Governor Appointed: ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರಕ್ಕೆ ಹೊಸ ರಾಜ್ಯಪಾಲ, ಕೇರಳ,ಒಡಿಶಾ ಸಹಿತ 5 ರಾಜ್ಯಗಳಿಗೆ ಗವರ್ನರ್‌ ನೇಮಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Governor Appointed: ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರಕ್ಕೆ ಹೊಸ ರಾಜ್ಯಪಾಲ, ಕೇರಳ,ಒಡಿಶಾ ಸಹಿತ 5 ರಾಜ್ಯಗಳಿಗೆ ಗವರ್ನರ್‌ ನೇಮಕ

Governor Appointed: ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರಕ್ಕೆ ಹೊಸ ರಾಜ್ಯಪಾಲ, ಕೇರಳ,ಒಡಿಶಾ ಸಹಿತ 5 ರಾಜ್ಯಗಳಿಗೆ ಗವರ್ನರ್‌ ನೇಮಕ

ಕೇರಳ, ಬಿಹಾರ ಸಹಿತ ಐದು ರಾಜ್ಯಗಳ ರಾಜ್ಯಪಾಲರನ್ನು ಬದಲಾಯಿಸಲಾಗಿದೆ.ಮೂರು ರಾಜ್ಯಗಳಿಗೆ ಈಗಿದ್ದ ರಾಜ್ಯಪಾಲರ ಬದಲಾವಣೆಯಾಗಿದ್ದರೆ, ಎರಡು ರಾಜ್ಯಗಳಿಗೆ ಹೊಸಬರನ್ನು ನಿಯೋಜಿಸಲಾಗಿದೆ.

ಬಿಹಾರ ರಾಜ್ಯಪಾಲರಾಗಿ ಆರಿಫ್‌ ಮೊಹಮ್ಮದ್‌ ಖಾನ್‌, ಮಿಜೋರಾಂ ರಾಜ್ಯಪಾಲರಾಗಿ ವಿಕೆಸಿಂಗ್‌, ಕೇರಳ ರಾಜ್ಯಪಾಲರಾಗಿ ರಾಜೇಂದ್ರ ಅರ್ಲೇಕರ್‌ ಅವರನ್ನು ನೇಮಿಸಲಾಗಿದೆ.
ಬಿಹಾರ ರಾಜ್ಯಪಾಲರಾಗಿ ಆರಿಫ್‌ ಮೊಹಮ್ಮದ್‌ ಖಾನ್‌, ಮಿಜೋರಾಂ ರಾಜ್ಯಪಾಲರಾಗಿ ವಿಕೆಸಿಂಗ್‌, ಕೇರಳ ರಾಜ್ಯಪಾಲರಾಗಿ ರಾಜೇಂದ್ರ ಅರ್ಲೇಕರ್‌ ಅವರನ್ನು ನೇಮಿಸಲಾಗಿದೆ.

ದೆಹಲಿ: ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರ ಹಾಗೂ 2026 ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳ ರಾಜ್ಯದ ರಾಜ್ಯಪಾಲರನ್ನು ಬದಲಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ. ಕೇರಳ ಹಾಗೂ ಬಿಹಾರದ ರಾಜ್ಯಪಾಲರನ್ನು ಅದಲು ಬದಲು ಮಾಡಲಾಗಿದೆ. ಒಡಿಶಾ, ಮಿಜೋರಾಂ, ಮಣಿಪುರ ರಾಜ್ಯಕ್ಕೂ ಹೊಸ ಗವರ್ನರ್‌ ನಿಯೋಜನೆಗೊಂಡಿದ್ದಾರೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಏರ್ಪಟ್ಟಿದ್ದರೂ ಈ ರಾಜ್ಯಗಳಲ್ಲಿ ಬದಲಾವಣೆ ಮಾಡಿಲ್ಲ.

ಕೇರಳದಲ್ಲಿ ಐದು ವರ್ಷದಿಂದ ರಾಜ್ಯಪಾಲರಾಗಿ ಅಲ್ಲಿನ ಸರ್ಕಾರದೊಂದಿಗೆ ಕುಲಪತಿಗಳ ನೇಮಕ ಸಹಿತ ಹಲವು ವಿಚಾರದಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದ ರಾಜ್ಯಪಾಲ ಮೊಹಮ್ಮದ್ ಆರೀಫ್ ಖಾನ್ ಅವರನ್ನು ಬದಲಾಯಿಸಲಾಗಿದೆ. 2019ರಲ್ಲಿ ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೇರಳ ರಾಜ್ಯಪಾಲರಾಗಿ ಖಾನ್ ಅವರನ್ನು ನೇಮಿಸಿದರು. ಮೊಹಮ್ಮದ್ ಆರೀಫ್ ಖಾನ್ ಅವರು ಇನ್ನು ಮುಂದೆ ಬಿಹಾರ ರಾಜ್ಯಪಾಲರಾಗಿ ಇರಲಿದ್ದಾರೆ. ಅವರನ್ನು ಬಿಹಾರ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ನೇಮಕ ಮಾಡಿದ್ದಾರೆ.

ಈವರೆಗೂ ಬಿಹಾರ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಕೇರಳ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಅವರು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಈಗ ಮೂರನೇ ರಾಜ್ಯದ ರಾಜ್ಯಪಾಲ ಹುದ್ದೆಯನ್ನು ನಿಭಾಯಿಸಲಿದ್ದಾರೆ. ಗೋವಾ ರಾಜ್ಯದವರಾದ ಅರ್ಲೇಕರ್‌ ಅವರು ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದರು.

ಒಡಿಶಾ ರಾಜ್ಯದ ರಾಜ್ಯಪಾಲರಾಗಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುಬರ ದಾಸ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕಾರವಾಗಿದೆ. ಅವರ ಜಾಗಕ್ಕೆ ಒಡಿಶಾದ ರಾಜ್ಯಪಾಲರನ್ನಾಗಿ ಡಾ. ಹರಿಬಾಬು ಕಂಭಂಪತಿ ಅವರನ್ನು ನಿಯೋಜನೆ ಮಾಡಲಾಗಿದೆ. 2021ರ ಜುಲೈ 19ರಿಂದ ಡಾ. ಹರಿಬಾಬು ಮಿಜೋರಾಂ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗೆ ಮುಗಿದ ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು. ಈ ಹಿಂದೆ ರಘುಬರದಾಸ್‌ ಸತತ ಐದು ವರ್ಷ ಸಿಎಂ ಆಗಿದ್ದರು. ಅವರಿಗೆ ಮತ್ತೆ ಬಿಜೆಪಿ ನಾಯಕತ್ವ ನೀಡಬಹುದೇ ಎನ್ನುವ ಪ್ರಶ್ನೆಗಳಿವೆ.

ಸತತ ಎರಡು ವರ್ಷದಿಂದ ಹಿಂಸಾಪೀಡಿತ ರಾಜ್ಯವಾಗಿ ಮಾರ್ಪಟ್ಟಿರುವ ಮಣಿಪುರ ರಾಜ್ಯಪಾಲರಾಗಿ ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ನೇಮಕಗೊಂಡಿದ್ದಾರೆ. ಐಎಎಸ್‌ ಅಧಿಕಾರಿಯಾಗಿ ಮೂರೂವರೆ ದಶಕಕ್ಕೂ ಹೆಚ್ಚು ಕಾಲ ಭಲ್ಲಾ ಸೇವೆ ಮಾಡಿದ್ದಾರೆ.

ಮಿಜೋರಾಂ ಗವರ್ನರ್ ಆಗಿ ವಿಜಯ್ ಕುಮಾರ್ ಸಿಂಗ್‌ ಅವರನ್ನು ನಿಯೋಜನೆ ಮಾಡಲಾಗಿದೆ. ಮಾಜಿ ಸೇನಾ ಮುಖ್ಯಸ್ಥ ವಿಜಯ್ ಕುಮಾರ್ ಸಿಂಗ್‌ ಅವರಿಗೆ ರಾಜ್ಯಪಾಲರ ಹುದ್ದೆ ದೊರೆತಿದೆ. ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಸಚಿವರೂ ಆಗಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.