ಬೋರ್‌ವೆಲ್ ದುರಂತ; ಮಧ್ಯಪ್ರದೇಶದ ಗುನಾದಲ್ಲಿ 140 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕನ ರಕ್ಷಣೆ, 5 ಮುಖ್ಯ ಅಂಶಗಳು
Guna Borewell Tragedy: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ 10 ವರ್ಷದ ಬಾಲಕ ನಿನ್ನೆ ಸಂಜೆ 140 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಆತಂಕ ಸೃಷ್ಟಿಯಾಗಿತ್ತು. ಆತನನ್ನು ಉಳಿಸುವ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿದ್ಯಮಾನದ ಕುರಿತ 5 ಮುಖ್ಯ ಅಂಶಗಳು ಇಲ್ಲಿವೆ.
Guna Borewell Tragedy: ಮಧ್ಯ ಪ್ರದೇಶದ ಗುನಾ ಜಿಲ್ಲೆಯ ರಾಘೋಗಢ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಪಲ್ಯ ಗ್ರಾಮದಲ್ಲಿ ಬೋರ್‌ವೆಲ್‌ಗೆ ಬಿದ್ದ 10 ವರ್ಷದ ಬಾಲಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಸದ್ಯ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಿಪಲ್ಯ ಗ್ರಾಮದ ಜಂಜಲಿ ಸಮೀಪ ಈ ದುರಂತ ಸಂಭವಿಸಿದೆ. ಕೊಳವೆ ಬಾವಿಗೆ ಬಿದ್ದ ಬಾಲಕನನ್ನು ಸುಮಿತ್ ಮೀನಾ ಎಂದು ಗುರುತಿಸಲಾಗಿದೆ. ನಿನ್ನೆ (ಡಿಸೆಂಬರ್ 28) ಸಂಜೆ ಗಾಳಿ ಪಟ ಹಾರಿಸುತ್ತಿದ್ದಾಗ, ಹೊಲದಲ್ಲಿ ತೆರೆದಿಟ್ಟಿದ್ದ ಕೊಳವೆ ಬಾವಿಗೆ ಅಕಸ್ಮಾತ್ ಆಗಿ ಬಿದ್ದುಬಿಟ್ಟಿದ್ದ ಎಂದು ವರದಿ ವಿವರಿಸಿದೆ.
ಗುನಾದಲ್ಲಿ 140 ಅಡಿ ಕೊಳವೆ ಬಾವಿಗೆ ಬಿದ್ದ 10 ವರ್ಷದ ಬಾಲಕ
ಗುನಾ ಜಿಲ್ಲೆಯ ರಾಘೋಗಢ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಿಪಲ್ಯ ಗ್ರಾಮದ ನಿವಾಸಿ ದಶರಥ್ ಮೀನಾ ಅವರ ಪುತ್ರ ಹತ್ತು ವರ್ಷದ ಸುಮಿತ್ ಮೀನಾ ಶನಿವಾರ ಅಂದರೆ ನಿನ್ನೆ (ಡಿಸೆಂಬರ್ 28) ಸಂಜೆ ಮನೆ ಸಮೀಪದ ಹೊಲದಲ್ಲಿ ಗಾಳಿಪಟ ಹಾರಿಸುತ್ತಿದ್ದ. ಹಾಗೆ ಹಾರಿಸುತ್ತ ಓಡುತ್ತಿದ್ದಾಗ ಅಕಸ್ಮಾತ್ ಆಗಿ ತೆರೆದ ಕೊಳವೆ ಬಾವಿಯೊಳಗೆ ಬಿದ್ದುಬಿಟ್ಟ. ಕತ್ತಲಾಗುತ್ತ ಬಂದರೂ ಮಗ ಮನೆಗೆ ಬಾರದೇ ಇದ್ದಾಗ, ಗಾಳಿ ಪಟ ಹಾರಿಸುತ್ತಿದ್ದವ ಏನಾದ ಎಂದು ಮನೆ ಮಂದಿ ಹೊಲದಲ್ಲಿ ಹುಡುಕಾಡಿದ್ದಾರೆ. ಆಗ ಮುಚ್ಚಳ ಇಲ್ಲದೇ ತೆರೆದಿದ್ದ ಕೊಳವೆ ಬಾವಿ ಸಮೀಪ ಮಗು ಬಿದ್ದ ಗುರುತು ಕಂಡು ಕೊಳವೆ ಬಾವಿಗೆ ಇಣುಕಿದಾಗ ತಲೆ ಕಂಡ ಕಾರಣ ಕೂಡಲೇ ಸ್ಥಳೀಯರು ನೆರವಿಗೆ ಕೂಗಿಕೊಂಡರು. ಅಗ್ನಿಶಾಮಕ ಸೇವೆ ಸಿಬ್ಬಂದಿಗೂ ಕರೆ ಹೋಯಿತು. ಸ್ಥಳೀಯಾಡಳಿತವೂ ನೆರವಿಗೆ ಬಂತು. ಬಾಲಕ 45 ಅಡಿ ಆಳದಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು.
ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕನ ರಕ್ಷಣೆ, 5 ಮುಖ್ಯ ಅಂಶಗಳು
1) ಪಿಪಲ್ಯ ಗ್ರಾಮದ ನಿವಾಸಿ ದಶರಥ್ ಮೀನಾ ಅವರ ಪುತ್ರ ಹತ್ತು ವರ್ಷದ ಸುಮಿತ್ ಮೀನಾ ನಿನ್ನೆ (ಡಿಸೆಂಬರ್ 28) ಸಂಜೆ ಮನೆ ಸಮೀಪದ ಹೊಲದಲ್ಲಿ ಗಾಳಿಪಟ ಹಾರಿಸುತ್ತಿದ್ದ ವೇಳೆ 140 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ. ರಕ್ಷಣಾ ಕಾರ್ಯಾಚರಣೆಯಲ್ಲಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಢ ಭಾಗವಹಿಸಿದ್ದು, ರಾತ್ರಿ ಇಡೀ ಕಾರ್ಯಾಚರಣೆ ಮುಂದುವರಿಸಿತ್ತು.
2) ಪೂಲ್‌ಸಿಂಗ್ ಮೀನಾ ಎಂಬುವವರಿಗೆ ಸೇರಿದ ಹೊಲದಲ್ಲಿ ಈ ದುರಂತ ಸಂಭವಿಸಿದೆ. ಅವರು ಕೊಳವೆ ಬಾವಿಯನ್ನು ಮುಚ್ಚಿರಲಿಲ್ಲ. ಮಗುವನ್ನು ರಕ್ಷಿಸುವುದಕ್ಕಾಗಿ ಕೊಳವೆ ಬಾವಿಗೆ ಸಮಾನಂತರವಾಗಿ ಜೆಸಿಬಿ ಮೂಲಕ ಭೂಮಿ ಅಗೆಯಲಾಗಿದ್ದು, ಬೆಳಗ್ಗೆ 9.30ರ ಸುಮಾರಿಗೆ ಮಗುವನ್ನು ರಕ್ಷಿಸಲಾಗಿದೆ. ಮಗು ಜೀವಂತ ಇದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
3) ನಿನ್ನೆ ರಾತ್ರಿ ಇಡೀ ಮಗುವಿಗೆ ಉಸಿರಾಟಕ್ಕೆ ತೊಂದರೆ ಆಗದಂತೆ ಪೈಪ್‌ಗಳ ಮೂಲಕ ಆಮ್ಲಜನಕ ಪೂರೈಸುವ ಕೆಲಸವನ್ನು ರಕ್ಷಣಾ ಸಿಬ್ಬಂದಿ ಮಾಡಿದ್ದರು. ಬೋರ್‌ವೆಲ್ ಸಮೀಪ ದೊಡ್ಡ ಹಳ್ಳ ತೋಡಿ, ಮಗುವನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. 45 ಅಡಿ ಆಳದಲ್ಲಿ ಮಗು ಸಿಲುಕಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮಗು 39 ಅಡಿ ಆಳದಲ್ಲಿದ್ದ ಕಾರಣ ಬೇಗ ಹೊರತೆಗೆಯಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4) "ನಿನ್ನೆ ಮಧ್ಯಾಹ್ನ 3:30 ರ ಸುಮಾರಿಗೆ ಸುಮಿತ್ ಬೋರ್‌ವೆಲ್‌ಗೆ ಬಿದ್ದಿದ್ದಾರೆ. ಅವರನ್ನು ಹೊರತೆಗೆಯುವ ರಕ್ಷಣಾ ಕಾರ್ಯಾಚರಣೆ ಸಂಜೆ 6 ಗಂಟೆ ಸುಮಾರಿಗೆ ಪ್ರಾರಂಭವಾಯಿತು. ಇಂದು ಬೆಳಿಗ್ಗೆ 9:30 ರ ಸುಮಾರಿಗೆ ಸುಮಿತ್‌ನನ್ನು ಹೊರತೆಗೆಯಲಾಯಿತು. ಅವರನ್ನುಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಅವನ ಉಸಿರಾಟವು ಈಗ ನಿಧಾನವಾಗಿದೆ ” ಎಂದು ಗುನಾ ಎಎಸ್ಪಿ ಮಾನ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.