Guillain-Barre Syndrome: ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ಮೊದಲ ಬಲಿ, ಮಹಾರಾಷ್ಟ್ರದ ಸೋಲಾಪುರದಲ್ಲಿ ವ್ಯಕ್ತಿ ಸಾವು; ಏನಿದು ಹೊಸ ಕಾಯಿಲೆ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Guillain-barre Syndrome: ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ಮೊದಲ ಬಲಿ, ಮಹಾರಾಷ್ಟ್ರದ ಸೋಲಾಪುರದಲ್ಲಿ ವ್ಯಕ್ತಿ ಸಾವು; ಏನಿದು ಹೊಸ ಕಾಯಿಲೆ?

Guillain-Barre Syndrome: ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ಮೊದಲ ಬಲಿ, ಮಹಾರಾಷ್ಟ್ರದ ಸೋಲಾಪುರದಲ್ಲಿ ವ್ಯಕ್ತಿ ಸಾವು; ಏನಿದು ಹೊಸ ಕಾಯಿಲೆ?

ಮಹಾರಾಷ್ಟ್ರದ ಸೋಲಾಪುರದಲ್ಲಿ ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ತುತ್ತಾದ ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ ಈ ಸಿಂಡ್ರೋಮ್‌ಗೆ ಬಲಿಯಾದ ಮೊದಲ ವ್ಯಕ್ತಿ ಅವರಾಗಿದ್ದಾರೆ. ಹಾಗಾದರೆ ಏನಿದು ಹೊಸ ಕಾಯಿಲೆ ಎಂಬ ವಿವರ ಇಲ್ಲಿದೆ.

ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ಮೊದಲ ಬಲಿ (ಸಾಂಕೇತಿಕ ಚಿತ್ರ)
ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ಮೊದಲ ಬಲಿ (ಸಾಂಕೇತಿಕ ಚಿತ್ರ)

ಮಹಾರಾಷ್ಟ್ರ: ಗುಯಿಲಿನ್-ಬಾರೆ ಸಿಂಡ್ರೋಮ್ ಎನ್ನುವ ಹೊಸ ಕಾಯಿಲೆಯೊಂದು ಹರಡುತ್ತಿದ್ದು, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಈ ಸಿಂಡ್ರೋಮ್‌ಗೆ ತುತ್ತಾದ ವ್ಯಕ್ತಿ ಸಾವನ್ನಪ್ಪಿದ್ದಾಗಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ ಎಂಬುದನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಪುಣೆಯಿಂದ ತಮ್ಮ ಹುಟ್ಟೂರಾದ ಸೋಲಾಪುರಕ್ಕೆ ಆ ವ್ಯಕ್ತಿ ಬಂದಿದ್ದರು. ಪುಣೆಯಲ್ಲಿ ಅವರಿಗೆ ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪುಣೆಯಲ್ಲಿ ಈ ಸಿಂಡ್ರೋಮ್ ಈಗಾಗಲೇ ಹಲವು ಜನರಿಗೆ ಹರಡಿದೆ.

ಗುಯಿಲಿನ್-ಬಾರೆ ಎನ್ನುವುದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಈ ಸಿಂಡ್ರೋಮ್‌ಗೆ ಬಲಿಯಾದ ಮೊದಲ ವ್ಯಕ್ತಿ ಇವರಾಗಿದ್ದಾರೆ.

‘ಭಾನುವಾರ ಒಟ್ಟು ಗುಯಿಲಿನ್-ಬಾರೆ ಸಿಂಡ್ರೋಮ್ (ಜಿಬಿಎಸ್) ಪ್ರಕರಣಗಳ ಸಂಖ್ಯೆ 101 ಕ್ಕೆ ಏರಿದ್ದು, ಇದರಲ್ಲಿ 68 ಪುರುಷರು ಮತ್ತು 33 ಮಹಿಳೆಯರು ಸೇರಿದ್ದಾರೆ. ಈ ಪೈಕಿ 16 ರೋಗಿಗಳು ವೆಂಟಿಲೇಟರ್‌ನಲ್ಲಿದ್ದಾರೆ. ಸೋಲಾಪುರದಲ್ಲಿ ಗುಯಿಲಿನ್-ಬಾರೆ ಶಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ‘ ಎಂದು ರಾಜ್ಯ ಆರೋಗ್ಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

95 ಪ್ರಕರಣಗಳು ಪುಣೆ (81) ಮತ್ತು ಪಿಂಪ್ರಿ-ಚಿಂಚ್‌ವಾಡ್ (14) ಪುರಸಭೆಗಳಿಂದ ಬಂದಿವೆ ಎಂದು ದತ್ತಾಂಶ ತೋರಿಸುತ್ತದೆ.

ಒಟ್ಟಾರೆಯಾಗಿ, ಇಲ್ಲಿಯವರೆಗೆ ಒಟ್ಟು 25,578 ಮನೆಗಳ ಸಮೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪುಣೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 15,761, ಚಿಂಚ್‌ವಾಡ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3,719 ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 6,098 ಮನೆಗಳಿವೆ.

ಏನಿದು ಗುಯಿಲಿನ್ ಬಾರೆ ಸಿಂಡ್ರೋಮ್‌?

ಇದು ಅಪರೂಪದ ಕಾಯಿಲೆಯಾಗಿದ್ದು, ಈ ಸಿಂಡ್ರೋಮ್‌ ಸ್ನಾಯುಗಳಲ್ಲಿ ಹಠಾತ್ ಮರಗಟ್ಟುವಿಕೆ ಮತ್ತು ದೌರ್ಬಲ್ಯ ಉಂಟುಮಾಡುತ್ತದೆ. ಇದರ ಲಕ್ಷಣಗಳು ಕೈಕಾಲುಗಳಲ್ಲಿ ತೀವ್ರ ದೌರ್ಬಲ್ಯ, ಚಲನೆಗೆ ಕಷ್ಟವಾಗುವುದು ಇತ್ಯಾದಿಯಾಗಿದೆ.

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು ಸಾಮಾನ್ಯವಾಗಿ ಜಿಬಿಎಸ್‌ಗೆ ಕಾರಣವಾಗುತ್ತವೆ. ಏಕೆಂದರೆ ಇವು ರೋಗಿಗಳ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ.

ವೈದ್ಯರ ಪ್ರಕಾರ, ಜಿಬಿಎಸ್ ಮಕ್ಕಳು ಮತ್ತು ಯುವಕರಲ್ಲಿ ಪ್ರಚಲಿತವಾಗಿದ್ದರೂ, ಇದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವುದಿಲ್ಲ ಮತ್ತು ಹೆಚ್ಚಿನ ರೋಗಿಗಳು ಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ.

ಆರಂಭದಲ್ಲಿ 24 ಶಂಕಿತ ಪ್ರಕರಣಗಳು ಕಂಡುಬಂದ ನಂತರ ಈ ಸೋಂಕಿನ ಹಠಾತ್ ಏರಿಕೆಯ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಆರೋಗ್ಯ ಇಲಾಖೆ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ಸ್ಥಾಪಿಸಿತು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.