ವಿಶ್ವದ ಅಗ್ರ 10 ಅತ್ಯುತ್ತಮ ವಿಮಾನ ನಿಲ್ದಾಣಗಳಿವು; 30ರ ಒಳಗಿಲ್ಲ ಭಾರತದ ಏರ್‌ಪೋರ್ಟ್‌ಗಳು, ಬೆಂಗಳೂರಿನ ಸ್ಥಾನ ಎಷ್ಟು?
ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು 2025ರಲ್ಲಿ 'ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ' ಎಂದು ಖ್ಯಾತಿ ಪಡೆದಿದೆ. ನೋಡಲು ಆಕರ್ಷಕವಾಗಿರುವುದು ಮಾತ್ರವಲ್ಲದೆ, ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಒದಗಿಸುತ್ತದೆ. ಸ್ಕೈಟ್ರಾಕ್ಸ್ ಪ್ರಕಾರ ಈ ಶ್ರೇಯಾಂಕ ನೀಡಲಾಗಿದೆ.

ದೂರದ ಪ್ರದೇಶಗಳಿಗೆ ಬೇಗನೆ ತಲುಪಲು ವಿಮಾನ ಪ್ರಯಾಣ ಅತ್ಯವಶ್ಯಕ. ಹೀಗಾಗಿ ವಿಮಾನ ನಿಲ್ದಾಣಗಳು ಜಾಗತಿಕ ಸಂಪರ್ಕಕ್ಕೆ ಅತ್ಯಗತ್ಯ. ವಿವಿಧ ದೇಶಗಳು ಹಾಗೂ ನಗರಗಳ ನಡುವೆ ಪ್ರಯಾಣವನ್ನು ಸುಗಮಗೊಳಿಸಲು ವಿಮಾನ ನಿಲ್ದಾಣಗಳು ಬೇಕು. ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರಿಗಾಗಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ನೀಡಲಾಗುತ್ತದೆ. 2025ರಲ್ಲಿ ವಿಶ್ವದ ಟಾಪ್ 10 ವಿಮಾನ ನಿಲ್ದಾಣಗಳು ಯಾವುದು ಎಂಬುದಾಗಿ ಈ ಸುದ್ದಿಯಲ್ಲಿ ಕೊಡಲಾಗಿದೆ. ಸ್ಕೈಟ್ರಾಕ್ಸ್ ವಿಮಾನ ನಿಲ್ದಾಣ ಶ್ರೇಯಾಂಕದ ಪ್ರಕಾರ ಈ ಪಟ್ಟಿ ಸಿದ್ಧವಾಗಿದ್ದು, ಅಗ್ರ 10ರೊಳಗೆ ಭಾರತದ ಯಾವುದೇ ವಿಮಾನ ನಿಲ್ದಾಣಗಳು ಸ್ಥಾನ ಪಡೆದಿಲ್ಲ.
ಭಾರತದಲ್ಲಿ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಅವುಗಳಲ್ಲಿ ದೆಹಲಿ, ಬೆಂಗಳೂರು, ಮುಂಬೈ ವಿಮಾನ ನಿಲ್ದಾಣಗಳು ಹೆಚ್ಚು ಜನನಿಬಿಡ, ಸದಾ ಕಾರ್ಯನಿರತ ಏರ್‌ಪೋರ್ಟ್‌ಗಳಾಗಿವೆ. ಹಾಗಿದ್ದರೆ ವಿಶ್ವದ ಯಾವ ವಿಮಾನ ನಿಲ್ದಾಣವು ಅತ್ಯುತ್ತಮ ವಿಮಾನ ನಿಲ್ದಾಣ ಎಂದು ನೋಡೋಣ.
ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು 2025ರಲ್ಲಿ 'ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ' ಎಂದು ಖ್ಯಾತಿ ಪಡೆದಿದೆ. ಕಳೆದ ವರ್ಷ ವಿಶ್ವದ ನಾಲ್ಕನೇ ಜನನಿಬಿಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದರೂ, ಸಿಂಗಾಪುರದ ಏರ್‌ಪೋರ್ಟ್ ಸ್ಕೈಟ್ರಾಕ್ಸ್ ಪ್ರಕಾರ ಅಗ್ರಸ್ಥಾನ ಪಡೆದಿದೆ.
ಪ್ರಯಾಣಿಕರ ಅಪ್ರತಿಮ ಅನುಭವಕ್ಕೆ ಈ ನಿಲ್ದಾಣ ಹೆಸರುವಾಸಿಯಾಗಿದೆ. ಈಗಾಗಲೇ ಈ ನಿಲ್ದಾಣವು 2025ರಲ್ಲಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಊಟ, ವಿಶ್ವದ ಅತ್ಯುತ್ತಮ (ವಿಮಾನ ನಿಲ್ದಾಣದ) ಶೌಚಾಲಯಗಳು ಮತ್ತು ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣಕ್ಕಾಗಿ ಇತರ ಸ್ಕೈಟ್ರಾಕ್ಸ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ದೋಹಾ ಏರ್‌ಪೋರ್ಟ್‌ಗೆ ಎರಡನೇ ಸ್ಥಾನ
2025ರಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದ ಮಧ್ಯಪ್ರಾಚ್ಯದ ಏಕೈಕ ವಿಮಾನ ನಿಲ್ದಾಣವೆಂದರೆ ಕತಾರ್‌ನ ದೋಹಾ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಮೂರು ಬಾರಿ ಪ್ರಶಸ್ತಿಯನ್ನು ಪಡೆದಿದೆ. ಇದೇ ವೇಳೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಹ್ರೇನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಟಾಪ್ 20 ರಲ್ಲಿ ಸ್ಥಾನ ಪಡೆದಿದೆ. ದೋಹಾ ವಿಮಾನ ನಿಲ್ದಾಣವು ಎರಡನೇ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಇದೇ ವೇಲೆ ಶಾಪಿಂಗ್‌ಗಾಗಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಮನ್ನಣೆಯನ್ನು ಗಳಿಸಿದೆ.
ಸಿಂಗಾಪುರ್ ಚಾಂಗಿ ಸೇರಿದಂತೆ ಏಷ್ಯಾದ ಐದು ವಿಮಾನ ನಿಲ್ದಾಣಗಳು ಯುರೋಪ್ ಮತ್ತು ಅಮೆರಿಕದ ವಿಮಾನ ನಿಲ್ದಾಣಗಳ ಮೇಲೆ ಪ್ರಾಬಲ್ಯ ಸಾಧಿಸಿವೆ. ಫ್ರಾನ್ಸ್‌ನ ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣವು 7ನೇ ಸ್ಥಾನದಲ್ಲಿದೆ. ಸತತ ಮೂರನೇ ವರ್ಷವೂ ಯುರೋಪಿನ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಖ್ಯಾತಿ ಗಳಿಸಿದೆ.
ಕೆನಡಾದ ವ್ಯಾಂಕೋವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 13ನೇ ಸ್ಥಾನ ಪಡೆದಿದ್ದು, ಅಮೆರಿಕ ಖಂಡದಿಂದ ಅಗ್ರ 20 ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ವಿಮಾನ ನಿಲ್ದಾಣವಾಗಿದೆ.
ವಿಶ್ವದ ಟಾಪ್ 10 ವಿಮಾನ ನಿಲ್ದಾಣಗಳು
ಶ್ರೇಯಾಂಕ | ವಿಮಾನ ನಿಲ್ದಾಣದ ಹೆಸರು | ಸ್ಥಳ | ದೇಶ |
---|---|---|---|
1 | ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣ | ಸಿಂಗಾಪುರ | ಸಿಂಗಾಪುರ |
2 | ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | ದೋಹಾ | ಕತಾರ್ |
3 | ಟೋಕಿಯೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | ಟೋಕಿಯೋ | ಜಪಾನ್ |
4 | ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | ಇಂಚಿಯಾನ್ | ದಕ್ಷಿಣ ಕೊರಿಯಾ |
5 | ನರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | ಟೋಕಿಯೋ | ಜಪಾನ್ |
6 | ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | ಹಾಂಗ್ ಕಾಂಗ್ | ಹಾಂಗ್ ಕಾಂಗ್ |
7 | ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣ | ಪ್ಯಾರಿಸ್ | ಫ್ರಾನ್ಸ್ |
8 | ರೋಮ್ ಫಿಯುಮಿಸಿನೊ ವಿಮಾನ ನಿಲ್ದಾಣ | ರೋಮ್ | ಇಟಲಿ |
9 | ಮ್ಯೂನಿಚ್ ವಿಮಾನ ನಿಲ್ದಾಣ | ಮ್ಯೂನಿಚ್ | ಜರ್ಮನಿ |
10 | ಜುರಿಚ್ ವಿಮಾನ ನಿಲ್ದಾಣ | ಜ್ಯೂರಿಚ್ | ಸ್ವಿಟ್ಜರ್ಲೆಂಡ್ |
ಭಾರತದ ವಿಮಾನ ನಿಲ್ದಾಣಗಳು ಯಾವ ಸ್ಥಾನದಲ್ಲಿವೆ?
ಜಾಗತಿಕ ಶ್ರೇಯಕದಲ್ಲಿ ದೆಹಲಿ ವಿಮಾನ ನಿಲ್ದಾಣ 32ನೇ ಸ್ಥಾನ ಪಡೆದಿದೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 48ನೇ ಸ್ಥಾನ ಪಡೆದರೆ, ಹೈದರಾಬಾದ್ ಏರ್‌ಪೋರ್ಟ್ 56ನೇ ಸ್ಥಾನ ಹಾಗೂ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 73ನೇ ಸ್ಥಾನ ಪಡೆದಿದೆ.
ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐ) 2025ರಲ್ಲಿ ಮತ್ತೊಮ್ಮೆ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಹೆಸರಿಸಲ್ಪಟ್ಟಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ. ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ ಸೇವೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.