Saudi Arabia Rains: ಸೌದಿ ಅರೇಬಿಯಾದಲ್ಲಿ ಮಳೆ ಅಬ್ಬರ: ಮೆಕ್ಕಾ, ಜೆಡ್ಡಾದಲ್ಲಿ ಕೊಚ್ಚಿ ಹೋದ ವಾಹನಗಳು, ಮತ್ತೆ ಮಳೆಯ ಅಲರ್ಟ್
ಸೌದಿ ಅರೇಬಿಯಾದಲ್ಲಿ ಮತ್ತೆ ಮಳೆ ಅಬ್ಬರಿಸುತ್ತಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಮೆಕ್ಕಾ ಹಾಗೂ ಜೆಡ್ಡಾ ನಗರಗಳ ಜನರು ತೊಂದರೆಗೆ ಸಿಲುಕಿದ್ದಾರೆ.
ಮುಸ್ಲೀಮರ ಪವಿತ್ರ ಧಾರ್ಮಿಕ ಸ್ಥಳ ಮೆಕ್ಕಾ ಸಂಪೂರ್ಣ ಮಳೆಯಿಂದ ಮುಳುಗಿ ಹೋಗಿದೆ. ಜೆಡ್ಡಾ ನಗರವೂ ಭಾರೀ ಮಳೆಯಿಂದಾಗಿ ನಲುಗಿದೆ. ಸೌದಿ ಅರೇಬಿಯಾದಲ್ಲಿ ಎರಡು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ತತ್ತರಿಸಿ ಹೋಗಿದೆ. ನಗರದ ಮುಖ್ಯ ರಸ್ತೆಗಳು ಹೊಳೆಯಾಗಿ ಮಾರ್ಪಟ್ಟಿವೆ. ಪ್ರವಾಹದ ನೀರಿನ ರಭಸಕ್ಕೆ ಕಾರುಗಳು ಚಲಿಸುತ್ತಿವೆ, ರಸ್ತೆ ಮಧ್ಯದಲ್ಲಿ ಸಿಲುಕಿರುವ ಬಸ್ಸುಗಳು, ಮೂಲೆ ಮೂಲೆಗಳಿಂದ ಜನರನ್ನು ರಕ್ಷಿಸಲಾಗುತ್ತಿದೆ. ಪ್ರತಿ ವರ್ಷ ಸೌದೀ ಅರೇಬಿಯಾದಲ್ಲಿ ಮಳೆ ಎಂದರೆ ಅದು ಭೀಕರ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದ್ದು. ಹೊಸ ವರ್ಷದಲ್ಲಿ ಮೆಕ್ಕಾ ಸಹಿತ ಪ್ರಮುಖ ನಗರಗಳನ್ನು ಅಸ್ತವ್ಯಸ್ತವಾಗಿಸಿದೆ. ಭಾರೀ ಮಳೆ ಕಾರಣದಿಂದ ವಿಮಾನ ಸಂಚಾರ ಬಹುತೇಕ ರದ್ದಾಗಿದ್ದರೆ, ಶಾಲೆಗಳಿಗೂ ರಜೆ ನೀಡಿ ಆನ್‌ಲೈನ್ ತರಗತಿ ನಡೆಸಲು ಸೂಚಿಸಲಾಗಿದೆ. ಸೌದಿ ಅರೇಬಿಯಾದ ಹವಾಮಾನ ಇಲಾಖೆ ಮೆಕ್ಕಾ, ಮದೀನಾ ಮತ್ತು ಬಂದರು ನಗರ ಜೆಡ್ಡಾದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಸೌದಿ ಪ್ರೆಸ್ ಏಜೆನ್ಸಿ (SPA) ಯ ವರದಿಯ ಪ್ರಕಾರ, ಇಸ್ಲಾಂ ಧರ್ಮದವರ ಪವಿತ್ರ ನಗರವಾದ ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಭಾರೀ ಮಳೆ ಸುರಿಯುತ್ತಲೇ ಇದೆ. ಇದರಿಂದ ನೀರು ರಸ್ತೆಗಳಲ್ಲೆಲ್ಲಾ ಹರಿಯುತ್ತಿದ್ದು, ವಾಹನಗಳು ಕೊಚ್ಚಿಕೊಂಡು ಹೋಗುತ್ತಿವೆ. ಮೆಕ್ಕಾ ಮತ್ತು ಮದೀನಾ ಸುತ್ತಮುತ್ತ ಗುಡುಗು, ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗಿದೆ. ಜೆಡ್ಡಾ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಭಾರೀ ನೀರಿನಿಂದ ತುಂಬಿವೆ.
ಈ ಪ್ರವಾಹದ ಹಲವಾರು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮೆಕ್ಕಾದಲ್ಲಿ ಭಾರೀ ನೀರು ಪ್ರಾರಂಭವಾದಾಗಿನಿಂದ ಕಾರುಗಳು ಮಾತ್ರವಲ್ಲ, ಬಸ್ಸುಗಳು ಸಹ ಸಿಕ್ಕಿಹಾಕಿಕೊಂಡಿವೆ.
ಮೆಕ್ಕಾದ ಆಗ್ನೇಯದಲ್ಲಿರುವ ಅಲ್-ಅವಾಲಿ ಪ್ರದೇಶದಲ್ಲಿ ಸಿಕ್ಕಿಬಿದ್ದ ಮಕ್ಕಳನ್ನು ರಕ್ಷಿಸಲು ಪುರುಷರು ಮಾನವ ಸರಪಳಿಗಳನ್ನು ರಚಿಸುತ್ತಿರುವುದು ಕಂಡುಬಂದಿದೆ. ಮತ್ತೊಂದು ವೀಡಿಯೋದಲ್ಲಿ, ಪ್ರವಾಹದಿಂದಾಗಿ ಬೈಕ್‌ನಿಂದ ಬಿದ್ದ ಡೆಲಿವರಿ ಬಾಯ್ ಒಬ್ಬನನ್ನು ವ್ಯಕ್ತಿಯೊಬ್ಬರು ರಕ್ಷಿಸುತ್ತಿರುವುದು ದಾಖಲಾಗಿದೆ. ಮಳೆಯ ಅಬ್ಬರ ತೀವ್ರಗೊಂಡಿದ್ದು, ಸದ್ಯದಲ್ಲೇ ನಿಲ್ಲುವ ಲಕ್ಷಣಗಳಿಲ್ಲ. ಮರಗಳು ಮತ್ತು ಅವಶೇಷಗಳು ನೀರಿನಿಂದ ಕೊಚ್ಚಿಹೋಗಿವೆ.
ಸೌದಿ ಅರೇಬಿಯಾದ ರಾಷ್ಟ್ರೀಯ ಹವಾಮಾನ ಕೇಂದ್ರ (NMC) ವಾರವಿಡೀ ಸಾಧಾರಣದಿಂದ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಜನರು ಜಾಗರೂಕತೆ ವಹಿಸುವಂತೆ ಮನವಿ ಮಾಡಿದೆ.
ಜೆಡ್ಡಾದಲ್ಲಿರುವ ಕಿಂಗ್ ಅಬ್ದುಲ್ ಅಜೀಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ವಿಮಾನ ಸಂಚಾರ ಪುನಾರಂಭ ಮಾಡಬಹುದು.
- ಏಪ್ರಿಲ್ 2024 ರಲ್ಲಿ ಗಲ್ಫ್ ರಾಜ್ಯಗಳಾದ್ಯಂತ ದಾಖಲೆಯ ಮಳೆಯಾಗಿತ್ತು. ಆಗಲೂ ಇದೇ ರೀತಿ ತೊಂದರೆಯನ್ನು ಜನ ಅನುಭವಿಸಿದ್ದರು. ಏಪ್ರಿಲ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಒಮಾನ್‌ನಲ್ಲಿ 21 ಮಂದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದು, ಕಳೆದ 75 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಸೌದಿ ಅರೇಬಿಯಾ ಪದೇ ಪದೇ ಪ್ರವಾಹವನ್ನು ಕಂಡಿದೆ. 2009 ರಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದನ್ನು ನೆನಪಿಸಿಕೊಳ್ಳಬಹುದು.
- ಅನೇಕ ನಗರಗಳು ಅಭಿವೃದ್ಧಿಯಾಗದ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದ್ದು, ಇದರಿಂದ ಮಳೆ ನೀರಿನ ಸರಾಗ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಯಲ್ಲಿಯೇ ಭಾರೀ ಪ್ರಮಾಣದಲ್ಲಿ ನೀರು ಹರಿದು ವಾಹನಗಳೂ ಕೊಚ್ಚಿಕೊಂಡು ಹೋಗುತ್ತಿವೆ.ಈ ಬಾರಿ, ರಿಯಾದ್, ಅಲ್-ಬಹಾ ಮತ್ತು ತಬೂಕ್‌ನಂತಹ ನಗರಗಳು ಸಹ ಕಠಿಣ ಮಳೆಯ ಪರಿಣಾಮವನ್ನು ಎದುರಿಸುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿಭಾಗ