ಗುಜರಾತ್ ಲೋಕಸಭಾ ಫಲಿತಾಂಶ; 26ಕ್ಕೆ 25 ಬಿಜೆಪಿಗೆ, ಹ್ಯಾಟ್ರಿಕ್ ತಪ್ಪಿಸಿದ ಖುಷಿ ಕಾಂಗ್ರೆಸ್‌ಗೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗುಜರಾತ್ ಲೋಕಸಭಾ ಫಲಿತಾಂಶ; 26ಕ್ಕೆ 25 ಬಿಜೆಪಿಗೆ, ಹ್ಯಾಟ್ರಿಕ್ ತಪ್ಪಿಸಿದ ಖುಷಿ ಕಾಂಗ್ರೆಸ್‌ಗೆ

ಗುಜರಾತ್ ಲೋಕಸಭಾ ಫಲಿತಾಂಶ; 26ಕ್ಕೆ 25 ಬಿಜೆಪಿಗೆ, ಹ್ಯಾಟ್ರಿಕ್ ತಪ್ಪಿಸಿದ ಖುಷಿ ಕಾಂಗ್ರೆಸ್‌ಗೆ

ಲೋಕಸಭಾ ಚುನಾವಣೆಯಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಗುಜರಾತ್‌ಗೆ ವಿಶೇಷ ಸ್ಥಾನ. ಗುಜರಾತ್ ಅಭಿವೃದ್ಧಿ ಮಾದರಿ ಮುಂದಿಟ್ಟು ಚುನಾವಣೆ ಎದುರಿಸಿದ ಬಿಜೆಪಿ ಮೇಲೆ ಗುಜರಾತಿಗರಿಗೆ ವಿಶೇಷ ಒಲವು. ಗುಜರಾತ್ ಲೋಕಸಭಾ ಫಲಿತಾಂಶ ನೋಡಿದರೆ 26ಕ್ಕೆ 26ರಲ್ಲಿ ಗೆಲ್ಲಬೇಕು ಎಂದಿದ್ದ ಬಿಜೆಪಿಗೆ ಹ್ಯಾಟ್ರಿಕ್ ತಪ್ಪಿಸಿದ ಖುಷಿಯಲ್ಲಿದೆ ಕಾಂಗ್ರೆಸ್‌.

ಗುಜರಾತ್ ಲೋಕಸಭಾ ಫಲಿತಾಂಶ; 26ಕ್ಕೆ 25 ಬಿಜೆಪಿಗೆ, ಹ್ಯಾಟ್ರಿಕ್ ತಪ್ಪಿಸಿದ ಖುಷಿ ಕಾಂಗ್ರೆಸ್‌ಗೆ (ಸಾಂಕೇತಿಕ ಚಿತ್ರ)
ಗುಜರಾತ್ ಲೋಕಸಭಾ ಫಲಿತಾಂಶ; 26ಕ್ಕೆ 25 ಬಿಜೆಪಿಗೆ, ಹ್ಯಾಟ್ರಿಕ್ ತಪ್ಪಿಸಿದ ಖುಷಿ ಕಾಂಗ್ರೆಸ್‌ಗೆ (ಸಾಂಕೇತಿಕ ಚಿತ್ರ) (Creative - Manju Kotagunasi)

ಅಹಮದಾಬಾದ್‌: ಗುಜರಾತ್ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟುಕೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ, ಎರಡು ಅವಧಿ ಪೂರೈಸಿ ಮೂರನೇ ಅವಧಿಗೆ ಜನಾದೇಶ ಪಡೆಯುತ್ತಿದ್ದು, ಸತತ ಮೂರನೇ ಅವಧಿಗೆ ಗುಜರಾತ್‌ನ ಎಲ್ಲ 26 ಸ್ಥಾನಗಳಲ್ಲೂ ಗೆಲುವು ದಾಖಲಿಸಲು ಪ್ರಯತ್ನಿಸಿತ್ತು. ಆದರೆ ಜನಾದೇಶ ಹಾಗಿರಲಿಲ್ಲ. ಕೇವಲ 25 ಸ್ಥಾನಗಳನ್ನು ಬಿಜೆಪಿಗೆ ನೀಡಿದ ಮತದಾರರು, ಒಂದು ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟಿದ್ದಾರೆ.

ಗುಜರಾತ್‌ನಲ್ಲಿ 26ರ ಪೈಕಿ 25 ಲೋಕಸಭಾ ಸ್ಥಾನಗಳಿಗೆ ಮೇ 7 ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಇಲ್ಲಿ ಕೇಸರಿ ಅಲೆಯನ್ನು, ಮೋದಿ ಹವಾವನ್ನು ತಡೆಯಲು ಕಾಂಗ್ರೆಸ್‌ ಹರಸಾಹಸ ಮಾಡುತ್ತಿದೆಯಾದರೂ ಹೆಚ್ಚಿನ ಪ್ರಯೋಜನವಾದಂತೆ ಗೋಚರಿಸುತ್ತಿಲ್ಲ. ಈ ಬಾರಿ ವಿಶೇಷ ಏನಪ್ಪಾ ಅಂದರೆ ಈಗಾಗಲೇ ಬಿಜೆಪಿ ತನ್ನ ಖಾತೆಯನ್ನು ಗುಜರಾತ್‌ನಲ್ಲಿ ತೆರೆದಿದೆ. ಸೂರತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತವಾದ ನಂತರದಲ್ಲಿ, ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರು. ಹೀಗಾಗಿ ಬಿಜೆಪಿಯ ಮುಕೇಶ್ ಚಂದ್ರಕಾಂತ್ ದಲಾಲ್ ಅವಿರೋಧವಾಗಿ ಆಯ್ಕೆಯಾದರು.

ಇಂಡಿಯಾ ಗುಂಪಿನಲ್ಲಿ ಗುಜರಾತ್‌ನ 26 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 23 ರಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿತ್ತು. ಸೂರತ್‌ನಲ್ಲಿ ಒಂದು ನಾಮಪತ್ರ ತಿರಸ್ಕೃತವಾಗಿದೆ. ಇನ್ನು 2 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಸ್ಪರ್ಧಿಸಿದೆ. ಇದಕ್ಕೆ ಹೊರತಾಗಿ ಬಿಎಸ್‌ಪಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಸಮಾಜವಾದಿ ಪಕ್ಷ 1 ಸ್ಥಾನದಲ್ಲಿ ಸ್ಪರ್ಧಿಸಿತ್ತು.

ಗುಜರಾತ್‌ನಲ್ಲಿ ಲೋಕಸಭಾ ಚುನಾವಣೆ; ಹೈಫ್ರೊಫೈಲ್ ಕ್ಷೇತ್ರಗಳಿವು

ಗಾಂಧಿನಗರ - ಅಮಿತ್ ಷಾ (ಬಿಜೆಪಿ)

ರಾಜ್ ಕೋಟ್ - ಪುರುಷೋತ್ತಮ ರೂಪಾಲ (ಬಿಜೆಪಿ

ಪೋರ್ ಬಂದರ್ - ಮನ್‌ಸುಖ್ ಮಾಂಡವೀಯ (ಬಿಜೆಪಿ)

ಸಬರ್‌ಕಾಂತಾ - ತುಷಾರ್ ಚೌಧರಿ (ಕಾಂಗ್ರೆಸ್‌)

ಸುರೇಂದರ ನಗರ್ - ಋತ್ವಿಕ್ ಮಕ್ವಾನಾ (ಕಾಂಗ್ರೆಸ್‌)

ಲೋಕಸಭಾ ಚುನಾವಣೆ ಮತ್ತು ಗುಜರಾತ್‌ನ ರಾಜಕೀಯ

ಗುಜರಾತ್‌ ರಾಜ್ಯದಲ್ಲಿ 1995ರಿಂದ ಬಿಜೆಪಿ ಆಳ್ವಿಕೆ ಇದೆ. 2001ರ ಅಕ್ಟೋಬರ್‌ನಿಂದ 2014ರ ಲೋಕಸಭಾ ಚುನಾವಣೆ ತನಕ ನರೇಂದ್ರ ಮೋದಿಯವರೇ ಇಲ್ಲಿ ಮುಖ್ಯಮಂತ್ರಿಯಾಗಿದ್ದರು. 2002ರ ಗುಜರಾತ್ ವಿಧಾನಸಭಾ ಚುನಾವಣೆ ಬಳಿಕ ಎರಡು ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಒಟ್ಟು 12 ವರ್ಷ 227 ದಿನ ಮುಖ್ಯಮಂತ್ರಿಯಾಗಿ ಗುಜರಾತ್ ಅಭಿವೃದ್ಧಿ ಮಾದರಿಯನ್ನು ರೂಪಿಸಿ, 2014ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಮುನ್ನಡೆಸಿದರು.

ವಿಶೇಷ ಎಂದರೆ 2014ರ ಲೋಕಸಭಾ ಚುನಾವಣೆಗೆ ಮೊದಲೇ ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಘೋಚಿಸಿತ್ತು. ಕೇಂದ್ರದಲ್ಲಿ 1977ರಲ್ಲಿ ಮೊದಲ ಸಲ ಮೈತ್ರಿ ಸರ್ಕಾರ ರಚನೆಯಾಯಿತು. ಮುಂದೆ 1989ರಿಂದ 2014 ರ ತನಕವೂ ಮೈತ್ರಿ ಸರ್ಕಾರವೇ ಆಡಳಿತ ನಡೆಸಿತ್ತು. ಸತತ ಮೈತ್ರಿ ಸರ್ಕಾರ ಕಂಡಿದ್ದ ಮತದಾರರ ಮೇಲೆ ಬಿಜೆಪಿಯ ಚುನಾವಣಾ ತಂತ್ರ ಪರಿಣಾಮ ಬೀರಿ, 2014ರಲ್ಲಿ ಫಲಕೊಟ್ಟಿತ್ತು.

ಕಳೆದ 20 ವರ್ಷಗಳ ಲೋಕಸಭಾ ಚುನಾವಣಾ ಇತಿಹಾಸವನ್ನು ಗಮನಿಸಿದರೆ 2004 ರಲ್ಲಿ ಬಿಜೆಪಿ 14, ಕಾಂಗ್ರೆಸ್ 12, 2009ರಲ್ಲಿ ಬಿಜೆಪಿ 15, ಕಾಂಗ್ರೆಸ್ 11 ಸ್ಥಾನಗಳನ್ನು ಗಳಿಸಿದ್ದವು. 2014 ರಿಂದ ಚಿತ್ರಣವೇ ಬದಲಾಗಿ ಬಿಟ್ಟಿತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಜೊತೆಗೆ ಗುಜರಾತ್‌ನ 26ಕ್ಕೆ 26 ಲೋಕಸಭಾ ಕ್ಷೇತ್ರಗಳನ್ನು ಮತದಾರರು ಗೆಲ್ಲಿಸಿಕೊಟ್ಟರು. 2019ರ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಯಿತು. ಈ ಬಾರಿ ಕೂಡ ಕ್ಲೀನ್ ಸ್ವೀಪ್‌ನೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡುವ ಬಿಜೆಪಿಯ ಉದ್ದೇಶ ಈಡೇರಿಲ್ಲ.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.