತ್ತಾದ, ಪಾರದರ್ಶಕವಾದ, ಪ್ರಜಾಪ್ರಭುತ್ವವಾದಿ ಚುನಾವಣೆಯನ್ನು ಆಯೋಜಿಸುವಲ್ಲಿ ಭಾರತದ ಯಶಸ್ಸನ್ನು ಮೋದಿ ಜಗತ್ತಿಗೆ ತಿಳಿಸಿದರು. ಮೋದಿಯವರು ತಂತ್ರಜ್ಞಾನವನ್ನು ಎಲ್ಲರಿಗೂ ಲಭ್ಯವಾಗಿಸುವ ಅವಶ್ಯಕತೆಯನ್ನು ಪ್ರತಿಪಾದಿಸಿದರು. ಕೃತಕ ಬುದ್ಧಿಮತ್ತೆಯ (ಎಐ) ಬಳಕೆಗೆ ಕ್ರಿಯಾಶೀಲ ಕ್ರಮಗಳು, ಸುಸ್ಥಿರ ಇಂಧನ ಗುರಿಗಳು, ಮತ್ತು ಗ್ಲೋಬಲ್ ಸೌತ್, ಅದರಲ್ಲೂ ಆಫ್ರಿಕಾದ ಅಭಿವೃದ್ಧಿಗೆ ಬೆಂಬಲ ನೀಡುವ ವಿಚಾರಗಳನ್ನು ಚರ್ಚಿಸಿದರು.

ಭಾರತ ಸಮಾಜದ ಎಲ್ಲ ಅಂಗಗಳನ್ನೂ ಒಳಗೊಂಡಂತೆ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿ ಹೊಂದಿದೆ ಎಂದು ಮೋದಿ ಹೇಳಿದರು.

ಮೋದಿಯವರ ಭಾಷಣದ ಪ್ರಮುಖ ಅಂಶಗಳು

ಎಲ್ಲರಿಗೂ ತಂತ್ರಜ್ಞಾನದ ಲಭ್ಯತೆ: ಪ್ರಧಾನಿ ನರೇಂದ್ರ ಮೋದಿಯವರು ಆಧುನಿಕ ಜೀವನದಲ್ಲಿ ತಂತ್ರಜ್ಞಾನದ ಪಾತ್ರವನ್ನು ವಿವರಿಸಿದರು. ಅವರು ಬಾಹ್ಯಾಕಾಶ ಅನ್ವೇಷಣೆ, ಸೈಬರ್ ಭದ್ರತೆಯಂತಹ ವಿಚಾರಗಳ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದರು. ಸಾಮಾಜಿಕ ಅಸಮಾನತೆಗಳನ್ನು ನಿವಾರಿಸಲು ಮತ್ತು ಮಾನವ ಸಾಮರ್ಥ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗಬೇಕು ಎಂದು ಮೋದಿ ಕರೆ ನೀಡಿದರು.

"ತಂತ್ರಜ್ಞಾನದ ಪ್ರಯೋಜನ ಎಲ್ಲರಿಗೂ ಲಭಿಸುತ್ತದೆ ಎನ್ನುವುದನ್ನು ನಾವು ಖಾತ್ರಿಪಡಿಸಬೇಕು. ತಂತ್ರಜ್ಞಾನ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ನೆರವಾಗಿ, ಸಾಮಾಜಿಕ ಅಸಮಾನತೆಯನ್ನು ನಿವಾರಿಸಬೇಕು. ಇದು ಕೇವಲ ನಮ್ಮ ಗುರಿ ಮಾತ್ರವಲ್ಲದೆ, ಜವಾಬ್ದಾರಿಯೂ ಹೌದು" ಎಂದು ಮೋದಿ ಹೇಳಿದ್ದಾರೆ.

ತಂತ್ರಜ್ಞಾನ ಕೇವಲ ಏಕಸ್ವಾಮ್ಯವಾಗಿರದೆ, ಎಲ್ಲರಿಗೂ ಲಭಿಸುವಂತಾಗುವುದು ಅವಶ್ಯಕವಾಗಿದೆ ಎಂದು ಮೋದಿ ಕರೆ ನೀಡಿದರು. ತಂತ್ರಜ್ಞಾನವನ್ನು ವಿನಾಶದ ಉದ್ದೇಶಗಳ ಬದಲಾಗಿ, ಸೃಜನಾತ್ಮಕ ಉದ್ದೇಶಗಳಿಗೆ ಬಳಸಬೇಕು ಎಂದು ಅವರು ವಿವರಿಸಿದರು. "ತಂತ್ರಜ್ಞಾನ ಏಕಸ್ವಾಮ್ಯದ ಸೊತ್ತಾಗಿರದೆ, ಎಲ್ಲರಿಗೂ ನೆರವಾಗುವಂತಾಗಬೇಕು. ತಂತ್ರಜ್ಞಾನ ಸಮಾಜದ ಕ್ರಿಯಾಶೀಲತೆಯನ್ನು ಉತ್ತೇಜಿಸಬೇಕೇ ಹೊರತು ವಿನಾಶಕಾರಿ ಮನಸ್ಥಿತಿಯನ್ನಲ್ಲ. ಇಂತಹ ಕ್ರಮಗಳ ಮೂಲಕ ನಾವು ಎಲ್ಲರನ್ನೂ ಒಳಗೊಂಡ ಸಮಾಜವನ್ನು ನಿರ್ಮಿಸಲು ಸಾಧ್ಯ" ಎಂದು ಮೋದಿ ವಿವರಿಸಿದರು.

ಎಐ ಕುರಿತು ಭಾರತದ ದೃಷ್ಟಿಕೋನ

ಪ್ರಧಾನಿ ಮೋದಿ ತನ್ನ ಭಾಷಣದಲ್ಲಿ ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ - ಎಐ) ಕ್ಷೇತ್ರದಲ್ಲಿ ಭಾರತದ ಸಕ್ರಿಯ ಪಾತ್ರವನ್ನು ವಿವರಿಸಿದರು. ಅವರು ಎಐ ಮತ್ತು ಎಐ ಮಿಷನ್ ಕುರಿತ ರಾಷ್ಟ್ರೀಯ ಕಾರ್ಯತಂತ್ರದ ಸ್ಥಾಪನೆಯನ್ನು ಘೋಷಿಸಿ, 'ಎಲ್ಲರಿಗೂ ಎಐ' (ಎಐ ಫಾರ್ ಆಲ್) ಘೋಷಣೆಗೆ ಒತ್ತು ನೀಡಿದರು.

ಗ್ಲೋಬಲ್ ಪಾರ್ಟ್‌ನರ್‌ಶಿಪ್ ಫಾರ್ ಎಐನ (ಎಐ ಕುರಿತ ಜಾಗತಿಕ ಸಹಯೋಗ) ಸದಸ್ಯ ಮತ್ತು ನಾಯಕನೂ ಆಗಿರುವ ಭಾರತ, ಎಐಗಾಗಿ ಜಾಗತಿಕ ಸಹಕಾರವನ್ನು ಬೆಂಬಲಿಸುತ್ತಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಎಐ ಕುರಿತು ಅಂತಾರಾಷ್ಟ್ರೀಯ ನಿಯಮಾವಳಿಗಳ ಅವಶ್ಯಕತೆಯನ್ನು ಪ್ರಸ್ತಾಪಿಸಿದ್ದರು.

ಮುಂದಿನ ದಿನಗಳಲ್ಲಿ, ಎಐ ಬಳಕೆ ಪಾರದರ್ಶಕ, ನ್ಯಾಯಯುತ, ಸುರಕ್ಷಿತ, ಜವಾಬ್ದಾರ ಮತ್ತು ಎಲ್ಲರಿಗೂ ಲಭ್ಯವಾಗುವ ನಿಟ್ಟಿನಲ್ಲಿ ಭಾರತ ಇತರ ರಾಷ್ಟ್ರಗಳೊಡನೆ ತನ್ನ ಸಹಯೋಗ ಮುಂದುವರಿಸಲಿದೆ ಎಂದು ಮೋದಿ ಹೇಳಿದ್ದಾರೆ. ಸುಸ್ಥಿರ ಇಂಧನ ಮತ್ತು ಪರಿಸರ ಉಪಕ್ರಮಗಳಿಗೆ ಭಾರತದ ಬದ್ಧತೆ: ಸುಸ್ಥಿರ ಇಂಧನಕ್ಕಾಗಿ ಭಾರತದ ಬದ್ಧತೆಯನ್ನು ಮೋದಿ ಮತ್ತೊಮ್ಮೆ ದೃಢೀಕರಿಸಿದ್ದು, ಸುಸ್ಥಿರ ಇಂಧನದ ಲಭ್ಯತೆ, ಕೈಗೆಟುಕುವ ದರ, ಮತ್ತು ಅದನ್ನು ಎಲ್ಲರೂ ಒಪ್ಪಿಕೊಳ್ಳುವಂತೆ ಮಾಡುವ ಅವಶ್ಯಕತೆಯನ್ನು ವಿವರಿಸಿದ್ದಾರೆ.

ಭಾರತ ತನ್ನ ಎಲ್ಲ ಸಿಒಪಿಗಳನ್ನು (ಕಾನ್ಫರೆನ್ಸ್ ಆಫ್ ದ ಪಾರ್ಟೀಸ್) ಪೂರೈಸಲು ಯಶಸ್ವಿಯಾಗಿದೆ ಎಂದು ಮೋದಿಯವರು ವಿವರಿಸಿದ್ದಾರೆ. 2070ರ ವೇಳೆಗೆ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಹಾಕುತ್ತಿದೆ ಎಂದು ಅವರು ಹೇಳಿದ್ದಾರೆ. "ಭಾರತ ಅವಧಿಗೂ ಮುನ್ನವೇ ಎಲ್ಲ ಸಿಒಪಿ ಬದ್ಧತೆಗಳನ್ನು ಪೂರೈಸಿರುವ ಮೊದಲ ದೇಶವಾಗಿದೆ. 2070ರ ವೇಳೆಗೆ ಶೂನ್ಯ ಹೊರಸೂಸುವಿಕೆಯ ಗುರಿ ಸಾಧಿಸಲು ಭಾರತ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ" ಎಂದು ಮೋದಿ ಹೇಳಿದ್ದಾರೆ.

ಜಗತ್ತಿನಲ್ಲಿ ಹಸಿರು ಯುಗವನ್ನು ಆರಂಭಿಸಲು ಎಲ್ಲರೂ ಒಂದಾಗಿ ಪ್ರಯತ್ನಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಇದಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ, ಭಾರತ ಮಿಷನ್ ಲೈಫ್ (Mission LiFE - ಲೈಫ್‌ಸ್ಟೈಲ್ ಫಾರ್ ಎನ್ವಿರಾನ್ಮೆಂಟ್) ಆರಂಭಿಸಿದೆ. ಜೂನ್ ಐದರಂದು ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಮೋದಿಯವರು 'ಏಕ್ ಪೇಡ್ ಮಾ ಕೆ ನಾಮ್' (ತಾಯಿಯ ಹೆಸರಿನಲ್ಲಿ ಒಂದು ಮರ) ಎಂಬ ಆಂದೋಲನಕ್ಕೆ ಚಾಲನೆ ನೀಡಿದ್ದರು.

"ತಮ್ಮ ತಾಯಿಯನ್ನು ಪ್ರತಿಯೊಬ್ಬರೂ ಪ್ರೀತಿಸುತ್ತಾರೆ. ಈ ಭಾವನೆಗೆ ಪೂರಕವಾಗಿ, ನಾವು ಗಿಡ ನೆಡುವ ಯೋಜನೆಯನ್ನು ಜನಾಂದೋಲನವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಈ ಯೋಜನೆ ತಾಯಿಯ ಕುರಿತ ಪ್ರೀತಿ ಮತ್ತು ಜಾಗತಿಕ ಜವಾಬ್ದಾರಿಯ ಸಮ್ಮಿಲನವಾಗಿದೆ. ಪ್ರತಿಯೊಬ್ಬರೂ ಈ ಯೋಜನೆಯ ಭಾಗವಾಗಲು ನಾನು ಕರೆ ನೀಡುತ್ತೇನೆ. ನನ್ನ ತಂಡ ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳಲಿದೆ" ಎಂದು ಮೋದಿ ವಿವರಿಸಿದರು.

ಆಫ್ರಿಕಾದೆಡೆಗೆ ಭಾರತದ ಬದ್ಧತೆ

ಗ್ಲೋಬಲ್ ಸೌತ್‌ಗೆ, ಅದರಲ್ಲೂ ಆಫ್ರಿಕಾಗೆ ಬೆಂಬಲ ನೀಡುವಲ್ಲಿ ಭಾರತದ ಬದ್ಧತೆಯನ್ನು ಮೋದಿ ಪುನರುಚ್ಚರಿಸಿದ್ದಾರೆ. ಜಾಗತಿಕ ಅನಿಶ್ಚಿತತೆಗಳು ಮತ್ತು ಉದ್ವಿಗ್ನತೆಗಳ ನೇರ ಪರಿಣಾಮ ಈ ರಾಷ್ಟ್ರಗಳ ಮೇಲಾಗಿದೆ ಎಂದು ಮೋದಿ ಹೇಳಿದ್ದಾರೆ. ಈ ರಾಷ್ಟ್ರಗಳ ಆದ್ಯತೆ ಮತ್ತು ಕಾಳಜಿಗಳನ್ನು ಜಾಗತಿಕ ವೇದಿಕೆಗೆ ತರುವ ಜವಾಬ್ದಾರಿಯನ್ನು ಭಾರತ ಹೊಂದಿದ್ದು, ಆಫ್ರಿಕಾದ ಕುರಿತು ವಿಶೇಷ ಗಮನ ನೀಡುತ್ತಿದೆ.

ಭಾರತದ ಅಧ್ಯಕ್ಷೀಯ ಅವಧಿಯಲ್ಲಿ, ಆಫ್ರಿಕನ್ ಒಕ್ಕೂಟಕ್ಕೆ ಜಿ20 ಶಾಶ್ವತ ಸದಸ್ಯತ್ವ ಒದಗಿಸುವಲ್ಲಿ ಭಾರತದ ಪಾತ್ರವನ್ನು ಮೋದಿ ನೆನಪಿಸಿದ್ದಾರೆ. ಆಫ್ರಿಕನ್ ದೇಶಗಳ ಆರ್ಥಿಕ, ಸಾಮಾಜಿಕ, ಮತ್ತು ಭದ್ರತಾ ಅಭಿವೃದ್ಧಿಗೆ ಭಾರತದ ಬೆಂಬಲ ನಿರಂತರವಾಗಿರಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. "ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ಆಫ್ರಿಕನ್ ಒಕ್ಕೂಟ ಜಿ20ಯ ಶಾಶ್ವತ ಸದಸ್ಯನಾಗಿ ನೇಮಕಗೊಂಡದ್ದಕ್ಕೆ ನಮಗೆ ಅಪಾರ ಹೆಮ್ಮೆಯಿದೆ. ಭಾರತ ಎಲ್ಲ ಆಫ್ರಿಕನ್ ದೇಶಗಳ ಆರ್ಥಿಕ, ಸಾಮಾಜಿಕ, ಮತ್ತು ಭದ್ರತಾ ವಿಚಾರಗಳಿಗೆ ನೆರವು ನೀಡುತ್ತಿದ್ದು, ಮುಂದಿನ ದಿನಗಳಲ್ಲೂ ಇದು ಮುಂದುವರಿಯಲಿದೆ" ಎಂದು ಮೋದಿ ಹೇಳಿದ್ದಾರೆ.

ಸಮೃದ್ಧ ಭಾರತಕ್ಕಾಗಿ ದೂರದೃಷ್ಟಿ

2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುವುದು ಭಾರತದ ಗುರಿ ಎಂದು ಪ್ರಧಾನಿ ಹೇಳಿದ್ದು, ಈ ಅಭಿವೃದ್ಧಿಯಿಂದ ಸಮಸ್ತ ಭಾರತೀಯರಿಗೂ ಪ್ರಯೋಜನವಾಗಲಿದೆ ಎಂದು ಅವರು ವಿವರಿಸಿದ್ದಾರೆ. ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅನಿಶ್ಚಿತತೆಗಳು ಮತ್ತು ಸವಾಲುಗಳನ್ನು ಎದುರಿಸಲು ಜಾಗತಿಕ ಸಹಯೋಗದ ಅವಶ್ಯಕತೆಯಿದೆ ಎಂದು ಮೋದಿ ಹೇಳಿದ್ದಾರೆ. "2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣ ನಮ್ಮ ಗುರಿ. ಅಭಿವೃದ್ಧಿಯ ಕಡೆಗಿನ ನಮ್ಮ ಪ್ರಯಾಣದಲ್ಲಿ ಯಾರೊಬ್ಬರೂ ಹಿಂದುಳಿಯದಂತೆ ಖಾತ್ರಿಪಡಿಸುವುದು ನಮ್ಮ ಬದ್ಧತೆಯಾಗಿದೆ. ಜಾಗತಿಕ ಸಹಯೋಗದ ನಿಟ್ಟಿನಲ್ಲೂ ಈ ಗುರಿ ಮಹತ್ವದ್ದಾಗಿದೆ" ಎಂದು ಮೋದಿ ವಿವರಿಸಿದ್ದಾರೆ.

(ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.