ದೆಹಲಿಯಲ್ಲಿ ವಿಮಾನ ಹಾರಾಟ ವಿಳಂಬಕ್ಕೆ ಕಾರಣವಾದ ಬಿಸಿಗಾಳಿ; ಟೇಕ್ ಆಫ್ ಕಾರ್ಯಾಚರಣೆಗೆ ಅಡ್ಡಿ! ಗಿರೀಶ್ ಲಿಂಗಣ್ಣ ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿಯಲ್ಲಿ ವಿಮಾನ ಹಾರಾಟ ವಿಳಂಬಕ್ಕೆ ಕಾರಣವಾದ ಬಿಸಿಗಾಳಿ; ಟೇಕ್ ಆಫ್ ಕಾರ್ಯಾಚರಣೆಗೆ ಅಡ್ಡಿ! ಗಿರೀಶ್ ಲಿಂಗಣ್ಣ ಬರಹ

ದೆಹಲಿಯಲ್ಲಿ ವಿಮಾನ ಹಾರಾಟ ವಿಳಂಬಕ್ಕೆ ಕಾರಣವಾದ ಬಿಸಿಗಾಳಿ; ಟೇಕ್ ಆಫ್ ಕಾರ್ಯಾಚರಣೆಗೆ ಅಡ್ಡಿ! ಗಿರೀಶ್ ಲಿಂಗಣ್ಣ ಬರಹ

ಕಳೆದ ಹಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಗಾಳಿಗೆ ಸುಮಾರು 20 ಮಂದಿ ಮೃತಪಟ್ಟಿದ್ದಾರೆ. ಜನಸಾಮಾನ್ಯರಿಗೆ ಅಷ್ಟೇ ಅಲ್ಲದೆ, ಬಿಸಿಗಾಳಿ ವಿಮಾನಗಳ ಹಾರಾಟದ ಮೇಲೂ ಪರಿಣಾಮ ಬೀರಿದೆ. ಈ ಕುರಿತು ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ಬರಹ ಓದಿ.

ವಿಮಾನ ಹಾರಾಟ ವಿಳಂಬಕ್ಕೆ ಕಾರಣವಾದ ಬಿಸಿಗಾಳಿ; ಟೇಕ್ ಆಫ್ ಕಾರ್ಯಾಚರಣೆಗೆ ಅಡ್ಡಿ
ವಿಮಾನ ಹಾರಾಟ ವಿಳಂಬಕ್ಕೆ ಕಾರಣವಾದ ಬಿಸಿಗಾಳಿ; ಟೇಕ್ ಆಫ್ ಕಾರ್ಯಾಚರಣೆಗೆ ಅಡ್ಡಿ

ಉತ್ತರ ಭಾರತ ಅದರಲ್ಲೂ ರಾಷ್ಟ್ರ ರಾಜಧಾನಿ ನವದೆಹಲಿ ತೀವ್ರತರವಾದ ಬಿಸಿಗಾಳಿಗೆ ತತ್ತರಿಸಿ ಹೋಗಿದೆ. ಮಾರಣಾಂತಿಕ 'ಹೀಟ್ ವೇವ್ ಸ್ಟ್ರೋಕ್‌'ಗಳಿಂದ ಬಳಲಿ ಬೆಂಡಾಗಿರುವ ಜನ ಒಂದೆಡೆಯಾದರೆ, ಇದೇ ಕಾರಣಕ್ಕೆ ವಿಮಾನಗಳ ಹಾರಾಟ ಸಮಯದಲ್ಲಿ ವಿಳಂಬ ಕೂಡ ಉಂಟಾಗಿದೆ. ತೀವ್ರ ತಾಪಮಾನದಿಂದಾಗಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ದೈನಂದಿನ ಕಾರ್ಯಾಚರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಈ ಕುರಿತು ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಯೋರ್ವರು, ಬಿಸಿಗಾಳಿ ಮತ್ತು ತಾಪಮಾನ ಏರಿಕೆಯ ಕಾರಣಕ್ಕೆ ವಿಮಾನಗಳ ಹಾರಾಟದ ಸಮಯ ಬದಲಾವಣೆ ಅನಿವಾರ್ಯ ಎಂದು ಹೇಳಿದ್ದಾರೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಷ್ಟೇ ಅಲ್ಲದೇ ಪ್ರಯಾಣಿಕರ ಲಗೇಜ್ ತೂಕದ ಮಿತಿಯಲ್ಲೂ ಕೆಲವು ಬದಲಾವಣೆಯಾಗಲಿದ್ದು, ವಿಮಾನಯಾನ ಸಂಸ್ಥೆಗಳಿಗೆ ಗರಿಷ್ಠ ಸಾಮಾನು ತೂಕದ ಮೇಲೆ ಕೆಲವು ನಿರ್ಬಂಧಗಳನ್ನು ಜಾರಿಗೆ ತರುವಂತೆ ನಿರ್ದೇಶಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜೂನ್ 19 (ಬುಧವಾರ) ರಂದು ದೆಹಲಿಯಿಂದ ದರ್ಭಾಂಗಕ್ಕೆ ಹೊರಟಿದ್ದ ಸ್ಪೈಸ್‌ಜೆಟ್ ಫ್ಲೈಟ್ SG 486, ತನ್ನ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಟೇಕ್ ಆಫ್ ಆಗಿದೆ. ಅಲ್ಲದೇ ವಿಮಾನದ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಪ್ರಯಾಣಿಕರು ಒಂದು ಗಂಟೆಗೂ ಅಧಿಕ ಕಾಲ ಬಿಸಿಗಾಳಿಯ ಹೊಡೆತವನ್ನು ಸಹಿಸಿಕೊಳ್ಳಬೇಕಾಯಿತು.

ವಿಮಾನದೊಳಗಿನ ತಾಪಮಾನವು ಸುಮಾರು 45 ಡಿಗ್ರಿ ಸೆಲ್ಸಿಯಸ್ ತಲುಪಿದ್ದ ಕಾರಣ, ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕಾರ್ಯನಿವಹಿಸಿಲ್ಲ. ಅಲ್ಲದೇ ವಿಮಾನ ಹಾರಾಟ ಸಮಯ ವಿಳಂಬವಾಗಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಬಿಸಿ ವಾತಾವರಣದಲ್ಲಿ ವಿಮಾನಗಳ ಸುಗಮ ಕಾರ್ಯಾಚರಣೆ ಸವಾಲಿನ ಕೆಲಸ ಎಂದು ವಿಮಾನಯಾನ ಸಂಸ್ಥೆಗಳು ಹೇಳಿವೆ.

ವಿಮಾನಗಳ ಸುಗಮ ಕಾರ್ಯಾಚರಣೆಗೆ 2 ರೀತಿಯ ನಕಾರಾತ್ಮಕ ಪರಿಣಾಮ

ಈ ಕುರಿತು ತಜ್ಞರ ಅಭಿಪ್ರಾಯ ಒಳಗೊಂಡ ವರದಿಯೊಂದನ್ನು 'ನ್ಯೂಸ್‌ವೀಕ್' ಪ್ರಕಟಿಸಿದ್ದು, ಹೆಚ್ಚಿನ ತಾಪಮಾನವು ವಿಮಾನಗಳ ಸುಗಮ ಕಾರ್ಯಾಚರಣೆ ಮೇಲೆ ಎರಡು ರೀತಿಯ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಹೇಳಿದೆ. ವಿಮಾನಗಳ ಟೇಕ್ ಆಫ್ ಸಮಯ ಬದಲಾವಣೆ ಮತ್ತು ಲಗೇಜ್ ತೂಕ ಕಡಿಮೆ ಮಾಡುವ ಅನಿವಾರ್ಯತೆ ಎದುರಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಷ್ಟೇ ಅಲ್ಲದೇ ಹೆಚ್ಚಿನ ತಾಪಮಾನದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು, ಜೆಟ್ ಎಂಜಿನ್‌ಗಳು ಪೂರ್ಣ ಪ್ರಮಾಣದ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಒಂದು ವೇಳೆ ಹವಾನಿಯಂತ್ರಣ ವ್ಯವಸ್ಥೆಯ ಕಾರ್ಯನಿರ್ವಹಣೆ ವಿಫಲಗೊಂಡರೆ, ವಿಮಾನದ ಕ್ಯಾಬಿನ್ ತಾಪಮಾನದಲ್ಲಿ ಏರಿಕೆಗೆ ಕಾರಣವಾಗುತ್ತದೆ.

ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಗಳು ಈಗಾಗಲೇ ತೀವ್ರವಾದ ಶಾಖದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಕಳೆದ ವಾರ ಗ್ರೀಸ್‌ನಲ್ಲಿ ಕತಾರ್ ಏರ್‌ಲೈನ್ಸ್ ವಿಮಾನದ ಪ್ರಯಾಣಿಕರು ಮೂಗಿನ ರಕ್ತಸ್ರಾವದಿಂದ ಬಳಲಿದ ಕುರಿತು ವರದಿಯಾಗಿದೆ. ತಾಪಮಾನವು 39 ಡಿಗ್ರಿ ಸೆಲ್ಸಿಯಸ್ ತಲುಪಿದ ಕಾರಣ ಹವಾನಿಯಂತ್ರಣ ವ್ಯವಸ್ಥೆಯು ವಿಫಲಗೊಂಡು, ಕೆಲವು ಪ್ರಯಾಣಿಕರು ಪ್ರಜ್ಞೆ ತಪ್ಪಿದ್ದಾಗಿಯೂ ವರದಿಯಾಗಿದೆ.

2017ರಲ್ಲಿ ಅರಿಜೋನಾದ ಫೀನಿಕ್ಸ್‌ನಲ್ಲಿ ತಾಪಮಾನವು 48 ಡಿಗ್ರಿ ಸೆಂಟಿಗ್ರೇಡ್‌ಗೆ ಏರಿದ ಕಾರಣಕ್ಕೆ, ಸುಮಾರು 40ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

ಟೇಕ್ ಆಫ್ ಸಮಯದಲ್ಲಿ ವಿಮಾನವು ನೆಲ ಬಿಟ್ಟು ಮೇಲೆ ಏಳಲು ಗಾಳಿಯ ಸಾಂದ್ರತೆ ಮತ್ತು ಒತ್ತಡವನ್ನು ಅವಲಂಬಿಸಿರುತ್ತದೆ. ಬಿಸಿಗಾಳಿಯ ಸಾಂದ್ರತೆ ಕಡಿಮೆ ಇರುವುದರಿಂದ ಒತ್ತಡವೂ ಕಡಿಮೆಯಾಗಿ ವಿಮಾನವನ್ನು ಮೇಲಕ್ಕೆತ್ತುವುದು ಹೆಚ್ಚು ಕಷ್ಟವಾಗುತ್ತದೆ. ಬಿಸಿಗಾಳಿಯು ಜೆಟ್ ಎಂಜಿನ್ ಕಾರ್ಯಕ್ಷಮತೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ತಾಪಮಾನ ಏರಿಕೆಯಿಂದಾಗಿ ಆರಂಭಿಕ ಶಕ್ತಿ ಕುಂಠಿತಗೊಳ್ಳುವುದರಿಂದ ಟೇಕ್ ಆಫ್ ಗೆ ಅಗತ್ಯವಾದ ವೇಗವನ್ನು ಪಡೆಯಲು, ವಿಮಾನಗಳಿಗೆ ಧೀರ್ಘ ರನ್ ವೇಯ ಅವಶ್ಯಕತೆ ಇರುತ್ತದೆ. ಒತ್ತಡವನ್ನು ನಿರ್ವಹಿಸಲು ಪ್ರಯಾಣಿಕರ ಲಗೇಜ್ ತೂಕವನ್ನು ಕಡಿಮೆ ಮಾಡಲೇಬೇಕಾಗುತ್ತದೆ. ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಎಂಜಿನ್‌ಗಳಿಂದ ಹೆಚ್ಚಿನ ಶಕ್ತಿ ವ್ಯಯಿಸಬೇಕಾಗುತ್ತದೆ. ಅಂತಿಮವಾಗಿ ಇದು ವಿಮಾನದ ಹಾರಾಟದ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಅಮೇರಿಕಾದ ಫೆಡರಲ್ ಏವಿಯೇಷನ್ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಕ್ಯಾಬಿನ್ ತಾಪಮಾನದ ಸಮತೋಲನ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಒಟ್ಟಿನಲ್ಲಿ ತೀವ್ರ ಬಿಸಿಗಾಳಿಯಿಂದಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲದೇ, ವಿಮಾನಗಳ ಕಾರ್ಯಾಚರಣೆ ಮೇಲೂ ದುಷ್ಪರಿಣಾಮ ಬೀರಿರುವುದು ಸ್ಪಷ್ಟ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.