ಜನವರಿ 1ರಿಂದ ವೈಯಕ್ತಿಕ ಹಣಕಾಸಿನಲ್ಲಿ ಏನೇನು ಬದಲಾವಣೆಯಾಗಲಿದೆ? ಯುಪಿಐ, ಇಪಿಎಫ್‌ಒ, ಎಫ್‌ಡಿ, ಕ್ರೆಡಿಟ್‌ ಕಾರ್ಡ್‌, ವೀಸಾ ಬದಲಾವಣೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜನವರಿ 1ರಿಂದ ವೈಯಕ್ತಿಕ ಹಣಕಾಸಿನಲ್ಲಿ ಏನೇನು ಬದಲಾವಣೆಯಾಗಲಿದೆ? ಯುಪಿಐ, ಇಪಿಎಫ್‌ಒ, ಎಫ್‌ಡಿ, ಕ್ರೆಡಿಟ್‌ ಕಾರ್ಡ್‌, ವೀಸಾ ಬದಲಾವಣೆ ವಿವರ

ಜನವರಿ 1ರಿಂದ ವೈಯಕ್ತಿಕ ಹಣಕಾಸಿನಲ್ಲಿ ಏನೇನು ಬದಲಾವಣೆಯಾಗಲಿದೆ? ಯುಪಿಐ, ಇಪಿಎಫ್‌ಒ, ಎಫ್‌ಡಿ, ಕ್ರೆಡಿಟ್‌ ಕಾರ್ಡ್‌, ವೀಸಾ ಬದಲಾವಣೆ ವಿವರ

2025ರ ಹೊಸ ವರ್ಷದಲ್ಲಿ ವೈಯಕ್ತಿಕ ಹಣಕಾಸಿಗೆ ಸಂಬಂಧಪಟ್ಟಂತೆಯೂ ಅನೇಕ ಬದಲಾವಣೆಗಳು ಕಾಯುತ್ತಿವೆ. ಹೊಸ ಸ್ಥಿರ ಠೇವಣಿ ನಿಯಮ, ಕ್ರೆಡಿಟ್‌ ಕಾರ್ಡ್‌ ಪ್ರಯೋಜನಗಳು, ಇಪಿಎಫ್‌ಒ ನಿಯಮಗಳು, ವೀಸಾ ನಿಯಮಗಳು ಸೇರಿದಂತೆ ಹೊಸ ಬದಲಾವಣೆಗಳ ಕುರಿತು ತಿಳಿದುಕೊಳ್ಳೋಣ.

ಜನವರಿ 1ರಿಂದ ವೈಯಕ್ತಿಕ ಹಣಕಾಸಿನಲ್ಲಿ ಏನೇನು ಬದಲಾವಣೆಯಾಗಲಿದೆ?
ಜನವರಿ 1ರಿಂದ ವೈಯಕ್ತಿಕ ಹಣಕಾಸಿನಲ್ಲಿ ಏನೇನು ಬದಲಾವಣೆಯಾಗಲಿದೆ?

ಹೊಸ ವರ್ಷ ಸ್ವಾಗತಿಸುವ ಸಮಯದಲ್ಲಿ ಹಲವು ಬದಲಾವಣೆಗಳನ್ನು ಸ್ವಾಗತಿಸುವುದು ಅನಿವಾರ್ಯವಾಗಿದೆ. ಹೊಸ ವರ್ಷದಲ್ಲಿ ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸಂಬಂಧಪಟ್ಟಂತೆ ನೀವು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿರಬಹುದು. ಈ ಸಮಯದಲ್ಲಿ 2025ರಲ್ಲಿ ಹಣಕಾಸು ವಿಷಯಕ್ಕೆ ಸಂಬಂಧಪಟ್ಟಂತೆ ಆಗುವ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಉತ್ತಮವಾಗಿದೆ. ಇಪಿಎಫ್‌, ವೀಸಾ, ಎಫ್‌ಡಿ, ಕ್ರೆಡಿಟ್‌ ಕಾರ್ಡ್‌, ಯುಪಿಐ ಮುಂತಾದ ವಿಷಯಕ್ಕೆ ಸಂಬಂಧಪಟ್ಟಂತೆ ಏನೆಲ್ಲ ಬದಲಾವಣೆಗಳು ಇರಲಿವೆ ನೋಡೋಣ.

2025ರಲ್ಲಿ ವೀಸಾ ಬದಲಾವಣೆಗಳು

ಥೈಲಾಂಡ್‌, ಅಮೆರಿಕ, ಇಂಗ್ಲೆಂಡ್‌ ಮುಂತಾದ ದೇಶಗಳಿಗೆ ಹೋಗಲು ವೀಸಾಕ್ಕೆ ಅರ್ಜಿ ಸಲ್ಲಿಸುವವರು ಹೊಸ ವರ್ಷದಲ್ಲಿ ಆಗುವ ವೀಸಾ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಉತ್ತಮ.

ಥೈಲಾಂಡ್‌ ವೀಸಾ ಬದಲಾವಣೆಗಳು

ಥೈಲಾಂಡ್‌ ದೇಶವು ಭಾರತದ ಪ್ರಯಾಣಿಕರಿಗೆ ಅಪ್‌ಗ್ರೇಡೆಡ್‌ ಇ-ವೀಸಾ ವ್ಯವಸ್ಥೆ ಜಾರಿಗೆ ತರಲಿದೆ. www.thaievisa.go.th ವೆಬ್‌ಸೈಟ್‌ ಮೂಲಕ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಜಗತ್ತಿನಾದ್ಯಂತ ಇರುವ ಬೃಹತ್‌ ಪ್ರಮಾಣದ ಪ್ರಯಾಣಿಕರಿಗೆ ಇ-ವೀಸಾಕ್ಕೆ ಅರ್ಜಿ ಸಲ್ಲಿಸುವುದು ಸುಲಭವಾಗಲಿದೆ.

ಅಮೆರಿಕದ ವೀಸಾ ಬದಲಾವಣೆಗಳು

ಅಮೆರಿಕವು ತನ್ನ ವೀಸಾ ನೀತಿಯಲ್ಲಿ ಅನೇಕ ಬದಲಾವಣೆಗಳನ್ನು ಘೋಷಿಸಿದೆ. ಎಚ್‌-1ಬಿ ವೀಸಾ ಸೇರಿದಂತೆ ವಿವಿಧ ವೀಸಾಗಳ ಬದಲಾವಣೆಯು 2025ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಅಮೆರಿಕದ ವೀಸಾಕ್ಕೆ ಅರ್ಜಿ ಸಲ್ಲಿಸಲು ಬಯಸುವ ಭಾರತೀಯರು 2025ರ ಜನವರಿ 17ರಿಂದ ಹೊಸ Form I-129 ನಮೂನೆಯನ್ನು ಭರ್ತಿ ಮಾಡಬೇಕು.

ಇಂಗ್ಲೆಂಡ್‌ ವೀಸಾ ಬದಲಾವಣೆಗಳು

ಯುಕೆ ವೀಸಾ ಅರ್ಜಿದಾರರಿಗೆ ಅಗತ್ಯವಿರುವ ಶೇಕಡಾವಾರು ಹಣಕಾಸಿನ ಮೀಸಲುಗಳನ್ನು ಹೆಚ್ಚಿಸಲಾಗಿದೆ. ಜನವರಿ 2025ರಿಂದ ಯುಕೆ ವೀಸಾಕ್ಕೆ ಅರ್ಜಿ ಸಲ್ಲಿಸಲು ಯೋಜಿಸುತ್ತಿರುವ ಭಾರತೀಯರು ಪ್ರಸ್ತುತ ಅಗತ್ಯಕ್ಕಿಂತ ಕನಿಷ್ಠ ಶೇಕಡ 11 ಹೆಚ್ಚು ಹಣಕಾಸು ಮೀಸಲು ತೋರಿಸಬೇಕು.

ಸ್ಥಿರ ಠೇವಣಿ ಬದಲಾವಣೆಗಳು

ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಹೌಸಿಂಗ್‌ ಹಣಕಾಸು ಕಂಪನಿಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಥಿರ ಠೇವಣಿ ನಿಯಮಗಳನ್ನು ಬದಲಾಯಿಸಿದೆ ಹೊಸ ಎಫ್‌ಡಿ ನಿಯಮಗಳು ಜನವರಿ 2025ರಲ್ಲಿ ಜಾರಿಗೆ ಬರಲಿವೆ. ಹೊಸ ನಿಯಮದ ಪ್ರಕಾರ ಎನ್‌ಬಿಎಫ್‌ಸಿಯಲ್ಲಿ ಎಫ್‌ಡಿ ಹೊಂದಿರುವವರು ಮುಕ್ತಾಯದ ಮೊದಲು ಸಣ್ಣ ಠೇವಣಿಗಳನ್ನು ಹಿಂಪಡೆಯಬಹುದು. ಎಫ್‌ಡಿ ಹೊಂದಿರುವವರು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದರೆ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು.

ರುಪೇ ಕ್ರೇಡಿಟ್‌ ಕಾರ್ಡ್‌ ಹೊಂದಿರುವವರಿಗೆ ಲಾಂಜ್‌ ಪ್ರವೇಶ ನೀತಿ

ರುಪೇ ಕ್ರೆಡಿಟ್ ಕಾರ್ಡ್‌ದಾರರಿಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಹೊಸ ಮಾರ್ಗಸೂಚಿ ಜನವರಿ 1, 2025 ರಂದು ಜಾರಿಗೆ ಬರುತ್ತವೆ. ವಿಶೇಷ ವಿಮಾನ ನಿಲ್ದಾಣದ ಲಾಂಜ್‌ ಪ್ರವೇಶಕ್ಕಾಗಿ ಶ್ರೇಣಿ ಆಧರಿತ ಖರ್ಚು ಮಾನದಂಡ ( tier-based spending criteria) ಪರಿಚಯಿಸುತ್ತಿದೆ.

ಸೆನ್ಸೆಕ್ಸ್, ಬ್ಯಾಂಕೆಕ್ಸ್, ಸೆನ್ಸೆಕ್ಸ್ 50 ಮಾಸಿಕ ಎಕ್ಸ್‌ಪೈರಿ

ಜನವರಿ 1ರಿಂದ ಅನ್ವಯವಾಗುವಂತೆ ಸೆನ್ಸೆಕ್ಸ್, ಬ್ಯಾಂಕೆಕ್ಸ್, ಸೆನ್ಸೆಕ್ಸ್ 50 ಮಂತ್ಲಿ ಎಕ್ಸ್‌ಪೈರಿಯನ್ನು ಪರಿಷ್ಕರಿಸಲಾಗಿದೆ. ಸೆನ್ಸೆಕ್ಸ್‌ನ ವೀಕ್ಲಿ ಕಾಂಟ್ರಾಕ್ಟ್‌ಗಳು ಪ್ರತಿ ಮಂಗಳವಾರ ಮುಕ್ತಾಯಗೊಳ್ಳಲಿವೆ. ಈ ಮೊದಲು ಶುಕ್ರವಾರವಿತ್ತು. ಇದೇ ರೀತಿ ಸೆನ್ಸೆಕ್ಸ್‌, ಬ್ಯಾಂಕೆಕ್ಸ್‌, ಸೆನ್ಸೆಕ್ಸ್‌ 50ಗಳ ಎಕ್ಸ್‌ಪೈರಿಯೂ ಮಂಗಳವಾರಕ್ಕೆ ನಿಗದಿಪಡಿಸಲಾಗಿದೆ. ಈ ಮೊದಲು ಇವುಗಳಿಗೆ ಕ್ರಮವಾಗಿ ಕೊನೆಯ ಶುಕ್ರವಾರ, ಕೊನೆಯ ಸೋಮವಾರ, ಕೊನೆಯ ಗುರುವಾರವಿತ್ತು.

ಇಪಿಎಫ್‌ಒ ಬದಲಾವಣೆ

ಕೇಂದ್ರೀಯ ಪಿಂಚಣಿ ಪಾವತಿ ವ್ಯವಸ್ಥೆಯನ್ನು ಇಪಿಎಫ್‌ಒನ ಐಟಿ ಆಧುನೀಕರಣ ಯೋಜನೆಯನ್ನು ಪರಿಚಯಿಸಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಎಟಿಎಂಗಳಿಂದ ಪಿಎಫ್ ಹಣ ಹಿಂಪಡೆಯುವ ಸೌಲಭ್ಯ ಮತ್ತು ಇಪಿಎಫ್ ಕೊಡುಗೆ ಮಿತಿಯನ್ನು ತೆಗೆದುಹಾಕುವುದು ಸೇರಿದಂತೆ ಹಲವಾರು ಬದಲಾವಣೆಗಳನ್ನು ಜಾರಿಗೆ ತರಲಿದೆ ಎಂದು ಎಕಾನಮಿಕ್‌ ಟೈಮ್ಸ್‌ ವರದಿ ಮಾಡಿದೆ.

ಯುಪಿಐ ಪಾವತಿ

ಜನವರಿ 1ರಿಂದ ಭಾರತೀಯ ರಿಸರ್ವ್ ಬ್ಯಾಂಕ್, ಥರ್ಡ್-ಪಾರ್ಟಿ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಪೂರ್ಣ-ಕೆವೈಸಿ ಪ್ರಿಪೇಯ್ಡ್ ಪಾವತಿ ಸಾಧನಗಳಿಗೆ (ಪಿಪಿಐ) ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ಪಾವತಿ ಮಾಡಲು ಅವಕಾಶ ನೀಡುತ್ತದೆ. ಇದರಿಂದಾಗಿ ನೀವು ಯಾವುದೇ ವ್ಯಾಲೆಟ್‌ ಹೊಂದಿದ್ದರೂ ಆ ಯುಪಿಐನಲ್ಲಿರುವ ಹಣವನ್ನು ಯಾವುದೇ ಯುಪಿಐ ಮೂಲಕವೂ ಬಳಸಬಹುದಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.