Gujarat assembly election results 2022: ಕಾಂಗ್ರೆಸ್ ಪಕ್ಷದ ಜಿಗ್ನೇಶ್ ಮೇವಾನಿಗೆ ಮುನ್ನಡೆ, ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ
Gujarat assembly election results 2022: ಬಿಜೆಪಿ ಕಟು ಟೀಕಾಕಾರ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಬೆಂಬಲಿತ ದಲಿತ ನಾಯಕ ಜಿಗ್ನೇಶ್ ಮೇವಾನಿಗೆ ಈ ಸಲ ಬಿಜೆಪಿ ಅಭ್ಯರ್ಥಿ ಮಣಿಭಾಯ್ ವಘೇಲಾ ಟಫ್ ಫೈಟ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್‌ನಲ್ಲಿ ಮೇವಾನಿ ಅವರು ಈ ಸಲ ಕಣಕ್ಕೆ ಇಳಿದಿದ್ದರು.
ಗುಜರಾತ್‌ನಲ್ಲಿ ವದ್ಗಾಂ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ದಲಿತ ನಾಯಕ ಜಿಗ್ನೇಶ್ ಮೇವಾನಿಗೆ ಈ ಸಲ ಬಿಜೆಪಿ ಅಭ್ಯರ್ಥಿ ಮಣಿಭಾಯ್ ವಘೇಲಾ ಟಫ್ ಫೈಟ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್‌ನಲ್ಲಿ ಮೇವಾನಿ ಅವರು ಈ ಸಲ ಕಣಕ್ಕೆ ಇಳಿದಿದ್ದರು.
ಮೇವಾನಿ ಅವರು ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆಗ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಅವರನ್ನು ಬೆಂಬಲಿಸಿದ್ದವು. ಆ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಮೇವಾನಿ, ಈ ಸಲ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಘೇಲಾಗೆ ಇಲ್ಲಿ ಟಿಕೆಟ್ ನಿರಾಕರಿಸಿತ್ತು. ಇದರಿಂದ ಬೇಸತ್ತಿದ್ದ ವಘೇಲಾ ಬಳಿಕ ಬಿಜೆಪಿ ಸೇರಿದ್ದರು.
ಜಿಗ್ನೇಶ್ ಮೇವಾನಿಯ ರಾಜಕೀಯ ಬದುಕಿನ ಮುಖ್ಯಾಂಶಗಳ ಕಡೆಗೊಂದು ನೋಟ:
1) ಈ ವರ್ಷ, ಮಾಜಿ ಪತ್ರಕರ್ತ ಜಿಗ್ನೇಶ್‌ಕುಮಾರ್ ನಟವರ್‌ಲಾಲ್ ಮೇವಾನಿ ಅವರು ಭಾರತೀಯ ಜನತಾ ಪಕ್ಷದ ಮಣಿಭಾಯ್ ವಘೇಲಾ ವಿರುದ್ಧ ಸ್ಪರ್ಧಿಸಿದರು. ಅವರಿಗಿಂತ ಮೊದಲು ಕ್ಷೇತ್ರವನ್ನು ಪ್ರತಿನಿಧಿಸಿದ್ದವರು ವಘೇಲಾ ಅಂದು ಕಾಂಗ್ರೆಸ್ ನಾಯಕರಾಗಿದ್ದರು.
2) ಗುಜರಾತ್‌ನಲ್ಲಿ 2017 ರಲ್ಲಿ ಗೆದ್ದ ಮೂರು ಸ್ವತಂತ್ರ ಅಭ್ಯರ್ಥಿಗಳಲ್ಲಿ ಮೇವಾನಿ ಒಬ್ಬರು. ಅವರು ಅಧಿಕಾರದಲ್ಲಿರುವ ಬಿಜೆಪಿಯ ನಿಷ್ಠಾವಂತ ವಿಮರ್ಶಕರಾಗಿದ್ದರು. ಅವರನ್ನು ಕಾಂಗ್ರೆಸ್ ಮತ್ತು ಎಎಪಿ ಬೆಂಬಲಿಸಿದವು, ಅವರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ. ವಘೇಲಾ ಅವರ ಕ್ಷೇತ್ರ ಬದಲಾವಣೆ ಮಾಡಿದ್ದರಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ತೆರಳಿದ್ದರು.
3) ಮೇವಾನಿ ಅವರು 2017ರ ಮೇ ತಿಂಗಳಲ್ಲಿ “ಆಜಾದಿ ಮಾರ್ಚ್” ಮಾಡಿದ್ದಕ್ಕಾಗಿ ಮೂರು ತಿಂಗಳು ಸೆರೆಯಲ್ಲಿದ್ದರು. ಉನಾ ದಲಿತ ಹಲ್ಲೆ ಪ್ರಕರಣದ ವಾರ್ಷಿಕ ನೆನಪಿಗಾಗಿ ಈ ಆಜಾದಿ ಮಾರ್ಚ್ ಅನ್ನು ಅವರು ಆಯೋಜಿಸಿದ್ದರು. ಗುಜರಾತ್‌ನ ಉನಾದಲ್ಲಿ ಸತ್ತ ಹಸುವಿನ ಚರ್ಮ ಸುಲಿದಿದ್ದಕ್ಕಾಗಿ ಏಳು ದಲಿತರನ್ನು ‘ಗೋ ರಕ್ಷಕರು’ ಥಳಿಸಿರುವ ಘಟನೆ ಗಮನ ಸೆಳೆದಿತ್ತು. ಆಗ ಮೇವಾನಿ ಎಎಪಿಯ ಸದಸ್ಯರಾಗಿದ್ದರು. ಮುಕುಲ್ ಸಿನ್ಹಾ ಅವರ ಜನಸಂಘರ್ಷ್ ಮಂಚ್ ಪರವಾಗಿ ವಕಾಲತ್ತು ವಹಿಸಿದ್ದರು. ಇದಾದ ಬಳಿಕ ಅವರು, ತಮ್ಮ ಸ್ನೇಹಿತರೊಂದಿಗೆ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ (RDAM) ಅನ್ನು ಸ್ಥಾಪಿಸಿದಾಗ ಮತ್ತು ಅಹಮದಾಬಾದ್‌ನಲ್ಲಿ ದಲಿತ ಮಹಾಸಭಾವನ್ನು ನಡೆಸಿದರು. ಈ ಉನಾ ಪ್ರಕರಣವು ಅವರ ರಾಜಕೀಯ ಜೀವನದ ಪ್ರಮುಖ ಅಂಶವಾಯಿತು.
4) ರಾಜಕೀಯ ಬದುಕಿನಲ್ಲಿ ಮಹತ್ವದ ಬದಲಾವಣೆ ಕಂಡ 42 ವರ್ಷದ ದಲಿತ ಕಾರ್ಯಕರ್ತ ಎಂಎಲ್ಎ ಆಗಿ ಬದಲಾದರು. ಅವರ ಸಮುದಾಯದಲ್ಲಿ ಮತ್ತು ಹೊರಗಿನಿಂದ ಭಾರಿ ಬೆಂಬಲ ಪಡೆದರು. ಇದು ಅವರ ಮೊದಲ ಚುನಾವಣಾ ಗೆಲುವಿನಲ್ಲಿ ಪ್ರತಿಫಲಿಸಿದೆ. ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೊಮಾ ಪಡೆದವರು. ದಲಿತರ ಹೋರಾಟ, ಗುರುತು ಮತ್ತು ಅಸ್ತಿತ್ವಕ್ಕಾಗಿ ಕೆಲಸ ಮಾಡುವ ವೇದಿಕೆ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಸಂಚಾಲಕ ಕೂಡ ಆಗಿದ್ದಾರೆ.
5) ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕಾಗಿ ಅಸ್ಸಾಂ ಪೊಲೀಸರು ಏಪ್ರಿಲ್‌ನಲ್ಲಿ ಅಲ್ಲಿಂದ ನಿರ್ಗಮಿಸುತ್ತಿದ್ದ ಗುಜರಾತ್ ಶಾಸಕ ಮೇವಾನಿ ಅವರನ್ನು ಬಂಧಿಸಿದ್ದರು. ಇದನ್ನು ಅವರ ಬೆಂಬಲಿಗರು ಯಾವಾಗಲೂ "ಬಡವರ ಹಕ್ಕುಗಳಿಗಾಗಿ ಹೋರಾಡುವ" ಯುವ ನಾಯಕನ ವಿರುದ್ಧ "ಘೋರ ದೌರ್ಜನ್ಯ" ಎಂದು ಬಣ್ಣಿಸಿದ್ದರು.