Sundar Pichai: ನಾನು ಎಲ್ಲಿಯೇ ಇರಲಿ, ಭಾರತ ನನ್ನೊಳಗಿರಲಿದೆ: ತಾಯ್ನಾಡಿಗೆ ನಮಿಸಿದ 'ಪದ್ಮಭೂಷಣ' ಸುಂದರ ಪಿಚೈ
ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಅವರಿಗೆ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ತರಣ್‌ಜೀತ್ ಸಿಂಗ್ ಸಂಧು ಅವರು, ಸುಂದರ್ ಪಿಚೈ ಅವರಿಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ಮಾತನಾಡಿದ ಸುಂದರ್ ಪಿಚೈ, ಭಾರತ ನನ್ನ ಜೀವನದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರೆ.
ವಾಷಿಂಗ್ಟನ್: ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಅವರಿಗೆ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ತರಣ್‌ಜೀತ್ ಸಿಂಗ್ ಸಂಧು ಅವರು, ಸುಂದರ್ ಪಿಚೈ ಅವರಿಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಹಸ್ತಾಂತರಿಸಿದ್ದಾರೆ.
ತಮ್ಮ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸುಂದರ್ ಪಿಚೈ ಅವರು, ಭಾರತದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಭಾರತೀಯ-ಅಮೆರಿಕನ್ ಪ್ರಜೆಯಾಗಿರುವ ಸುಂದರ್ ಪಿಚೈ ಅವರಿಗೆ ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿ 2022ರ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕಕ್ಕೆ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು, "ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಪದ್ಮಭೂಷಣವನ್ನು ಹಸ್ತಾಂತರಿಸಲು ಸಂತೋಷವಾಗಿದೆ. ಮಧುರೈನಿಂದ ಮೌಂಟೇನ್ ವ್ಯೂಗೆ ಸುಂದರ್ ಅವರ ಸ್ಪೂರ್ತಿದಾಯಕ ಪ್ರಯಾಣ, ಆರ್ಥಿಕ ಮತ್ತು ತಾಂತ್ರಿಕ ಸಂಬಂಧಗಳನ್ನು ಬಲಪಡಿಸುವುದು, ಜಾಗತಿಕ ನಾವೀನ್ಯತೆಗೆ ಭಾರತೀಯ ಪ್ರತಿಭೆಗಳ ಕೊಡುಗೆಯನ್ನು ಪುನರುಚ್ಚರಿಸುತ್ತದೆ.." ಎಂದು ಹೇಳಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಂದರ್ ಪಿಚೈ, ನಾನು ಎಲ್ಲಿಯೇ ಇರಲಿ, ನನ್ನೊಳಗೆ ಸದಾ ಭಾರತ ಇರಲಿದೆ ಎಂದು ಭಾವುಕರಾಗಿ ನುಡಿದರು. ನಾನು ಯಾವಾಗಲೂ ನನ್ನೊಂದಿಗೆ ಭಾರತವನ್ನು ಕೊಂಡೊಯ್ಯುತ್ತೇನೆ ಎಂದು ಸುಂದರ್ ಪಿಚೈ ಭಾವನಾತ್ಮಕವಾಗಿ ಹೇಳಿದರು.
“ಈ ಪ್ರತಿಷ್ಠಿತ ಗೌರವಕ್ಕಾಗಿ ನಾನು ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶದಿಂದ ಈ ರೀತಿಯಾಗಿ ಗೌರವಿಸಲ್ಪಟ್ಟಿರುವುದನ್ನು ನನಗೆ ನಂಬಲು ಆಗುತ್ತಿಲ್ಲ..” ಎಂದು 50 ವರ್ಷದ ಸುಂದರ್ ಪಿಚೈ ಹೇಳಿದ್ದಾರೆ.
ನನ್ನ ಆಸಕ್ತಿಗಳನ್ನು ಅನ್ವೇಷಿಸಲು ನನಗೆ ಸಹಕರಿಸಿದ ನನ್ನ ಪೋಷಕರಿಗೆ ನಾನು ಈ ವೇಳೆ ಧನ್ಯವಾದ ಅರ್ಪಿಸುತ್ತೇನೆ. ಕಲಿಕೆ ಮತ್ತು ಜ್ಞಾನ ಸಂಪಾದನೆಗೆ ಸಹಕರಿಸಿದ ಈ ಕುಟುಂಬದಲ್ಲಿ ಜನಿಸಿದ್ದು ನನ್ನ ಪುಣ್ಯ. ಪೋಷಕರ ತ್ಯಾಗದ ಪ್ರತಿಫಲವನ್ನು ನಾನು ಇಂದು ಉಣ್ಣುತ್ತಿದ್ದೇನೆ ಎಂದು ಸಸುಂದರ್ ಪಿಚೈ ಹೇಳಿದರು.
ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಭಾರತ ಗುರುತಿಸಿರುವುದು ನನಗೆ ಹೆಮ್ಮೆಯ ಸಂಗತಿ. ನನ್ನ ದೇಶ ನನಗೆ ನೀಡಿದ ಈ ಗೌರವವನ್ನು ಅತ್ಯಂತ ವಿನಮ್ರವಾಗಿ ಸ್ವೀಕರಿಸುತ್ತೇನೆ. ನನ್ನೊಳಗೆ ಸದಾಕಾಲ ಭಾರತ ಜೀವಂತವಾಗಿರಲಿದೆ ಎಂದು ಸುಂದರ್ ಪಿಚೈ ಭಾವನಾತ್ಮಕವಾಗಿ ನುಡಿದರು.
ಸುಂದರ್ ಪಿಚೈ ಪರಿಚಯ:
ಪಿಚೈ ಸುಂದರರಾಜನ್ ಅವರು ಹೆಚ್ಚು ಜನಪ್ರಿಯವಾಗಿ ಸುಂದರ್ ಪಿಚೈ ಎಂದು ಜಾಗತಿಕವಾಗಿ ಗುರುತಿಸಲ್ಪಟಿದ್ದಾರೆ. ಸುಂದರ್ ಪಿಚೈ ಅವರು ಮಧುರೆಯಲ್ಲಿ 1973ರಲ್ಲಿ ಜನಿಸಿದರು. ಇವರ ತಂದೆ ರಘುನಾಥ ಪಿಚೈ ಅವರು, ಬ್ರಿಟಿಷ್ ಕಂಪನಿ ಜಿ.ಇ.ಸಿ ಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.
ಸುಂದರ್ ಪಿಚೈ ಅವರು ಚೆನ್ನೈ(ಅಂದಿನ ಮದ್ರಾಸ್)ನಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ, ಉನ್ನತ ವ್ಯಾಸಂಗಕ್ಕಾಗಿ ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯನ್ನು ಸೇರಿದರು. ಬಳಿಕ ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರಸಿದ್ಧ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯವನ್ನು ಆಯ್ದುಕೊಂಡು, ಎಮ್.ಎಸ್. ಪದವಿಯನ್ನು ಪಡೆದರು.
ಎಂ.ಬಿ.ಎ ಪದವಿಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಸಿದ್ಧ ವಾರ್ಟನ್ ಸ್ಕೂಲ್‍ನಲ್ಲಿ ಪಡೆದ ಸುಂದರ್ ಪಿಚೈ, ಮೆಕಿನ್ಸೆ ಮತ್ತು ಕಂಪನಿ ಸಂಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನ ನಿರ್ವಹಣಾಧಿಕಾರಿಯಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಸದ್ಯ ಸುಂದರ್ ಪಿಚೈ ಅವರು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಭಾಗ