ಭಾರತದ 10 ಅತಿ ಉದ್ದದ ರೈಲು ಮಾರ್ಗಗಳಿವು; ದಿನಗಟ್ಟಲೆ ಕುಳಿತು ಸುಂದರ ಭೂದೃಶ್ಯ ಸವಿಸುತ್ತಾ ಸಾವಿರಾರು ಕಿಮೀ ಪ್ರಯಾಣ
ರೈಲು ಪ್ರಯಾಣವು ಜೀವನವಿಡೀ ನೆನಪಿಟ್ಟುಕೊಳ್ಳುವಂಥಾ ಹಲವು ಸುಂದರ ಅನುಭವಗಳನ್ನು ನೀಡುತ್ತದೆ. ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಭಾರತದಲ್ಲಿ ರೈಲು ಪ್ರಯಾಣದಲ್ಲಿ ಭಿನ್ನ ಭೂದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ನಿಮಗಾಗಿ ಭಾರತದ ಅತ್ಯಂತ ಸುದೀರ್ಘ ರೈಲು ಮಾರ್ಗಗಳ ಮಾಹಿತಿ ನೀಡಲಾಗಿದೆ.

ಭಾರತದಲ್ಲಿ ರೈಲು ಪ್ರಯಾಣವೇ ಒಂದು ಸುಂದರ ಅನುಭವ. ಪ್ರವಾಸಕ್ಕೆಂದು ರೈಲು ಪ್ರಯಾಣ ಮಾಡುವುದಿದ್ದರೆ, ರೈಲಿನ ಪ್ರಯಾಣದ ಸಮಯದಲ್ಲೇ ಹಲವು ಪ್ರವಾಸಿ ಸ್ಥಳವನ್ನು ಸವಿಯಬಹುದು. ಅಲ್ಲದೆ ಭಾರತದ ಸುಂದರ ಭೂದೃಶ್ಯಗಳಿಗೆ ಸಾಕ್ಷಿಯಾಗಬಹುದು. ರೈಲು ಪ್ರಯಾಣವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ದೂರದ ಪ್ರಯಾಣಕ್ಕೆ ಹಾಗೂ ಕಡಿಮೆ ಬಜೆಟ್ನಲ್ಲಿ ಪ್ರಯಾಣಿಸುವವರು ರೈಲಿನಲ್ಲೇ ಪ್ರಯಾಣಿಸಲು ಹೆಚ್ಚು ಆದ್ಯತೆ ನೀಡುತ್ತಾರೆ. ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಹಾಗೂ ಜನಸಂಖ್ಯೆಯೂ ಹೆಚ್ಚಿರುವ ಭಾರತ ದೇಶಕ್ಕೆ, ರೈಲು ಪ್ರಯಾಣ ಹೆಚ್ಚು ಹೊಂದಿಕೆಯಾಗುತ್ತದೆ. ಇದೇ ಕಾರಣದಿಂದ ಭಾರತದ ಮೂಲೆ ಮೂಲೆಗೂ ರೈಲು ಸಂಪರ್ಕವಿದೆ. ದೇಶದಲ್ಲಿ ಕೆಲವೊಂದು ರೈಲು ಮಾರ್ಗಗಳು ಅತಿ ಉದ್ದವಾಗಿವೆ. ಈ ಮಾರ್ಗಗಳಲ್ಲಿ ಪ್ರಯಾಣಿಸಲು ಹೆಚ್ಚು ಸಮಯವೂ ಬೇಕಾಗುತ್ತದೆ. ಭಾರತದ ಅತಿ ಉದ್ದದ 10 ರೈಲು ಮಾರ್ಗಗಳ ವಿವರ ಇಲ್ಲಿದೆ.
ವಿವೇಕ್ ಎಕ್ಸ್ಪ್ರೆಸ್
ಭಾರತದ ಅತಿ ಉದ್ದದ ರೈಲು ಮಾರ್ಗಗಳ ಪಟ್ಟಿಯಲ್ಲಿ ಮೊದಲ ಸ್ಥಾನ ವಿವೇಕ್ ಎಕ್ಸ್ಪ್ರೆಸ್ಗೆ. ದೇಶದ ಅತಿ ಉದ್ದದ ರೈಲು ಮಾರ್ಗದಲ್ಲಿ ಓಡುವ ಈ ರೈಲು ಕ್ರಮಿಸುವ ದೂರ 4,154.1 ಕಿ.ಮೀ. ವಿವೇಕ್ ಎಕ್ಸ್ಪ್ರೆಸ್ ತಮಿಳುನಾಡಿನ ಕಟ್ಟಕಡೆಯ ಭಾಗ ಕನ್ಯಾಕುಮಾರಿಯಿಂದ ಅಸ್ಸಾಂನ ದಿಬ್ರುಗಢಕ್ಕೆ ಓಡಲು ಬರೋಬ್ಬರಿ 75 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ವರದಿಗಳು ಹೇಳುತ್ತವೆ. ಅಂದರೆ 3 ದಿನಗಳಿಗೂ ಹೆಚ್ಚು.
ಅರೋನೈ ಸೂಪರ್ಫಾಸ್ಟ್ ಎಕ್ಸ್ಪ್ರೆಸ್
ಭಾರತದ ಎರಡನೇ ಅತಿ ಉದ್ದದ ರೈಲು ಮಾರ್ಗವು ಕೇರಳದ ತಿರುವನಂತಪುರಂ ಸೆಂಟ್ರಲ್ನಿಂದ ಅಸ್ಸಾಂನ ಸಿಲ್ಚಾರ್ಗೆ ಇದೆ. ಇಲ್ಲಿ ಅರೋನೈ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು ಸುದೀರ್ಘ ಪ್ರಯಾಣ ಮಾಡುತ್ತದೆ. ಪ್ರಕೃತಿ ಸೌಂದರ್ಯವನ್ನು ಸವಿಯಯುತ್ತಾ, ಬರೋಬ್ಬರಿ 3,932 ಕಿ.ಮೀ ದೂರವನ್ನು ಕ್ರಮಿಸಬಹುದು. ಇಷ್ಟು ದೂರವನ್ನು ಕ್ರಮಿಸಲು ರೈಲು ತೆಗೆದುಕೊಳ್ಳುವ ಸಮಯ ಸುಮಾರು 74 ಗಂಟೆಗಳು.
ಹಿಮಸಾಗರ್ ಎಕ್ಸ್ಪ್ರೆಸ್
ಹಿಮಸಾಗರ್ ಎಕ್ಸ್ಪ್ರೆಸ್, ಭಾರತದ ಅತಿ ಉದ್ದದ ರೈಲು ಮಾರ್ಗಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುತ್ತದೆ. ಭಾರತದ ದಕ್ಷಿಣದಿಂದ ಉತ್ತರಕ್ಕೆ ಸಿಗುವ ಎಲ್ಲಾ ರೀತಿಯ ಭೂದೃಶ್ಯಗಳನ್ನು ಈ ಮಾರ್ಗದಲ್ಲಿ ಸವಿಯಬಹುದು. ಈ ರೈಲು ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾಕ್ಕೆ ಸಾಗುತ್ತದೆ. ವಾರಕ್ಕೊಮ್ಮೆ ಹೊರಡುವ ರೈಲು 3,787 ಕಿ.ಮೀ ದೂರವನ್ನು 68 ಗಂಟೆ 20 ನಿಮಿಷಗಳಲ್ಲಿ ಕ್ರಮಿಸುತ್ತದೆ.
ಟೆನ್ ಜಮ್ಮು ಎಕ್ಸ್ಪ್ರೆಸ್
ಹಿಮಸಾಗರ್ ಎಕ್ಸ್ಪ್ರೆಸ್ನಂತೆಯೇ, ಟೆನ್ ಜಮ್ಮು ಎಕ್ಸ್ಪ್ರೆಸ್ ರೈಲು ಕೂಡಾ ಭಾರತದ ಅತಿ ಉದ್ದದ ರೈಲು ಮಾರ್ಗಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ರೈಲಿನ ಗಮ್ಯ ಸ್ಥಾನ ಒಂದೇ. ಆದರೆ ನಿಲುಗಡೆ ಸ್ಥಳಗಳು ಭಿನ್ನ. ತಮಿಳುನಾಡಿನ ತಿರುನಲ್ವೇಲಿ ಜಂಕ್ಷನ್ನಿಂದ ಜಮ್ಮು ಮತ್ತು ಕಾಶ್ಮೀರದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಕ್ಕೆ ಪ್ರಯಾಣಿಸಲು 71 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸುಮಾರು 3,642 ಕಿ.ಮೀ ದೂರದ ಮಾರ್ಗ ಇದಾಗಿದೆ.
ನ್ಯೂ ಟಿನ್ಸುಕಿಯಾದಿಂದ ಬೆಂಗಳೂರು ವೀಕ್ಲಿ ಎಕ್ಸ್ಪ್ರೆಸ್
ಟಿನ್ಸುಕಿಯಾದಿಂದ ಬೆಂಗಳೂರಿಗೆ ಪ್ರಯಾಣಿಸುವ ರೈಲು ಮಾರ್ಗವು ದೇಶದ ಐದನೇ ಅತಿ ಉದ್ದದ ರೈಲು ಮಾರ್ಗವಾಗಿದೆ. ಈ ರೈಲು 3,642 ಕಿ.ಮೀ ದೂರವನ್ನು ಕ್ರಮಿಸಲು 65 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು ಅಸ್ಸಾಂನ ನ್ಯೂ ಟಿನ್ಸುಕಿಯಾದಿಂದ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುತ್ತದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಆಂಧ್ರಪ್ರದೇಶ ಮೂಲಕ ವಾರಕ್ಕೊಮ್ಮೆ ಓಡುತ್ತದೆ.
ಹಮ್ಸಫರ್ ಎಕ್ಸ್ಪ್ರೆಸ್
ತ್ರಿಪುರದ ಅಗರ್ತಲಾದಿಂದ ಬೆಂಗಳೂರು ಕಂಟೋನ್ಮೆಂಟ್ಗೆ ಚಲಿಸುವ ರೈಲು 3,599 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಭಾರತದ ನೈಸರ್ಗಿಕ ಸೌಂದರ್ಯವನ್ನು ಸವಿಯುತ್ತಾ 65 ಗಂಟೆಗಳ ಸುದೀರ್ಘ ಪ್ರಯಾಣವನ್ನು ಆನಂದಿಸಬಹುದು. ಈ ರೈಲು ವಾರಕ್ಕೊಮ್ಮೆ ಚಲಿಸುತ್ತದೆ.
ಎಸ್ಎಫ್ ಎಕ್ಸ್ಪ್ರೆಸ್
ಈ ರೈಲು ಭಾರತದ ಅತಿ ಉದ್ದದ ರೈಲು ಮಾರ್ಗಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಅಸ್ಸಾಂನ ಸಿಲ್ಚಾರ್ನಿಂದ ತಮಿಳುನಾಡಿನ ಕೊಯಮತ್ತೂರಿಗೆ ಪ್ರಯಾಣಿಸಲು ಈ ರೈಲು 64 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಒಟ್ಟು ದೂರ 3,544 ಕಿ.ಮೀ.
ಅವಧ್ ಅಸ್ಸಾಂ ಎಕ್ಸ್ಪ್ರೆಸ್
ಅವಧ್ ಅಸ್ಸಾಂ ಎಕ್ಸ್ಪ್ರೆಸ್ ರೈಲು 3,118 ಕಿ.ಮೀ ದೂರವನ್ನು 66 ಗಂಟೆ 25 ನಿಮಿಷಗಳಲ್ಲಿ ಕ್ರಮಿಸುತ್ತದೆ. ಈ ರೈಲು ಅಸ್ಸಾಂನ ದಿಬ್ರುಗಢದಿಂದ ಲಾಲ್ಗಢ ಜಂಕ್ಷನ್ಗೆ ವಾರಕ್ಕೊಮ್ಮೆ ಚಲಿಸುತ್ತದೆ. ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಇನ್ನೂ ಕೆಲವು ರಾಜ್ಯಗಳಲ್ಲಿ ಪ್ರಯಾಣಿಸುತ್ತದೆ.
ಕೊಚುವೇಲಿ ಎಕ್ಸ್ಪ್ರೆಸ್
ಕೊಚುವೇಲಿ ಎಕ್ಸ್ಪ್ರೆಸ್ ರೈಲು ಕೇರಳದ ಕೊಚುವೇಲಿಯಿಂದ ಉತ್ತರಾಖಂಡದ ಡೆಹ್ರಾಡೂನ್ಗೆ ಚಲಿಸುತ್ತದೆ. 52 ಗಂಟೆ 30 ನಿಮಿಷಗಳಲ್ಲಿ 3,110 ಕಿ.ಮೀ ದೂರ ಕ್ರಮಿಸುತ್ತದೆ.
ಯಶವಂತಪುರ ಕಾಮಾಕ್ಯ ಎಕ್ಸ್ಪ್ರೆಸ್
ಯಶವಂತಪುರ ಕಾಮಾಕ್ಯ ಎಕ್ಸ್ಪ್ರೆಸ್ ರೈಲು ಭಾರತದ ಹತ್ತನೇ ಅತಿ ಉದ್ದದ ರೈಲು ಮಾರ್ಗದಲ್ಲಿ ಸಂಚರಿಸುತ್ತದೆ. ಬೆಂಗಳೂರಿನ ಯಶವಂತಪುರದಿಂದ ಅಸ್ಸಾಂನ ಕಾಮಾಕ್ಯಕ್ಕೆ ಚಲಿಸುತ್ತದೆ. 3,025 ಕಿ.ಮೀ ದೂರ ಪ್ರಯಾಣಿಸಲು 52 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.