ಕನ್ನಡ ಸುದ್ದಿ  /  Nation And-world  /  Honour Killing: Young Woman Gunned Down By Her Father In Mathura

Mathura Honour killing: ಮಥುರಾದಲ್ಲಿ ಮರ್ಯಾದಾ ಹತ್ಯೆ: ಮಗಳನ್ನು ಗುಂಡಿಕ್ಕಿ ಕೊಂದು, ಶವವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿ ಎಸೆದ ಅಪ್ಪ

ದೇಶದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಪಾಪಿ ತಂದೆ ಮರ್ಯಾದೆಗೆ ಅಂಜಿ 21 ವರ್ಷದ ಯುವತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಥುರಾ (ಉತ್ತರ ಪ್ರದೇಶ): ದೇಶದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಪಾಪಿ ತಂದೆ ಮರ್ಯಾದೆಗೆ ಅಂಜಿ 21 ವರ್ಷದ ಯುವತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

ಆರೋಪಿ ತಂದೆಯನ್ನು ಮೋಡ್‌ಬಂದ್ ಗ್ರಾಮದ ನಿತೇಶ್ ಯಾದವ್ ಎಂದು ಗುರುತಿಸಲಾಗಿದ್ದು, ಮೃತಳನ್ನು ಆಯುಷಿ ಯಾದವ್ ಎಂದು ಗುರುತಿಸಲಾಗಿದೆ. ಆಯುಷಿ ತನಗೆ ತಿಳಿಸದೆ ಕೆಲವು ಸ್ಥಳಗಳಿಗೆ ಹೋಗಿದ್ದಾಳೆ. ಇದರಿಂದ ಮರ್ಯಾದೆಗೆ ಅಂಜಿ ಆಕೆಯನ್ನು ಸಾಯಿಸಿದ್ದೇನೆ ಎಂದು ಆರೋಪಿ ತಂದೆ ತಪ್ಪೊಪ್ಪಿಕೊಂಡಿದ್ದಾನೆ.

ಯಾವುದೋ ಸ್ಥಳಕ್ಕೆ ಅಪ್ಪನಿಗೆ ತಿಳಿಸದೇ ಹೊಗಿದ್ದ ಆಯುಷಿ ನವೆಂಬರ್ 17 ರಂದು ಮಧ್ಯಾಹ್ನ ಮನೆಗೆ ಬರುತ್ತಿದ್ದಂತೆಯೇ ಆಕೆಯ ಮೇಲೆ ನಿತೇಶ್ ಯಾದವ್ ಗುಂಡು ಹಾರಿಸಿದ್ದಾನೆ. ಶವವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ಯಮುನಾ ಎಕ್ಸ್‌ಪ್ರೆಸ್‌ವೇ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಬಳಿ ಎಸೆದು ಹೋಗಿದ್ದಾನೆ.

ಮರುದಿನ ಪೊಲೀಸರು ಶವವನ್ನು ವಶಪಡಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆಕೆ ಕೇವಲ ಅಪ್ಪನಿಗೆ ಗೊತ್ತಿಲ್ಲದೇ ಕೆಲವು ಸ್ಥಳಗಳಿಗೆ ಹೋಗಿದ್ದಾಳೆಂದು ಕೊಲೆ ಮಾಡಲಾಗಿದೆಯೇ ಅಥವಾ ಪ್ರೀತಿ-ಪ್ರೇಮದ ವಿಚಾರವೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ

ಕಳೆದ ಅಕ್ಟೋಬರ್​ ತಿಂಗಳಲ್ಲಿ ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಕುಟುಂಬದ ವಿರೋಧ ಕಟ್ಟಿಕೊಂಡು ಪ್ರೀತಿಸುತ್ತಿದ್ದ ಯುವಜೋಡಿಯೊಂದರ ಮರ್ಯಾದಾ ಹತ್ಯೆ ಬಾಗಲಕೋಟೆ ತಾಲೂಕಿನ ಬೇವಿನಮಟ್ಟಿ ಗ್ರಾಮದಲ್ಲಿ ನಡೆದಿತ್ತು. ವಿಶ್ವನಾಥ್‌ ನೆಲಗಿ (24), ರಾಜೇಶ್ವರಿ (18) ಎಂಬ ಜೋಡಿಯನ್ನು ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಘಟನೆಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಈ ಜೋಡಿಯನ್ನು ಮೋಸದಿಂದ ಕರೆಸಿಕೊಂಡು ಕೊಲೆ ಮಾಡಲಾಗಿದೆ. ಇವರಿಬ್ಬರು ಅನ್ಯಜಾತಿಯವರಾಗಿದ್ದು, ಜಾತಿ ಹೆಸರಿನಲ್ಲಿ ಮರ್ಯಾದಾ ಹತ್ಯೆ ನಡೆದು ಹೋಗಿದೆ. ಇವರಿಬ್ಬರು ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆತ ಕೆಳಜಾತಿಯವನು, ಆತನೊಂದಿಗೆ ಸೇರಬೇಡ, ಆತನನ್ನು ಪ್ರೀತಿಸಬೇಡ ಎಂದು ಮನೆಯವರು ಹುಡುಗಿಗೆ ಎಚ್ಚರಿಕೆ ನೀಡಿದ್ದರು. ಆಕೆ ಮಾತು ಕೇಳದಿದ್ದಾಗ ಇವರಿಬ್ಬರನ್ನೂ ಒಂದು ಜಾಗಕ್ಕೆ ಕರೆಯಿಸಿಕೊಂಡು ಕೊಲೆ ಮಾಡಿ ಇಬ್ಬರ ಶವಗಳನ್ನೂ ಕೃಷ್ಣಾ ನದಿಗೆ ಎಸೆಯಲಾಗಿತ್ತು.

ವಿಜಯಪುರದಲ್ಲಿ ಮರ್ಯಾದಾ ಹತ್ಯೆ

ಕಳೆದ ತಿಂಗಳಲ್ಲಿ ವಿಜಯಪುರದಲ್ಲಿ ಕೂಡ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಕೊಲೆಯಾದ ಮಲ್ಲಿಕಾರ್ಜುನ್, ಬಿಎ ಎರಡನೇ ವರ್ಷ ಓದಿದ್ದು,12ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರು ವಿಜಯಪುರ ನಗರದಲ್ಲಿ ಒಟ್ಟಿಗೆ ಕಾಲ ಕಳೆಯುತ್ತಿದ್ದರು. ವಿಷಯ ಹುಡುಗಿಯ ಮನೆಯವರಿಗೆ ತಲುಪಿದ್ದು, ಹುಡುಗನ ಜೊತೆ ಸಂಬಂಧ ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದರು. ಬಾಲಕಿಗೆ ತೊಂದರೆ ನೀಡದಂತೆ ಯುವಕನಿಗೂ ಎಚ್ಚರಿಕೆ ನೀಡಲಾಗಿತ್ತು.

ಆದಾಗ್ಯೂ, ಇಬ್ಬರೂ ಹಿರಿಯರ ಆದೇಶವನ್ನು ನಿರ್ಲಕ್ಷಿಸಿ ಭೇಟಿಯನ್ನು ಮುಂದುವರೆಸಿದ್ದರು. ಯುವಕನ ಪೋಷಕರು ಅವನ ಕಾಲೇಜನ್ನೂ ಬದಲಾಯಿಸಿದ್ದರು. ಆದರೆ ಸೆಪ್ಟೆಂಬರ್ 23 ರಂದು ಹುಡುಗ ಮತ್ತು ಹುಡುಗಿ ಇಬ್ಬರೂ ಮನೆಗೆ ಹಿಂತಿರುಗಿರಲಿಲ್ಲ. ಇಬ್ಬರೂ ಮನೆಬಿಟ್ಟು ಓಡಿಹೋದರು ಎಂದು ಪೋಷಕರು ಭಾವಿಸಿದ್ದರು. ಯುವಕನ ಪೋಷಕರು ತ್ರಿಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಅಕ್ಟೋಬರ್ 10 ರಂದು ಯುವಕನ ಶವ ಪತ್ತೆಯಾಗಿದೆ. ಬಾಲಕಿಯ ಶವ ಪತ್ತೆಯಾಗಿರಲಿಲ್ಲ.