ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ 4ನೇ ಹಂತದ ಪ್ರಾಸ್ಟೇಟ್ ಕ್ಯಾನ್ಸರ್; ಇದೆಷ್ಟು ಅಪಾಯಕಾರಿ, ರೋಗಲಕ್ಷಣಗಳೇನು?
ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನರ್ ಇರುವುದು ಖಚಿತವಾಗಿದೆ. ಇವರು 4ನೇ ಹಂತದ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಏನಿದು ಪ್ರಾಸ್ಟೇಟ್ ಕ್ಯಾನ್ಸರ್, ಇದರ ರೋಗ ಲಕ್ಷಣಗಳೇನು?

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಖಚಿತವಾಗಿದೆ. ಕ್ಯಾನ್ಸರ್ ಇವರ ಮೂಳೆಗಳಿಗೂ ಹರಡಿದ್ದು, 4ನೇ ಹಂತದಲ್ಲಿದೆ ಎಂದು ಬೈಡನ್ ಅವರ ಅಧಿಕೃತ ಕಚೇರಿ ಪ್ರಕಟಣೆ ತಿಳಿಸಿದೆ.
4ನೇ ಹಂತದಲ್ಲಿರುವ ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಕ್ಯಾನ್ಸರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೂ ಇತ್ತೀಚಿನ ವೈದ್ಯಕೀಯ ತಂತ್ರಜ್ಞಾನದ ಬೆಳವಣಿಗೆಯು ಈ ಕ್ಯಾನ್ಸರ್ ಬಗ್ಗೆ ಕೊಂಚ ಭರವಸೆ ಮೂಡಿಸುವಂತೆ ಮಾಡಿದೆ.
ಪ್ರಾಸ್ಟೇಟ್ ಅಥವಾ ವೃಷಣದ ಕ್ಯಾನ್ಸರ್ ಇತ್ತೀಚೆಗೆ ಪುರುಷರಲ್ಲಿ ಗಂಭೀರವಾಗುತ್ತಿದೆ. ಹಲವರು ಈ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಹಾಗಂತ ಇದನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಪ್ರಾಣಹಾನಿಯಿಂದ ತಪ್ಪಿಸಿಕೊಳ್ಳಲು ಅವಕಾಶವಿದೆ.
ಒಳ್ಳೆಯ ಸುದ್ದಿ ಏನೆಂದರೆ ಪ್ರಾಸ್ಟೇಟ್ ಕ್ಯಾನ್ಸರ್ ತಜ್ಞರು ಹೇಳುವಂತೆ, ಈ ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿನ ಇತ್ತೀಚಿನ ಪ್ರಗತಿಗಳು ಈ ಕಾಯಿಲೆಗೆ ಸಂಬಂಧಿಸಿದ ಕರಾಳ ಚಿತ್ರಣವನ್ನು ಬದಲಾಯಿಸಿವೆ.
ಹಿಂದೆಲ್ಲಾ ಪ್ರಾಸ್ಟೇಟ್ ಕ್ಯಾನ್ಸರ್ ಬಂದರೆ ತಿಂಗಳುಗಳಲ್ಲಿ ಪ್ರಾಣಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿತ್ತು, ಆದರೆ ಈಗ ವರ್ಷಗಳ ಕಾಲ ಬದುಕಿ ಉಳಿಯುವ ಸಾಧ್ಯತೆ ಇದೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರಾಸ್ಟೇಟ್ ಕ್ಯಾನ್ಸರ್ ತಜ್ಞ ಡಾ. ಡೇನಿಯಲ್ ಲಿನ್ ಹೇಳಿದರು.
ಡ್ಯೂಕ್ ವಿಶ್ವವಿದ್ಯಾಲಯದ ಪ್ರಾಸ್ಟೇಟ್ ಕ್ಯಾನ್ಸರ್ ತಜ್ಞ ಡಾ. ಜುಡ್ ಮೌಲ್, ಪ್ರಾಸ್ಟೇಟ್ ಕ್ಯಾನ್ಸರ್ ಮೂಳೆಗಳಿಗೆ ಹರಡಿರುವ ಪುರುಷರು ಪ್ರಸ್ತುತ ಚಿಕಿತ್ಸೆಗಳೊಂದಿಗೆ 5, 7, 10 ಅಥವಾ ಅದಕ್ಕಿಂತ ಹೆಚ್ಚು ವರ್ಷ ಬದುಕಬಹುದು‘ ಎಂದು ಹೇಳುತ್ತಾರೆ.
ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡ ಕಾರಣ ಬೈಡನ್ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಕೆಲವು ನಿರ್ದಿಷ್ಟ ರೋಗಲಕ್ಷಣಗಳ ಮೂಲಕ ಕ್ಯಾನ್ಸರ್ ಇರಬಹುದು ಎಂದು ಅಂದಾಜಿಸಿ, ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಿಸಿದಾಗ ಬೈಡನ್ ಅವರಿಗೆ 4ನೇ ಹಂತ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.
ಬೈಡನ್ ಅವರ ವೃಷಣದಲ್ಲಿ ಗಂಟು ಇರುವುದನ್ನು ಗಮನಿಸಲಾಗಿತ್ತು. ನಂತರ ರಕ್ತಪರೀಕ್ಷೆ, ಪ್ರಾಸ್ಟೇಟ್ ಪ್ರತಿಜನಕ ಪರೀಕ್ಷೆಯನ್ನು ಮಾಡಿಸಿ ಕ್ಯಾನ್ಸರ್ ಇರುವುದು ಪತ್ತೆ ಮಾಡಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ.
ಪಿಎಸ್‌ಎ ಪರೀಕ್ಷೆಯು ಕ್ಯಾನ್ಸರ್ ಕೋಶಗಳಿಂದ ಬಿಡುಗಡೆಯಾಗುವ ಪ್ರೊಟೀನ್ ಅನ್ನು ಹುಡುಕುತ್ತದೆ ಮತ್ತು ಅದನ್ನು ಎಂಆರ್‌ಐ ಮೂಲಕ ಅನುಸರಿಸಬಹುದು. ರಕ್ತ ಪರೀಕ್ಷೆ ಮತ್ತು ಎಂಆರ್‌ಐ ಕ್ಯಾನ್ಸರ್ ಅನ್ನು ಸೂಚಿಸುತ್ತಿತ್ತು.
ಏನಿದು ಪ್ರಾಸ್ಟೇಟ್ ಕ್ಯಾನ್ಸರ್?
ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರ ಮೂತ್ರನಾಳದ ಕೆಳಭಾಗದಲ್ಲಿರುವ ಸಣ್ಣ ಗ್ರಂಥಿಯಾಗಿರುವ ಪ್ರಾಸ್ಟೇಟ್ ಗ್ರಂಥಿಯಲ್ಲಿ ಬೆಳವಣಿಗೆಯಾಗುತ್ತದೆ. ಸೆಮಿನಲ್ ದ್ರವವನ್ನು ಉತ್ಪಾದಿಸುವುದು ಇದರ ಮುಖ್ಯ ಕೆಲಸವಾಗಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಸಾಮಾನ್ಯವಾಗಿದ್ದು, ಇದು ವಿಶೇಷವಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆರಂಭಿಕ ಹಂತಗಳಲ್ಲಿ ಇದು ಸಾಮಾನ್ಯವಾಗಿ ರೋಗಲಕ್ಷಣಗಳನ್ನು ತೋರಿಸುವುದಿಲ್ಲ, ಆದ್ದರಿಂದ ಆರಂಭಿಕ ಪತ್ತೆ ಮತ್ತು ಯಶಸ್ವಿ ಚಿಕಿತ್ಸೆಗಾಗಿ ನಿಯಮಿತ ಸ್ಕ್ರೀನಿಂಗ್ ಮುಖ್ಯವಾಗಿದೆ.
ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ತುಂಬಾ ಮುಖ್ಯ, ಏಕೆಂದರೆ ಇದು ಪುರುಷರಿಗೆ ಅಪಾಯಕಾರಿ ಅಂಶಗಳು, ರೋಗಲಕ್ಷಣಗಳು ಮತ್ತು ನಿಯಮಿತ ಸ್ಕ್ರೀನಿಂಗ್‌ಗಳ ಪ್ರಾಮುಖ್ಯದ ಬಗ್ಗೆ ಅಗತ್ಯವಿರುವ ಜ್ಞಾನವನ್ನು ನೀಡುತ್ತದೆ. ಅಪಾಯದ ಅಂಶಗಳಲ್ಲಿ ವಯಸ್ಸು, ಕುಟುಂಬದ ಇತಿಹಾಸ, ಕೆಲವು ಆನುವಂಶಿಕ ಬದಲಾವಣೆಗಳು ಮತ್ತು ಜನಾಂಗೀಯತೆ ಸೇರಿವೆ. ಪ್ರಾಸ್ಟೇಟ್ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ ಹೊಂದಿರುವ ಅಥವಾ ಆಫ್ರಿಕನ್ ಅಮೆರಿಕನ್ ಮೂಲದ ಪುರುಷರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ, ಮೊದಲಿನ ಹಂತದಲ್ಲಿಯೇ ಸ್ಕ್ರೀನಿಂಗ್‌ಗಳನ್ನು ಪ್ರಾರಂಭಿಸಬೇಕು ಮತ್ತು ಆಗಾಗ ಸ್ಕ್ರೀನಿಂಗ್ ಮಾಡುವುದು ಮುಖ್ಯವಾಗುತ್ತದೆ. ಮುಂದುವರಿದ ಹಂತದ ಪ್ರಾಸ್ಟೇಟ್ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳೆಂದರೆ ಮೂತ್ರ ವಿಸರ್ಜನೆಯ ವೇಳೆ ತೊಂದರೆ, ಮೂತ್ರ ಅಥವಾ ವೀರ್ಯದಲ್ಲಿ ರಕ್ತ ಬರುವುದು ಮತ್ತು ಸೊಂಟ, ಬೆನ್ನು ಅಥವಾ ಎದೆಯಲ್ಲಿ ನೋವು. ಆರಂಭಿಕ ಹಂತಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸದಿರಬಹುದು, ಆದ್ದರಿಂದ ನಿಯಮಿತ ತಪಾಸಣೆ ಮುಖ್ಯವಾಗಿದೆ.
ಪ್ರಾಸ್ಟೇಟ್ ಕ್ಯಾನ್ಸರ್‌ನ ರೋಗನಿರ್ಣಯ
ʼಪ್ರಾಸ್ಟೇಟ್ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಮೂತ್ರ ವಿಸರ್ಜನೆಯ ಪ್ರಮಾಣ ಹೆಚ್ಚುವುದು ಇಂತಹ ಲಕ್ಷಣಗಳನ್ನು ಹೊಂದಿರಬಹುದು. ಕೆಲವರಿಗೆ ಕಿಬ್ಬೊಟ್ಟೆಯ ನೋವು ಕಾಣಿಸಬಹುದು, ಇನ್ನೂ ಕೆಲವರಿಗೆ ನೋವು ಕಾಣಿಸುವುದಿಲ್ಲ. ಮೂತ್ರದಲ್ಲಿ ರಕ್ತ ಹೋಗುವುದು, ಮೂತ್ರ ವಿಸರ್ಜನೆಗೆ ಕಷ್ಟವಾಗುವುದು, ಮೂತ್ರದ ಮಾಡಿದ ನಂತರವೂ ಮೂತ್ರ ಹನಿಸುವುದು ಈ ಎಲ್ಲಾ ರೋಗಲಕ್ಷಣಗಳು ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆಗೆ ಸಂಬಂಧಿಸಿದೆ. ಇಂತಹ ರೋಗಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣಕ್ಕೆ ವೈದ್ಯರನ್ನು ಭೇಟಿ ಮಾಡಬೇಕು. ಇದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಪ್ರಾಸ್ಟೇಟ್‌ನ ಹಾನಿಕರವಲ್ಲದ ಹಿಗ್ಗುವಿಕೆಯಾಗಿದ್ದರೂ ಕೂಡ ಈ ರೋಗಲಕ್ಷಣಗಳು ಸಾಮಾನ್ಯವಾಗಿರುತ್ತವೆ. ಇದಕ್ಕೆ ಹೆದರುವ ಅಗತ್ಯವಿರುವುದಿಲ್ಲ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಇವು ಕ್ಯಾನ್ಸರ್ ಲಕ್ಷಣಗಳೂ ಆಗಿರುತ್ತವೆ. ಹೀಗಾಗಿ ಎಚ್ಚರ ವಹಿಸಬೇಕು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ