Powerful Passports: ವಿಶ್ವದ ಪ್ರಭಾವಶಾಲಿ ಪಾಸ್‌ಪೋರ್ಟ್‌ ಯಾವ ದೇಶದ್ದು ಗೊತ್ತಾ? ಭಾರತ-ಪಾಕ್‌ ಈ ಸ್ಥಾನದಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Powerful Passports: ವಿಶ್ವದ ಪ್ರಭಾವಶಾಲಿ ಪಾಸ್‌ಪೋರ್ಟ್‌ ಯಾವ ದೇಶದ್ದು ಗೊತ್ತಾ? ಭಾರತ-ಪಾಕ್‌ ಈ ಸ್ಥಾನದಲ್ಲಿದೆ

Powerful Passports: ವಿಶ್ವದ ಪ್ರಭಾವಶಾಲಿ ಪಾಸ್‌ಪೋರ್ಟ್‌ ಯಾವ ದೇಶದ್ದು ಗೊತ್ತಾ? ಭಾರತ-ಪಾಕ್‌ ಈ ಸ್ಥಾನದಲ್ಲಿದೆ

ಈ ವರ್ಷದ ಪಾಸ್‌ಪೋರ್ಟ್ ಶ್ರೇಯಾಂಕ 2022ರ ಪ್ರಕಾರ, 199 ದೇಶಗಳಲ್ಲಿ ಜಪಾನ್ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಭಾರತವು 87ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನೊಂದೆಡೆ ಪಾಕಿಸ್ತಾನವು ವಿಶ್ವದ ನಾಲ್ಕನೇ ಕೆಟ್ಟ ಪಾಸ್‌ಪೋರ್ಟ್ ಹೊಂದಿದೆ ಎಂದು ವರದಿಯಾಗಿದೆ.

<p>ಸಾಂದರ್ಭಿಕ ಚಿತ್ರ</p>
ಸಾಂದರ್ಭಿಕ ಚಿತ್ರ

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಬೇಕಾದರೆ, ಪಾಸ್‌ಪೋರ್ಟ್‌ ಬೇಕೇಬೇಕು. ಇನ್ನೂ ಕೆಲ ದೇಶಗಳಿಗೆ ಹೋಗಬೇಕೆಂದರೆ, ಪಾಸ್‌ಪೋರ್ಟ್‌ ಜೊತೆಗೆ ವೀಸಾ ಕೂಡಾ ಅಗತ್ಯ. ಇದು ಆಯಾ ದೇಶಗಳ ಸಂಬಂಧ, ಭದ್ರತೆ ಅಥವಾ ಇನ್ನೂ ಕೆಲ ವಿಚಾರಗಳ ಮೇಲೆ ನಿರ್ಧರಿಸಬಹುದು. ವೀಸಾ ಅಗತ್ಯವಿಲ್ಲದೆ ಮತ್ತೊಂದು ದೇಶಕ್ಕೆ ಹೋಗಬಹುದು ಎಂದಾದರೆ, ಆದೇಶದ ಪಾಸ್‌ಪೋರ್ಟ್‌ ಅಷ್ಟು ಬಲಶಾಲಿ ಅಥವಾ ಪ್ರಭಾವಶಾಲಿ ಎಂದು ಅರ್ಥ.

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ(Henley Passport Index)ವು 2022ರ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವದ ಎಲ್ಲಾ 199 ಪಾಸ್‌ಪೋರ್ಟ್‌ಗಳನ್ನು ಇದರಡಿಯಲ್ಲಿ ಪರಿಗಣಿಸಲಾಗಿದ್ದು, ಅದನ್ನು ಹೊಂದಿರುವವರು ವೀಸಾ ಇಲ್ಲದೆ ಪ್ರವೇಶಿಸಬಹುದಾದ ಸ್ಥಳಗಳ ಸಂಖ್ಯೆಗೆ ಅನುಗುಣವಾಗಿ ಶ್ರೇಯಾಂಕ ನೀಡಿದೆ.

ಈ ವರ್ಷದ ಪಾಸ್‌ಪೋರ್ಟ್ ಶ್ರೇಯಾಂಕ 2022ರ ಪ್ರಕಾರ, 199 ದೇಶಗಳಲ್ಲಿ ಜಪಾನ್ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಭಾರತವು 87ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನೊಂದೆಡೆ ಪಾಕಿಸ್ತಾನವು ವಿಶ್ವದ ನಾಲ್ಕನೇ ಕೆಟ್ಟ ಪಾಸ್‌ಪೋರ್ಟ್ ಹೊಂದಿದೆ ಎಂದು ವರದಿಯಾಗಿದೆ.

ಇಂಟರ್ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್‌ನ ಡೇಟಾವನ್ನು ಆಧರಿಸಿ ಈ ಶ್ರೇಯಾಂಕವನ್ನು ನೀಡಲಾಗಿದೆ. ಶ್ರೇಯಾಂಕಗಳ ಪ್ರಕಾರ, ಜಪಾನ್, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾಗಳು ವಿಶ್ವದಲ್ಲೇ ಪ್ರಬಲವಾದ ಪಾಸ್‌ಪೋರ್ಟ್‌ಗಳನ್ನು ಹೊಂದಿವೆ. ಈ ದೇಶಗಳು ಕೇವಲ ಪಾಸ್‌ಪೋರ್ಟ್‌ ಸಹಾಯದಿಂದ ಹೆಚ್ಚಿನ ದೇಶಗಳಿಗೆ ಪ್ರವೇಶವನ್ನು ಕಲ್ಪಿಸಿವೆ. ಜಪಾನಿನ ಪಾಸ್‌ಪೋರ್ಟ್ ಹೊಂದಿದ್ದರೆ, 193 ದೇಶಗಳಿಗೆ ಯಾವುದೇ ತೊಂದರೆಯಿಲ್ಲದೆ ಹೋಗಬಹುದು. ಆ ಬಳಿಕ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ ಎರಡೂ ದೇಶಗಳ ಪಾಸ್‌ಪೋರ್ಟ್‌ ಮೂಲಕ 192 ದೇಶಗಳಿಗೆ ಹೋಗಬಹುದು. ಅವರಿಗೆ ವೀಸಾ ಅಗತ್ಯವಿಲ್ಲ.

ಅಗ್ರ 10 ದೇಶಗಳು

1.ಜಪಾನ್

2.ಸಿಂಗಾಪುರ

3.ದಕ್ಷಿಣ ಕೊರಿಯಾ

4.ಜರ್ಮನಿ

5.ಸ್ಪೇನ್

6.ಫಿನ್ಲ್ಯಾಂಡ್

7.ಇಟಲಿ

8.ಲಕ್ಸೆಂಬರ್ಗ್

9.ಆಸ್ಟ್ರಿಯಾ

10.ಡೆನ್ಮಾರ್ಕ್

ಇತರ ಉನ್ನತ ಶ್ರೇಣಿಯಲ್ಲಿರುವ ದೇಶಗಳ ಪೈಕಿ ಹೆಚ್ಚಿನವು ಯುರೋಪ್‌, ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಮ್‌ಗೆ ಸೇರಿವೆ. ಇನ್ನೊಂದೆಡೆ ಅಫ್ಘಾನ್ ಪಾಸ್‌ಪೋರ್ಟ್ ಹೊಂದಿರುವವರು ಕೇವಲ 27 ದೇಶಗಳಿಗೆ‌ ಮಾತ್ರ ಹೋಗಬಹುದು. ಇರಾಕ್‌ ಪಾಸ್‌ಪೋರ್ಟ್ ಮೂಲಕ 29 ದೇಶಗಳಿಗೆ ಪ್ರವೇಶ ಪಡೆಯಬಹುದು.

ಏಷ್ಯಾದ ದೇಶಗಳಲ್ಲಿ, ಭಾರತವು ಮಾರಿಷಸ್ ಮತ್ತು ತಜಕಿಸ್ತಾನ್ ಜೊತೆಗೆ 87ನೇ ಸ್ಥಾನದಲ್ಲಿದೆ. ಈ ಪಾಸ್‌ಪೋರ್ಟ್ ಮೂಲಕ 60 ದೇಶಗಳಿಗೆ ಹೋಗಬಹುದು. ಪಾಕಿಸ್ತಾನವು ವಿಶ್ವದ ಅತ್ಯಂತ ಕಡಿಮೆ ಶಕ್ತಿಶಾಲಿ ಪಾಸ್‌ಪೋರ್ಟ್‌ ಹೊಂದಿದೆ. ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನಕ್ಕಿಂತ ಮೇಲಿನ ಸ್ಥಾನದಲ್ಲಿದೆ.

ಅತ್ಯಂತ ದುರ್ಬಲ ಪಾಸ್‌ಪೋರ್ಟ್‌ ಹೊಂದಿರುವ ದೇಶಗಳು

1.ಅಫ್ಘಾನಿಸ್ತಾನ

2.ಇರಾಕ್‌

3.ಸಿರಿಯಾ

4.ಪಾಕಿಸ್ತಾನ

5.ಏಮನ್‌

6.ಸೋಮಾಲಿಯಾ

7.ಪ್ಯಾಲೆಸೇನ್‌

8.ನೇಪಾಳ

9.ಉತ್ತರ ಕೊರಿಯಾ

10.ಲಿಬಿಯಾ

ವಿಶ್ವದ ಅತ್ಯಂತ ಜನಭರಿತ ರಾಷ್ಟ್ರವಾದ ಚೀನಾ, ಬೊಲಿವಿಯಾದೊಂದಿಗೆ 69ನೇ ಸ್ಥಾನ ಹೊಂದಿದೆ. ಈ ಪಾಸ್‌ಪೋರ್ಟ್‌ ಮೂಲಕ 80 ದೇಶಗಳಿಗೆ ಪ್ರವೇಶದ ಅನುಮತಿ ಇದೆ. ಇನ್ನೊಂದೆಡೆ ಬಾಂಗ್ಲಾದೇಶವು 104ನೇ ಸ್ಥಾನವನ್ನು ಪಡೆದುಕೊಂಡಿದೆ. ಅಂದರೆ ಪಾಕಿಸ್ತಾನಕ್ಕಿಂತ ಐದು ಸ್ಥಾನಗಳು ಹೆಚ್ಚು. ಬಾಂಗ್ಲಾದ ಪಾಸ್‌ಪೋರ್ಟ್ ಹೊಂದಿರುವವರು 41 ದೇಶಗಳಿಗೆ ಹೋಗಬಹುದು ಎಂದು ಈ ಶ್ರೆಯಾಂಕ ಹೇಳಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.