ವಿಮಾನ ಪ್ರಯಾಣಕ್ಕೆ ಬರೀ 3 ಸಾವಿರ , ಕಾರಿಗೆ ಕೊಟ್ಟಿದ್ದು 30 ಸಾವಿರ: ಮಗು ಕೊಲೆ ಪ್ರಕರಣದಲ್ಲಿ ಬಯಲಾದ ಸತ್ಯ
suchanaseth ಗೋವಾಕ್ಕೆ ತೆರಳಿ ಅಲ್ಲಿಂದ ಮಗನ ಶವ ಸಾಗಿಸುವಾಗ ವೇಳೆ ಸಿಕ್ಕಿಬಿದ್ದು ಕೊಲೆ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಕಂಪೆನಿ ಸಿಇಒ ಸುಚನಾಸೇಥ್ ಅವರ ಕುರಿತಾಗಿ ಗೋವಾ ಪೊಲೀಸರು ಎಲ್ಲಾ ಆಯಾಮದಲ್ಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಂಗಳೂರು: ಗೋವಾ ಹಾಗೂ ಬೆಂಗಳೂರು ನಡುವಿನ ವಿಮಾನ ಪ್ರಯಾಣ ದರ 2 ಸಾವಿರ ರೂ. ಇದೆ. ತುರ್ತಾಗಿ ಹೊರಟರೆ ಇದು 3 ಸಾವಿರ ರೂ. ಆಜುಬಾಜು ಇರಬಹುದು. ಇದನ್ನೇ ಬಹುತೇಕರು ಯೋಜಿಸುತ್ತಾರೆ. ಬೇಗನೇ ಹಾಗೂ ಸುಲಭವಾಗಿ ಬೆಂಗಳೂರು ತಲುಪಬಹುದು ಎನ್ನುವ ಕಾರಣಕ್ಕೆ. ದೊಡ್ಡ ಕಂಪೆನಿ ಸಿಇಒ ಅಂದರೆ ಅವರ ವಿಮಾನ ಪ್ರಯಾಣದಲ್ಲೇ ಎನ್ನುವುದು ಸಹಜ ನಂಬಿಕೆ. ಆದರೆ ಮೂರು ದಿನದ ಹಿಂದೆ ಗೋವಾದಲ್ಲಿ ಮಗುವನ್ನು ಕೊಂದು ಬೆಂಗಳೂರಿಗೆ ಸಾಗಿಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಸುಚನಾ ಸೇಥ್ ಅವರು ವಿಮಾನ ಪ್ರಯಾಣ ಬಿಟ್ಟು ಕಾರಿನಲ್ಲಿ ಹೊರಟಿದ್ದು ಪೊಲೀಸ್ ತನಿಖೆ ವೇಳೆ ಮಹತ್ವದ ಸಾಕ್ಷಿಯಾಗಿ ಸಿಕ್ಕಿದೆ.
ಅವರು ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದಾಗ, ನಿಮಗೆ 3 ಸಾವಿರ ರೂ.ನಲ್ಲಿ ವಿಮಾನ ಪ್ರಯಾಣವೇ ಆಗುತ್ತದೆ. ಒಂದೇ ಗಂಟೆಯಲ್ಲಿ ಬೆಂಗಳೂರು ತಲುಪುತ್ತೇವೆ ಎಂದು ಹೇಳಿದೆವು. ಅವರು ಅದನ್ನು ಕೇಳಲೇ ಇಲ್ಲ. ನನಗೆ ಪ್ರತ್ಯೇಕ ಕಾರು ಬೇಕು. 30 ಸಾವಿರ ಬೇಕಾದರೂ ಕೊಡುತ್ತೇನೆ ಎಂದು ಹೇಳಿದರು. ನಾವು ಅವರ ಸೂಚನೆಯಂತೆ ಕ್ಯಾಬ್ ಅನ್ನೇ ಬುಕ್ ಮಾಡಿಕೊಟ್ಟೆವು ಎಂದು ಸುಚನಾ ಸೇನ್ ಉಳಿದುಕೊಂಡಿದ್ದ ಸರ್ವೀಸ್ ಅಪಾರ್ಟ್‌ಮೆಂಟ್‌ನ ವ್ಯವಸ್ಥಾಪಕರು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಲಭವಾಗಿ ಬೆಂಗಳೂರು ತಲುಪುವ ಬದಲು ಕಾರನ್ನೇ ಕೇಳಿ ಸುಚನಾ ಪಡೆದುಕೊಂಡಿರುವ ಹಿಂದೆ ಮಗುವಿನ ಕೊಲೆ ಉದ್ದೇಶವಿತ್ತು. ಮತ್ತು ಮಗುವಿನ ಶವವನ್ನು ಬೆಂಗಳೂರಿಗೆ ಸಾಗಿಸಿ ಅಲ್ಲಿ ಅನಾರೋಗ್ಯದ ನೆಪ ಹೇಳಿ ತಪ್ಪಿಸಿಕೊಳ್ಳುವ ಉದ್ದೇಶವಿತ್ತು ಎಂದು ತನಿಖೆ ಕೈಗೊಂಡಿರುವ ಗೋವಾ ಪೊಲೀಸರು ಶಂಕಿಸಿದ್ಧಾರೆ. ಇದೇ ನೆಲೆಯಲ್ಲಿ ಸಾಕ್ಷಿಯನ್ನು ಕಲೆ ಹಾಕುತ್ತಿದ್ದಾರೆ.
ಸುಚನಾ ಅವರು ಐದು ದಿನದ ಮಟ್ಟಿಗೆ ಗೋವಾಕ್ಕೆ ಬಂದಿದ್ದರು. ಇದಕ್ಕಾಗಿ ಜನವರಿ 6ರಿಂದ ಜನವರಿ 10ರವರೆಗೆ ಕೊಠಡಿ ಕಾಯ್ದಿರಿಸಿಕೊಂಡಿದ್ದರು. ಬಂದ ಮೂರನೇ ದಿನಕ್ಕೆ ಅಂದರೆ ಜನವರಿ 8ರಂದೇ ಹೊರಟರು. ಅವರು ಪ್ರವಾಸ ಮೊಟಕು ಮಾಡಿದ್ದು,. ಇದರ ಹಿಂದಿರುವ ಉದ್ದೇಶವನ್ನೆಲ್ಲಾ ಪೊಲೀಸರು ತನಿಖೆ ಭಾಗವಾಗಿಸಿದ್ದಾರೆ. ಈ ನೆಲೆಯಲ್ಲೂ ಮಾಹಿತಿ ಕಲೆ ಹಾಕಿದ್ದಾರೆ.
ಇದಲ್ಲದೇ ಮಗುವಿಗೆ ಹೆಚ್ಚಿನ ಡೋಸೇಜ್‌ನ ಕೆಮ್ಮಿನ ಔಷಧಿಯನ್ನು ನೀಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿತ್ತು. ಸುಚನಾ ಅಲ್ಲಿ ಉಳಿದುಕೊಂಡಾಗ ಕೆಮ್ಮಿನ ಔಷಧಿಯನ್ನು ಎರಡು ಬಾಟಲಿ ತರಿಸಿದ್ದರು. ಅದನ್ನು ನಮ್ಮ ಸಿಬ್ಬಂದಿ ತಂದುಕೊಟ್ಟಿದ್ದರು ಎಂದು ವ್ಯವಸ್ಥಾಪಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಸುಚನಾ ಅವರನ್ನು ಆರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ತನಿಖೆ ಚುರುಕುಗೊಂಡಿದೆ. ಅವರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಮನೋವೈದ್ಯರ ಬಳಿಯೂ ಕರೆದೊಯ್ಯಲಾಗಿದೆ. ಈವರೆಗೂ ಅವರಿಂದ ನಿಖರವಾದ ಮಾಹಿತಿ ದೊರೆತಿಲ್ಲ. ಪ್ರತಿ ಬಾರಿ ಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಘಟನೆಗಳಿಗೆ ಪೂರಕವಾದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎನ್ನುವುದು ಪೊಲೀಸರ ಹೇಳಿಕೆ.