ಕನ್ನಡ ಸುದ್ದಿ  /  Nation And-world  /  General Election 2024 Mumbai North Lok Sabha Constituency Bjp Candidate 3 Term Rs Member Piyush Goyal Profile Uks

Piyush Goyal: ಜನಾದೇಶಕ್ಕಾಗಿ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದ ಬಿಜೆಪಿಯ ಟ್ರಬಲ್ ಶೂಟರ್ ಪಿಯೂಷ್ ಗೋಯೆಲ್‌

ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಮೂರು ಅವಧಿಗೆ ರಾಜ್ಯ ಸಭಾ ಸದಸ್ಯರಾಗಿದ್ದುಕೊಂಡು ಸರ್ಕಾರದ ಕೆಲಸಗಳನ್ನು ನೆರವೇರಿಸುತ್ತ ಬಂದಿದ್ದರು. ಅವರು ಈ ಸಲ ಜನಾದೇಶ ಪಡೆದುಕೊಂಡು ಲೋಕಸಭೆ ಸದಸ್ಯರಾಗಿ ಸಂಸತ್ ಪ್ರವೇಶಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಪಿಯೂಷ್ ಗೋಯೆಲ್ ಅವರ ಕಿರುಪರಿಚಯ ಇಲ್ಲಿದೆ.

ಕೇಂದ್ರ ಸಚಿವ ಪಿಯೂಷ್ ಗೋಯೆಲ್‌
ಕೇಂದ್ರ ಸಚಿವ ಪಿಯೂಷ್ ಗೋಯೆಲ್‌ (PTI)

ನವದೆಹಲಿ: ಸೂಕ್ಷ್ಮ ವಾಣಿಜ್ಯ, ವ್ಯಾಪಾರ ಮಾತುಕತೆಗಳ ಪರಿಣತ, ಸರ್ಕಾರದ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿರುವ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಈ ಬಾರಿ ಜನಾದೇಶಕ್ಕಾಗಿ ಎದುರುನೋಡುತ್ತಿದ್ದಾರೆ. ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ ಸರ್ಕಾರದ ಭಾಗವಾಗಿದ್ದ ಪಿಯೂಷ್ ಗೋಯೆಲ್‌ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಪಿಯೂಷ್‌ ಗೋಯೆಲ್ ಹೆಸರಿದೆ. ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಿದ್ದಾರೆ. ಆ ಮೂಲಕ ಚುನಾವಣಾ ರಾಜಕೀಯಕ್ಕೆ ಅವರು ಪ್ರವೇಶ ಪಡೆದುಕೊಂಡಿದ್ದಾರೆ.

ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿರುವ ಪಿಯೂಷ್‌ ಗೋಯಲ್ (59) ತಮ್ಮ ಹದಿಹರೆಯದಲ್ಲೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಾಯಿ ಚಂದ್ರಕಾಂತ ಗೋಯಲ್ ಅವರ ಪರವಾಗಿ ಪ್ರಚಾರ ಮಾಡುತ್ತ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು.

ಪಿಯೂಷ್ ಗೋಯಲ್ ಅವರ ತಂದೆ ವೇದ ಪ್ರಕಾಶ್ ಗೋಯಲ್ ಅವರು ಹಳೆಯ ಕಾಲದ ಆರ್‌ಎಸ್‌ಎಸ್‌ ಕಾರ್ಯಕರ್ತ. ಅವರು ಸಂಘದ ಪ್ರಮುಖರಾದ ಬಾಳಾಸಾಹೇಬ್ ದೇವರಸ್‌, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಆಡ್ವಾಣಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ಮಧ್ಯ ಮುಂಬೈನ ಸಿಯಾನ್‌ನಲ್ಲಿರುವ ಗೋಯಲ್ ಮನೆ ರಾಜಕೀಯ ಚಟುವಟಿಕೆಯ ಕೇಂದ್ರಬಿಂದುವಾಗಿತ್ತು. ಹಿರಿಯ ನಾಯಕರು ಮಹಾನಗರಕ್ಕೆ ಭೇಟಿ ನೀಡಿದಾಗ ಅದನ್ನು ಆಯ್ಕೆಯ ನಿವಾಸವಾಗಿ ಆರಿಸಿಕೊಳ್ಳುತ್ತಿದ್ದರು. ಅಲ್ಲೇ ಉಳಿದುಕೊಳ್ಳುತ್ತಿದ್ದರು. ಇದು ಪಿಯೂಷ್ ರಾಜಕೀಯ ಬದುಕಿಗೆ ಬುನಾದಿ ಒದಗಿಸಿದೆ.

"ಹ್ಯಾಪಿ" ಎಂಬ ಮುದ್ದು ಹೆಸರಿನಿಂದ ಹೆಚ್ಚಾಗಿ ಕರೆಯಲ್ಪಡುವ ಪಿಯೂಷ್ ಗೋಯಲ್ ಅವರು, ಪಕ್ಷದ ಹಿರಿಯ ನಾಯಕರು ಮುಂಬೈಗೆ ಬಂದಾಗ ಅವರ ಜೊತೆಗೆ ಹೋಗುವ, ಅವರ ಬೇಕು ಬೇಡಗಳಿಗೆ ಸ್ಪಂದಿಸುವ ಹೊಣೆಗಾರಿಕೆ ನಿರ್ವಹಿಸುತ್ತಿದ್ದರು. 1984 ರಲ್ಲಿ ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಮತ್ತು ವಾಜಪೇಯಿ ನಡುವಿನ ಸಭೆಯ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿವಸೇನೆಯ ಔಪಚಾರಿಕ ಮೈತ್ರಿಯನ್ನು ಗೋಯಲ್ ನಿವಾಸದಲ್ಲಿ ಮಾಡಿಕೊಳ್ಳಲಾಗಿತ್ತು.

ನವದೆಹಲಿ ಕ್ಷೇತ್ರದಿಂದ ಮೊದಲ ಬಾರಿಗೆ 1989 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಡ್ವಾಣಿ ಅವರ ಚುನಾವಣಾ ಪ್ರಚಾರದಲ್ಲಿ ಗೋಯಲ್ ಪ್ರಮುಖ ಪಾತ್ರ ವಹಿಸಿದ್ದರು. ನರೇಂದ್ರ ಮೋದಿ ಸರ್ಕಾರದಲ್ಲಿಯೂ ಸಹ, ಹಿಡಿದ ಕೆಲಸಗಳನ್ನು ಮಾಡುವ ವ್ಯಕ್ತಿ ಎಂಬ ಖ್ಯಾತಿಯು ಗೋಯಲ್ ಅವರನ್ನು ಅಂತಾರಾಷ್ಟ್ರೀಯ ವ್ಯಾಪಾರದಿಂದ ಹಿಡಿದು ಇತ್ತೀಚಿನ ರೈತರ ಆಂದೋಲನದಂತಹ ಸಮಾನ ಸವಾಲಿನ ದೇಶೀಯ ವಿಷಯಗಳವರೆಗಿನ ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಹೊಣೆಗಾರಿಕೆ ಹೊಂದಲು ಕಾರಣವಾಗಿತ್ತು.

ಮುಂಬೈ ಮೂಲದ ಗೋಯಲ್ ಅವರಿಗೆ ಚುನಾವಣಾ ಪ್ರಚಾರ ಹೊಸದೇನಲ್ಲ, ಅವರು ಹದಿಹರೆಯದವರಾಗಿದ್ದಾಗ, ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮತ್ತು ನಂತರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಾಯಿಗೆ ಮತಯಾಚಿಸಿದ್ದರು. ತುರ್ತು ಪರಿಸ್ಥಿತಿಯ ನಂತರ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ ಚಂದ್ರಕಾಂತ ಗೋಯಲ್ ನಂತರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾಟುಂಗಾ ಕ್ಷೇತ್ರವನ್ನು ಮೂರು ಅವಧಿಗೆ ಪ್ರತಿನಿಧಿಸಿದರು.

ಪಕ್ಷದಲ್ಲಿ, ಸರ್ಕಾರದಲ್ಲಿ ಪಿಯೂಷ್‌ ಗೋಯೆಲ್ ಬೆಳವಣಿಗೆ

ದಿವಂಗತ ವೇದ ಪ್ರಕಾಶ್ ಗೋಯಲ್ ಅವರು ವಾಜಪೇಯಿ ಸಂಪುಟದಲ್ಲಿ ಹಡಗು ಸಚಿವರಾಗಿ ಸೇವೆ ಸಲ್ಲಿಸಿದ್ದರು. ವೇದ ಪ್ರಕಾಶ್ ಗೋಯಲ್ ಬಿಜೆಪಿಯ ರಾಷ್ಟ್ರೀಯ ಖಜಾಂಚಿಯಾಗಿದ್ದರು. ಅವರ ಸಂಪರ್ಕಗಳ ಜಾಲದ ಮೂಲಕ ಪಕ್ಷದ ಬೊಕ್ಕಸವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪಿಯೂಷ್ ಗೋಯಲ್ ಅವರು 2010 ರಲ್ಲಿ ಬಿಜೆಪಿಯ ರಾಷ್ಟ್ರೀಯ ಖಜಾಂಚಿಯಾಗಿ ನೇಮಕವಾದಾಗ ತಮ್ಮ ತಂದೆಯ ರಾಜಕೀಯ ಕೊಡುಗೆಯ ಪರಂಪರೆಯನ್ನು ಮುಂದುವರಿಸಿದರು.

ಗೋಯಲ್ ಅದ್ಭುತ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದಾರೆ. ಅವರು ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಗಳಲ್ಲಿ ಅಖಿಲ ಭಾರತ ಎರಡನೇ ರ‍್ಯಾಂಕ್‌ ಪಡೆದಿದ್ದರು. ಇದು ಅವರನ್ನು ಹೂಡಿಕೆ ಬ್ಯಾಂಕರ್ ಆಗಿ ವೃತ್ತಿಜೀವನಕ್ಕೆ ಕರೆದೊಯ್ಯಿತು. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾ ಮಂಡಳಿಗಳಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಂಡ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಗೋಯಲ್ ಅವರು ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿಶ್ವಾಸ ಗಳಿಸಿದ್ದಾರೆ ಎಂಬುದು 2014 ರ ಚುನಾವಣಾ ಪ್ರಚಾರಕ್ಕೆ ದೇಶಾದ್ಯಂತ ಯುವಕರನ್ನು ಸಂಘಟಿಸಲು ಅವರನ್ನು ನೇಮಿಸಿದಾಗ ಸ್ಪಷ್ಟವಾಯಿತು. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿದ್ಯುತ್, ಕಲ್ಲಿದ್ದಲು ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನದಂತಹ ಪ್ರಮುಖ ಖಾತೆಗಳ ಹೊಣೆಗಾರಿಕೆ ಪಿಯೂಷ್ ಗೋಯೆಲ್‌ ಅವರಿಗೆ ಸಿಕ್ಕಿತ್ತು. ಇದರಿಂದ ಅವರ ಪ್ರಯತ್ನಗಳಿಗೆ ಫಲ ಸಿಕ್ಕಿತು.

ಈ ನಡುವೆ, ರೈಲ್ವೆ ಸಚಿವಾಲಯದ ಉಸ್ತುವಾರಿಯನ್ನೂ ಗೋಯೆಲ್‌ ಅವರಿಗೆ ನೀಡಲಾಗಿತ್ತು. ಅದೂ ಅಲ್ಲದೆ, ಅರುಣ್ ಜೇಟ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರು ಹಣಕಾಸು ಸಚಿವರಾಗಿ ಬಜೆಟ್ ಕೂಡ ಮಂಡಿಸಿದ್ದರು.

ಸರ್ಕಾರದ ಟ್ರಬಲ್‌ ಶೂಟರ್‌ ನಾಯಕ

ಡಿಸ್ಕಾಂಗಳ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವುಗಳ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ವಿದ್ಯುತ್ ವಲಯದ ಸುಧಾರಣೆ ಮಾಡಬೇಕು ಎಂದು ಗೋಯಲ್ ಒತ್ತಾಯಿಸಿದರು. ವಿಶ್ವದ ಅತಿದೊಡ್ಡ ಎಲ್ಇಡಿ ಬಲ್ಬ್ ವಿತರಣಾ ಕಾರ್ಯಕ್ರಮವನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಿಜೆಪಿ ಹಿರಿಯ ನಾಯಕ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರನ್ನು ರಾಜ್ಯಸಭೆಯ ನಾಯಕರನ್ನಾಗಿ ನೇಮಿಸಲಾಯಿತು.

ಮೋದಿ ಅವರ ಎರಡನೇ ಅವಧಿಯಲ್ಲಿ, ಗೋಯಲ್ ಅವರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯನ್ನು ನೀಡಲಾಯಿತು. ಕಳೆದ ಐದು ವರ್ಷಗಳಿಂದ ಭಾರತದ ಅಂತಾರಾಷ್ಟ್ರೀಯ ವ್ಯಾಪಾರ ನೀತಿಗಳನ್ನು ರೂಪಿಸಿ ಮುನ್ನಡೆಸುತ್ತಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್, ಆಸ್ಟ್ರೇಲಿಯಾ ಮತ್ತು ಇತ್ತೀಚೆಗೆ, ಸ್ವಿಜರ್ಲೆಂಡ್‌, ನಾರ್ವೆ ಮತ್ತು ಐಸ್ಲ್ಯಾಂಡ್ ಒಳಗೊಂಡ ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ನೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಭಾರತ ಸಹಿ ಹಾಕುವಲ್ಲಿ ಗೋಯೆಲ್ ಪ್ರಮುಖ ಪಾತ್ರವಹಿಸಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಅವರಿಗೆ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯನ್ನು ಹಸ್ತಾಂತರಿಸಲಾಯಿತು. ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ನಿರ್ಣಾಯಕ ಸಚಿವಾಲಯಗಳ ಉಸ್ತುವಾರಿ ವಹಿಸಿಕೊಂಡ ಗೋಯಲ್, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಸುಮಾರು 80 ಕೋಟಿ ಬಡವರು ಮತ್ತು ದುರ್ಬಲ ಜನರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆಯ ಸುಗಮ ಅನುಷ್ಠಾನವನ್ನು ಖಚಿತಪಡಿಸಿದರು.

ಹಲವು ವರ್ಷಗಳಿಂದ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಿರುವ ಗೋಯಲ್ ಈಗ ಮುಂಬೈ ಉತ್ತರದಿಂದ ಚುನಾವಣಾ ರಾಜಕಾರಣಕ್ಕೆ ಧುಮುಕಿದ್ದಾರೆ. ಪ್ರಸ್ತುತ ಈ ಕ್ಷೇತ್ರದಲ್ಲಿ ಬಿಜೆಪಿಯ ಗೋಪಾಲ್ ಶೆಟ್ಟಿ ಸಂಸದರಾಗಿದ್ದಾರೆ. ಈ ಕ್ಷೇತ್ರವನ್ನು ಈ ಹಿಂದೆ ಬಿಜೆಪಿ ಹಿರಿಯ ರಾಮ್ ನಾಯಕ್ ಮೂರು ಅವಧಿಗೆ ಪ್ರತಿನಿಧಿಸಿದ್ದರು. ಅವರೊಂದಿಗೆ ಕೂಡ ಗೋಯಲ್ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಈಗ ಲೋಕಸಭಾ ಚುನಾವಣೆ ಪೈಪೋಟಿ ಯಾವ ರೀತಿ ಸಾಗಲಿದೆ, ಪಿಯೂಷ್ ಗೋಯೆಲ್ ಅವರನ್ನು ಕ್ಷೇತ್ರದ ಮತದಾರರು ಹೇಗೆ ಸ್ವಾಗತಿಸುತ್ತಾರೆ ಎಂಬುದು ಕುತೂಹಲದ ವಿಚಾರ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)