ರಾಷ್ಟ್ರರಾಜಧಾನಿಯಲ್ಲಿ ಭಾರಿ ಮಳೆ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗೆ ಅಡ್ಡಿ
ದೆಹಲಿಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಹವಾಮಾನ ಇಲಾಖೆ ಹಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.

ದೆಹಲಿ: ಭಾನುವಾರ ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ದೆಹಲಿಯ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಭಾರೀ ಮಳೆ, ಬಲವಾದ ಗಾಳಿ ಮತ್ತು ಸಂಚಾರ ದಟ್ಟಣೆಯಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಭಾನುವಾರ ಬೆಳಿಗ್ಗೆ ದೆಹಲಿಯಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಿದ್ದು, ಗುಡುಗು ಸಹಿತ ಮಳೆಯಾಗಿದೆ. ತಾಪಮಾನವು 21.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹವಾಮಾನ ಇಲಾಖೆ ಶನಿವಾರ ದೆಹಲಿ ಮತ್ತು ಹತ್ತಿರದ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಭಾರಿ ಗುಡುಗು, ಬಲವಾದ ಗಾಳಿ ಮತ್ತು ಮಿಂಚಿನ ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡಿತ್ತು. ಭಾರೀ ಮಳೆಯಿಂದಾಗಿ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ನೀರು ತುಂಬಿಕೊಂಡಿದೆ. ಜತೆಗೆ ಕೆಲವು ಸ್ಥಳಗಳಲ್ಲಿ, ನೀರಿನ ಮಟ್ಟವು ರಸ್ತೆಯಲ್ಲಿ ಸಣ್ಣ ವಾಹನಗಳನ್ನು ಮುಳುಗಿಸುವಷ್ಟು ಹೆಚ್ಚಾಗಿದೆ.
ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗೆ ಅಡ್ಡಿ
ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ Flightradar24.com ರ ಮಾಹಿತಿಯ ಪ್ರಕಾರ, ಹಲವಾರು ವಿಮಾನಗಳ ನಿರ್ಗಮನಗಳು ವಿಳಂಬವಾಗಿವೆ ಮತ್ತು ಕೆಲವು ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಹೊರಹೋಗುವ ವಿಮಾನಗಳ ಸರಾಸರಿ ವಿಳಂಬವು 30 ನಿಮಿಷಗಳನ್ನು ಮೀರಿದೆ ಎಂದು ಪಿಟಿಐ ವರದಿ ಮಾಡಿದೆ.
ಕಡಿಮೆ ಗೋಚರತೆ ಮತ್ತು ಒದ್ದೆಯಾದ ರನ್ ವೇಗಳು ವಿಮಾನ ಸಂಚಾರ ವ್ಯತ್ಯಯಕ್ಕೆ ಕಾರಣವಾಗಿದೆ. ದೆಹಲಿಯ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ವಿಮಾನ ಕಾರ್ಯಾಚರಣೆಯಲ್ಲಿ ತಾತ್ಕಾಲಿಕ ಅಡೆತಡೆಗಳಿಗೆ ಕಾರಣವಾಗಿವೆ ಎಂದು ಇಂಡಿಗೊ ಏರ್‌ಲೈನ್ಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.
ಮಾನ್ಸೂನ್ ಬೇಗನೆ ಪ್ರವೇಶ
ಐಎಂಡಿ ಶನಿವಾರ ಕೇರಳಕ್ಕೆ ನೈಋತ್ಯ ಮಾನ್ಸೂನ್ ಆಗಮನವನ್ನು ದೃಢಪಡಿಸಿದೆ. ಇದು 2009ರ ನಂತರ ಈ ಬಾರಿಯೇ ಮೇ ತಿಂಗಳ ಮೂರನೇ ವಾರದಲ್ಲಿಯೇ ಮಾನ್ಸೂನ್ ನಿಗದಿಗಿಂತ ಬೇಗನೆ ಆರಂಭವಾಗಿರುವುದಾಗಿದೆ. ಮಾನ್ಸೂನ್ ಈಗಾಗಲೇ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಲಕ್ಷದ್ವೀಪ ಪ್ರದೇಶ, ಬಂಗಾಳ ಕೊಲ್ಲಿ ಮತ್ತು ಈಶಾನ್ಯದ ಕೆಲವು ಭಾಗಗಳನ್ನು ತಲುಪಿದೆ.