Govt Job Alert: ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶ, 7ನೇ ವೇತನ ಆಯೋಗದಡಿ 81,000 ರೂ ತನಕ ಸಂಬಳ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Govt Job Alert: ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶ, 7ನೇ ವೇತನ ಆಯೋಗದಡಿ 81,000 ರೂ ತನಕ ಸಂಬಳ

Govt Job Alert: ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶ, 7ನೇ ವೇತನ ಆಯೋಗದಡಿ 81,000 ರೂ ತನಕ ಸಂಬಳ

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಸಿ ಸ್ತರದಲ್ಲಿ ಒಟ್ಟು 3712 ಹುದ್ದೆಗಳ ಭರ್ತಿಗಾಗಿ ಸಿಬ್ಬಂದಿ ಆಯ್ಕೆ ಆಯೋಗ ಅಧಿಸೂಚನೆ ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರಸರ್ಕಾರದಲ್ಲಿ ಉದ್ಯೋಗಾವಕಾಶ ಇದಾಗಿದ್ದು, 7ನೇ ವೇತನ ಆಯೋಗದಡಿ 81000ರೂ ತನಕ ಸಂಬಳವೂ ಇದೆ. ವಿವರ ವರದಿ ಇಲ್ಲಿದೆ.

ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶ - ಸಿಬ್ಬಂದಿ ಆಯ್ಕೆ ಆಯೋಗದಿಂದ ಅಧಿಸೂಚನೆ ಪ್ರಕಟ (ಸಾಂಕೇತಿಕ ಚಿತ್ರ)
ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶ - ಸಿಬ್ಬಂದಿ ಆಯ್ಕೆ ಆಯೋಗದಿಂದ ಅಧಿಸೂಚನೆ ಪ್ರಕಟ (ಸಾಂಕೇತಿಕ ಚಿತ್ರ)

ನವದೆಹಲಿ/ ಬೆಂಗಳೂರು: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಯಿತು. ಅನೇಕರು ವಿದ್ಯಾಭ್ಯಾಸ ಮುಂದುವರಿಸಿದರೆ, ಇನ್ನು ಅನೇಕರು ಸರ್ಕಾರಿ ಉದ್ಯೋಗ ಸೇರಿ ಬಳಿಕ ಶಿಕ್ಷಣ ಮುಂದುವರಿಸೋಣ ಎಂದುಕೊಳ್ಳುತ್ತಿರಬಹುದು. ಅಂಥವರಿಗೆ ಬಹುದೊಡ್ಡ ಉದ್ಯೋಗಾವಕಾಶ ಕಾಯುತ್ತಿದೆ. ಸಿಬ್ಬಂದಿ ಆಯ್ಕೆ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಷನ್‌) ಕಂಬೈಂಡ್‌ ಹೈಯರ್ ಸೆಕೆಂಡರಿ (10+2) ಲೆವೆಲ್ ಎಕ್ಸಾಮ್‌ 2024 ರ ಅಧಿಸೂಚನೆ ಪ್ರಕಟಿಸಿದೆ.

ಲೋವರ್ ಡಿವಿಜನಲ್ ಕ್ಲರ್ಕ್ (ಎಲ್‌ಡಿಸಿ)/ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (ಜೆಎಸ್‌ಎ), ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ (ಪಿಎ/ಎಸ್‌ಎ), ಮತ್ತು ಡಾಟಾ ಎಂಟ್ರಿ ಆಪರೇಟರ್ (ಡಿಇಒ) ಸೇರಿ ವಿವಿಧ ಹುದ್ದೆಗಳಿಗೆ ಒಟ್ಟು 3712 ಹುದ್ದೆಗಳ ಭರ್ತಿಗಾಗಿ ಈ ಪರೀಕ್ಷೆ ನಡೆಸುತ್ತಿರುವಾಗಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

"ಭಾರತ ಸರ್ಕಾರದ ಅಧೀನ ಇರುವ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಸಿಬ್ಬಂದಿ ಆಯ್ಕೆ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತದೆ. ಲೋವರ್ ಡಿವಿಜನಲ್ ಕ್ಲರ್ಕ್‌/ ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ ಮತ್ತು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು / ಇಲಾಖೆಗಳು / ಕಚೇರಿಗಳು ಮತ್ತು ವಿವಿಧ ಸಾಂವಿಧಾನಿಕ ಸಂಸ್ಥೆಗಳು / ಶಾಸನಬದ್ಧ ಸಂಸ್ಥೆಗಳು / ನ್ಯಾಯಮಂಡಳಿಗಳು ಇತ್ಯಾದಿಗಳಿಗೆ ಡೇಟಾ ಎಂಟ್ರಿ ಆಪರೇಟರ್‌ಗಳ ಹುದ್ದೆಗಳು ಖಾಲಿ ಇರುವುದಾಗಿ ಸಿಬ್ಬಂದಿ ಆಯ್ಕೆ ಆಯೋಗದ ಏಪ್ರಿಲ್ 8ರ ಅಧಿಸೂಚನೆ ತಿಳಿಸಿದೆ.

ಕಂಬೈಂಡ್‌ ಹೈಯರ್ ಸೆಕೆಂಡರಿ (10+2) ಲೆವೆಲ್ ಎಕ್ಸಾಮ್‌ 2024 ರ ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಏಪ್ರಿಲ್ 8

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 7 (ರಾತ್ರಿ 11)

ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಮೇ 8 (ರಾತ್ರಿ 11)

ಅರ್ಜಿ ನಮೂನೆ ತಿದ್ದುಪಡಿ ಅವಕಾಶ : ಮೇ 10, 2024 ರಿಂದ ಮೇ 11, 2024 (ರಾತ್ರಿ 11 ಗಂಟೆ).

ಶ್ರೇಣಿ I ಪರೀಕ್ಷೆ (ಕಂಪ್ಯೂಟರ್ ಆಧಾರಿತ ಪರೀಕ್ಷೆ): ಜುಲೈ 1 ರಿಂದ ಜುಲೈ 5 ಮತ್ತು ಜುಲೈ 8 ರಿಂದ ಜುಲೈ 12.

ಶ್ರೇಣಿ II ಪರೀಕ್ಷೆ: ದಿನಾಂಕ ಪ್ರಕಟವಾಗಿಲ್ಲ

ದ್ವಿತೀಯ ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ; ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ 2024ರ ಅರ್ಹತೆ

ಸಿಬ್ಬಂದಿ ಆಯ್ಕೆ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಷನ್‌) ನಡೆಸುವ ಕಂಬೈಂಡ್‌ ಹೈಯರ್ ಸೆಕೆಂಡರಿ (10+2) ಲೆವೆಲ್ ಎಕ್ಸಾಮ್‌ 2024 (ಸಿಎಚ್‌ಎಸ್‌ಎಲ್‌) ರ ಅರ್ಹತಾ ಮಾನದಂಡಗಳು ಹೀಗಿವೆ.

ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸಿನ ಮಿತಿ 18 ವರ್ಷ ಮತ್ತು ಗರಿಷ್ಠ ವಯಸ್ಸಿ ಮಿತಿ 27 ವರ್ಷ. ಅರ್ಹರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್ ಖಾಲಿ ಹುದ್ದೆಗಳ ಅರ್ಹತಾ ಮಾನದಂಡಗಳು ಆಯಾ ಹುದ್ದೆಗೆ ಅನುಗುಣವಾಗಿದ್ದು, ಇದನ್ನು ನೇಮಕಾತಿ ಬಯಸುತ್ತಿರುವ ಅಭ್ಯರ್ಥಿಗಳು ಗಮನಿಸಬೇಕು. ಸಿಬ್ಬಂದಿ ಆಯ್ಕೆ ಆಯೋಗದ ಸಿಎಚ್‌ಎಸ್‌ಎಲ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಶೈಕ್ಷಣಿಕ ಮಾನದಂಡ 12 ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮಂಡಳಿಯಿಂದ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು.

ಲೋವರ್ ಡಿವಿಜನಲ್ ಕ್ಲರ್ಕ್‌/ ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ ಮತ್ತು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು / ಇಲಾಖೆಗಳು / ಕಚೇರಿಗಳು ಮತ್ತು ವಿವಿಧ ಸಾಂವಿಧಾನಿಕ ಸಂಸ್ಥೆಗಳು / ಶಾಸನಬದ್ಧ ಸಂಸ್ಥೆಗಳು / ನ್ಯಾಯಮಂಡಳಿಗಳು ಇತ್ಯಾದಿಗಳಿಗೆ ಡೇಟಾ ಎಂಟ್ರಿ ಆಪರೇಟರ್‌ಗಳ ಹುದ್ದೆಗಳಿಗೆ ಅಗತ್ಯವಿರುವ ಕೆಲವು ವಿಭಿನ್ನ ಶೈಕ್ಷಣಿಕ ಅರ್ಹತೆಗಳಿವೆ. ಆದ್ದರಿಂದ, ಅಭ್ಯರ್ಥಿಗಳು ಎಸ್‌ಎಸ್‌ಸಿಯ ವೆಬ್‌ಸೈಟ್ - ssc.gov.in ನಲ್ಲಿ ಲಭ್ಯವಿರುವ ಅಧಿಸೂಚನೆಯ ವಿವರವನ್ನು ಗಮನಿಸಬೇಕು.

ಸಿಎಚ್‌ಎಸ್‌ಎಲ್‌ 2024; ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ - 10 ಹಂತದ ಮಾರ್ಗದರ್ಶಿ

ಸಿಬ್ಬಂದಿ ಆಯ್ಕೆ ಆಯೋಗದ ಸಿಎಚ್‌ಎಸ್‌ಎಲ್‌ 2024ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದರೆ ಪ್ರಾಥಮಿಕ ನೋಂದಣಿ ಮುಗಿಸಬೇಕು. ಇದನ್ನು ಆಯೋಗದ ಒಂದು ಬಾರಿ ನೋಂದಣಿ ವೇದಿಕೆಯಲ್ಲಿ (ಒಟಿಆರ್ ಪೋರ್ಟಲ್‌) ಮಾಡಬೇಕು. ಒಟಿಆರ್‌ ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರ ಸಿಎಚ್‌ಎಸ್‌ಎಲ್‌ 2024ರ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಈ ಹಂತಗಳನ್ನು ಅನುಸರಿಸಬೇಕು.

1) ನಿಮ್ಮ ಅಂಕಪಟ್ಟಿ, ಪ್ರಮಾಣಪತ್ರಗಳ ಸಾಫ್ಟ್‌ ಕಾಪಿ, ಸ್ಪಷ್ಟ ಪಾಸ್‌ಪೋರ್ಟ್‌ ಡಿಜಿಟಲ್‌ ಫೋಟೋ (ಕನ್ನಡಕ, ಕ್ಯಾಪ್ ಧರಿಸದೇ ನೇರವಾಗಿ ಕ್ಯಾಮೆರಾ ಕಡೆಗೆ ಮುಖ ಮಾಡಿ ತೆಗೆದ ಫೋಟೋ) ಸಿದ್ಧವಾಗಿಟ್ಟುಕೊಳ್ಳಬೇಕು. ಇವು ನೀವು ಈ ನೋಂದಣಿ ಪ್ರಕ್ರಿಯೆ ಮಾಡುವ ಕಂಪ್ಯೂಟರ್‌/ ಲ್ಯಾಪ್‌ಟಾಪ್‌ನಲ್ಲಿರಬೇಕು.

2) ಸಿಎಚ್‌ಎಸ್‌ಎಲ್‌ 2024ರ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಆನ್‌ಲೈನ್‌ ತಾಣ (https://ssc.gov.in/) ಕ್ಕ ಹೋಗಬೇಕು.

3) ಈ ತಾಣದ ಮುಖಪುಟದಲ್ಲಿ ಬಲ ಭಾಗದಲ್ಲಿ ಕೆಳಗೆ ಕ್ವಿಕ್ ಲಿಂಕ್ಸ್‌ ಎಂಬ ವಿಭಾಗವಿದೆ. ಅಲ್ಲಿ “Apply” ಎಂಬುದನ್ನು ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ವಿಂಡೋದಲ್ಲಿ “Combined Higher Secondary Level (10+2) Examination.,2024” ಎಂಬುದರ ಎದುರು ಇರುವ “Apply” ಎಂಬುದನ್ನು ಕ್ಲಿಕ್ ಮಾಡಬೇಕು. ಆಗ ಲಾಗಿನ್ ಟು ಯುವರ್ ಅಕೌಂಟ್ ಎಂಬ ಪುಟ (https://ssc.gov.in/login) ತೆರೆದುಕೊಳ್ಳುತ್ತದೆ. ಲಾಗಿನ್ ಆಗಲು ಒಟಿಆರ್ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಬೇಕು.

4) ಇದಾಗಿ ತೆರೆದುಕೊಳ್ಳುವ ಪುಟದಲ್ಲಿ 1 ರಿಂದ 18ರ ತನಕದ ಮಾಹಿತಿಗಳು ನೀವು ಈಗಾಗಲೇ ಭರ್ತಿ ಮಾಡಿದ ಒಟಿಆರ್ ಮಾಹಿತಿ ಪ್ರಕಾರ ಭರ್ತಿಯಾಗಿರುತ್ತವೆ. ಇವುಗಳನ್ನು ಎಡಿಟ್ ಮಾಡಲಾಗದು.

5) ನಿಮ್ಮ ಶೈಕ್ಷಣಿಕ ಅರ್ಹತೆಗಳು, ವೈಯಕ್ತಿಕ ವಿವರಗಳನ್ನು ನಮೂದಿಸಿ, ಮತ್ತು ಫಾರ್ಮ್‌ನಲ್ಲಿ ವಿನಂತಿಸಲಾದ ಯಾವುದೇ ಇತರ ಮಾಹಿತಿಯನ್ನೂ ಒದಗಿಸಬೇಕು.

6) ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪೂರ್ಣಗೊಳಿಸಿದ ನಂತರ, ನಿಮ್ಮ ಸ್ಪಷ್ಟ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ. ಇದು ಸ್ಪಷ್ಟವಾಗಿದೆ ಮತ್ತು ನಿರ್ದಿಷ್ಟಪಡಿಸಿದ ಸ್ವರೂಪಕ್ಕೆ ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಮಸುಕಾದ ಫೋಟೋ ಅಪ್ಲೋಡ್ ಮಾಡಿದರೆ ರಿಜೆಕ್ಟ್ ಆಗುತ್ತದೆ.

7) ಪೂರ್ವವೀಕ್ಷಣೆ ವಿಭಾಗದಲ್ಲಿ ನೀವು ನಮೂದಿಸಿದ ಎಲ್ಲ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅದು ಸರಿಯಾಗಿದೆ ಎಂದು ಖಾತರಿಯಾದ ಬಳಿಕ "I agree" ಎಂಬ ಬಾಕ್ಸ್ ಅನ್ನು ಟಿಕ್ ಮಾಡುವ ಮೂಲಕ ಘೋಷಣೆಗೆ ಸಹಮತ ಸೂಚಿಸಿ.

8) ಅಂತಿಮ ಪರಿಶೀಲನೆಯ ನಂತರ, ನಿಮ್ಮ ಅರ್ಜಿಯನ್ನು ಸಲ್ಲಿಸಿ.

9) ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು (ವೀಸಾ, ಮಾಸ್ಟರ್‌ಕಾರ್ಡ್, ಮೆಸ್ಟ್ರೋ, ರುಪೇ), ನೆಟ್ ಬ್ಯಾಂಕಿಂಗ್, ಅಥವಾ ಭೀಮ್ ಯುಪಿಐ ಬಳಸಿ ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಿ. (ಜಾತಿ ವರ್ಗದ ಕಾರಣ ವಿನಾಯಿತಿ ಇದ್ದರೆ ನೋಡಿಕೊಂಡು ಅಗತ್ಯ ಇದ್ದರಷ್ಟೆ ಶುಲ್ಕ ಪಾವತಿಸಿ).

10) ಇದರೊಂದಿಗೆ ತಾತ್ಕಾಲಿಕವಾಗಿ ನಿಮ್ಮ ಅರ್ಜಿ ಸ್ವೀಕೃತವಾಗಿರುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಬಳಕೆಗಾಗಿ ಅರ್ಜಿಯ ನಕಲು ಡೌನ್‌ಲೋಡ್ ಮಾಡಿ, ಪ್ರಿಂಟ್ ತೆಗೆದು ಇಟ್ಟುಕೊಂಡಿರಬೇಕು.

ಹೆಚ್ಚಿನ ಮಾಹಿತಿಗೆ ಸಿಬ್ಬಂದಿ ಆಯ್ಕೆ ಆಯೋಗ ಏಪ್ರಿಲ್ 8ರಂದು ಪ್ರಕಟಿಸಿದ ಅಧಿಸೂಚನೆ ಗಮನಿಸಿ - ಅದರ ಪಿಡಿಎಫ್‌ ಪ್ರತಿ ಇಲ್ಲೇ ಕೆಳಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.