Business news: ಭಾರತದ ನೂತನ ಸಂಸತ್ ಭವನ ಲೋಕಾರ್ಪಣೆ ನೆನಪಿಗೆ 75 ರೂಪಾಯಿ ನಾಣ್ಯ
ನಾಣ್ಯವೂ ಸಂಪೂರ್ಣ ವಿಶೇಷತೆಯಿಂದ ಕೂಡಿದೆ. ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ಥಂಭದೊಂದಿಗೆ ಸಿಂಹದ ಮುಖ ಇರಲಿದೆ. ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ.
ಹೊಸದಿಲ್ಲಿ: ಭಾರತದ ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರವು 75 ರೂಪಾಯಿ ಮುಖ ಬೆಲೆಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಿದೆ.
ಕೇಂದ್ರ ಹಣಕಾಸು ಸಚಿವಾಲಯವು ಈ ನಾಣ್ಯವನ್ನು ಸಿದ್ದಪಡಿಸಿದೆ. ನಾಣ್ಯವೂ ಸಂಪೂರ್ಣ ವಿಶೇಷತೆಯಿಂದ ಕೂಡಿದೆ.
ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ಥಂಭದೊಂದಿಗೆ ಸಿಂಹದ ಮುಖ ಇರಲಿದೆ. ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ನಾಣ್ಯದ ಎಡ ಭಾಗದಲ್ಲಿ ಭಾರತ್ ಎಂದು ದೇವನಗರಿ ಲಿಪಿಯಲ್ಲಿ ಬರೆಯಲಾಗಿದೆ. ಬಲ ಭಾಗದಲ್ಲಿ ಇಂಡಿಯಾ ಎಂದು ಇಂಗ್ಲೀಷ್‌ನಲ್ಲಿ ಉಲ್ಲೇಖಿಸಲಾಗಿದೆ. ರೂಪಾಯಿ ಚಿಹ್ನೆಯೂ ದೊಡ್ಡದಾಗಿ ಕಾಣಿಸಲಿದೆ.
ನಾಣ್ಯದ ಮತ್ತೊಂದು ಬದಿಯಲ್ಲಿ ನೂತನ ಸಂಸತ್ ಸಂಕೀರ್ಣದ ಚಿತ್ರವಿರಲಿದೆ. ಕೆಳ ಭಾಗದಲ್ಲಿ ಸಂಸತ್ ಸಂಕಲ್ಪ ಎಂದು ದೇವನಗರಿ ಲಿಪಿಯಲ್ಲಿ ಬರೆಯಲಾಗಿದೆ. ಬಲ ಬದಿಯಲ್ಲಿ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಎಂದು ಇಂಗ್ಲೀಷ್‌ನಲ್ಲಿ ಮುದ್ರಿಸಲಾಗಿದೆ.
ಇಡೀ ನಾಣ್ಯದ ತೂಕ 35 ಗ್ರಾಂನಷ್ಟು ಇರಲಿದೆ, ನಾಣ್ಯದ ಸುತ್ತಳತೆ 44 ಮಿಲಿ ಮೀಟರ್. ನಾಣ್ಯವು ಶೇಕಡ 50ರಷ್ಟು ಬೆಳ್ಳಿ, ಶೇ. 40ರಷ್ಟು ತಾಮ್ರ, ತಲಾ ಶೇ .5ರಷ್ಟು ಸತು ಹಾಗೂ ಮಿಶ್ರ ಲೋಹವನ್ನು ಒಳಗೊಂಡಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಸೆಕ್ಯುರಿಟಿ ಪ್ರಿಂಟ್ ಮಿಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ನೋಯಿಡಾ, ಕೋಲ್ಕತ್ತಾ, ಮುಂಬೈ ಹಾಗೂ ಹೈದ್ರಾಬಾದ್‌ನಲ್ಲಿರುವ ಘಟಕದಲ್ಲಿ ಈ ವಿಶೇಷ ನಾಣ್ಯಗಳನ್ನು ಮುದ್ರಿಸಲಿದೆ.
ಈಗಾಗಲೇ 75 ರೂಪಾಯಿ ಮುಖಬೆಲೆಯ ನಾಣ್ಯ ಮುದ್ರಿಸಲಾಗಿದ್ದರೂ ನೂತನ ಸಂಸತ್ ಭವನ ಸಂಕೀರ್ಣದ ವಿಶೇಷ ನಾಣ್ಯ ಇದಾಗಲಿದೆ. ಸದ್ಯ 60, 75, 100, 125, 1000 ರೂಪಾಯಿ ಮುಖ ಬೆಲೆಯ ನಾಣ್ಯಗಳು ನಮ್ಮಲ್ಲಿವೆ. ಇವೆಲ್ಲವೂ ವಿಶೇಷ ಸ್ಮರಣಾರ್ಥ ಬಿಡುಗಡೆ ಮಾಡಿರುವಂತವು. ವಿಶೇಷ ನಾಣ್ಯಗಳು ಬೇಕಿದ್ದರೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಪತ್ರ ಬರೆದು ಅಗತ್ಯ ಹಣ ತುಂಬಿದರೆ ಕಳುಹಿಸಿಕೊಡಲಾಗುತ್ತದೆ ಎಂಬುದು ಆರ್‌ಬಿಐ ಅಧಿಕಾರಿಗಳ ಮಾಹಿತಿ.
ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ವಿಶಾಲ ಸಂಸತ್ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಇದನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.