ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಪತ್ನಿಯ ಧರ್ಮದ ಬಗ್ಗೆ ಹೆಚ್ಚಿದ ಗೂಗಲ್‌ ಸರ್ಚ್‌, ಭಾರತೀಯ ಮೂಲದ ಉಷಾ ಚಿಲುಕುರಿ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಪತ್ನಿಯ ಧರ್ಮದ ಬಗ್ಗೆ ಹೆಚ್ಚಿದ ಗೂಗಲ್‌ ಸರ್ಚ್‌, ಭಾರತೀಯ ಮೂಲದ ಉಷಾ ಚಿಲುಕುರಿ ಬಗ್ಗೆ ಇಲ್ಲಿದೆ ಮಾಹಿತಿ

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಪತ್ನಿಯ ಧರ್ಮದ ಬಗ್ಗೆ ಹೆಚ್ಚಿದ ಗೂಗಲ್‌ ಸರ್ಚ್‌, ಭಾರತೀಯ ಮೂಲದ ಉಷಾ ಚಿಲುಕುರಿ ಬಗ್ಗೆ ಇಲ್ಲಿದೆ ಮಾಹಿತಿ

ಅಮೆರಿಕ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೆಡಿ ವ್ಯಾನ್ಸ್‌ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್‌ ಅವರ ಧರ್ಮದ ಬಗ್ಗೆ ಗೂಗಲ್‌ ಸರ್ಚ್‌ ಹೆಚ್ಚಾಗಿದೆ. ಉಷಾ, ಆಂಧ್ರ ಪ್ರದೇಶ ಮೂಲದವರು. ನನ್ನ ತಂದೆ-ತಾಯಿ ಹಿಂದೂಗಳು, ನಾನೂ ಹಿಂದುವಾಗಿಯೇ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಉಷಾ, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್

ವಿಶ್ವದ ದೊಡ್ಡಣ್ಣ ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೋ ಬೈಡೆನ್ ಆಡಳಿತ ಅಂತ್ಯಗೊಂಡಿದ್ದು ಡೊನಾಲ್ಡ್‌ ಟ್ರಂಪ್‌ ಎರಡನೇ ಬಾರಿಗೆ ಅಧ್ಯಕ್ಷ ಗಾದಿಗೆ ಏರಿದ್ದಾರೆ. ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್‌ ರೊಟುಂಡಾ ಒಳಾಂಗಣ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನ್ಯಾ ಜಾನ್‌ ರಾಬರ್ಟ್ಸ್, ನೂತನ ಅಧ್ಯಕ್ಷ ಟ್ರಂಪ್‌ಗೆ ಪ್ರಮಾಣವಚನ ಬೋಧಿಸಿದ್ದಾರೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಅಮೆರಿಕ ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್​ ಪ್ರಮಾಣ ವಚನ ಸ್ವೀಕರಿಸಿದ್ದರು. ಟ್ರಂಪ್‌ 2017 ರಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದು ಅವರ ಬಗ್ಗೆ ಬಹುತೇಕರಿಗೆ ಗೊತ್ತು. ಆದರೆ ಈಗ ಎಲ್ಲರ ಗಮನ ಸೆಳೆಯುತ್ತಿರುವುದು ಉಪಾಧ್ಯಕ್ಷ ಸ್ಥಾನಕ್ಕೆ ಏರಿರುವ ಜೆಡಿ ವ್ಯಾನ್ಸ್. ಓಹಿಯೋದ ಮಿಡಲ್‌ಟೌನ್‌ನಲ್ಲಿ ಜನಿಸಿದ ಜೆಡಿ ವ್ಯಾನ್ಸ್ ಬಾಲ್ಯದಿಂದ ಬಹಳ ಬಡತನದಲ್ಲಿ ಬೆಳೆದವರು. ತಾಯಿಯು ದುಶ್ಚಟಗಳಿಗೆ ಬಲಿಯಾಗಿದ್ದರಿಂದ ತಂದೆಯ ಆರೈಕೆಯಲ್ಲಿ ಬೆಳೆದರು. ಓಹಿಯೋ ಸ್ಟೇಟ್ ಯೂನಿವರ್ಸಿಟಿ ಮತ್ತು ಯೇಲ್ ಲಾ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ, ವ್ಯಾನ್ಸ್ ಸಿಲಿಕಾನ್ ವ್ಯಾಲಿಯಲ್ಲಿ ವೆಂಚರ್ ಕ್ಯಾಪಿಟಲಿಸ್ಟ್ ಆಗಿ ಉದ್ಯಮ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಜೊತೆಗೆ ರಾಜಕಾರಣದಲ್ಲೂ ಗುರುತಿಸಿಕೊಂಡಿದ್ದ ಅವರು ಈಗ ಅಮೆರಿಕ ಉಪಾಧ್ಯಕ್ಷರಾಗಿದ್ದಾರೆ.

ಆಂಧ್ರಪ್ರದೇಶ ಮೂಲದ ಉಷಾ ಚಿಲುಕುರಿ ವ್ಯಾನ್ಸ್‌

ಆದರೆ ಜೆಡಿ ವ್ಯಾನ್ಸ್‌, ಭಾರತೀಯರ ಗಮನ ಸೆಳೆಯುತ್ತಿರುವುದು ಅವರ ಪತ್ನಿ ಭಾರತ ಮೂಲದವರು ಎಂಬ ಕಾರಣಕ್ಕೆ. ಹೌದು, ಜೆಡಿ ವ್ಯಾನ್ಸ್‌ ಭಾರತದ ಅಳಿಯ, ಅವರ ಪತ್ನಿ ಉಷಾ ಚೆರುಕುರಿ ವ್ಯಾನ್ಸ್‌ ಮೂಲತ: ಆಂಧ್ರದವರು. ಸದ್ಯಕ್ಕೆ ಉಷಾ ಅವರ ಧರ್ಮ ಯಾವುದು ಎನ್ನುವ ಬಗ್ಗೆ ಸರ್ಚ್‌ ಹೆಚ್ಚಾಗಿದೆ. ಉಷಾ ತಂದೆ 1980 ರಲ್ಲಿ ಅಮೆರಿಕಾಗೆ ವಲಸೆ ಹೋದವರು. ಉಷಾ ತಂದೆ ಐಐಟಿ ಮದ್ರಾಸ್‌ನಲ್ಲಿ ಪದವಿ ಪಡೆದವರಾದರೆ, ತಾಯಿ ಸೂಕ್ಷ್ಮಜೀವಶಾಸ್ತ್ರಜ್ಞೆಯಾಗಿ ಗುರುತಿಸಿಕೊಂಡಿದ್ದರು.

ಉಷಾ ಹಾಗೂ ಜೆಡಿ ವ್ಯಾನ್ಸ್‌ ಮೊದಲ ಬಾರಿಗೆ 2010 ರಲ್ಲಿ ಭೇಟಿಯಾದರು. ಯೇಲ್‌ನಲ್ಲಿ ಇಬ್ಬರೂ ಕಾನೂನು ಪದವಿ ಓದುವಾಗ ಪರಿಚಯವಾದರು, ಇವರ ಪರಿಚಯ ಪ್ರೀತಿಗೆ ತಿರುಗಿ 2014ರಲ್ಲಿ ಮದುವೆ ಆದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಸೋಮವಾರ, ಪತಿ ಜೆಡಿ ವ್ಯಾನ್ಸ್‌ ಅಮೆರಿಕದ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಉಷಾ ಬಹಳ ಖುಷಿಯಾಗಿದ್ದರು. ಉಷಾ ಹಿನ್ನೆಲೆ, ಅವರ ಸಾಧನೆಯನ್ನು ಬಿಟ್ಟು ಬಹಳಷ್ಟು ಜನರು ಗೂಗಲ್‌ನಲ್ಲಿ ಹುಡುಕಾಡಿದ್ದು ಆಕೆಯ ಧರ್ಮವನ್ನು. ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ಉಷಾ ಧರ್ಮದ ಬಗ್ಗೆ ಜನರು ಹುಡುಕುತ್ತಿರುವುದು ಗೂಗಲ್‌ ಟ್ರೆಂಡ್‌ ಡೇಟಾ ಮೂಲಕ ತಿಳಿದುಬಂದಿದೆ. ಅದರಲ್ಲಿ ಯುನೈಟೈಡ್‌ ಸ್ಟೇಟ್ಸ್‌, ನಂತರ ಕೆನಡಾ, ದಕ್ಷಿಣ ಆಫ್ರಿಕಾ, ಯುಕೆ ಹಾಗೂ ಭಾರತೀಯರು ಹೆಚ್ಚು ಗೂಗಲ್‌ ಸರ್ಚ್‌ ಮಾಡಿದ್ದಾರೆ. “JD Vance wife religion”, “JD Vance wife Usha”, “What religion is Vance” ಎಂಬ ಸರ್ಚ್‌ ಹೆಚ್ಚಾಗಿ ಕಾಣಿಸುತ್ತಿವೆ.

ಉಷಾ ಕ್ರೈಸ್ತ ಧರ್ಮಕ್ಕೆ ಸೇರಿದವರೇ?

ಜೆಡಿ ವ್ಯಾನ್ಸ್‌ ಕ್ರೈಸ್ತ (ಕ್ಯಾಥೊಲಿಕ್‌) ಧರ್ಮಕ್ಕೆ ಸೇರಿದವರಾದ್ದರಿಂದ ಉಷಾ ಕೂಡಾ ಕ್ರೈಸ್ತರು ಎಂದು ಬಹಳ ಜನರು ತಿಳಿದಿದ್ದಾರೆ. ಆದರೆ 2024 ರಲ್ಲಿ ಫಾಕ್ಸ್‌ ನ್ಯೂಸ್‌ ಎಂಬ ಮಾಧ್ಯಮಕ್ಕೆ ಉಷಾ ನೀಡಿದ ಸಂದರ್ಶನದಲ್ಲಿ ತಾನು ಕ್ರಿಶ್ಚಿಯನ್‌ ಅಲ್ಲ ಎಂದು ಉಷಾ ಸ್ಪಷ್ಟಪಡಿಸಿದ್ದರು. ನನ್ನ ಹೆತ್ತವರು ಹಿಂದೂಗಳು, ಆದ್ದರಿಂದ ನಾನೂ ಹಿಂದೂವಾಗಿಯೇ ಗುರುತಿಸಿಕೊಳ್ಳುತ್ತೇನೆ. ಅದರ ಶಕ್ತಿ ಏನೆಂಬುದನ್ನು ನನ್ನ ಜೀವನದಲ್ಲಿ ನಾನು ಫೀಲ್‌ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದರು. ಜೆಡಿ ವ್ಯಾನ್ಸ್‌ ಕೂಡಾ ನ್ಯೂಯಾರ್ಕ್‌ ಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಪತ್ನಿ, ಉಷಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ, ಆದರೆ ನನ್ನೊಂದಿಗೆ ಆಕೆ ಚರ್ಚ್‌ಗೆ ಬರುತ್ತಾರೆ ಎಂದು ಹೇಳಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.