IAS Officer Resigns: ರಜೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರಾಕರಣೆ: ಹುದ್ದೆಗೆ ರಾಜೀನಾಮೆ ನೀಡಿದ ಹಿರಿಯ ಐಎಎಸ್‌ ಅಧಿಕಾರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ias Officer Resigns: ರಜೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರಾಕರಣೆ: ಹುದ್ದೆಗೆ ರಾಜೀನಾಮೆ ನೀಡಿದ ಹಿರಿಯ ಐಎಎಸ್‌ ಅಧಿಕಾರಿ

IAS Officer Resigns: ರಜೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರಾಕರಣೆ: ಹುದ್ದೆಗೆ ರಾಜೀನಾಮೆ ನೀಡಿದ ಹಿರಿಯ ಐಎಎಸ್‌ ಅಧಿಕಾರಿ

IAS Officer Resigns: ರಜೆ ವಿಸ್ತರಣೆ ಮಾಡಲಿಲ್ಲ ಎನ್ನುವ ಕಾರಣ ನೀಡಿ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದು, ಕೇಂದ್ರ ಸರ್ಕಾರವು ಅವರ ರಾಜೀನಾಮೆ ಅಂಗೀಕರಿಸಿದೆ.

ಐಎಎಸ್‌ ಅಧಿಕಾರಿ ಸುಜಾತ ರಾಜೀನಾಮೆ ನೀಡಿದ್ದಾರೆ.
ಐಎಎಸ್‌ ಅಧಿಕಾರಿ ಸುಜಾತ ರಾಜೀನಾಮೆ ನೀಡಿದ್ದಾರೆ.

IAS Officer Resigns: ಅವರು ಹಿರಿಯ ಐಎಎಸ್‌ ಅಧಿಕಾರಿ. ಈಗಾಗಲೇ ರಜೆಯಲ್ಲಿದ್ದರು. ಇನ್ನಷ್ಟು ದಿನ ರಜೆ ಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಕೇಂದ್ರ ಸರ್ಕಾರವು ಐಎಎಸ್‌ ಅಧಿಕಾರಿ ರಜೆ ಬೇಡಿಕೆಯನ್ನು ತಿರಸ್ಕರಿಸಿತು, ಸೇವೆಗೆ ಮರಳಬೇಕು ಎನ್ನುವ ಸೂಚನೆಯನ್ನು ನೀಡಿತು. ಆದರೆ ಐಎಎಸ್‌ ಅಧಿಕಾರಿ ತಮಗೆ ಇನ್ನಷ್ಟು ದಿನ ರಜೆ ಬೇಕು ಎನ್ನುವ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ. ಕೇಂದ್ರ ಸರ್ಕಾರವೂ ಕೊನೆಗೂ ಹೆಚ್ಚುವರಿ ರಜೆ ಮಂಜೂರು ಮಾಡಲೇ ಇಲ್ಲ. ಕೊನೆಗೆ ಹಿರಿಯ ಐಎಎಸ್‌ ಅಧಿಕಾರಿ ರಾಜೀನಾಮೆ ನೀಡುವ ನಿರ್ಧಾರಕ್ಕೂ ಬಂದರು. ಅದಕ್ಕೂ ಕೇಂದ್ರ ಸರ್ಕಾರ ನಿರ್ಧಾರವನ್ನು ಬದಲಿಸಲಿಲ್ಲ. ಎರಡೂವರೆ ದಶಕದಿಂದ ಐಎಎಸ್‌ ಅಧಿಕಾರಿಯಾಗಿರುವ ಅವರು ರಾಜೀನಾಮೆಯನ್ನು ಸಲ್ಲಿಸಿದರು. ಕೇಂದ್ರ ಸರ್ಕಾರವೂ ರಾಜೀನಾಮೆ ಪತ್ರವನ್ನು ಅಂಗೀಕರಿಸಿ ಅನುಮೋದನೆಯನ್ನೂ ನೀಡಿತು.

ಇದು ಒಡಿಶಾ ರಾಜ್ಯದ ಹಿರಿಯ ಐಎಎಸ್‌ ಅಧಿಕಾರಿ ಸುಜಾತ ಆರ್ ಕಾರ್ತಿಕೇಯನ್ ಎಂಬುವವರು ಐಎಎಸ್‌ ಹುದ್ದೆ ತೊರೆದ ಕಥೆ. ಅವರಿಗೆ ಇನ್ನೂ ಕೆಲವು ವರ್ಷಗಳ ಸೇವೆ ಇತ್ತು. ಆದರೆ ರಜೆಯ ಕಾರಣದಿಂದ ಅಧಿಕಾರವನ್ನೇ ತ್ಯಜಿಸುವ ಸ್ಥಿತಿ ನಿರ್ಮಾಣವಾಯಿತು.

ಸುಜಾತ ಕಾರ್ತಿಕೇಯನ್‌ ಅವರು 2000 ಬ್ಯಾಚ್‌ನ ಐಎಎಸ್ ಅಧಿಕಾರಿ. ದೆಹಲಿ ಮೂಲದವರು. ಲೇಡಿ ಶ್ರೀ ರಾಮ್ ಕಾಲೇಜಿನಿಂದ ರಾಜಕೀಯ ವಿಜ್ಞಾನದಲ್ಲಿ ಪದವೀಧರೆ. ದೆಹಲಿ ವಿಶ್ವವಿದ್ಯಾಲಯದ ಟಾಪರ್ ಆಗಿರುವ ಸುಜಾತ ಕಾರ್ತಿಕೇಯನ್ . ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ. ಅವರು ಐಎಎಸ್ ಅಕಾಡೆಮಿಯಲ್ಲಿ ಚಿನ್ನದ ಪದಕ ವಿಜೇತರೂ ಆಗಿದ್ದಾರೆ. ಪದವಿ ಮುಗಿಯುತ್ತಲೇ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿ ಒಡಿಶಾ ಕೇಡರ್‌ ಅಧಿಕಾರಿಯಾಗಿ ಸೇರಿಕೊಂಡರು. ಅಲ್ಲಿಯೇ ಒಡಿಶಾ ಕೇಡರ್‌ ಐಎಎಸ್‌ ಅಧಿಕಾರಿಯಾಗಿದ್ದ ವಿ.ಕೆ.ಪಾಂಡಿಯನ್‌ ಅವರನ್ನು ಮದುವೆಯಾಗಿ ಎರಡೂವರೆ ದಶಕ ಕಾಲ ಚೆನ್ನಾಗಿಯೇ ಕೆಲಸ ಮಾಡಿದ್ದಾರೆ ಸುಜಾತ.

ಸುಜಾತ ಅವರು ತಮಗೆ ವಹಿಸಿದ ಜಿಲ್ಲೆಗಳು, ಇಲಾಖೆಗಳಲ್ಲಿ ಉತ್ತಮವಾಗಿ ಕೆಲಸ ಮಾಡಿ ಛಾಪು ಮೂಡಿಸಿ ಗಮನ ಸೆಳೆದ ಅಧಿಕಾರಿ. ಒಡಿಶಾದ ಮಾವೋವಾದಿ ಪೀಡಿತ ಸುಂದರಗಢ ಜಿಲ್ಲೆಯಲ್ಲಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ಸುಜಾತ ಅವರು "ಚಲನಶೀಲತೆಯೇ ಸಬಲೀಕರಣ" ಎಂಬ ಧ್ಯೇಯವಾಕ್ಯದಡಿಯಲ್ಲಿ ಬ್ಯಾಂಕ್ ಮೂಲಕ ನೀಡಲಾಗುವ ಪ್ರಾಯೋಜಕತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ಯೋಜನೆಯನ್ನು ಅವರು ಪ್ರಾರಂಭಿಸಿದ್ದರು. ಆನಂತರ ಕರ್ನಾಟಕ ಸಹಿತ ಹಲವು ರಾಜ್ಯಗಳು ಸೈಕಲ್‌ ಯೋಜನೆಗ ಜಾರಿಗೆ ತಂದವು.

ಶಾಲೆಗಳಲ್ಲಿ ಹುಡುಗಿಯರ ದಾಖಲಾತಿಯನ್ನು ಸುಧಾರಿಸಿದ ಸೈಕಲ್‌ ನೀಡಿಕೆಯನ್ನು ಒಡಿಶಾದಾದ್ಯಂತದ ಎಲ್ಲಾ ಶಾಲೆಗಳಿಗೆ ರಾಜ್ಯ ಸರ್ಕಾರ ವಿಸ್ತರಿಸಿತು. ರಾಜ್ಯದ ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಯುವಜನರನ್ನು ಮಾವೋವಾದಿ ಪ್ರಭಾವದಿಂದ ದೂರವಿಡಲು ಅವರು ಫುಟ್ಬಾಲ್‌ನಂತಹ ಕ್ರೀಡೆಗಳಿಗೆ ಒತ್ತು ನೀಡಿದರು. ನಂತರ ಹಾಕಿಯನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ಹುಡುಗಿಯರು ಮತ್ತು ಹುಡುಗರಿಗಾಗಿ ಹಾಸ್ಟೆಲ್‌ಗಳನ್ನು ಸ್ಥಾಪಿಸಿದರು. 2006 ರಲ್ಲಿ, ಅವರು ಸುಂದರ್‌ಗಢದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಯೋಜನೆಯಲ್ಲಿ ಮೊಟ್ಟೆಗಳನ್ನು ಪರಿಚಯಿಸಿದರು. ಆಗಿನ ಸಿಎಂ ನವೀನ್‌ ಪಟ್ನಾಯಕ್ ಉದ್ಘಾಟಿಸಿದ ಇದನ್ನು ನಂತರ ರಾಜ್ಯಾದ್ಯಂತ ವಿಸ್ತರಿಸಲಾಯಿತು.

ಕಟಕ್ ಜಿಲ್ಲೆಯ ಕೆಲಸ ಮಾಡುವಾಗ ಅಲ್ಲಿಯೂ ಹಲವು ಸುಧಾರಣೆ ಮಾಡಿದರು. ನಂತರ ಅವರು ರಾಜ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣ ನಿರ್ದೇಶಕಿಯಾಗಿ ಸೇರಿದರು. ಅವರು 70 ಲಕ್ಷ ಮಹಿಳೆಯರನ್ನು ಸಂಪರ್ಕಿಸುವ ಮೂಲಕ 'ಮಿಷನ್ ಶಕ್ತಿ'ಯ ಪ್ರಮುಖ ಉಪಕ್ರಮವನ್ನು ವರ್ಷಗಳ ಕಾಲ ಮುನ್ನಡೆಸಿದರು. ಮಹಿಳೆಯರು ನಡೆಸುವ ಸ್ವಸಹಾಯ ಗುಂಪುಗಳಿಗೆ (SHGs) ಸಾಲ ಸಂಪರ್ಕದ ಸುತ್ತ ಕೇಂದ್ರೀಕೃತವಾಗಿರುವ ಈ ಯೋಜನೆಯು ರಾಜ್ಯಾದ್ಯಂತ ಮಹಿಳಾ ಉದ್ಯಮಗಳನ್ನು ಮುನ್ನಡೆಸಿದೆ ಮಹಿಳಾ ಸ್ವಸಹಾಯ ಗುಂಪು ಸದಸ್ಯರನ್ನು ನಿಯಮಿತವಾಗಿ ದುಬೈ ಮತ್ತು ಸಿಂಗಾಪುರಕ್ಕೆ ಭೇಟಿ ಕಳುಹಿಸಲಾಗುತ್ತಿತ್ತು. ಸ್ವಸಹಾಯ ಗುಂಪು ಉತ್ಪನ್ನಗಳ ಮಾರುಕಟ್ಟೆಯನ್ನು ಉತ್ತೇಜಿಸಲು, ಒಡಿಶಾದಾದ್ಯಂತ 'ಮಿಷನ್ ಶಕ್ತಿ' ಬಜಾರ್‌ಗಳನ್ನು ಸ್ಥಾಪಿಸಲಾಯಿತು. ಭುವನೇಶ್ವರದಲ್ಲಿ ಒಂದು ಐಕಾನಿಕ್ ಬೋಟಿಕ್‌ ಅಂಗಡಿಯನ್ನು ಸಹ ಸ್ಥಾಪಿಸಲಾಯಿತು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅಂಗಡಿಗಳಲ್ಲಿ ಒಂದಕ್ಕೆ ಭೇಟಿ ನೀಡಿ ನಗರ ಗ್ರಾಹಕ ನೆಲೆಗೆ ಕೃಷಿ ಉತ್ಪನ್ನಗಳ ಮಾರಾಟವನ್ನು ಶ್ಲಾಘಿಸಿದಾಗ ಈ ಯೋಜನೆ ಗಮನ ಸೆಳೆಯಿತು.

ಈ ನಡುವೆ ಅವರ ಪತಿ ಪಾಂಡಿಯನ್‌ ಅವರು ನವೀನ್‌ ಪಟ್ನಾಯಕ್‌ಗೆ ಆತ್ಮೀಯರಾಗಿ ರಾಜಕೀಯವಾಗಿ ಗುರುತಿಸಿಕೊಂಡರು ಎನ್ನುವ ಕಾರಣಕ್ಕೆ ಸುಜಾತ ಅವರನ್ನು ಪ್ರಮುಖವಲ್ಲದ ಇಲಾಖೆಗೆ ವರ್ಗ ಮಾಡಲಾಗಿತ್ತು. ಆನಂತರ ಸುಜಾತ ಅವರು ರಜೆಯ ಮೇಲಿದ್ದರು. ಅವಧಿ ಮುಗಿದ ನಂತರ ಮತ್ತೆ ಆರು ತಿಂಗಳ ರಜೆಗೆ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ರಜೆ ಅವಧಿ ವಿಸ್ತರಣೆ ಮಾಡಲು ನಿರಾಕರಿಸಿತು. ಈಗ ರಾಜೀನಾಮೆ ನೀಡಿ ಸ್ವಯಂ ಪ್ರೇರಿತ ನಿವೃತ್ತಿ ಪಡೆದಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.