HMPV: ಕೋವಿಡ್ ಬಳಿಕ ಚೀನಾದಲ್ಲಿ ಹರಡುತ್ತಿದೆ ಮತ್ತೊಂದು ಸಾಂಕ್ರಾಮಿಕ ರೋಗ; ಏನಿದು ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್, ರೋಗಲಕ್ಷಣಗಳೇನು?
ಜಗತ್ತನ್ನೇ ನಡುಗಿಸಿದ್ದ ಕೋವಿಡ್ ನಂತರ ಇದೀಗ ಚೀನಾದಲ್ಲಿ ಹೊಸ ವೈರಸ್‌ವೊಂದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಹ್ಯೂಮನ್ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಎಂದು ಇದಕ್ಕೆ ಹೆಸರಿಸಲಾಗಿದೆ. ಪ್ರಾಥಮಿಕವಾಗಿ ಈ ಸಾಂಕ್ರಾಮಿಕ ಮಕ್ಕಳಲ್ಲಿ ಹೆಚ್ಚು ಹರಡುತ್ತದೆ. ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಭಾರತ ಸೇರಿದಂತೆ ಏಷ್ಯಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಚೀನಾದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಾಂಕ್ರಾಮಿಕ ರೋಗವೊಂದು ಬಹಳ ವ್ಯಾಪಕವಾಗಿ ಹರಡುತ್ತಿದ್ದು, ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದು 5 ವರ್ಷಗಳ ಹಿಂದಿನ ಕೋವಿಡ್ ಸ್ಥಿತಿಯನ್ನು ನೆನಪಿಸುವಂತಿದೆ. ವೈರಸ್ ಕಾರಣದಿಂದ ರೋಗವು ವೇಗವಾಗಿ ಹರಡುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್ ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಹ್ಯೂಮನ್ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಎಂದು ಈ ಸಾಂಕ್ರಾಮಿಕಕ್ಕೆ ಹೆಸರಿಡಲಾಗಿದ್ದು, ಆರೋಗ್ಯ ತಜ್ಞರು ಇದರ ಹರಡುವಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಉತ್ತರ ಚೀನಾದಲ್ಲಿ ಈ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಭಾರತ ಸೇರಿದಂತೆ ಏಷ್ಯಾದ ಇತರ ದೇಶಗಳಿಗೂ ಹರಡುವ ಭೀತಿ ಎದುರಾಗಿದೆ. ಈ ಕಾಯಿಲೆ ಹರಡುವ ಬಗ್ಗೆ ಹಾಗೂ ಇದರ ಅಪಾಯದ ಬಗ್ಗೆ ಚೀನಾ ಸರ್ಕಾರವಾಗಲಿ, ವಿಶ್ವ ಆರೋಗ್ಯ ಸಂಸ್ಥೆಯಾಗಲಿ ಈವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಚೀನಾದ ಆರೋಗ್ಯ ಅಧಿಕಾರಗಳ ಪ್ರಕಾರ ವೈರಸ್ ದೇಶದ ಉತ್ತರ ಭಾಗದಲ್ಲಿ ಹೆಚ್ಚು ಹರಡುತ್ತಿದೆ. ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಈ ವಿಷಯವನ್ನು ಖಚಿತಪಡಿಸಿದೆ. ಎಲ್ಲಾ ವಯಸ್ಸಿನವರಿಗೂ ಈ ಸೋಂಕು ಹರಡುವ ಸಾಧ್ಯತೆ ಇದ್ದು, ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಿಗೂ ಈ ವೈರಸ್ ತೊಂದರೆ ಕೊಡಬಹುದು ಎನ್ನಲಾಗುತ್ತಿದೆ.
HMPV ಎಂದರೇನು?
HMPV ಅಥವಾ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಉಸಿರಾಟಕ್ಕೆ ಸಂಬಂಧಿಸಿದ ವೈರಸ್ ಆಗಿದ್ದು, ಇದು ಉಸಿರಾಟದ ಸೋಂಕಿಗೆ ಕಾರಣವಾಗುತ್ತದೆ. ಇದು ಚಿಕ್ಕ ಮಕ್ಕಳು, ವಯಸ್ಸಾದವರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. 2001ರಲ್ಲಿಯೇ ಈ ವೈರಸ್ ಪತ್ತೆಯಾಗಿತ್ತು ಎಂದು ಹೇಳಲಾಗುತ್ತಿದೆ.
ಎಚ್‌ಎಂಪಿವಿಯ ರೋಗಲಕ್ಷಣಗಳೇನು?
ಎಚ್‌ಎಂಪಿವಿಯ ರೋಗಲಕ್ಷಣಗಳು ಸಾಮಾನ್ಯ ಜ್ವರ ಹಾಗೂ ಉಸಿರಾಟದ ಸೋಂಕಿನಂತೆಯೇ ಇರುತ್ತದೆ. ಜ್ವರ, ಕೆಮ್ಮು, ಮೂಗು ಕಟ್ಟಿದಂತಾಗುವುದು, ಉಸಿರಾಟದ ತೊಂದರೆ ಇದರ ಪ್ರಮುಖ ರೋಗಲಕ್ಷಣಗಳಾಗಿವೆ. ತೀವ್ರತರವಾದ ಪ್ರಕರಣಗಳಲ್ಲಿ, ವೈರಸ್ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ತೊಂದರೆಗಳಿಗೂ ಕಾರಣವಾಗಬಹುದು. ಈ ವೈರಸ್ ಪರಿಣಾಮವು ಮೂರರಿಂದ ಆರು ದಿನಗಳವರೆಗೆ ಇರುತ್ತದೆ, ಸೋಂಕಿನ ತೀವ್ರತೆಯನ್ನು ಅವಲಂಬಿಸಿ ರೋಗಲಕ್ಷಣಗಳು ವಿಭಿನ್ನ ಅವಧಿಗಳವರೆಗೆ ಇರುತ್ತವೆ ಎಂದು ವರದಿಗಳು ಹೇಳುತ್ತಿವೆ.
ಎಚ್‌ಎಂಪಿವಿ ಹರಡುವುದು ಹೇಗೆ?
- ಕೋವಿಡ್‌ನಂತೆ ಎಚ್‌ಎಂಪಿವಿ ಕೂಡ ಕೆಮ್ಮುವುದು, ಸೀನುವುದರಿಂದ ಹರಡುತ್ತದೆ.
- ಕೈಕುಲುಕುವುದು ಅಥವಾ ಸ್ಪರ್ಶಿಸುವುದು ಹಾಗೂ ದೈಹಿಕ ಸಂರ್ಪಕದಿಂದ ಹರಡಬಹುದು.
- ಕಲುಷಿತಗೊಂಡ ಮೇಲ್ಮೈಗಳನ್ನು ಸ್ಪರ್ಶಿಸಿದ ನಂತರ ನಂತರ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಸ್ಪರ್ಶಿಸುವುದರಿಂದಲೂ ಹರಡಬಹುದು.
ಎಚ್‌ಎಂಪಿವಿ ಹರಡುವುದನ್ನು ತಡೆಯುವುದು ಹೇಗೆ?
HMPV ಯ ತಡೆಗಟ್ಟುವ ಕ್ರಮಗಳು ಇತರ ಉಸಿರಾಟದ ಕಾಯಿಲೆಗಳಿಗೆ ಹೋಲುತ್ತವೆ. ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ
- ನೀರು ಹಾಗೂ ಸೋಪಿನಿಂದ ಕನಿಷ್ಠ 20 ಸೆಕೆಂಡ್‌ಗಳ ಕಾಲ ಕೈ ತೊಳೆಯಿರಿ.
- ಕೈ ತೊಳೆಯದೇ ಮುಖ ಮುಟ್ಟದಿರಿ.
- ಅನಾರೋಗ್ಯದ ಲಕ್ಷಣಗಳನ್ನು ಹೊಂದಿರುವ ಜನರಿಂದ ಅಂತರವನ್ನು ಕಾಪಾಡಿಕೊಳ್ಳಿ.
- ಬಾಗಿಲು, ಕಿಟಿಕಿಯಂತಹ ಯಾವುದೇ ಮೇಲ್ಮೈ ಸ್ಪರ್ಶಿಸಿದ ನಂತರ ಕೈ ತೊಳೆಯಿರಿ.
HMPV ಗೆ ಚಿಕಿತ್ಸೆ ಅಥವಾ ಲಸಿಕೆ ಇದೆಯೇ?
ಸದ್ಯಕ್ಕೆ, HMPV ಗಾಗಿ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಸೋಂಕಿತರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದೊಂದೇ ಪರಿಹಾರ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)