goa liquor: ಗೋವಾದಿಂದ ಮದ್ಯದ ಒಂದು ಬಾಟಲ್ ತಂದ್ರೂ ಜಡೀತಾರೆ ಕೋಕಾ ಕೇಸ್, ಪೊಲೀಸರ ಕ್ರಮಕ್ಕೆ ಕುಡುಕರು ಶಾಕ್!
ಗೋವಾದ ಮದ್ಯ ಮಾರಾಟಗಾರರು ಖರೀದಿದಾರರಿಗೆ ತಮ್ಮ ರಾಜ್ಯಗಳಿಗೆ ಮದ್ಯ ಕೊಂಡೊಯ್ಯಲು ಪರ್ಮಿಟ್ ನೀಡುತ್ತಾರೆ. ಆದರೆ, ಇಂತಹ ಪರ್ಮಿಟ್‌ಗೆ ಕೆಲವು ರಾಜ್ಯಗಳು ಮಾತ್ರ ಅನುಮತಿ ನೀಡುತ್ತವೆ.
ಕೊಲ್ಹಾಪುರ: ಗೋವಾಕ್ಕೆ ಮದ್ಯಪ್ರಿಯರು ಹೋದರೆ ಬರಿಗೈಯಲ್ಲಿ ಬರುವುದು ಸಂಶಯ. ಕೆಲವೊಂದು ಬಾಟಲ್ ಮದ್ಯದ ಬಾಟಲ್‌ಗಳನ್ನು ತಮ್ಮೊಟ್ಟಿಗೆ ತಂದು "ನೋಡೋ ಈ ಬ್ರಾಂಡ್‌ಗೆ ಕೇವಲ ಇಷ್ಟೇ ರೂಪಾಯಿʼʼ ಎಂದು ಅಲ್ಲಿನ ಕಡಿಮೆ ದರದ ಕುರಿತು ತಮ್ಮ ಸ್ನೇಹಿತರಿಗೆಲ್ಲ ತಿಳಿಸಿ ಎಣ್ಣೆ ಪಾರ್ಟಿ ಮಾಡುತ್ತಾರೆ. ಕೆಲವೊಂದು ರಾಜ್ಯಗಳು ಗೋವಾದಿಂದ ನಿಗದಿತ ಸಂಖ್ಯೆಯ ಮದ್ಯದ ಬಾಟಲ್‌ಗಳನ್ನು ತರಲು ಕಾನೂನು ಪ್ರಕಾರ ಅನುಮತಿಸಿವೆ.
ಆದರೆ, ಮಹಾರಾಷ್ಟ್ರ ಸರಕಾರ ಮಾತ್ರ ಗೋವಾದಿಂದ ಒಂದು ಮದ್ಯದ ಬಾಟಲ್ ತಂದ್ರೂ ಜಡಿತೀವಿ ಕೇಸ್ ಎಂದು ಅಬ್ಬರಿಸಿದೆ. ಇದರಿಂದ ಮಹಾರಾಷ್ಟ್ರದ ಮದ್ಯಪ್ರಿಯರು ಶಾಕ್ ಆಗಿದ್ದಾರೆ. ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಟೈಡ್ ಕ್ರೈಮ್ ಆಕ್ಟ್ (ಎಂಸಿಒಸಿಎ ಅಥವಾ ಎಂ ಕೋಕಾ) ಇದೀಗ ಇಂತಹ ಮದ್ಯದ ಬಾಟಲ್ ತರುವವರ ವಿರುದ್ಧ ಕೇಸ್ ಹಾಕುತ್ತಿದೆ. ಅಂದರೆ, ಈ ರೀತಿ ಮದ್ಯದ ಬಾಟಲ್ ತರುವವರ ವಿರುದ್ಧ ಸಂಘಟಿತ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
"ಸ್ಮಗ್ಲರ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸ್ ವಶಕ್ಕೆ ಒಪ್ಪಿಸಿʼʼ ಎಂದು ರಾಜ್ಯ ಅಬಕಾರ ಸಚಿವ ಶಂಭುರಾಜ್ ದೇಸಾಯಿ ಅವರು ಕೊಲ್ಹಾಪುರ ಮತ್ತು ಸಿಂಧುದುರ್ಗಾ ಜಿಲ್ಲೆಯ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇವರ ವಿರುದ್ಧ ಎಂ ಕೋಕಾದಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.
ಗೋವಾದಿಂದ ಮಹಾರಾಷ್ಟ್ರಕ್ಕೆ ಕಾನೂನುಬಾಹಿರವಾಗಿ ಮದ್ಯ ಸಾಗಣೆ ಹೆಚ್ಚುತ್ತಿದೆ. ಈ ರೀತಿ ಅನಧಿಕೃತವಾಗಿ ಮದ್ಯ ಸಾಗಾಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿ ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ. ಎಷ್ಟು ಪ್ರಮಾಣದ ಮದ್ಯ ಅಲ್ಲಿಂದ ತರುತ್ತಾರೆ ಎನ್ನುವುದನ್ನೂ ಪರಿಗಣಿಸಲಾಗುವುದಿಲ್ಲ, ಒಂದು ಬಾಟಲ್ ಮದ್ಯ ತಂದರೂ ಕೇಸ್ ಜಡಿಯುವುದಾಗಿ ಪೊಲೀಸರು ಹೇಳಿದ್ದಾರೆ. ಇದಕ್ಕಾಗಿ ಹಲವು ಚೆಕ್ ಪಾಯಿಂಟ್‌ಗಳನ್ನು ರಚಿಸಲಾಗಿದೆ.
ಗೋವಾ ಮತ್ತು ಸಿಂಧುದುರ್ಗ್‌ಗೆ ಸಂಪರ್ಕ ಕಲ್ಪಿಸುವ ಸಣ್ಣಸಣ್ಣ ರಸ್ತೆಗಳಲ್ಲಿಯೂ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳನ್ನು ರಚಿಸುವಂತೆ ಅಬಕಾರಿ ಸಚಿವರು ಹೇಳಿದ್ದಾರೆ. ಇಲ್ಲಿನ ದುರ್ಗಮ ರಸ್ತೆ ಮತ್ತು ಪ್ರದೇಶಗಳಿಂದ ಮದ್ಯಸಾಗಾಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.
ಕೊರೊನಾ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಮದ್ಯದಂಗಡಿಗಳು ಬ್ಯಾನ್ ಆಗಿದ್ದಾಗ ಗೋವಾದಿಂದಲೇ ಮದ್ಯದ ಕಳ್ಳಸಾಗಾಣೆಯಾಗುತ್ತಿತ್ತು. ಕೊರೊನಾ ಕಡಿಮೆಯಾದ ಬಳಿಕವೂ ಈ ಕಳ್ಳಸಾಗಾಣಿಕೆ ಮುಂದುವರೆದಿದೆ. ಇದೀಗ ಪೊಲೀಸರು ಗೋವಾದಿಂದ ಮದ್ಯ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.
ಗೋವಾದಲ್ಲಿ 750 ಎಂಎಲ್‌ನ ಐಎಂಎಫ್‌ಎಲ್‌ಗೆ 300 ರೂಪಾಯಿ ಇದೆ. ಆದರೆ, ಇದೇ ಬಾಟಲ್‌ಗೆ ಮಹಾರಾಷ್ಟ್ರದಲ್ಲಿ 900 ರೂ. ಇದೆ. ಸ್ಮಗ್ಲರ್‌ಗಳು ವಿದೇಶಿ ಮದ್ಯಗಳನ್ನು ಈ ರೀತಿ ಕಳ್ಳಸಾಗಾಣೆ ಮಾಡುವುದಿಲ್ಲ. ಏಕೆಂದರೆ, ಅದರಲ್ಲಿ ಲಾಭ ಕಡಿಮೆ ಇರುತ್ತದೆ.
ಗೋವಾದ ಮದ್ಯ ಮಾರಾಟಗಾರರು ಖರೀದಿದಾರರಿಗೆ ತಮ್ಮ ರಾಜ್ಯಗಳಿಗೆ ಮದ್ಯ ಕೊಂಡೊಯ್ಯಲು ಪರ್ಮಿಟ್ ನೀಡುತ್ತಾರೆ. ಆದರೆ, ಇಂತಹ ಪರ್ಮಿಟ್‌ಗೆ ಕೆಲವು ರಾಜ್ಯಗಳು ಮಾತ್ರ ಅನುಮತಿ ನೀಡಬಹುದು. ಆದರೆ, ಮಹಾರಾಷ್ಟ್ರದಲ್ಲಿ ಈ ಪರ್ಮಿಟ್‌ಗೆ ಸೊನ್ನೆಯಷ್ಟೂ ಬೆಲೆ ಇಲ್ಲ ಎಂದು ಪೊಲೀಸರು ಹೇಳಿದ್ದು, "ಒಂದೇ ಒಂದು ಚಿಕ್ಕ ಬಾಟಲ್ ತಂದರೂ ಕೇಸ್ ಹಾಕುವುದಾಗಿʼʼ ಎಚ್ಚರಿಸಿದ್ದಾರೆ.
ವಿಭಾಗ