Ismail Haniyeh: ಟೆಹರಾನ್ ತಲ್ಲಣ; ಮಧ್ಯ ಪೂರ್ವದ ಸ್ಥಿರತೆಯ ಮೇಲೆ ಹನಿಯೆಹ್ ಹತ್ಯೆ ಬೀರಲಿದೆಯೇ ಪರಿಣಾಮ?
ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿ ಓರ್ವ ಹೆಜ್ಬೊಲ್ಲಾ ಕಮಾಂಡರ್‌ನನ್ನು ಗುರಿಯಾಗಿಸಿ ಇಸ್ರೇಲ್ ಡ್ರೋನ್ ದಾಳಿ ನಡೆಸಿತ್ತು. ಅದಾದ ಒಂದು ದಿನದ ಒಳಗೇ ಹಮಾಸ್ ಸಂಘಟನೆಯ ಇಸ್ಮಾಯಿಲ್ ಹನಿಯೆಹ್ ಹತ್ಯೆ ಸಂಭವಿಸಿದೆ.
Haniyeh Assassinated in Iran: ಬುಧವಾರ (ಜುಲೈ 31) ಬೆಳಗ್ಗೆ ಹಮಾಸ್ ಸಂಘಟನೆ ಒಂದು ಅನಿರೀಕ್ಷಿತ ಹೇಳಿಕೆಯನ್ನು ಬಿಡುಗಡೆಗೊಳಿಸಿ, ತನ್ನ ಅತ್ಯುನ್ನತ ರಾಜಕೀಯ ಮುಖಂಡ, ಇಸ್ಮಾಯಿಲ್ ಹನಿಯೆಹ್ ಟೆಹರಾನ್‌ನಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಘೋಷಿಸಿತು. ಹನಿಯೆಹ್ ಸಾವಿನ ಕುರಿತ ಮಾಹಿತಿಗಳು ಇನ್ನೂ ಸ್ಪಷ್ಟವಾಗಿಲ್ಲ. ಅದರೊಡನೆ, ಯಾವುದೇ ಸಂಘಟನೆ ಇನ್ನೂ ಆತನ ಹತ್ಯೆಯ ಜವಾಬ್ದಾರಿ ವಹಿಸಿಕೊಂಡಿಲ್ಲ. ಆದರೆ, ಹಮಾಸ್ ಸಂಘಟನೆ ಇರಾನಿನ ರಾಜಧಾನಿ ಟೆಹರಾನ್‌ನಲ್ಲಿದ್ದ ಹನಿಯೆಹ್ ಮನೆಯ ಮೇಲೆ ಇಸ್ರೇಲ್ 'ವಿಶ್ವಾಸಘಾತುಕ' ದಾಳಿ ನಡೆಸಿದೆ ಎಂದು ಆರೋಪಿಸಿದೆ.
ಇಸ್ರೇಲ್ ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತನ್ನ ಸಂಪುಟ ಸಹೋದ್ಯೋಗಿಗಳಿಗೆ ಹನಿಯೆಹ್ ಸಾವಿನ ಕುರಿತಂತೆ ಯಾವುದೇ ಹೇಳಿಕೆ ನೀಡಿದಂತೆ ಸೂಚನೆ ನೀಡಿದ್ದಾರೆ. ಹಮಾಸ್ ಹೇಳಿಕೆ ಬಿಡುಗಡೆಗೊಳಿಸುವ ಮೊದಲು, ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಮಾಹಿತಿ ಬಿಡುಗಡೆಗೊಳಿಸಿದ್ದು, ಇರಾನ್ ನೂತನ ಪ್ರಧಾನಿ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ್ದ ಹನಿಯೆಹ್ ಮತ್ತು ಅವರ ಅಂಗರಕ್ಷಕ, ಟೆಹರಾನ್‌ನ ನಿವಾಸದಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ತಿಳಿಸಿತ್ತು.
ಇರಾನಿನ ಇಬ್ಬರು ಉನ್ನತ ಅಧಿಕಾರಿಗಳ ಹೇಳಿಕೆಯ ಅನುಗುಣವಾಗಿ ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್, ಇರಾನಿನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಬುಧವಾರದಂದು ಸರ್ವೋಚ್ಚ ನಾಯಕ ಅಲಿ ಖಮೇನಿಯವರ ನಿವಾಸದಲ್ಲಿ ಸಭೆ ಸೇರಿತ್ತು ಎಂದಿದೆ. ಇರಾನಿನ ಪ್ರಮುಖ ಕಾರ್ಯತಂತ್ರದ ನಿರ್ಣಯಗಳನ್ನು ಕೈಗೊಳ್ಳುವ ಈ ಸಮಿತಿ, ನೇರವಾಗಿ ಸರ್ವೋಚ್ಚ ನಾಯಕನಿಗೆ ವರದಿ ಸಲ್ಲಿಸುತ್ತದೆ. ಮಂಗಳವಾರದಂದು ಹನಿಯೆಹ್ ಇಬ್ಬರು ಇರಾನಿಯನ್ ನಾಯಕರಾದ ಪೆಜೆಶ್ಕಿಯಾನ್ ಮತ್ತು ಖಮೇನಿಯವರನ್ನು ಭೇಟಿಯಾಗಿದ್ದರು.
ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿ ಓರ್ವ ಹೆಜ್ಬೊಲ್ಲಾ ಕಮಾಂಡರ್‌ನನ್ನು ಗುರಿಯಾಗಿಸಿ ಇಸ್ರೇಲ್ ಡ್ರೋನ್ ದಾಳಿ ನಡೆಸಿತ್ತು. ಅದಾದ ಒಂದು ದಿನದ ಒಳಗೇ ಹನಿಯೆಹ್ ಹತ್ಯೆ ಸಂಭವಿಸಿದೆ. ಲೆಬನಾನ್ ಮೇಲಿನ ದಾಳಿಯ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ಮಿಲಿಟರಿ, ತನ್ನ ದಾಳಿಯಲ್ಲಿ ಹೆಜ್ಬೊಲ್ಲಾದ ಮಿಲಿಟರಿ ಕಾರ್ಯಾಚರಣೆ ಮತ್ತು ನಿಖರ ದಾಳಿ ಕ್ಷಿಪಣಿ ಯೋಜನೆಯ ಮುಖ್ಯಸ್ಥ ಫೌದ್ ಶುಕರ್ ಸಾವಿಗೀಡಾಗಿದ್ದಾನೆ ಎಂದಿತ್ತು.
ಯಾರು ಈ ಹನಿಯೆಹ್?
ತನ್ನ ಜೀವನದ ಬಹುಪಾಲನ್ನು ಕತಾರ್‌ನಲ್ಲಿ ಅಜ್ಞಾತವಾಸದಲ್ಲಿ ಕಳೆದಿರುವ ಇಸ್ಮಾಯಿಲ್ ಹನಿಯೆಹ್ ಹಮಾಸ್ ಸಂಘಟನೆಯ ರಾಜಕೀಯ ವಿಭಾಗದ ಮುಖ್ಯಸ್ಥನಾಗಿದ್ದರು. ಆತ ಹಮಾಸ್ ಮತ್ತು ಇರಾನ್ ನಡುವಿನ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದರು. ಎಪ್ರಿಲ್ ತಿಂಗಳಲ್ಲಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ವಾಯು ದಾಳಿ ನಡೆಸಿ, ಹನಿಯೆಹ್‌ನ ಮೂವರು ಗಂಡು ಮಕ್ಕಳನ್ನು ಹತ್ಯೆಗೈದಿತ್ತು. 1980ರ ದಶಕದ ಕೊನೆಯ ಭಾಗದಿಂದ ಹಮಾಸ್ ಸಂಘಟನೆಯ ಮೂಲಭೂತವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹನಿಯೆಹ್, ಹಲವಾರು ಬಾರಿ ಇಸ್ರೇಲಿಗರಿಂದ ಬಂಧನಕ್ಕೊಳಗಾಗಿದ್ದರು. 1992ರಲ್ಲಿ, ಹನಿಯೆಹ್ ಜೈಲಿನಿಂದ ಬಿಡುಗಡೆಯಾದ ಬಳಿಕ, ಆತನನ್ನು ಮತ್ತು ಒಂದಷ್ಟು ಇತರ ಹಮಾಸ್ ನಾಯಕರನ್ನು ದಕ್ಷಿಣ ಲೆಬನಾನಿನ ಜನರಹಿತ ಪ್ರದೇಶದಲ್ಲಿ ಇಡಲಾಗಿತ್ತು.
ಹಮಾಸ್‌ನಲ್ಲಿ ಹನಿಯೆಹ್ ಏರುಹಾದಿ
1997ರಲ್ಲಿ, ಹಮಾಸ್ ಸಂಘಟನೆಯ ಆಧ್ಯಾತ್ಮಿಕ ನಾಯಕ ಶೇಕ್ ಯಾಸ್ಸಿನ್ ಅವರ ಕಚೇರಿಯನ್ನು ಮುನ್ನಡೆಸಲು ಹನಿಯೆಹ್‌ನನ್ನು ಆರಿಸಲಾಯಿತು. ಅಂದಿನಿಂದ, ಹಮಾಸ್ ಸಂಘಟನೆಯೊಳಗೆ ಹನಿಯೆಹ್ ಬೆಳವಣಿಗೆಯ ಹಾದಿ ಆರಂಭಗೊಂಡಿತು. 2006ರಲ್ಲಿ, ವೆಸ್ಟ್ ಬ್ಯಾಂಕ್ ಮತ್ತು ಗಾಜಾದಲ್ಲಿ ಪ್ಯಾಲೆಸ್ತೀನಿಯನ್ ಅಥಾರಿಟಿಯ ಸಂಸದೀಯ ಚುನಾವಣೆಯಲ್ಲಿ ಹನಿಯೆಹ್ ಹಮಾಸ್ ಸಂಘಟನೆಯ ಸಂಸದೀಯ ಮುಖಂಡನಾಗಿ ಕಾರ್ಯಾಚರಿಸಿದರು. ಈ ಚುನಾವಣೆಯಲ್ಲಿ ಇಸ್ಲಾಮಿಕ್ ಸಂಘಟನೆ ಅನಿರೀಕ್ಷಿತ ಗೆಲುವು ಸಾಧಿಸಿ, ಹನಿಯೆಹ್ ಪ್ಯಾಲೆಸ್ತೀನಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು.
ಆದರೆ, ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರ ಫತಾ ಪಕ್ಷ ಮತ್ತು ಹಮಾಸ್ ನಡುವೆ ಉದ್ವಿಗ್ನತೆಗಳು ತಲೆದೋರಿದ ಪರಿಣಾಮವಾಗಿ, ಅಧ್ಯಕ್ಷ ಅಬ್ಬಾಸ್ ಹಮಾಸ್ ಸರ್ಕಾರವನ್ನು 2007ರಲ್ಲಿ ವಿಸರ್ಜಿಸಿದರು. ಆದರೆ ಅಧ್ಯಕ್ಷರ ನಿರ್ಧಾರವನ್ನು ಉಲ್ಲಂಘಿಸಿದ ಹನಿಯೆಹ್, ಗಾಜಾದಿಂದಲೇ ಆಡಳಿತ ನಡೆಸುವುದನ್ನು ಮುಂದುವರಿಸಿದರು. ಈ ವೇಳೆ ಫತಾ ವೆಸ್ಟ್ ಬ್ಯಾಂಕ್ ಮೇಲೆ ನಿಯಂತ್ರಣ ಹೊಂದಿತ್ತು. 2017ರಲ್ಲಿ ಗಾಜಾದ ಹಮಾಸ್ ಮುಖ್ಯಸ್ಥನ ಹುದ್ದೆಯಿಂದ ಹನಿಯೆಹ್ ಕೆಳಗಿಳಿದು, ತನ್ನ ಸ್ಥಾನವನ್ನು ಯಾಹ್ಯಾ ಸಿನ್ವರ್ ತುಂಬುವಂತೆ ಮಾಡಿದರು. ಅದೇ ವರ್ಷ, ಹನಿಯೆಹ್ ಅವರು ಖಾಲೆದ್ ಮೆಶಾಲ್ ಅವರ ತೆರವಾದ ಸ್ಥಾನದಲ್ಲಿ ಹಮಾಸ್‌ನ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.
ಹನಿಯೆಹ್ ಅವರ ತೀವ್ರವಾದ ಸಾರ್ವಜನಿಕ ಹೇಳಿಕೆಗಳ ಹೊರತಾಗಿಯೂ, ಗಾಜಾದಲ್ಲಿ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿಗೆ ಯೋಜನೆ ರೂಪಿಸಿದ ಇತರ ತೀವ್ರವಾದಿ ಮುಖಂಡರಿಗೆ ಹೋಲಿಸಿದರೆ, ಹನಿಯೆಹ್ ಪ್ರಾಯೋಗಿಕ ನಾಯಕ ಎಂದು ಅರಬ್ ರಾಜತಂತ್ರಜ್ಞರು ಮತ್ತು ಅಧಿಕಾರಿಗಳು ಭಾವಿಸಿದ್ದರು. ಹನಿಯೆಹ್ ಮತ್ತು ಅವರ ಹಿಂದಿನ ಮುಖಂಡ ಖಾಲೆದ್ ಮೆಶಾಲ್ ಅವರು ಇಸ್ರೇಲ್ ಮಿಲಿಟರಿಗೆ 'ಗಾಜಾದ ಮರಳಿನಡಿಯಲ್ಲಿ ನಿಮ್ಮನ್ನು ಮುಳುಗಿಸುವುದಾಗಿ' ಎಚ್ಚರಿಕೆ ನೀಡುತ್ತಾ, ಮಧ್ಯ ಪೂರ್ವದಾದ್ಯಂತ ಸಂಚರಿಸಿ, ಕತಾರ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಜೊತೆಗೆ ಕದನ ವಿರಾಮ ಒಪ್ಪಂದ ಘೋಷಿಸುವ ಬಗ್ಗೆಯೂ ಮಾತನಾಡುತ್ತಿದ್ದರು! ಈ ಒಪ್ಪಂದದ ಮೂಲಕ, ಇಸ್ರೇಲ್ ಜೈಲುಗಳಲ್ಲಿರುವ ಪ್ಯಾಲೆಸ್ತೀನಿಯನ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ, ಗಾಜಾಗೆ ಇನ್ನಷ್ಟು ಧನ ಸಹಾಯ ಪಡೆಯುವ ಗುರಿಯನ್ನು ಅವರು ಹೊಂದಿದ್ದರು.
ಸ್ವತಃ ಸುನ್ನಿ ಮುಸಲ್ಮಾನನಾಗಿದ್ದ ಹನಿಯೆಹ್, ಶಿಯಾ ಬಾಹುಳ್ಯದ ಇರಾನ್ ಜೊತೆಗೆ ಹಮಾಸ್ ಮಿಲಿಟರಿ ಸಂಬಂಧವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದಿಗೂ ಇರಾನ್ ಬಹಿರಂಗವಾಗಿ ಹಮಾಸ್ ಸಂಘಟನೆಯನ್ನು ಬೆಂಬಲಿಸುತ್ತಿದೆ. ಹತ್ತು ವರ್ಷಗಳ ಕಾಲ ಗಾಜಾದಲ್ಲಿ ಹನಿಯೆಹ್ ಆಡಳಿತ ನಡೆಸುತ್ತಿದ್ದಾಗ, ಅವರು ಮಾನವೀಯ ಉದ್ದೇಶಗಳ ಧನ ಸಹಾಯವನ್ನು ಹಮಾಸ್ ಮಿಲಿಟರಿ ವಿಭಾಗಕ್ಕೆ ಬಳಸಿಕೊಂಡಿದ್ದಾರೆ ಎಂದು ಇಸ್ರೇಲ್ ಆರೋಪಿಸುತ್ತಿತ್ತು. ಆದರೆ ಇಂತಹ ಆರೋಪಗಳನ್ನು ಹಮಾಸ್ ತಳ್ಳಿಹಾಕಿತ್ತು.
2017ರಲ್ಲಿ ಹನಿಯೆಹ್ ಗಾಜಾದಿಂದ ಹೊರನಡೆದಾಗ, 20 ವರ್ಷಗಳ ಕಾಲ ಇಸ್ರೇಲಿ ಜೈಲುಗಳಲ್ಲಿದ್ದ ಯಾಹ್ಯಾ ಸಿನ್ವರ್ ಹನಿಯೆಹ್ ಸ್ಥಾನ ತುಂಬಿದ್ದರು. ಯುವಕನಾಗಿದ್ದಾಗಲೇ ಹನಿಯೆಹ್ ಗಾಜಾ ನಗರದ ಇಸ್ಲಾಮಿಕ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿ ಚಳುವಳಿಗಾರನಾಗಿದ್ದರು. 1987ರಲ್ಲಿ, ಮೊದಲನೇ ಪ್ಯಾಲೆಸ್ತೀನಿಯನ್ ಇಂತಿಫದಾ ವೇಳೆ ಹಮಾಸ್ ಸ್ಥಾಪನೆಯಾದಾಗ ಹನಿಯೆಹ್ ಹಮಾಸ್‌ಗೆ ಸೇರ್ಪಡೆಗೊಂಡಿದ್ದರು. ಆ ಸಂದರ್ಭದಲ್ಲಿ ಅವರನ್ನು ಬಂಧಿಸಿ, ಸಣ್ಣ ಅವಧಿಗೆ ಗಡೀಪಾರು ಮಾಡಲಾಗಿತ್ತು.
ಹನಿಯೆಹ್ ಆರಂಭಿಕ ವರ್ಷಗಳು
ಹನಿಯೆಹ್ ಆರಂಭದಲ್ಲಿ ಹಮಾಸ್ ಸ್ಥಾಪಕ ಶೇಕ್ ಅಹ್ಮದ್ ಯಾಸ್ಸಿನ್ ಅವರನ್ನು ಆಶ್ರಯಿಸಿದ್ದರು. ಯಾಸ್ಸಿನ್ ಸಹ ಹನಿಯೆಹ್ ಕುಟುಂಬದಂತೆ ಆಶ್ಕೆಲೋನ್ ಬಳಿಯ ಅಲ್-ಜುರಾ ಗ್ರಾಮದಿಂದ ಬಂದ ನಿರಾಶ್ರಿತರಾಗಿದ್ದರು. 2003ರ ವೇಳೆಗೆ, ಹನಿಯೆಹ್ ಯಾಸ್ಸಿನ್ ಅವರ ನಂಬಿಕಸ್ಥ ಸಹವರ್ತಿಯಾಗಿದ್ದರು. 2003ರಲ್ಲಿ ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಯಾಸ್ಸಿನ್ ಅವರ ಗಾಜಾದ ಮನೆಯಲ್ಲಿ, ಯಾಸ್ಸಿನ್ ಕಿವಿಯ ಬಳಿ ದೂರವಾಣಿಯೊಂದನ್ನು ಹಿಡಿದು, ಅವರು ಮಾತುಕತೆಯಲ್ಲಿ ಭಾಗಿಯಾಗುವಂತೆ ಮಾಡಲು ನೆರವಾಗಿದ್ದ ಹನಿಯೆಹ್ ಛಾಯಾಚಿತ್ರ ಪ್ರಕಟವಾಗಿತ್ತು. ಬಳಿಕ 2004ರಲ್ಲಿ, ಇಸ್ರೇಲ್ ಯಾಸ್ಸಿನ್ ನನ್ನು ಸಂಹರಿಸಿತ್ತು.
ಹಮಾಸ್ ರಾಜಕೀಯಕ್ಕೆ ಪ್ರವೇಶಿಸಬೇಕು ಎಂದು ಆರಂಭದಿಂದಲೂ ಆಗ್ರಹಿಸಿದವರಲ್ಲಿ ಹನಿಯೆಹ್ ಸಹ ಒಬ್ಬರಾಗಿದ್ದರು. ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವುದರಿಂದ, ಹಮಾಸ್‌ಗೆ ಸಂಭಾವ್ಯ ಪರಿಸ್ಥಿತಿಗಳನ್ನು ಎದುರಿಸಲು ನೆರವಾಗುತ್ತದೆ ಎಂದು ಹನಿಯೆಹ್ 1994ರಲ್ಲೇ ವಾದಿಸಿದ್ದರು. ಆರಂಭದಲ್ಲಿ ಈ ಯೋಚನೆಗೆ ಹಮಾಸ್ ನಾಯಕತ್ವ ವಿರೋಧ ವ್ಯಕ್ತಪಡಿಸಿತ್ತಾದರೂ, ಬಳಿಕ ರಾಜಕೀಯ ಪ್ರವೇಶಕ್ಕೆ ಅನುಮತಿ ನೀಡಿತು. ಇದರ ಪರಿಣಾಮವಾಗಿ, 2006ರಲ್ಲಿ ಹಮಾಸ್ ಸಂಸದೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಹನಿಯೆಹ್ ಪ್ಯಾಲೆಸ್ತೀನಿಯನ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಇಸ್ರೇಲ್ ಗಾಜಾದಿಂದ ಹೊರನಡೆದ ಒಂದು ವರ್ಷದಲ್ಲಿ ಈ ಬೆಳವಣಿಗೆ ನಡೆದು, ಹಮಾಸ್ 2007ರಲ್ಲಿ ಗಾಜಾ ಮೇಲೆ ನಿಯಂತ್ರಣ ಸಾಧಿಸಿತು.
2012ರಲ್ಲಿ ಓರ್ವ ಪತ್ರಕರ್ತ ಹಮಾಸ್ ಏನಾದರೂ ಸಶಸ್ತ್ರ ಹೋರಾಟವನ್ನು ಕೈಬಿಟ್ಟಿದೆಯೇ ಎಂದು ಪ್ರಶ್ನಿಸಿದಾಗ ಹನಿಯೆಹ್ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಪ್ಯಾಲೆಸ್ತೀನಿಯನ್ ಪ್ರತಿರೋಧ ಜನಪ್ರಿಯ, ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ನಾಲ್ಕೂ ವಿಧದಲ್ಲೂ ಮುಂದುವರಿಯಲಿದೆ ಎಂದು ಹನಿಯೆಹ್ ಸ್ಪಷ್ಟಪಡಿಸಿದ್ದರು.
ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ