ಲಕ್ಷಾಂತರ ಭಾರತೀಯರು ದೇಶದ ಪೌರತ್ವ ತ್ಯಜಿಸುತ್ತಿರುವುದು ಯಾಕೆ? ವಿದೇಶಗಳ ಮೇಲೆ ಯಾಕಿಷ್ಟು ವ್ಯಾಮೋಹ?
ವಿದೇಶದ ಕೆಲಸದ ವಾತಾವರಣ, ಜೀವನ ಮಟ್ಟ ಹಾಗೂ ಉತ್ತಮ ಸಂಬಳದಿಂದಾಗಿ ಹೆಚ್ಚಿನ ಭಾರತೀಯರು ವಿದೇಶಗಳ ಪೌರತ್ವ ಸ್ವೀಕರಿಸುತ್ತಾರೆ. ಹಾಗಂತ ಭಾರತದ ಪೌರತ್ವವನ್ನು ತ್ಯಜಿಸಲು ಯಾರಿಗೂ ಇಷ್ಟವಿರುವುದಿಲ್ಲ. ತಾವು ಹುಟ್ಟಿ ಬೆಳೆದ ದೇಶದ ಬಗ್ಗೆ ಭಾವನಾತ್ಮಕ ನಂಟು ಇರುತ್ತದೆ. ಆದರೆ ಭಾರತದ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಎರಡು ದೇಶಗಳ ಪೌರತ್ವ ಹೊಂದಲು ಅವಕಾಶವಿಲ್ಲ. ಬೇರೆ ದೇಶದ ಪೌರತ್ವ ಸಿಗಲು ಭಾರತದ ಪೌರತ್ವವನ್ನು ತ್ಯಜಿಸಲೇಬೇಕು.
ನವದೆಹಲಿ: ಭಾರತದಲ್ಲಿ ಹುಟ್ಟಿರುವುದಕ್ಕೆ ಭಾರತೀಯರೆಲ್ಲರೂ ಹೆಮ್ಮೆ ಪಡುತ್ತಾರೆ. ಸಾವಿರಾರು ವಿದೇಶಿಗರು ಭಾರತದ ಸಂಸ್ಕೃತಿಗೆ ಮಾರುಹೋಗಿ, ನಮ್ಮ ಸಂಪ್ರದಾಯವನ್ನು ನಮ್ಮವರಿಗಿಂತ ಹೆಚ್ಚು ಅರಿತುಕೊಂಡಿದ್ದಾರೆ. ಹೀಗಿದ್ದರೂ ಕೆಲ ಭಾರತೀಯರು ವಿದೇಶಗಳಿಗೆ ಹೋಗಿ, ಅಲ್ಲಿಯ ಪೌರತ್ವವನ್ನು ಸ್ವೀಕರಿಸುತ್ತಾರೆ. ಅಷ್ಟಕ್ಕೂ ಜನ್ಮ ಕೊಟ್ಟ ಭಾರತಾಂಬೆಯ ಮಡಿಲು ಇವರಿಗೆ ಯಾಕೆ ಬೇಡವಾಯ್ತು?
ಕೇಂದ್ರ ಗೃಹ ಸಚಿವಾಲಯದ ಲೆಕ್ಕಾಚಾರದ ಪ್ರಕಾರ, 2021ರಲ್ಲಿ ಒಟ್ಟು 1,63,370 ಮಂದಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಇದಕ್ಕೆ ಕಾರಣ ಹಲವು ಇರಬಹುದು. ಆದರೆ, ಇವರೆಲ್ಲಾ ವೈಯಕ್ತಿಕ ಕಾರಣಗಳಿಂದ ಭಾರತದ ಪೌರತ್ವವನ್ನು ತ್ಯಜಿಸಿರುವುದಾಗಿ ಸಂಸತ್ತಿನಲ್ಲಿ ಹೇಳಲಾಗಿದೆ.
ಭಾರತವನ್ನು ಬಿಟ್ಟು ಹೆಚ್ಚಿನವರು ಅಮೆರಿಕ ಪೌರತ್ವ ಪಡೆದಿದ್ದಾರೆ. ಅಂದರೆ 78,284 ಮಂದಿ ಯುಎಸ್‌ಎ ಪ್ರಜೆಗಳಾಗಿದ್ದಾರೆ. ಇನ್ನು 23,533 ಮಂದಿ ಆಸ್ಟ್ರೇಲಿಯಾದ ಪ್ರಜೆಗಳಾಗಿದ್ದಾರೆ. ಉಳಿದಂತೆ 21,597 ಮಂದಿ ಕೆನಡಾ ಪೌರತ್ವವನ್ನು ಸ್ವೀಕರಿಸಿದ್ದಾರೆ. ಇನ್ನೊಂದೆಡೆ ಸುಮಾರು 300 ಭಾರತೀಯರು ಭಾರತದ ಪೌರತ್ವವನ್ನು ತ್ಯಜಿಸಿ ಚೀನಾ ಪ್ರಜೆಗಳಾಗಿದ್ದಾರೆ. ವಿಶೇಷವೆಂದರೆ, ಕೆಲ ಭಾರತೀಯರು ಪಾಕಿಸ್ತಾನದ ಪೌರತ್ವವನ್ನೂ ಸ್ವೀಕರಿಸಿದ್ದಾರೆ. 41 ಭಾರತೀಯರು ಪಾಕ್ ಪ್ರಜೆಗಳಾಗಿ ಬದಲಾಗಿದ್ದಾರೆ.
ಕಳೆದ 2020ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದವರ ಸಂಖ್ಯೆ 85,256 ಆಗಿತ್ತು. ಅದಕ್ಕಿಂತ ಹಿಂದಿನ 2019ರಲ್ಲಿ ಈ ಸಂಖ್ಯೆ 1,44,017 ಆಗಿತ್ತು. 2015ರಿಂದ 2020ರ ಒಳಗೆ, 8 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಆದರೆ, ಕೊರೊನಾ ಕಾಲದಲ್ಲಿ ಈ ಸಂಖ್ಯೆ ಕಡಿಮೆಯಾಗಿದೆ.
2021ರಲ್ಲಿ ವಿದೇಶದಲ್ಲಿ ಪೌರತ್ವ ಪಡೆದರ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಕೊರೊನಾ. ಈ ಮಾರಕ ಸೋಂಕಿನಿಂದಾಗಿ 2020ರಲ್ಲಿ ಪೌರತ್ವವನ್ನು ಪಡೆಯದವರಿಗೆ ಮುಂದಿನ ವರ್ಷ ಪೌರತ್ವ ಸಿಕ್ಕಿದೆ ಎಂದು ವಿದೇಶಾಂಗ ವ್ಯವಹಾರಗಳ ತಜ್ಞ ಹರ್ಷ್ ಪಂತ್ ಹೇಳಿದ್ದಾರೆ.
ಅಷ್ಟಕ್ಕೂ ಭಾರತದ ಪೌರತ್ವ ತ್ಯಜಿಸಿದ್ದೇಕೆ?
ಭಾರತದಿಂದ ಅಮೆರಿಕಕ್ಕೆ ಹೋಗಿ ಅಲ್ಲಿನ ಪೌರತ್ವ ಸ್ವೀಕರಿಸಿರುವ ಮಹಿಳೆಯೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ(ಹೆಸರು ಮರೆಮಾಚಲಾಗಿದೆ). 2003ರಲ್ಲಿ ಕೆಲಸದ ನಿಮಿತ್ತ ಅಮೆರಿಕ ಹೋದ ಅವರು, ಅಲ್ಲಿನ ವಾತಾವರಣವನ್ನು ಇಷ್ಟಪಟ್ಟಿದ್ದಾರೆ. ಆ ಬಳಿಕ ಅಲ್ಲಿಯೇ ನೆಲೆಸಲು ನಿರ್ಧರಿಸಿದ್ದಾರೆ. ಅವರು ಅಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲಿನ ಪೌರತ್ವ ಪಡೆಯಲು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದ ಅವರಿಗೆ ಕೆಲ ವರ್ಷಗಳ ಹಿಂದೆ ಕಾರ್ಡ್ ಕೈ ಸೇರಿತ್ತು. ಇಲ್ಲಿನ ಜೀವನವು ತುಂಬಾ ಆರಾಮದಾಯಕವಾಗಿದೆ. ಜೀವನಮಟ್ಟ ತುಂಬಾ ಚೆನ್ನಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಭಾರತಕ್ಕೆ ಹೋಲಿಸಿದರೆ ಅವರಿಗೆ ಇಲ್ಲಿ ಹೆಚ್ಚಿನ ಅವಕಾಶಗಳಿವೆ. ಇಲ್ಲಿನ ಕೆಲಸದ ವಾತಾವರಣ ತುಂಬಾ ಚೆನ್ನಾಗಿದೆ. ನಾವು ಮಾಡುವ ಕೆಲಸಕ್ಕಾಗಿ ಉತ್ತಮ ಸಂಬಳ ಸಿಗುತ್ತದೆ ಎಂದು ಈ ಮಹಿಳೆ ಹೇಳುತ್ತಾರೆ.
ಈ ನಿಟ್ಟಿನಲ್ಲಿ ಭಾರತ ಸಾಕಷ್ಟು ಸುಧಾರಿಸಬೇಕಿದೆ. ಉತ್ತಮ ಕೌಶಲ್ಯ ಹೊಂದಿರುವವರು ದೇಶವನ್ನು ತೊರೆಯದಂತೆ ತಡೆಯಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಉತ್ತಮ ಮೂಲಸೌಕರ್ಯ, ಉತ್ತಮ ಅವಕಾಶಗಳು ಮತ್ತು ದ್ವಿಪೌರತ್ವ ಅನುಷ್ಠಾನದತ್ತ ಚಿಂತನೆ ನಡೆಸಬೇಕು ಎಂದು ಅವರು ವಿವರಿಸಿದ್ದಾರೆ.
ಕೆನಡಾದಲ್ಲಿ ನೆಲೆಸಿರುವ 25ರ ಹರೆಯದ ಅಭಿನವ್ ಆನಂದ್ ಕೂಡ ಬಹುತೇಕ ಇದೇ ರೀತಿಯ ಭಾವನೆ ಹೊಂದಿದ್ದಾರೆ. ಅಭಿನವ್ ಕೆನಡಾದಲ್ಲಿ ಓದಿದ್ದು, ಒಂದು ವರ್ಷದಿಂದ ಅಲ್ಲೇ ಕೆಲಸ ಮಾಡುತ್ತಿದ್ದಾರೆ. ಅಭಿನವ್ ಭಾರತೀಯ ಪೌರತ್ವವನ್ನು ತ್ಯಜಿಸಲು ಸಿದ್ಧರಾಗಿದ್ದಾರೆ. ಕೆನಡಾದಲ್ಲಿ ಕೆಲಸದ ವಾತಾವರಣ ತುಂಬಾ ಚೆನ್ನಾಗಿದೆ. ಹೀಗಾಗಿ ಭಾರತಕ್ಕೆ ಹಿಂತಿರುಗಲು ಬಯಸುವುದಿಲ್ಲ ಎಂದು ಅಭಿನವ್ ಹೇಳುತ್ತಾರೆ.
‘ಇಲ್ಲಿನ ಕೆಲಸದ ಸಮಯ ಬದಲಾಗುವುದಿಲ್ಲ. ಕೆಲಸದ ಸ್ಥಳದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಮಾಡಿದ ಕೆಲಸಕ್ಕೆ ಅನುಗುಣವಾಗಿ ಸಂಬಳ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಇಲ್ಲಿಯ ರೀತಿ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ನನಗೆ ಭಾರತಕ್ಕೆ ಹೋಗಿ ಕೆಲಸ ಮಾಡಲು ಇಷ್ಟವಿಲ್ಲ’ ಎಂದು ಅಭಿವನ್ ಹೇಳಿದ್ದಾರೆ.
ಪ್ರಸ್ತುತ, ಭಾರತೀಯ ಪಾಸ್‌ಪೋರ್ಟ್‌ನೊಂದಿಗೆ ವೀಸಾ ಇಲ್ಲದೆ 60 ದೇಶಗಳಿಗೆ ಪ್ರಯಾಣಿಸಬಹುದು. ಬೇರೆ ದೇಶಗಳ ಪಾಸ್‌ಪೋರ್ಟ್‌ಗಳಿಗೆ ಹೋಲಿಸಿದರೆ ಇದು ಕಡಿಮೆ. ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ ಭಾರತವು 199 ದೇಶಗಳಲ್ಲಿ 87ನೇ ಸ್ಥಾನದಲ್ಲಿದೆ. ಜಪಾನ್ ಮೊದಲ ಸ್ಥಾನದಲ್ಲಿದೆ.
ಸಾಮಾನ್ಯವಾಗಿ, ವಿದೇಶದ ಕೆಲಸದ ವಾತಾವರಣ, ಜೀವನ ಮಟ್ಟ ಹಾಗೂ ಉತ್ತಮ ಸಂಬಳದಿಂದಾಗಿ ಹೆಚ್ಚಿನ ಭಾರತೀಯರು ವಿದೇಶಗಳ ಪೌರತ್ವ ಸ್ವೀಕರಿಸುತ್ತಾರೆ. ಹಾಗಂತ ಭಾರತದ ಪೌರತ್ವವನ್ನು ತ್ಯಜಿಸಲು ಯಾರಿಗೂ ಇಷ್ಟವಿರುವುದಿಲ್ಲ. ತಾವು ಹುಟ್ಟಿ ಬೆಳೆದ ದೇಶದ ಬಗ್ಗೆ ಭಾವನಾತ್ಮಕ ನಂಟು ಇರುತ್ತದೆ. ಆದರೆ ಭಾರತದ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಎರಡು ದೇಶಗಳ ಪೌರತ್ವ ಹೊಂದಲು ಅವಕಾಶವಿಲ್ಲ. ಬೇರೆ ದೇಶದ ಪೌರತ್ವ ಸಿಗಲು ಭಾರತದ ಪೌರತ್ವವನ್ನು ತ್ಯಜಿಸಲೇಬೇಕು.
ವಿಭಾಗ