ಸಾರ್ವಕಾಲಿಕ ಎತ್ತರಕ್ಕೆ ಚಿನ್ನದ ದರ: ಜಿಎಸ್‌ಟಿ ಸೇರಿ 1 ಲಕ್ಷ ರೂಪಾಯಿ ದಾಟಿತು ಇಂದಿನ ಬಂಗಾರದ ಬೆಲೆ
ಚಿನ್ನದ ದರ: ಬೆಂಗಳೂರಿನಲ್ಲಿ ಬಂಗಾರದ ಬೆಲೆ ಬಾನೆತ್ತರಕ್ಕೆ ಏರಿದ್ದು, ಜಿಎಸ್‌ಟಿ ಸೇರಿದರೆ ಅಪರಂಜಿ (24 ಕ್ಯಾರೆಟ್ ) ಚಿನ್ನದ ದರ 1 ಲಕ್ಷ ರೂಪಾಯಿ ಗಡಿದಾಟಿದೆ. ಕಳೆದ ಅಕ್ಷಯ ತೃತೀಯದಿಂದ ಈ ಅಕ್ಷಯ ತೃತೀಯದ ಒಳಗೆ ಚಿನ್ನದ ದರ ಏರಿಕೆ ಪ್ರಮಾಣ ಹೂಡಿಕೆದಾರರನ್ನು ಆಕರ್ಷಿಸೋದು ಗ್ಯಾರೆಂಟಿ. ಇಂದಿನ ಬಂಗಾರದ ಬೆಲೆ ಮತ್ತು ಇತರೆ ವಿವರ ಇಲ್ಲಿದೆ.

ಚಿನ್ನದ ದರ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಚಿನ್ನದ ದರ 1 ಲಕ್ಷ ರೂಪಾಯಿ ಆಸುಪಾಸು ತಲುಪಿದ್ದು, ಜಿಎಸ್‌ಟಿ ಸೇರಿದಾಗ 1 ಲಕ್ಷ ರೂಪಾಯಿ ಗಡಿ ದಾಟಿದೆ. ಭಾರತದ ಚಿನಿವಾರ ಪೇಟೆಯಲ್ಲಿ ಸೋಮವಾರ ಸಂಜೆ ಪ್ರತಿ 10 ಗ್ರಾಂ ಅಪರಂಜಿ ಚಿನ್ನ (24 ಕ್ಯಾರೆಟ್) ದ ದರ 97.200 ರೂಪಾಯಿ ಆಗಿದೆ. ಇದಕ್ಕೆ ಶೇಕಡ 3 ಜಿಎಸ್‌ಟಿ ಸೇರುವ ಕಾರಣ ಬೆಲೆ 1,00,120 ರೂಪಾಯಿ ಆಗಿದೆ. 2025ರಲ್ಲಿ ಇದುವರೆಗೆ ಚಿನ್ನದ ದರ 10 ಗ್ರಾಂಗೆ ಶೇಕಡ 26 ಅಂದರೆ 20,800 ರೂಪಾಯಿ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಇಂದಿನ ಬಂಗಾರದ ಬೆಲೆ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಇಂದಿನ ಬಂಗಾರದ ಬೆಲೆ ವಿವರ ಹೀಗಿದೆ -24 ಕ್ಯಾರೆಟ್ ಅಪರಂಜಿ ಚಿನ್ನಕ್ಕೆ 10 ಗ್ರಾಂಗೆ 98,360 ರೂಪಾಯಿ ಇದೆ. ನಿನ್ನೆ (ಏಪ್ರಿಲ್ 21) ಇದು 98,350 ರೂಪಾಯಿ ಇತ್ತು. ಆಭರಣ ಚಿನ್ನದ (22 ಕ್ಯಾರೆಟ್) ದರ 10 ಗ್ರಾಂಗೆ 96,160 ರೂಪಾಯಿ ಇದ್ದು, ನಿನ್ನೆ (ಏಪ್ರಿಲ್ 21) 10 ಗ್ರಾಂಗೆ 96,150 ರೂಪಾಯಿ ಇತ್ತು. 18 ಕ್ಯಾರೆಟ್ ಚಿನ್ನದ ದರ ಇಂದು (ಏಪ್ರಿಲ್ 22) 73,770 ರೂಪಾಯಿ ಇದ್ದು ನಿನ್ನೆ 10 ರೂಪಾಯಿ ಕಡಿಮೆ ಇತ್ತು.
ಬೆಳ್ಳಿ ದರ 100 ರೂಪಾಯಿ ಹೆಚ್ಚಳ: ಬೆಳ್ಳಿ ದರ ಒಂದು ಕಿಲೋ ಮೇಲೆ 100 ರೂಪಾಯಿ ಹೆಚ್ಚಳವಾಗಿದ್ದು, 1,01,100 ರೂಪಾಯಿ ಆಗಿದೆ. ನಿನ್ನೆ (ಏಪ್ರಿಲ್ 21) ಬೆಳ್ಳಿ ದರ ಕಿಲೋಗೆ 1,01,000 ರೂಪಾಯಿ ಇತ್ತು. ಏಪ್ರಿಲ್ 20 ರಂದು ಒಂದೇ ಸಲ 1000 ರೂಪಾಯಿ ಹೆಚ್ಚಳವಾಗಿತ್ತು.
ಅಮೆರಿಕ- ಚೀನಾ ವಾಣಿಜ್ಯ ಸಮರದ ಕಾರಣ ಬಂಗಾರದ ಬೆಲೆ ಏರಿಕೆ
ಹೊಸ ವಾರದ ಆರಂಭದಲ್ಲೇ ಚಿನ್ನದ ಬೆಲೆ ಏರಿಕೆಯಾಗಿದೆ. ಖರೀದಿ ಹೆಚ್ಚಳವಾಗುವುದರೊಂದಿಗೆ ಬೆಲೆಯೂ ಏರಿಕೆ ಕಂಡಿದೆ. ಕಾಮೆಕ್ಸ್ ಚಿನ್ನ 3,400 ಡಾಲರ್ ತಲುಪಿದ್ದು, ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಸಾರ್ವಕಾಲಿಕ ಗರಿಷ್ಠದ ದಾಖಲೆಯನ್ನು ಸೋಮವಾರ ಬರೆಯಿತು ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ (ಸರಕು ಹಾಗೂ ಕರೆನ್ಸಿ) ಉಪಾಧ್ಯಕ್ಷ ಜತಿನ್ ತ್ರಿವೇದಿ ಹೇಳಿದರು.
ಯುಎಸ್ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಉದ್ವಿಗ್ನತೆ ಜಾಗತಿಕ ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಇದು ಹೂಡಿಕೆದಾರರನ್ನು ಸುರಕ್ಷಿತ ಸ್ವತ್ತುಗಳಲ್ಲಿ ಹೂಡಿಕೆ ಮಾಡುವ ಮನಸ್ಥಿತಿಗೆ ತಂದ ಪರಿಣಾಮ ಇದು ಎಂದು ವಿಶ್ಲೇಷಕರು ಹೇಳಿದ್ದಾರೆ. ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳ ನಡುವೆ ಪ್ರಸಕ್ತ ವಾಣಿಜ್ಯ ಸಮರಕ್ಕೆ ಪರಿಹಾರವನ್ನು ಕಂಡುಕೊಳ್ಳುವವರೆಗೆ, ಚಿನ್ನದ ದರವು ಏರುತ್ತಲೇ ಇರುತ್ತದೆ ಎಂದು ಜತಿನ್ ತ್ರಿವೇದಿ ವಿವರಿಸಿದರು.
ದುರ್ಬಲಗೊಳ್ಳುತ್ತಿರುವ ಡಾಲರ್ ಬೆಲೆಯ ಕಾರಣ ಚಿನ್ನದ ದರ ಹೆಚ್ಚಳ
"ಯುಎಸ್ ಡಾಲರ್ ದುರ್ಬಲಗೊಳ್ಳುತ್ತಿರುವ ಮತ್ತು ಜಾಗತಿಕ ವ್ಯಾಪಾರ ಕಳವಳಗಳ ನಡುವೆ ಸುರಕ್ಷಿತ ಹೂಡಿಕೆಯ ಉತ್ಪನ್ನವೆಂದು ಖರೀದಿಸಿದ್ದರಿಂದ ಚಿನ್ನದ ಬೆಲೆಗಳು ಹೊಸ ದಾಖಲೆಯ ಎತ್ತರಕ್ಕೆ ಏರತೊಡಗಿದೆ" ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಸರಕುಗಳ ಉಪಾಧ್ಯಕ್ಷ ರಾಹುಲ್ ಕಲಾಂತ್ರಿ, ಹೇಳಿದರು.
ಕಳೆದ ಗುರುವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ವಿರುದ್ಧ ನಿರಂತರ ದಾಳಿಗಳನ್ನು ಪ್ರಾರಂಭಿಸಿದ ನಂತರ ಯುಎಸ್ ಡಾಲರ್ ಎರಡು ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಟ್ರಂಪ್ ಅವರ ಸಿಬ್ಬಂದಿ ಪೊವೆಲ್ ಅವರನ್ನು ಬದಲಾಯಿಸಲು ಯೋಚಿಸುತ್ತಿದ್ದಾರೆ. ಈ ಕ್ರಮವು ಕೇಂದ್ರ ಬ್ಯಾಂಕ್ ಮತ್ತು ಜಾಗತಿಕ ಮಾರುಕಟ್ಟೆಗಳ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ಕಲಾಂತ್ರಿ ಹೇಳಿದರು.